KSRTCಗೆ ತುಮಕೂರು ಒಂದು ಯಃಕಶ್ಚಿತ್‌ ಹಳ್ಳಿಯೇ!?

ನಮ್ಮ ದಾವಣಗೆರೆ ಹರಿಹರ ಡಿಪೋ ಬಸ್ಸುಗಳ ಕೆಲವು (ಮೊದಲೇ ಹೇಳಿದ್ದೇನೆ ಕೆಲವು ಮಾತ್ರ) ಡ್ರೈವರ್ ಕಂಡಕ್ಟರುಗಳಿಗೆ ತುಮಕೂರಿನ ಪ್ರಯಾಣಿಕರು ಅಂದರೆ ಎಷ್ಟು ಪ್ರೀತಿಯೆಂದರೆ ಬನ್ನಿ ಬನ್ನಿ ಹತ್ತಿ ಬೈಪಾಸ್ ಮಾತ್ರ ಅಂತ ಹೇಳಿ ಅತಿಯಾದ ಕಕ್ಕುಲತಿಯಿಂದ ಹತ್ತಿಸಿಕೊಳ್ಳುತ್ತಾರೆ. ಅವರಿಗೆ ಬೆಂಗಳೂರಿಗಿಂತ ತುಮಕೂರಿನ ಪ್ರಯಾಣಿಕರ ಮೇಲೆಯೇ ಪ್ರೀತಿ ಜಾಸ್ತಿ. ಬೆಂಗಳೂರು ಎಂದವರನ್ನು ಮಾತನಾಡಿಸುವುದೇ ಇಲ್ಲ! ತುಮಕೂರು ಎಂದರೆ ಸಾಕು!! ತುಮಕೂರು ಹೋಗಲ್ಲ, ಬೇರೆ ಬಸ್ಸಿಗೆ ಹೋಗಿ, ನಾನು ತುಮಕೂರು ಸೀಟ್ ಹಾಕಲ್ಲ, ಭರಮಸಾಗರ ಐಮಂಗಲ ಹಿರಿಯೂರು ಹೋಗ್ತೇವೆ, ತಿಂಡಿಗೆ ಊಟಕ್ಕೆ ಬಿಡ್ತೀವಿ, ಲೇಟ್ ಆಗುತ್ತೆ, ನಾವು ತುಮಕೂರು ಬಟವಾಡಿ ಹೋಗುವಷ್ಟರಲ್ಲಿ ಮಧ್ಯಾಹ್ನ ಒಂದು ಗಂಟೆ ಆಗುತ್ತೆ ಎಂಬೆಲ್ಲಾ ಮಾಹಿತಿಯನ್ನು ನೀಡುತ್ತಾ ಪ್ರೀತಿಯಿಂದ ಮಾತನಾಡಿಸುತ್ತಾರೆ… ನನಗಂತೂ ನೆನ್ನೆ ಬೆಳಿಗ್ಗೆ ಎರಡೂ ಕಣ್ಣಲ್ಲಿ ಆನಂದ ಭಾಷ್ಪ! ಖುಷಿ ತಡೆಯಲಾಗದೇ ಚಿತ್ರದಲ್ಲಿ ಕಾಣ್ತಿದೆಯಲ್ಲ ಆ ಬಸ್ಸಿನಲ್ಲಿ ದಾವಣಗೆರೆಯಿಂದ ಪ್ರಯಾಣಿಸಿ ಚಿತ್ರದುರ್ಗದಲ್ಲಿ ಇಳಿದು ಈ ಚಿತ್ರದುರ್ಗ ಬೆಂಗಳೂರು ನಾನ್ ಸ್ಟಾಪ್ ಬಸ್ಸಿನಲ್ಲಿ ತುಮಕೂರಿನ ಬಟವಾಡಿ ತಲುಪಿದೆ.

ಕರ್ನಾಟಕದ ಒಂದು ಯಃಕಶ್ಚಿತ್ ಹಳ್ಳಿಯಾದ ತುಮಕೂರಿನ ಪ್ರಯಾಣಿಕರಿಗೆ ಇವರು ಇಷ್ಟು ಪ್ರೀತಿ ತೋರುತ್ತಿರಬೇಕಾದರೆ ಇನ್ನು ತಾಲ್ಲೂಕುಗಳ, ಜಿಲ್ಲೆಗಳ ಪ್ರಯಾಣಿಕರಿಗೆ ಅದಿನೆಷ್ಟು ಪ್ರೀತಿ ಕಾಳಜಿ ತೋರುತ್ತಿರಬಹುದು!? ಮುಂದಿನ ಬಾರಿ ಈ ರೀತಿಯ ಪ್ರಯಾಣಿಕ ಸ್ನೇಹಿ ಪ್ರೀತಿ ತೋರಿದವರ ಭಾವಚಿತ್ರವನ್ನು ಸೆರೆಹಿಡಿದು, ಬಯೋ ಡೇಟಾ ಕಲೆಕ್ಟ್ ಮಾಡಿ ನಿಗಮದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತೇನೆ. ಸಾಹಿತಿಗಳಿಗೆ ನಿಗಮದಿಂದ ಕೊಡುವ ಅಮೋಘವರ್ಷ, ನೃಪತುಂಗ ಪ್ರಶಸ್ತಿಗಳನ್ನು ನಿಲ್ಲಿಸಿ ಈ ರೀತಿಯ ವಿಶೇಷ ಸೇವೆ ಸಲ್ಲಿಸಿ ನಿಗಮದ ಲಾಭಕ್ಕೆ ಕಾರಣರಾಗುವ ಸಿಬ್ಬಂದಿಗೆ ಕೊಡಬೇಕೆಂದು ಸಂಬಂಧಪಟ್ಟವರಿಗೆ ಬಹಿರಂಗ ಪತ್ರ ಬರೆಯುತ್ತೇನೆ. ಬಹುಮುಖ್ಯವಾಗಿ ನನ್ನ ಫೇಸ್ಬುಕ್ ಪೇಜಿನಲ್ಲಿ ಮತ್ತು ನಮ್ಮ ಹಾಯ್ ತುಮಕೂರು ವೆಬ್ ಪತ್ರಿಕೆಯಲ್ಲಿ ಇವರ ಒಂದು ವ್ಯಕ್ತಿ ಪರಿಚಯ ಮತ್ತು ಸಂದರ್ಶನ ಗ್ಯಾರಂಟಿ! Keep it up…

  • ಗುಬ್ಬಚ್ಚಿ ಸತೀಶ್.

Leave a Comment

Your email address will not be published. Required fields are marked *

Scroll to Top