
ನಮ್ಮ ಕರುನಾಡಿನ ಗ್ರಾಮೀಣ ಬದುಕಿನ ಸಾಮಾಜಿಕ ಮತ್ತು ರಾಜಕೀಯ ಚಿತ್ರಣಗಳನ್ನು ತುಸು ವಿಭಿನ್ನ ಶೈಲಿಯಲ್ಲಿ ನಾವು “ಗ್ರಾಮಾಯಾಣ” ಸಿನಿಮಾದಲ್ಲಿ ಕಾಣಬಹುದು. ಸಂಭಾಷಣೆ ನನಗೆ ಬಹಳ ಇಷ್ಟವಾಯ್ತು. ಇದಕ್ಕೂ ಹೆಚ್ಚು ಇಷ್ಟವಾಗೋದು ಮೌನದಲ್ಲೇ ಪಾತ್ರಗಳ ಭಾವವನ್ನು ಹಿನ್ನೆಲೆ ಸಂಗೀತದ ಮೂಲಕ ಕಟ್ಟಿಕೊಟ್ಟಿರುವುದು. ನಟ ವಿನಯ್ ರಾಜ್ಕುಮಾರ್ ಮತ್ತೊಮ್ಮೆ ತಾವು ವರ್ಸಟೈಲ್, ನಿರ್ದೇಶಕರ ನಟ ಎಂದು ಸಾಬೀತು ಪಡಿಸಿದ್ದಾರೆ. ಇದೇ ಕಾರಣಕ್ಕೆ ಇವರ ಸಿನಿಮಾಗಳನ್ನು ನಾನು ತಪ್ಪದೇ ನೋಡುವುದು. ನಟಿ ಮೇಘಾ ಶೆಟ್ಟಿ ಗ್ಲಾಮರ್ ಹೊರತಾಗಿಯೂ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ. ಈ ಸಿನಿಮಾದ ಪಾತ್ರವರ್ಗವನ್ನು ಬಹಳ ಕುಸರಿಯಿಂದ ಆಯ್ದುಕೊಳ್ಳಲಾಗಿದೆ. ಫ್ರೇಂ ಟು ಫ್ರೇಂ ಸಿನಿಮಾ ಇಷ್ಟವಾಗುತ್ತದೆ. ಒಂದೇ ಬೇಜಾರು ಏನೆಂದರೆ ಒಟ್ಟು ಸಿನಿಮಾವಾಗಿ ಚಿತ್ರದ ಆಶಯವೇ ಮುಖ್ಯವಾಗಿದ್ದು ನಿರ್ದೇಶಕ ದೇವನೂರು ಚಂದ್ರು ಮತ್ತು ತಂಡ ಸ್ವಲ್ಪಮಟ್ಟಿಗೆ ಎಡವಿತು ಅಂತ ಅನ್ನಿಸಿತು. ಹಾಡುಗಳು ಬೇಕಿತ್ತಾ ಅನ್ನುವ ಹೊತ್ತಿಗೆ ಅವುಗಳು ಕೊಟ್ಟ ಫೀಲ್ ಸಖತ್ತಾಗಿತ್ತು ಅಂತ ಅನ್ನಿಸುತ್ತದೆ. ಇದೇ ಆಶಯದೊಂದಿಗೆ ಒಂದೊಳ್ಳೆ ಲವ್ ಸ್ಟೋರಿ ಕೂಡ ಆಗಬಹುದಾಗಿದ್ದ ಸಿನಿಮಾ ಮುಗಿದಮೇಲೆ ಕನ್ನಡ ಚಲನಚಿತ್ರರಂಗದಲ್ಲಿ ಈ ಹೈವೊಲ್ಟೇಜ್ ಲೆವೆಲ್ಲಿಗೆ ಸಿನಿಮಾ ಮಾಡುವ ಹುಡುಗರು ಸಿಕ್ಕರಲ್ಲ ಎಂಬ ಹೆಮ್ಮೆ ಪ್ರೇಕ್ಷಕನಲ್ಲಿ ಮೂಡುತ್ತದೆ. ಒಮ್ಮೆ ಖಂಡಿತ ನೋಡಬಹುದು… ಕಡೇ ದೃಶ್ಯದಲ್ಲಿ ಸಿಕ್ತ್ ಸೆನ್ಸ್ ಸೀನ ಅಂದರೆ ನಾಯಕ ನಟನಿಗೆ ಬಂದ ಕರೆ ಯಾರದ್ದು ಅಂತ ನನಗೆ ಗೊತ್ತಾಗಲಿಲ್ಲ… ಕರಿ ಬೆಕ್ಕು ಪಾತ್ರದಲ್ಲಿ ನಟ ಲೂಸ್ ಮಾದ ತಮ್ಮ ನಟನೆಯ ಮತ್ತೊಂದು ಮಜಲನ್ನು ಇಲ್ಲಿ ಹೊರಹಾಕಿದ್ದಾರೆ… ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗೆ ಬೆಳೆಯುತ್ತಿರುವವರಿಗೆ ಇದು ನಮ್ಮ ಊರಿನ ಕತೆ ಎಂದನ್ನಿಸುವುದು ಗ್ಯಾರಂಟಿ…

- ಗುಬ್ಬಚ್ಚಿ ಸತೀಶ್.
