ಕನ್ನಡದ ಕಣ್ಮಣಿಯ “ಬೆಟ್ಟದಹೂವು”

ಪುನೀತ್ ರಾಜ್ ಕುಮಾರ್ ಬಾಲನಟನಾಗಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು 22/03/1985 ರಂದು ಬಿಡುಗಡೆಯಾಯಿತು. ‎ಈ ಚಿತ್ರದಲ್ಲಿ ಪದ್ಮ ವಾಸಂತಿ, ಆಲೆಮನೆ ಮೋಹನ್ ಕುಮಾರ್, ಅನುಭವ ಅರವಿಂದ್, ಬಾಲಕೃಷ್ಣ, ಹೊನ್ನವಳ್ಳಿ ಕೃಷ್ಣ, ಮಾರ್ಸಿಯಾ, ರೂಪದೇವಿ ಮುಂತಾದವರು ನಟಿಸಿದ್ದಾರೆ. ‎‎ಈ ಚಿತ್ರವನ್ನು ಎನ್.ಲಕ್ಷ್ಮಿನಾರಾಯಣ್ ರವರು ನಿರ್ದೇಶಿಸಿದ್ದರೆ, ಪಾರ್ವತಮ್ಮ ರಾಜ್ ಕುಮಾರ್ ರವರು ನಿರ್ಮಿಸಿದ್ದರು. ‎ಈ ಚಿತ್ರಕ್ಕೆ ರಾಜನ್ ನಾಗೇಂದ್ರ ರವರು ಸಂಗೀತ ನೀಡಿದ್ದರೆ, ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಮಣ್ಯಂ, ಸಿ.ಅಶ್ವಥ್, ಪುನೀತ್ ರಾಜ್ ಕುಮಾರ್ ರವರು ಗಾಯಕರಾಗಿದ್ದರು. ‎ಅಂದ ಹಾಗೆ ಈ ಚಿತ್ರದ ಕಥೆ ಅಮೆರಿಕಾದ ಖ್ಯಾತ ಕಾದಂಬರಿಗಾರ್ತಿಯಾದ ಶ್ರೀಮತಿ ಷರ್ಲಿ ಎಲ್.ಅರೋರ ರವರ “ವಾಟ್ ದೆನ್ ರಾಮನ್” ಕಾದಂಬರಿ ಆಧಾರಿತವಾಗಿತ್ತು. ಸಂಭಾಷಣೆ ಮತ್ತು ಹಾಡುಗಳನ್ನು ಚಿ.ಉದಯಶಂಕರ್ ರಚಿಸಿದ್ದರೆ, ಸಂಕಲನ ಭಕ್ತವತ್ಸಲಂ ರವರದಾಗಿತ್ತು. ‎ಛಾಯಾಗ್ರಹಣ ಬಿ.ಸಿ.ಗೌರಿಶಂಕರ್ ಅವರದು.

‎ಚಿತ್ರದ ಕಥೆ: ಬಡ ಕುಟುಂಬದಲ್ಲಿ ಜನಿಸಿದ ರಾಮು (ಪುನೀತ್) , ಓದುವುದರಲ್ಲಿ ಸದಾ ಮುಂದಿರುತ್ತಾನೆ. ‎ಒಮ್ಮೆ ಶಾಲೆಯಲ್ಲಿ ಉಪಾಧ್ಯಾಯರು ಹೇಳಿದ ರಾಮನ ಕಥೆ ಕೇಳಿ, ರಾಮನ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತಿ ಹೊಂದುತ್ತಾನೆ. ‎ಇದೇ ಸಮಯಕ್ಕೆ ಅವರ ಊರಿಗೆ‌ ಶ್ರೀ ರಾಮಾಂಜನೇಯ ಯುದ್ಧ ಎಂಬ ಚಿತ್ರ ಬರುತ್ತದೆ. ‎ಆ ಚಿತ್ರ ನೋಡಿ ಉಪಾಧ್ಯಾಯರ ಬಳಿ ಬಂದು ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ, ಉಪಾಧ್ಯಾಯರು ಇದು ಕವಿಯ ಕಲ್ಪನೆ , ರಾಮನಿಗಿಂತ ರಾಮ ನಾಮಕ್ಕೆ ಶಕ್ತಿ ಹೆಚ್ಚು ಎಂದು ತೋರಿಸುವ ಪ್ರಯತ್ನ ಎಂದು ಹೇಳುತ್ತಾರೆ. ‎ಅವರ ಊರಿನ ಅಂಗಡಿಯೊಂದರಲ್ಲಿ ಹಳೆಯ ಪುಸ್ತಕಗಳನ್ನು ಕೊಂಡು ಓದುವುದು ರಾಮುವಿನ ಹವ್ಯಾಸವಾಗಿರುತ್ತದೆ. ‎ಹೀಗಿರುವಾಗ ಆ ಪುಸ್ತಕದ ಅಂಗಡಿಗೆ ವಾಲ್ಮೀಕಿ ರಾಮಾಯಣ ಪುಸ್ತಕ ಬರುತ್ತದೆ. ಆ ಪುಸ್ತಕದ ಬೆಲೆ 10 ರೂ. ‎ರಾಮು ಆ ಪುಸ್ತಕವನ್ನು ಹೇಗಾದರೂ ಮಾಡಿ ಹಣ ಕೂಡಿಟ್ಟು ಕೊಳ್ಳಲೇಬೇಕೆಂದು ಪಣ ತೊಡುತ್ತಾನೆ. ‎ಇದೇ ಸಂದರ್ಭದಲ್ಲಿ ತಂದೆಯ ಸೌದೆ ವ್ಯಾಪಾರ, ತಾಯಿಯ ತರಕಾರಿ ವ್ಯಾಪಾರ ನಿಂತು ಹೋಗುತ್ತದೆ. ಕಾರಣ ಆ ಊರಿಗೆ ಬೇಸಿಗೆಯಲ್ಲಿ ಬ್ರಿಟಿಷರು ವಲಸೆ ಬರುತ್ತಾರೆ, ಬೇಸಿಗೆ ಮುಗಿದ ನಂತರ ವಾಪಾಸ್ಸು ಹೋಗುತ್ತಾರೆ, ಅವರು ಆ ಊರಿನಲ್ಲಿ ಇರುವಷ್ಟು ದಿನ ಎಲ್ಲರಿಗೂ ವ್ಯಾಪಾರ ನಂತರ ವ್ಯಾಪಾರವೇ ಇಲ್ಲ. ‎ಇಂತಹ ಪರಿಸ್ಥಿತಿಯಲ್ಲಿ ರಾಮುವಿನ ತಂದೆ ಪಟ್ಟಣಕ್ಕೆ ಕೆಲಸ ಅರಸಿ ಹೋಗುತ್ತಾನೆ. ‎ಆಗ ಮನೆಯ ಜವಾಬ್ದಾರಿ ರಾಮುವಿನ ಮೇಲೆ ಬೀಳುತ್ತದೆ, ರಾಮು ಶಾಲೆ ಬಿಡಬೇಕಾಗುತ್ತದೆ. ‎ಶಾಲೆ ಬಿಟ್ಟ ರಾಮು ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ? ‎ತನ್ನ ಕನಸಾದ ವಾಲ್ಮೀಕಿ ರಾಮಯಣ ಪುಸ್ತಕವನ್ನು ಕೊಂಡುಕೊಳ್ಳುತ್ತಾನಾ? ‎ಮುಂತಾದ ಪ್ರಶ್ನೆಗಳಿಗೆ ಚಿತ್ರ ನೋಡಿ ತಿಳಿದುಕೊಳ್ಳಬೇಕು.

‎ಒಟ್ಟಾರೆ ಫಲಿತಾಂಶ: ಪುನೀತ್ ರಾಜ್ ಕುಮಾರ್ ರವರು ಅತ್ಯದ್ಬುತವಾಗಿ ನಟಿಸಿದ್ದಾರೆ, ಅದನ್ನು ನಟನೆ ಎನ್ನಲು ಸಾಧ್ಯವೇ ಇಲ್ಲ ಸಹಜಾಭಿನಯ ಎನ್ನಬಹುದು. ‎ಪದ್ಮಾ ವಾಸಂತಿ, ರೂಪಾದೇವಿ , ಮಾರ್ಸಿಯಾ, ಬಾಲಕೃಷ್ಣ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ‎ಶ್ರೀ ರಾಮಾಂಜನೇಯ ಯುದ್ದ ಚಿತ್ರದ 10 ನಿಮಿಷದ ದೃಶ್ಯ ಚಿತ್ರಕ್ಕೆ ಪೂರಕವಾಗಿದೆ. ‎ಈ ಚಿತ್ರದಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸಿವೆ. ‎ಪಿ.ಬಿ.ಶ್ರೀನಿವಾಸ್ ಹಾಡಿರುವ ʼತಾಯಿ ಶಾರದೆ ಲೋಕ ಪೂಜಿತೆ ಙ್ಞಾನದಾತೆ ನಮೋಸ್ತುತೆʼ ಹಾಡು ಭಕ್ತಿ ಭಾವ ಮೂಡಿಸಿದರೆ, ‎ಎಸ್.ಪಿ.ಬಾಲಸುಬ್ರಮಣ್ಯಂ, ಪುನೀತ್ ರಾಜ್ ಕುಮಾರ್ ಹಾಡಿರುವ ʼಬಿಸಿಲೇ ಇರಲಿ, ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆʼ ಹಾಡು ಕನ್ನಡ ಇಂಗ್ಲೀಷ್ ಮಿಕ್ಸ್ ಗೀತೆಯಾಗಿ ಕಚಗುಳಿ ಇಡುತ್ತದೆ. ‎ಸಿ ಅಶ್ವಥ್ ಹಾಡಿರುವ ʼಪಟ್ಟೆ ಹುಲಿʼ ಎಂಬ ಹಾಡು ಓಬಿರಾಯನ ಕಾಲದ 120 ವರ್ಷದ ಅಜ್ಜನ ಪಾತ್ರ ಮಾಡಿರುವ ಬಾಲಕೃಷ್ಣ ಅವರ ಅಭಿನಯದಲ್ಲಿ ಕುತೂಹಲ ಮೂಡಿಸುತ್ತದೆ.

‎‎ಅಂದ ಹಾಗೆ ಈ ಚಿತ್ರ 12 ರೀಲ್ ಮಾತ್ರ ಇದ್ದು, ಚಿತ್ರದ ಅವಧಿ 2 ಗಂಟೆಗಿಂತ ಕಡಿಮೆ ಇದೆ. ‎ಈ ಚಿತ್ರದಲ್ಲಿ ರಾಘವೇಂದ್ರ ಬಸ್ ಪ್ರಮುಖ ಪಾತ್ರ ವಹಿಸಿದೆ, ಮೊಬೈಲ್ಗಳು ಇಲ್ಲದ ಆಗಿನ ಕಾಲದಲ್ಲಿ ಬಸ್ ಡ್ರೈವರ್ ಗಳನ್ನು ಹೇಗೆ ಸಂವಹನಕ್ಕೆ ಬಳಸಿಕೊಳ್ಳುತ್ತಿದ್ದರು ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ‎ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಜಲಪಾತದ ದೃಶ್ಯ, ಕಾಡಿನ ರಮಣೀಯ ದೃಶ್ಯಗಳನ್ನು ಛಾಯಾಗ್ರಾಹಕರಾದ ಬಿ.ಸಿ.ಗೌರಿಶಂಕರ್ ರವರು ಅದ್ಭುತವಾಗಿ ಸೆರೆಹಿಡಿದಿದ್ದಾರೆ.

ಈ ಚಿತ್ರಕ್ಕೆ 1984-85ನೇ ಸಾಲಿನ ಎರಡನೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಕಥೆಗೆ ರಾಜ್ಯ ಪ್ರಶಸ್ತಿ ದೊರೆತಿದೆ. ‎ಫಿಲಂಫೇರ್ ಪ್ರಶಸ್ತಿ ವಿಭಾಗದಲ್ಲಿ ‎ಅತ್ಯುತ್ತಮ ಚಿತ್ರ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಹಾಗು ಪುನೀತ್ ರವರಿಗೆ ವಿಶೇಷ ಪ್ರಶಸ್ತಿ ದೊರೆತಿದೆ. ‎ಇವೆಲ್ಲದಕ್ಕಿಂತ ಮುಖ್ಯವಾಗಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಜೊತೆಗೆ ಪುನೀತ್ ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಅಂದಿನ ರಾಷ್ಟ್ರಪತಿಗಳಾದ ಜೈಲ್ ಸಿಂಗ್ ರವರಿಂದ ಈ ರಾಷ್ಟ್ರ ಪ್ರಶಸ್ತಿಯನ್ನು ಪುನೀತ್ ರವರು ಸ್ವೀಕರಿಸಿದ್ದರು.

‎ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ.‎ ಯೂಟ್ಯೂಬಿನಲ್ಲಿ ಲಭ್ಯವಿದೆ. ನೀವು ನೋಡಿದ್ದರೆ ಮತ್ತೊಮ್ಮೆ ನೋಡಿ. ತಪ್ಪದೇ ನಿಮ್ಮ ಮನೆ, ಶಾಲಾ ಮಕ್ಕಳಿಗೂ ತೋರಿಸಿ.

  • ಆರ್.ರಾಘವೇಂದ್ರ, ಜೆ.ಜಿ.ಹಳ್ಳಿ.

Leave a Comment

Your email address will not be published. Required fields are marked *

Scroll to Top