
ಈ ಚಿತ್ರವು 30/04/2026 ರಂದು ಬಿಡುಗಡೆಯಾಯಿತು. ಧ್ರುವಸರ್ಜಾ ನಾಯಕನಾಗಿದ್ದರೆ, ರೀಷ್ಮ ನಾಣಯ್ಯ ನಾಯಕಿಯಾಗಿದ್ದಾರೆ. ಉಳಿದಂತೆ ರವಿಚಂದ್ರನ್, ರಮೇಶ್, ದೊಡ್ಡಣ್ಣ, ಶೋಭರಾಜ್, ರವಿಶಂಕರ್, ಸಂಜಯ್ ದತ್, ಶಿಲ್ಪಾಶೆಟ್ಟಿ ನಟಿಸಿದ್ದಾರೆ. ಪ್ರೇಮ್ ರವರು ಚಿತ್ರವನ್ನು ನಿರ್ದೇಶಿಸಿದ್ದರೆ, ಕೆ.ವಿ.ಎನ್. ಸಂಸ್ಥೆಯವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.
ಚಿತ್ರದ ಕಥೆ: ಚಿತ್ರದ ನಾಯಕ ಕಾಳಿ (ಧ್ರುವ ಸರ್ಜಾ) ಸೀಮೆಎಣ್ಣೆ ಅಂಗಡಿ ಇಟ್ಟುಕೊಂಡಿರುತ್ತಾನೆ, ಜೊತೆಗೆ ಬೆಳಗಿನ ಹೊತ್ತು ಹಾಲಿನ ವ್ಯಾಪಾರವನ್ನು ಮಾಡುತ್ತಿರುತ್ತಾನೆ. ಅಲ್ಲಿನ ಗರಡಿ ಮನೆಗೂ ಸಹ ಈತನೇ ಹಾಲು ಕೊಡುತ್ತಿರುತ್ತಾನೆ. ಆ ನಗರದ ರೌಡಿ ದೇವ (ಸಂಜಯ್ ದತ್) ಗರಡಿ ಮನೆಯ ಹಳೆಯ ಶಿಷ್ಯ, ಹಾಗಾಗಿ ಗರಡಿ ಮನೆಗೆ ಆಗಾಗ್ಗೆ ಬರುತ್ತಿರುತ್ತಾನೆ. ಈ ರೌಡಿಯನ್ನು ಕಂಡರೆ ನಾಯಕನಿಗೆ ಅಚ್ಚು ಮೆಚ್ಚು. ಏಕೆಂದರೆ ಸಣ್ಣ ವಯಸ್ಸಿನಲ್ಲಿ ನಾಯಕನಿಗೆ ಅಪಘಾತವಾದಾಗ ಇದೇ ರೌಡಿ ಈತನಿಗೆ ರಕ್ತ ಕೊಟ್ಟಿರುತ್ತಾನೆ. ಮಾಮೂಲಿಯಂತೆ ಗರಡಿ ಮನೆಗೆ ದೇವ ಬಂದಾಗ ಅಲ್ಲಿ ನಾಯಕನ ಭೇಟಿಯಾಗುತ್ತದೆ. ಏಳು ಬಾರಿ ಬೆಳ್ಳಿ ಗದೆ ಗೆದ್ದಿರುವ ಪೈಲ್ವಾನ್ ನೊಂದಿಗೆ ಸೆಣಸುವಂತೆ ನಾಯಕ ದೇವನನ್ನು ಪ್ರಚೋದಿಸುತ್ತಾನೆ. ಆಗ ಅಖಾಡಕ್ಕಿಳಿದ ದೇವ ಸ್ವಲ್ಪ ಹೊತ್ತು ಸೆಣಸಾಡಿ ಪೈಲ್ವಾನ್ ನನ್ನು ಸೋಲಿಸುತ್ತಾನೆ. ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. ಆದರೆ ನಾಯಕ ನೀವು ಒಂದೇ ಪಟ್ಟಿನಲ್ಲಿ ಅವನನ್ನು ಸೋಲಿಸಬಹುದಿತ್ತು ಬಹಳ ಸಮಯ ತೆಗೆದುಕೊಂಡಿರಿ ಎಂದು ಹೇಳುತ್ತಾನೆ, ಅಲ್ಲಿದ್ದ ಎಲ್ಲರೂ ಆತನಿಗೆ ಬೈದು ಹೊರದಬ್ಬುತ್ತಾರೆ, ಆಗ ದೇವ ಅದು ಯಾವ ಪಟ್ಟು ನನ್ನ ಮೇಲೆ ಪ್ರಯೋಗ ಮಾಡು ಎಂದು ನಾಯಕನನ್ನು ಅಖಾಡಕ್ಕೆ ಇಳಿಸುತ್ತಾನೆ. ನಾಯಕ ಒಂದೇ ಏಟಿಗೆ ದೇವನನ್ನು ನೆಲಕ್ಕುರುಳಿಸುತ್ತಾನೆ. ಈ ಸುದ್ದಿ ಕಾಳ್ಗಿಚ್ಚಿನಂತೆ ನಗರದೆಲ್ಲಡೆ ಹಬ್ಬುತ್ತದೆ. ಇದರಿಂದ ದೇವನ ರಾಜಕೀಯ ಕ್ಷೇತ್ರದಲ್ಲಿ ತಲೆತಗ್ಗಿಸುವಂತಾಗುತ್ತದೆ. ಇದು ನಾಯಕನ ಜೀವನದಲ್ಲಿ ಹೊಸ ತಿರುವು ಪಡೆಯುತ್ತದೆ. ದೇವ ನಾಯಕನ ಮೇಲೆ ಸೇಡು ತೀರಿಸಿಕೊಳ್ಳುತ್ತಾನ? ನಾಯಕ ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ. ಚಿತ್ರದ ಕೊನೆಯಲ್ಲಿ ಖಳನಾಯಕನ ಅಂತ್ಯ ಆಗುತ್ತಾ? ಈ ಎಲ್ಲ ಘಟನೆಗಳಿಗೂ ಸೂತ್ರಧಾರ ಯಾರು?
ಮುಂತಾದ ಪ್ರಶ್ನೆಗೆ ಚಿತ್ರ ನೋಡಿ ತಿಳಿದುಕೊಳ್ಳಬೇಕು.
ಒಟ್ಟಾರೆ ಫಲಿತಾಂಶ: ಧ್ರುವಸರ್ಜಾ ನಟನೆ ಅತ್ಯುತ್ತಮವಾಗಿದೆ. ರೀಷ್ಮ ನಾಣಯ್ಯ ಅಚ್ಚರಿಯ ಅಭಿನಯ ನೀಡಿದ್ದಾರೆ, ನೃತ್ಯವನ್ನಂತೂ ಅದ್ಬುತವಾಗಿ ಮಾಡಿದ್ದಾರೆ. ಶಿಲ್ಪ ಶೆಟ್ಟಿ, ರವಿಚಂದ್ರನ್, ರಮೇಶ್, ಸಂಜಯ್ ದತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಚಿತ್ರದ ನಿರ್ದೇಶನದಲ್ಲಿ ಪ್ರೇಮ್ ಸ್ವಲ್ಪ ಹಿಂದುಳಿದಿದ್ದರೂ, ಕ್ಲೈಮ್ಯಾಕ್ಸ್ ನಲ್ಲಿ ಕೊಡುವ ಟ್ವಿಸ್ಟ್ ಮೂಲಕ ಎರಡನೆ ಭಾಗದ ಬಗ್ಗೆ ನಿರೀಕ್ಷೆ ಹೊಂದುವಂತೆ ಮಾಡಿದ್ದಾರೆ. ಈ ಪಾತ್ರ ಮಾಡಲಿಕ್ಕೆ ಶಿಲ್ಪಾಶೆಟ್ಟಿ ಬೇಕಿತ್ತಾ ಅಂತ ಅನಿಸುತ್ತದೆ, ಆದರೆ ಕ್ಲೈಮ್ಯಾಕ್ಸ್ ನಲ್ಲಿ ಬರುವ ಟ್ವಿಸ್ಟ್ ಮೂಲಕ ಎರಡನೇ ಭಾಗದಲ್ಲಿ ಅವರ ಪಾತ್ರಕ್ಕಿರುವ ಪ್ರಾಮುಖ್ಯತೆ ಗೊತ್ತಾಗುತ್ತದೆ. ಅದೇ ರೀತಿ ರವಿಚಂದ್ರನ್, ರಮೇಶ್ ಅವರ ಹಿನ್ನಲೆ ಏನೆಂಬುದೂ ಸಹ ಎರಡನೆ ಭಾಗದಲ್ಲೆ ಗೊತ್ತಾಗಲಿದೆ. ಮಾರ್ಕ್ ಶೂಟಿಂಗ್ ನಿಂದ ನೇರವಾಗಿ ಈಚಿತ್ರದ ಸೆಟ್ ಗೆ ಬಂದು ಸುದೀಪ್ ಪಾತ್ರ ಮಾಡಿದಂತಿದೆ, ಆದರೂ ಎರಡನೆ ಭಾಗದಲ್ಲಿ ಅದಕ್ಕೂ ಉತ್ತರ ಸಿಗಬಹುದು.
ನಿರ್ದೇಶಕ ಪ್ರೇಮ್ ಇದು ಚಿತ್ರ ಅಲ್ಲ ಟ್ರೈಲರ್ ಎಂದಿದ್ದರು, ಚಿತ್ರ ನೋಡಿದ ಮೇಲೆ ಅವರು ಹೇಳಿದ ಮಾತು ಅಕ್ಷರಶಃ ನಿಜವೆನಿಸಿತು, ಏಕೆಂದರೆ ಯಾವುದಕ್ಕೂ ಸರಿಯಾದ ಉತ್ತರ ಚಿತ್ರದ ಈ ಭಾಗದಲ್ಲಿ ಸಿಕ್ಕಿಲ್ಲ. ಪ್ರೇಮ್ ನಿರ್ದೇಶನದ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಹಾಡುಗಳ ಚಿತ್ರೀಕರಣವೂ ಈ ಚಿತ್ರದಲ್ಲಿ ಸಾಧಾರಣವಾಗಿದೆ.
– ವಿಮರ್ಶೆ ಬರೆದವರು✍️
ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.
