
ಪುನೀತ್ ರಾಜ್ ಕುಮಾರ್ ಬಾಲನಟನಾಗಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು 22/03/1985 ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಪದ್ಮ ವಾಸಂತಿ, ಆಲೆಮನೆ ಮೋಹನ್ ಕುಮಾರ್, ಅನುಭವ ಅರವಿಂದ್, ಬಾಲಕೃಷ್ಣ, ಹೊನ್ನವಳ್ಳಿ ಕೃಷ್ಣ, ಮಾರ್ಸಿಯಾ, ರೂಪದೇವಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಎನ್.ಲಕ್ಷ್ಮಿನಾರಾಯಣ್ ರವರು ನಿರ್ದೇಶಿಸಿದ್ದರೆ, ಪಾರ್ವತಮ್ಮ ರಾಜ್ ಕುಮಾರ್ ರವರು ನಿರ್ಮಿಸಿದ್ದರು. ಈ ಚಿತ್ರಕ್ಕೆ ರಾಜನ್ ನಾಗೇಂದ್ರ ರವರು ಸಂಗೀತ ನೀಡಿದ್ದರೆ, ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಮಣ್ಯಂ, ಸಿ.ಅಶ್ವಥ್, ಪುನೀತ್ ರಾಜ್ ಕುಮಾರ್ ರವರು ಗಾಯಕರಾಗಿದ್ದರು. ಅಂದ ಹಾಗೆ ಈ ಚಿತ್ರದ ಕಥೆ ಅಮೆರಿಕಾದ ಖ್ಯಾತ ಕಾದಂಬರಿಗಾರ್ತಿಯಾದ ಶ್ರೀಮತಿ ಷರ್ಲಿ ಎಲ್.ಅರೋರ ರವರ “ವಾಟ್ ದೆನ್ ರಾಮನ್” ಕಾದಂಬರಿ ಆಧಾರಿತವಾಗಿತ್ತು. ಸಂಭಾಷಣೆ ಮತ್ತು ಹಾಡುಗಳನ್ನು ಚಿ.ಉದಯಶಂಕರ್ ರಚಿಸಿದ್ದರೆ, ಸಂಕಲನ ಭಕ್ತವತ್ಸಲಂ ರವರದಾಗಿತ್ತು. ಛಾಯಾಗ್ರಹಣ ಬಿ.ಸಿ.ಗೌರಿಶಂಕರ್ ಅವರದು.
ಚಿತ್ರದ ಕಥೆ: ಬಡ ಕುಟುಂಬದಲ್ಲಿ ಜನಿಸಿದ ರಾಮು (ಪುನೀತ್) , ಓದುವುದರಲ್ಲಿ ಸದಾ ಮುಂದಿರುತ್ತಾನೆ. ಒಮ್ಮೆ ಶಾಲೆಯಲ್ಲಿ ಉಪಾಧ್ಯಾಯರು ಹೇಳಿದ ರಾಮನ ಕಥೆ ಕೇಳಿ, ರಾಮನ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತಿ ಹೊಂದುತ್ತಾನೆ. ಇದೇ ಸಮಯಕ್ಕೆ ಅವರ ಊರಿಗೆ ಶ್ರೀ ರಾಮಾಂಜನೇಯ ಯುದ್ಧ ಎಂಬ ಚಿತ್ರ ಬರುತ್ತದೆ. ಆ ಚಿತ್ರ ನೋಡಿ ಉಪಾಧ್ಯಾಯರ ಬಳಿ ಬಂದು ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ, ಉಪಾಧ್ಯಾಯರು ಇದು ಕವಿಯ ಕಲ್ಪನೆ , ರಾಮನಿಗಿಂತ ರಾಮ ನಾಮಕ್ಕೆ ಶಕ್ತಿ ಹೆಚ್ಚು ಎಂದು ತೋರಿಸುವ ಪ್ರಯತ್ನ ಎಂದು ಹೇಳುತ್ತಾರೆ. ಅವರ ಊರಿನ ಅಂಗಡಿಯೊಂದರಲ್ಲಿ ಹಳೆಯ ಪುಸ್ತಕಗಳನ್ನು ಕೊಂಡು ಓದುವುದು ರಾಮುವಿನ ಹವ್ಯಾಸವಾಗಿರುತ್ತದೆ. ಹೀಗಿರುವಾಗ ಆ ಪುಸ್ತಕದ ಅಂಗಡಿಗೆ ವಾಲ್ಮೀಕಿ ರಾಮಾಯಣ ಪುಸ್ತಕ ಬರುತ್ತದೆ. ಆ ಪುಸ್ತಕದ ಬೆಲೆ 10 ರೂ. ರಾಮು ಆ ಪುಸ್ತಕವನ್ನು ಹೇಗಾದರೂ ಮಾಡಿ ಹಣ ಕೂಡಿಟ್ಟು ಕೊಳ್ಳಲೇಬೇಕೆಂದು ಪಣ ತೊಡುತ್ತಾನೆ. ಇದೇ ಸಂದರ್ಭದಲ್ಲಿ ತಂದೆಯ ಸೌದೆ ವ್ಯಾಪಾರ, ತಾಯಿಯ ತರಕಾರಿ ವ್ಯಾಪಾರ ನಿಂತು ಹೋಗುತ್ತದೆ. ಕಾರಣ ಆ ಊರಿಗೆ ಬೇಸಿಗೆಯಲ್ಲಿ ಬ್ರಿಟಿಷರು ವಲಸೆ ಬರುತ್ತಾರೆ, ಬೇಸಿಗೆ ಮುಗಿದ ನಂತರ ವಾಪಾಸ್ಸು ಹೋಗುತ್ತಾರೆ, ಅವರು ಆ ಊರಿನಲ್ಲಿ ಇರುವಷ್ಟು ದಿನ ಎಲ್ಲರಿಗೂ ವ್ಯಾಪಾರ ನಂತರ ವ್ಯಾಪಾರವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಮುವಿನ ತಂದೆ ಪಟ್ಟಣಕ್ಕೆ ಕೆಲಸ ಅರಸಿ ಹೋಗುತ್ತಾನೆ. ಆಗ ಮನೆಯ ಜವಾಬ್ದಾರಿ ರಾಮುವಿನ ಮೇಲೆ ಬೀಳುತ್ತದೆ, ರಾಮು ಶಾಲೆ ಬಿಡಬೇಕಾಗುತ್ತದೆ. ಶಾಲೆ ಬಿಟ್ಟ ರಾಮು ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ? ತನ್ನ ಕನಸಾದ ವಾಲ್ಮೀಕಿ ರಾಮಯಣ ಪುಸ್ತಕವನ್ನು ಕೊಂಡುಕೊಳ್ಳುತ್ತಾನಾ? ಮುಂತಾದ ಪ್ರಶ್ನೆಗಳಿಗೆ ಚಿತ್ರ ನೋಡಿ ತಿಳಿದುಕೊಳ್ಳಬೇಕು.
ಒಟ್ಟಾರೆ ಫಲಿತಾಂಶ: ಪುನೀತ್ ರಾಜ್ ಕುಮಾರ್ ರವರು ಅತ್ಯದ್ಬುತವಾಗಿ ನಟಿಸಿದ್ದಾರೆ, ಅದನ್ನು ನಟನೆ ಎನ್ನಲು ಸಾಧ್ಯವೇ ಇಲ್ಲ ಸಹಜಾಭಿನಯ ಎನ್ನಬಹುದು. ಪದ್ಮಾ ವಾಸಂತಿ, ರೂಪಾದೇವಿ , ಮಾರ್ಸಿಯಾ, ಬಾಲಕೃಷ್ಣ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶ್ರೀ ರಾಮಾಂಜನೇಯ ಯುದ್ದ ಚಿತ್ರದ 10 ನಿಮಿಷದ ದೃಶ್ಯ ಚಿತ್ರಕ್ಕೆ ಪೂರಕವಾಗಿದೆ. ಈ ಚಿತ್ರದಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸಿವೆ. ಪಿ.ಬಿ.ಶ್ರೀನಿವಾಸ್ ಹಾಡಿರುವ ʼತಾಯಿ ಶಾರದೆ ಲೋಕ ಪೂಜಿತೆ ಙ್ಞಾನದಾತೆ ನಮೋಸ್ತುತೆʼ ಹಾಡು ಭಕ್ತಿ ಭಾವ ಮೂಡಿಸಿದರೆ, ಎಸ್.ಪಿ.ಬಾಲಸುಬ್ರಮಣ್ಯಂ, ಪುನೀತ್ ರಾಜ್ ಕುಮಾರ್ ಹಾಡಿರುವ ʼಬಿಸಿಲೇ ಇರಲಿ, ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆʼ ಹಾಡು ಕನ್ನಡ ಇಂಗ್ಲೀಷ್ ಮಿಕ್ಸ್ ಗೀತೆಯಾಗಿ ಕಚಗುಳಿ ಇಡುತ್ತದೆ. ಸಿ ಅಶ್ವಥ್ ಹಾಡಿರುವ ʼಪಟ್ಟೆ ಹುಲಿʼ ಎಂಬ ಹಾಡು ಓಬಿರಾಯನ ಕಾಲದ 120 ವರ್ಷದ ಅಜ್ಜನ ಪಾತ್ರ ಮಾಡಿರುವ ಬಾಲಕೃಷ್ಣ ಅವರ ಅಭಿನಯದಲ್ಲಿ ಕುತೂಹಲ ಮೂಡಿಸುತ್ತದೆ.
ಅಂದ ಹಾಗೆ ಈ ಚಿತ್ರ 12 ರೀಲ್ ಮಾತ್ರ ಇದ್ದು, ಚಿತ್ರದ ಅವಧಿ 2 ಗಂಟೆಗಿಂತ ಕಡಿಮೆ ಇದೆ. ಈ ಚಿತ್ರದಲ್ಲಿ ರಾಘವೇಂದ್ರ ಬಸ್ ಪ್ರಮುಖ ಪಾತ್ರ ವಹಿಸಿದೆ, ಮೊಬೈಲ್ಗಳು ಇಲ್ಲದ ಆಗಿನ ಕಾಲದಲ್ಲಿ ಬಸ್ ಡ್ರೈವರ್ ಗಳನ್ನು ಹೇಗೆ ಸಂವಹನಕ್ಕೆ ಬಳಸಿಕೊಳ್ಳುತ್ತಿದ್ದರು ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಜಲಪಾತದ ದೃಶ್ಯ, ಕಾಡಿನ ರಮಣೀಯ ದೃಶ್ಯಗಳನ್ನು ಛಾಯಾಗ್ರಾಹಕರಾದ ಬಿ.ಸಿ.ಗೌರಿಶಂಕರ್ ರವರು ಅದ್ಭುತವಾಗಿ ಸೆರೆಹಿಡಿದಿದ್ದಾರೆ.
ಈ ಚಿತ್ರಕ್ಕೆ 1984-85ನೇ ಸಾಲಿನ ಎರಡನೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಕಥೆಗೆ ರಾಜ್ಯ ಪ್ರಶಸ್ತಿ ದೊರೆತಿದೆ. ಫಿಲಂಫೇರ್ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಹಾಗು ಪುನೀತ್ ರವರಿಗೆ ವಿಶೇಷ ಪ್ರಶಸ್ತಿ ದೊರೆತಿದೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಜೊತೆಗೆ ಪುನೀತ್ ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಅಂದಿನ ರಾಷ್ಟ್ರಪತಿಗಳಾದ ಜೈಲ್ ಸಿಂಗ್ ರವರಿಂದ ಈ ರಾಷ್ಟ್ರ ಪ್ರಶಸ್ತಿಯನ್ನು ಪುನೀತ್ ರವರು ಸ್ವೀಕರಿಸಿದ್ದರು.
ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಯೂಟ್ಯೂಬಿನಲ್ಲಿ ಲಭ್ಯವಿದೆ. ನೀವು ನೋಡಿದ್ದರೆ ಮತ್ತೊಮ್ಮೆ ನೋಡಿ. ತಪ್ಪದೇ ನಿಮ್ಮ ಮನೆ, ಶಾಲಾ ಮಕ್ಕಳಿಗೂ ತೋರಿಸಿ.
- ಆರ್.ರಾಘವೇಂದ್ರ, ಜೆ.ಜಿ.ಹಳ್ಳಿ.
