ಪುಸ್ತಕಗಳ ಪಟ್ಟಿ ಪ್ರಕಟ! ಪ್ರಯೋಜನವೇನು?

2022ರಲ್ಲಿ ಪ್ರಥಮ ಪ್ರಕಟಗೊಂಡು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಕನ್ನಡ ಪುಸ್ತಕಗಳ ಆಯ್ಕೆ ಪಟ್ಟಿ ಇಂದು (ಮಾರ್ಚ್‌ 2, 2026) ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಾಲತಾಣದಲ್ಲಿ ಪ್ರಕಟವಾಗಿದೆ.

ಕನ್ನಡ ಭಾಷೆಯ ಪುಸ್ತಕಗಳ ಜೊತೆಗೆ ಇಂಗ್ಲೀಷ್‌, ಹಿಂದಿ ಮತ್ತು ಇನ್ನಿತರ ಭಾಷೆಗಳ ಪುಸ್ತಕಗಳ ಪಟ್ಟಿಯು ಕೂಡ ಪ್ರಕಟವಾಗಿದೆ. ಕನ್ನಡದ ಪಟ್ಟಿಯಲ್ಲಿ ಒಟ್ಟು 472 ಪುಟಗಳಲ್ಲಿ 3965 ಪುಸ್ತಕಗಳ ಆಯ್ಕೆಯಾದ ಪುಸ್ತಕಗಳ ಮಾಹಿತಿಯಿದೆ.

ಈ ಸುದ್ಧಿ ಕನ್ನಡ ಪುಸ್ತಕ ಪ್ರಕಾಶಕರಲ್ಲಿ ಮತ್ತು ಲೇಖಕ-ಪ್ರಕಾಶಕರಲ್ಲಿ ಸಂತಸದ ನಗು ಮೂಡಿಸಬೇಕಾಗಿತ್ತು. ಆದರೆ, ಈ ಪಟ್ಟಿಯಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಇದೀಗ ಚರ್ಚೆಯ ವಸ್ತುವಾಗಿದ್ದು ಈ ಪಟ್ಟಿಯಿಂದ ಏನು ಪ್ರಯೋಜನ ಎಂಬಂತಾಗಿದೆ. ಯಾಕೆಂದರೆ, ಈ ಪಟ್ಟಿಯೆಂದರೆ ಸಗಟು ಖರೀದಿ ಅಥವಾ ಏಕಗವಾಕ್ಷಿಯ ಯೋಜನೆಯಡಿಯಲ್ಲಿ 300 ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ಪೂರೈಸಬಹುದು, ತಡವಾಗಿಯಾದರೂ ಅಡವಾಗಿ ಹಣ ಬರುತ್ತದೆ ಎಂದು ಪ್ರಕಾಶಕರು ಮತ್ತು ಲೇಖಕರು ಪ್ರತಿವರ್ಷ ಪುಸ್ತಕಗಳನ್ನು ಪ್ರಕಟಿಸುತ್ತಿದ್ದರು. ಆದರೆ, ಕಳೆದ ವರ್ಷ ಯಾವಾಗೋ 2021ರ ಆಯ್ಕೆ ಪಟ್ಟಿ ಬಂದರೂ ಸಗಟು ಖರೀದಿಯ ಆದೇಶ ಬರದಿದ್ದಾಗ ಪುಸ್ತಕ ಪ್ರಕಟಿಸಿದ್ದವರೆಲ್ಲರಿಗೂ ಸೈಲಂಟಾಗಿ ಸಗಟು ಖರೀದಿ ಸ್ಥಗಿತವಾಗಿದ್ದು ಅರಿವಿಗೆ ಬರತೊಡಗಿತು. ಪ್ರಕಾಶಕರಿಗೆ ಇದರ ಮನವರಿಕೆ ಬಹಳ ಬೇಗನೆ ಆಗಿದ್ದು, ಎಷ್ಟೋ ಜನ ಲೇಖಕ-ಪ್ರಕಾಶಕರಿಗೆ ಮತ್ತು ಸಾಹಿತಿಗಳಿಗೆ ಇನ್ನೂ ಕೂಡ ಇದರ ಅರಿವೇ ಇಲ್ಲ.

ಈ ಬೆಳವಣಿಗೆ ಕನ್ನಡ ಪುಸ್ತಕ ಪ್ರಕಾಶನದಿಂದಲೇ ಜೀವನ ಕಟ್ಟಿಕೊಂಡಿದ್ದ, ಕಟ್ಟಿಕೊಳ್ಳಲು ಹವಣಿಸುತ್ತಿದ್ದ, ಭರವಸೆಯ ಬದುಕಿನೆಡೆಗೆ ಮುಖ ಮಾಡಿದ್ದ ನೂರಾರು ಪ್ರಕಾಶಕರಿಗೆ ನಿರಾಶದಾಯಕವಾಗಿದ್ದು, ಕನ್ನಡ ಪುಸ್ತಕ ಪ್ರಕಾಶನವೆಂದರೆ ಜಿಗುಪ್ಸೆ ಮೂಡುವಂತಾಗಿದೆ ಎಂದು ಹೆಸರು ಹೇಳಲು ಇಚ್ಛಿಸಿದ ಕನ್ನಡದ ಉತ್ತಮ ಪ್ರಕಾಶಕರೊಬ್ಬರು ತಮ್ಮ ಅಳಲನ್ನು ನನ್ನಲ್ಲಿ ತೋಡಿಕೊಂಡಿದ್ದಾರೆ. ಸ್ವತಃ ಪ್ರಕಾಶನ ಹೊಂದಿರುವ ನಾನು ಕೂಡ ಚಿಂತಾಕ್ರಾಂತನಾಗಿದ್ದೇನೆ.

ನಿಮ್ಮ ಅವಗಾಹನೆಗೆ ಕನ್ನಡ ಪುಸ್ತಕಗಳ ಪಟ್ಟಿ ಕೆಳಗಿನ ಲಿಂಕಿನಲ್ಲಿ ಲಭ್ಯವಿದೆ…

https://dpl.karnataka.gov.in/uploads/Kannada%20book%20list_1772448170.pdf

  • ಗುಬ್ಬಚ್ಚಿ ಸತೀಶ್‌, ಸಂಪಾದಕರು, ಹಾಯ್‌ ತುಮಕೂರು, ಗೋಮಿನಿ ಪ್ರಕಾಶನ.

Leave a Comment

Your email address will not be published. Required fields are marked *

Scroll to Top