
“ಮಾರಿಕಣಿವೆ: ವಾಣಿ ವಿಲಾಸ ಸಾಗರ ನಿರ್ಮಾಣದ ಕಥೆ” ಪುಸ್ತಕದ ಲೇಖಕರು ಪ್ರೊ.ಎಂ.ಜಿ.ರಂಗಸ್ವಾಮಿಯವರು. ಇವರು ಹಿರಿಯೂರು ತಾಲ್ಲೂಕಿನವರಾಗಿದ್ದು, ಧರ್ಮಪುರ ಗ್ರಾಮದ ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.
ಇನ್ನು ಪುಸ್ತಕದ ವಿಷಯಕ್ಕೆ ಬರುವುದಾದರೆ, ಈ ಪುಸ್ತಕವು ವಾಣಿ ವಿಲಾಸ ಸಾಗರ ನಿರ್ಮಾಣ ಹಂತದಲ್ಲಿನ ಹಲವಾರು ವಿಸ್ಮಯ, ಕುತೂಹಲ ಕಥಾನಕವನ್ನು ಒಳಗೊಂಡಿದೆ. ಮಾರಿಕಣಿವೆಯ ಡ್ಯಾಂ ಕಟ್ಟಿಸಿದ್ದು ಯಾರು? ಕಟ್ಟಿಸಲು ಕಾರಣವೇನು? ಡ್ಯಾಂ ಅನ್ನು ಅದೇ ಜಾಗದಲ್ಲಿ ಏಕೆ ಕಟ್ಟಲಾಯಿತು? ಡ್ಯಾಂ ಕಟ್ಟಿದ್ದರಿಂದ ಯಾರಿಗೆ ಅನುಕೂಲವಾಯಿತು, ಯಾರಿಗೆ ತೊಂದರೆಯಾಯಿತು?ಡ್ಯಾಂ ಕಟ್ಟಲು ಬಳಸಿದ ವಸ್ತುಗಳ ವಿವರ, ಡ್ಯಾಂ ಕಟ್ಟಲು ಬಂದಂತಹ ಇಂಜಿನಿಯರ್ಗಳು, ಅಧಿಕಾರಿಗಳ ವಿವರ ಹಾಗು ಅಲ್ಲಿನ ಕ್ಷೇತ್ರ ದೇವತೆ ಮಾರಮ್ಮನ ಬಗ್ಗೆ ಮಾಹಿತಿ, ಮಹಾರಾಣಿಯ ಬಗ್ಗೆ ಮಾಹಿತಿ ಒಳಗೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದಲ್ಲಿ ಇರುವ ಡ್ಯಾಂ ನಿರ್ಮಾಣ ಹಂತದ ವಿವಿಧ ಚಿತ್ರಗಳು ಕಣ್ಮನ ಸೆಳೆಯುತ್ತವೆ.
ಲೇಖಕರು ಜನಪದ ಸೊಗಡನ್ನು ಅರಿತವರಾದರಿಂದ ಕೆಲವೊಂದು ಕಡೆ ಜನಪದ ಸಾಲುಗಳು ಕಾಣ ಸಿಗುತ್ತವೆ. ಉದಾಹರಣೆಗೆ
ʼಮಾರೀಯ ಕಣಿವೆಯ ಮಾರಾಜ ಕಟ್ಟಿಸಿದ
ಮೂವತ್ಮೂರಳ್ಳಿ ಮುಳುಗ್ಯಾವು
ಅಂಬುದ ಕೇಳಿ ಆಕೆ ಕಣಿಮೆವ್ವ ಅಳುತಾಳೆ.ʼ
ಬಹಳ ವಿಷಯ ಸಂಗ್ರಹಿಸಿ, ಬಹಳ ಶ್ರದ್ಧೆಯಿಂದ ಲೇಖಕರು ಈ ಪುಸ್ತಕವನ್ನು ಬರೆದು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ವಾಸಿಸುತ್ತಿರುವವರು ಖಂಡಿತವಾಗಿಯೂ ಈ ಪುಸ್ತಕವನ್ನು ಓದಲೇಬೇಕು. ಕರುನಾಡಿನ ಇತಿಹಾಸದ ಆಸಕ್ತರಿಗೆ ಈ ಪುಸ್ತಕ ಬಹಳ ಮಾಹಿತಿಯನ್ನೊಳಗೊಂಡ ಕಣಜವಾಗಿದೆ. ನಿಮಗೆ ತಿಳಿಯದ ಬಹಳಷ್ಟು ಮಾಹಿತಿ ಈ ಪುಸ್ತಕದಲ್ಲಿದೆ. ನಿಮ್ಮೂರಿನ ಪುಸ್ತಕ ಮಳಿಗೆಯಲ್ಲಿ ಈ ಪುಸ್ತಕವನ್ನು ಖರೀದಿಸಿ. ಒಂದು ವೇಳೆ ಅಲ್ಲಿ ಈ ಪುಸ್ತಕ ಸಿಗದೆ ಇದ್ದರೆ, ಈ ವಾಟ್ಸಪ್ ಸಂಖ್ಯೆಗೆ 93428 08865 ಮೆಸೇಜ್ ಮಾಡಿ, ನಾವು ನಿಮಗೆ ಲೇಖಕರ ನಂಬರ್ ಕಳಿಸುತ್ತೇವೆ, ನೀವು ಲೇಖಕರಿಂದ ನೇರವಾಗಿ ಪುಸ್ತಕವನ್ನು ತರಿಸಿಕೊಳ್ಳಿ.
- ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.
