
ಇವತ್ತಿಗೆ ಸಾಯೋದಕ್ಕೆ ನೂರು ಕಾರಣಗಳು ಸಿಗುತ್ತೆ, ಆದರೆ ಬದುಕೋಕೆ ನಾವೇ ಕಾರಣಗಳನ್ನು ಹುಡುಕಬೇಕು. ನಮಗೆ ಜೀವ ಕೊಟ್ಟ ಹೆತ್ತವರು, ನಮ್ಮ ಕೈ ಹಿಡಿದ ಜೀವನ ಸಂಗಾತಿ, ನಮ್ಮ ಜೀವದ ಕುಡಿಗಳಾದ ಮಕ್ಕಳು, ಮೊದಲಿಂದಲೂ ಕಷ್ಟ ಸುಖಕ್ಕೆ ಆದ ನೆಂಟರು, ಸ್ನೇಹಿತರು, ಇದೆಲ್ಲದರಾಚೆಗೆ ಸಿಕ್ಕಿರುವ ಮಾನವ ಜನ್ಮ. ಇದು ಚೆನ್ನಾಗಿ ಬದುಕಲು ಸಿಗುವ ಪ್ರಮುಖ ಕಾರಣಗಳು. ಮಾನವ ಜನ್ಮ ದೊಡ್ಡದು ಕಣೋ ಎಂದು ಪುರಂದರದಾಸರು ಹೇಳಿದ್ದಾರೆ. ದೇವತೆಗಳಿಗೂ ಸುಲಭಕ್ಕೆ ಸಿಗದ ಜನ್ಮ ಮಾನವ ಜನ್ಮ, ಇದು ಎಷ್ಟೋ ಜನ್ಮಗಳ ಪುಣ್ಯದ ಫಲ ಎಂಬ ಮಾತಿದೆ. ಇಂತಹ ಜನ್ಮವನ್ನು ಇಂದು ಅನೇಕರು ಯಾವುದೋ ಮೋಸದ ಜಾಲಕ್ಕೆ ಬಲಿ ಕೊಡುತ್ತಿದ್ದಾರೆ. ಹಿಂದೆಲ್ಲಾ ಸುಸೈಡ್ ನಡೆಯುತ್ತಿದ್ದದ್ದು ಸಾಂಸಾರಿಕ ಕಲಹ, ಕುಡಿತದ ಚಟ, ಸಾಲಬಾಧೆ, ಮಾನಸಿಕ ಸ್ಥಿಮಿತದ ಕಾರಣಕ್ಕೆ. ಆದರೆ ಈಗ ಕಾಲ ಬದಲಾಗಿದೆ. ಸಾಯುವವರೆಗೆ ಇರುವ ಕಾರಣಗಳು ಕೂಡ ಬದಲಾಗಿದೆ. ಬಹಳ ಜನ ಬಲಿಯಾಗುತ್ತಿರುವುದು ಸುಲಭವಾಗಿ ಹಣ ಮಾಡುವ ಜಿದ್ದಿಗೆ ಬಿದ್ದು ಎಂದರೆ ತಪ್ಪಾಗಲಾರದು.
ಘಟನೆ 1
ಹತ್ತಾರು ವರ್ಷ ಪ್ರೀತಿಸಿದ ಜೋಡಿ. ಎರಡು ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತೆ. ಚೆಂದದ ಸಂಸಾರ. ಪ್ರೀತಿಗೊಂದು ಮಗು. ಅನ್ ಲೈನ್ ರೀಲ್ಸ್ ಮಾಡುತ್ತಾ ಅತ್ಯಂತ ಜನಪ್ರಿಯ ಜೋಡಿಯಾಗುತ್ತೆ. ಎಲ್ಲವೂ ಸುಂದರ ಎನ್ನುವಂತಿರುವಾಗ ಆ ಹುಡುಗ ಸಾವಿಗೆ ಶರಣಾಗುತ್ತಾನೆ. ಇಡೀ ಕುಟುಂಬದ ನೆಮ್ಮದಿ ಮಾಯವಾಗುತ್ತೆ.
ಘಟನೆ 2
ಐಟಿ ಉದ್ಯೋಗಿ. ಲಕ್ಷಗಟ್ಟಲೆ ಸಂಬಳ. ಅವಿವಾಹಿತ. ಚೆನ್ನಾಗಿ ದುಡಿಯುತ್ತಾನೆ. ಯಾವುದೇ ಜವಾಬ್ದಾರಿ ಇರಲಿಲ್ಲ. ಇದ್ದ ಆರ್ಥಿಕ ಸ್ವಾತಂತ್ರ್ಯ ನಾನಾ ಕಡೆ ಬಂಡವಾಳ ಹೂಡಲು ಪ್ರೇರಣೆಯಾಯಿತು. ಪೂರ್ವಾಪರ ತಿಳಿಯದೇ ಸ್ನೇಹಿತರ ಮಾತಿಗೆ ಕಟ್ಟುಬಿದ್ದು ಮನಿ ಸ್ಕೀಮ್ ಗಳಿಗೆ ಹೂಡಿಕೆ ಮಾಡಿದ. ಕೆಲವೇ ತಿಂಗಳಲ್ಲಿ 50 ಲಕ್ಷ ಸಾಲದ ಹೊರೆ. ಆ ಒತ್ತಡ ತಾಳಲಾಗದೇ ಜೀವ ಕಳೆದುಕೊಳ್ಳುತ್ತಾನೆ.
ಘಟನೆ 3
ಒಂದು ಚೆಂದದ ಕುಟುಂಬ. ಅಣ್ಣ ತಮ್ಮಂದಿರು ಮಡದಿಯೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿರುತ್ತಾರೆ. ಎಲ್ಲವೂ ಸೊಗಸಾಗಿ ಸಾಗುತ್ತಿರುತ್ತೆ. ತಮ್ಮನಿಗೆ ಆನ್ ಲೈನ್ ಗೇಮಿಂಗ್ ಚಟ ಶುರುವಾಗುತ್ತೆ. ಯಾರಿಗೂ ಗೊತ್ತಿಲ್ಲದಂತೆ ಹಣವೆಲ್ಲಾ ಕಳೆಯುತ್ತಾನೆ. ಮಡದಿಯ ಒಡವೆ ಕರಗಿಸುತ್ತಾನೆ. ಮನೆ ಅಡ ಇಡುತ್ತಾನೆ. ಇಡೀ ಕುಟುಂಬ ಬೀದಿ ಪಾಲಾಗುತ್ತೆ.
ಘಟನೆ 4
ತಾವಾಯಿತು, ತಮ್ಮ ಪಾಡಾಯಿತು ಎಂದುಕೊಂಡಿದ್ದ ಕುಟುಂಬ. ಮಗ ಯಾವುದೋ ವ್ಯಾಪಾರ ಮಾಡಲು ದುಡ್ಡು ಕೇಳ್ತಾನೆ. ಬಂಡವಾಳಕ್ಕೆ ಹಣ ಕೊಡ್ತಾರೆ. ಸ್ವಲ್ಪ ತಿಂಗಳ ಬಳಿಕ ಸಹವಾಸ ದೋಷದಿಂದ ಮನಿ ಡಬ್ಲಿಂಗ್ ಸ್ಕೀಮ್ ನಲ್ಲಿ ಗಳಿಸಿದ್ದೆಲ್ಲವನ್ನು ಹಾಕ್ತಾನೆ. ಪರಿಚಿತರಿಂದಲೂ ದುಡ್ಡು ಹಾಕಿಸ್ತಾನೆ. ದುಡ್ಡು ತೆಗೆದುಕೊಂಡವನು ರಾತ್ರೋರಾತ್ರಿ ಊರು ಬಿಟ್ಟು ಆ ಹುಡುಗನ ನಂಬಿಕೆ ಮೇಲೆ ಚಪ್ಪಡಿ ಎಳೆಯುತ್ತಾನೆ. ತಾನೆಂಥ ಮೋಸ ಹೋದೆ ಎಂದು ತಿಳಿದ ಮೇಲೆ ನೀರಿಗೆ ಹಾರಿ ಜೀವ ಕಳೆದುಕೊಳ್ತಾನೆ.
ಈ ಎಲ್ಲಾ ಮೋಸಕ್ಕೂ ಮೂಲ ಅತಿಯಾಸೆ ಮತ್ತು ಅವಸರ. ಆದಷ್ಟು ಬೇಗ ದುಡ್ಡು ಮಾಡಬೇಕು, ಬಹಳ ಸುಲಭವಾಗಿ ದುಡ್ಡು ಮಾಡಬೇಕು, ತಾನು ದೊಡ್ಡ ಕುಳ ಎಂದು ತೋರಿಸಿಕೊಳ್ಳಬೇಕು ಎಂಬ ಹಪಾಹಪಿಯೇ ಇದಕ್ಕೆಲ್ಲಾ ಕಾರಣ.
ಈ ಅನ್ ಲೈನ್ ಟ್ರೇಡಿಂಗ್, ಬಿಟ್ ಕಾಯಿನ್ ಇನ್ವೆಸ್ಟ್ ಮೆಂಟ್, ಮನಿ ಡಬ್ಲಿಂಗ್ ಸ್ಕ್ರೀಮ್ ಗಳು ನಯವಾಗಿ ಕತ್ತು ಕೊಯ್ಯುವ ತಂತ್ರಗಳು. ನಿಮಗೆ ಬಣ್ಣ ಬಣ್ಣದ ಮಾತುಗಳಿಂದ ಮರಳು ಮಾಡಿ, ನಿಮ್ಮ ಪತನಕ್ಕೆ ನಿಮ್ಮಿಂದಲೇ ಗುದ್ದಲಿ ಪೂಜೆ ಮಾಡಿಸ್ತಾರೆ. ಅದಕ್ಕೆ ದಯವಿಟ್ಟು ಬಲಿಯಾಗಬೇಡಿ. ನಿಮ್ಮನ್ನು ನಂಬಿದ ಕುಟುಂಬವನ್ನು ನಡುನೀರಿನಲ್ಲಿ ಬಿಡಬೇಡಿ.
ಇದಿಷ್ಟನ್ನು ಮನಸಲ್ಲಿ ಇಟ್ಟುಕೊಳ್ಳಿ…
- ಈ ಅನ್ ಲೈನ್ ಟ್ರೇಡಿಂಗ್ ಅನ್ನೋದು ಮಹಾಸಾಗರ. ನೀವು ಎಷ್ಟೇ expert ಆದರೂ ಮತ್ತೆ ಏಳಲಾಗದಂತೆ ಮುಳುಗಿಸುತ್ತೆ. ಸಾವಿರಗಳಲ್ಲಿ ಲಾಭ ತೋರಿಸಿ, ಲಕ್ಷಗಳನ್ನು ಹೂಡಿಕೆ ಮಾಡಿಸಿ, ಕಡೆಗೆ ಕೋಟಿ ಲೆಕ್ಕದಲ್ಲಿ ಸಾಲ ಬೆನ್ನಿಗೇರುವಂತೆ ಮಾಡುತ್ತೆ.
- ನಾವೇ market expert ಎಂಬ ಭ್ರಮೆಯಿಂದ ಹೊರಬನ್ನಿ. ಯಾವುದೇ ಹೂಡಿಕೆ ಮಾಡುವ ಮೊದಲು ಒಬ್ಬ financial advisor ಸಲಹೆ ತೆಗೆದುಕೊಳ್ಳಿ. Blind ಆಗಿ ಯಾವುದೇ ಕಂಪೆನಿಯ ಮೇಲೂ ಹೂಡಿಕೆ ಮಾಡಬೇಡಿ. ಯಾವುದೇ ಹೂಡಿಕೆಯ ಏರಿಳಿತ ಪ್ರಪಂಚದ ಆಗು ಹೋಗುಗಳ ಮೇಲೆ ನಿರ್ಧಾರವಾಗುತ್ತೆ. External factors ಯಿಂದ ಲಾಭ ನಷ್ಟ ಏರು ಪೇರಾಗುತ್ತೆ. ಯಾವುದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲವೋ ಅದನ್ನು ನಂಬುವುದು ಬಹಳ ಅಪಾಯಕಾರಿ.
- ಮನಿ ಡಬ್ಲಿಂಗ್ ಸ್ಕೀಮ್ ಅನ್ನೋದು ನಮ್ಮ ತಾತನ ಕಾಲದಿಂದಲೂ ಮೋಸಗಾರರು ಅನುಸರಿಸುತ್ತಾ ಬಂದ ಯಶಸ್ವಿ ತಂತ್ರ. ಈಗ 1 ಲಕ್ಷ ಕೊಟ್ಟು 6 ತಿಂಗಳ ನಂತರ 2 ಲಕ್ಷ ಗಳಿಸಿ ರೀತಿಯ ಸ್ಕೀಮುಗಳು ಬದುಕನ್ನು ಮೂರಾಬಟ್ಟೆ ಮಾಡುತ್ತೆ. ಹಣ ಮೊಟ್ಟೆ ಇಡೋದಿಲ್ಲ. ಮರಿಯು ಹಾಕೋದಿಲ್ಲ.
- ಅಧಿಕ ಬಡ್ಡಿಯಾಸೆಗೆ ಎಲ್ಲೆಲ್ಲೋ ಹೂಡಿಕೆ ಮಾಡಬೇಡಿ. ಬಡ್ಡಿ ಆಸೆಗೆ ಜೀವನಪರ್ಯಂತ ದುಡಿದದ್ದನ್ನ ಕಳೆದುಕೊಳ್ಳಬೇಡಿ.
- ಸಾಲ ಮಾಡಬೇಡಿ, ಸಾಲ ಕೊಡಬೇಡಿ. ಎರಡು ಕೂಡ ಮನಸಿನ ನೆಮ್ಮದಿ ಹಾಳುಗೆಡವುತ್ತೆ. ಸ್ನೇಹ ವಿಶ್ವಾಸಕ್ಕೋ ಶರಣಾಗಿ, ಮುಜುಗರಕ್ಕೆ ತಲೆಬಾಗಿ, ಒಲ್ಲದ ಮನಸಿಂದ ದುಡ್ಡು ಕೊಡಬೇಡಿ, ಯಾರದೋ ಸಾಲಕ್ಕೆ ಗ್ಯಾರಂಟಿಯಾಗಬೇಡಿ. ಕಡೆಗೆ ಹಾಲುಂಡ ತವರು ಚಿತ್ರದ ನಾಯಕನ ಪರಿಸ್ಥಿತಿ ಎದುರಾಗುತ್ತೆ. ಹಣ ಕೊಟ್ಟು ವಾಪಸ್ ಪಡೆಯಲು ಹೈರಾಣಾಗಬೇಡಿ. ಕೊಟ್ಟು ಕೆಟ್ಟವರಾಗುವುದಕ್ಕಿಂತ, ಕೊಡದೇ ಕೆಟ್ಟವರೆನಿಸಿಕೊಳ್ಳುವುದೇ ಒಳಿತು.

ಮುಂದೊಮ್ಮೆ ಹೆಚ್ಚು ಸಾವು ನೋವು ಹಣದ ಕಾರಣಕ್ಕೆ ಆಗಬಹುದು. ಅದಾಗಬಾರದೆಂದರೆ ನಿಮ್ಮ ಮನೆಯ ದುಡಿಮೆ, ಖರ್ಚಿನ ಬಗ್ಗೆ ಗಮನವಿರಲಿ. ಎಲ್ಲಿಂದ ಹಣ ಬರುತ್ತಿದೆ, ಎಲ್ಲಿಗೆ ಹೋಗುತ್ತಿದೆ ಅನ್ನೋದು ತಿಳಿದಿರಲಿ. ಮುಖ್ಯವಾಗಿ ಮನೆ ಮಕ್ಕಳು ಯಾವುದೇ ಹಣದ ಜಾಲದಲ್ಲಿ ಸಿಲುಕದಂತೆ ನೋಡಿಕೊಳ್ಳಿ.
ಹಣದ ವಿಷಯದಲ್ಲಿ ಸದಾ ಜಾಗರೂಕರಾಗಿರಿ..
- ಟಿ.ಜಿ.ನಂದೀಶ್, ತೀರ್ಥಹಳ್ಳಿ.
