“45” ಚಿತ್ರ ವಿಮರ್ಶೆ : ಶಿವಣ್ಣ ನಾಯಕ ಅಲ್ಲ ಅಧಿನಾಯಕ!

ಚಿತ್ರದ ಕಥೆ: 45 ಚಿತ್ರದ ನಾಯಕ ವಿನಯ್ (ರಾಜ್.ಬಿ.ಶೆಟ್ಟಿ) ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವಾಗ ನಾಯಿಗೆ ಬೈಕ್ ಡಿಕ್ಕಿ ಹೊಡೆದು ಅದು ಸಾಯುತ್ತದೆ, ಹಾಗೆ ಬೈಕ್ ಓಡಿಸಿಕೊಂಡು ಹೋದಾಗ ಒಂದು ಲಾರಿ ನಾಯಕನಿಗೆ ಡಿಕ್ಕಿ ಹೊಡೆದು ನಾಯಕ ಸ್ಥಳದಲ್ಲೆ ಮೃತಪಡುತ್ತಾನೆ. ಇತ್ತ ನಾಯಕ ಗಾಬರಿಯಿಂದ ನಿದ್ದೆಯಿಂದ ಎದ್ದು ತಾನು ಕಂಡದ್ದು ಕನಸ ಎಂದು ನಿಟ್ಟುಸಿರು ಬಿಟ್ಟು, ಹೊರಗೆ ಬಂದು ನೋಡಿದರೆ ತನ್ನ ಹೆಣದ ಮುಂದೆ ಅವರ ತಾಯಿ ಅಳುತ್ತಿರುವುದು ಕಾಣುತ್ತದೆ. ನಾಯಕ ಸಾಯಿಸಿದ ನಾಯಿಯ ಮಾಲೀಕ ರಾಯಪ್ಪ (ಉಪೇಂದ್ರ) ತನ್ನ ನಾಯಿಯ ಸಾವಿಗೆ ಕಾರಣನಾದ ನಾಯಕನನ್ನು ಎಳೆದುಕೊಂಡು ಬಂದು ನಿನ್ನನ್ನು 45 ದಿನದಲ್ಲಿ ಸಾಯಿಸುತ್ತೇನೆ ಎಂದು ಹೇಳುತ್ತಾನೆ. ರಾಯಪ್ಪನ ಉಪಟಳ ಜಾಸ್ತಿಯಾದಾಗ ಶಿವಪ್ಪ (ಶಿವರಾಜ್ ಕುಮಾರ್) ನಾಯಕನ ರಕ್ಷಣೆಗೆ ಬರುತ್ತಾನೆ. ರಾಯಪ್ಪ 45 ದಿನದಲ್ಲಿ ನಾಯಕನನ್ನು ಸಾಯಿಸುತ್ತಾನಾ? ಶಿವಪ್ಪ ನಾಯಕನನ್ನು ಕಾಪಾಡುತ್ತಾನಾ? ನಾಯಕ ಕಂಡ ತನ್ನ ಸಾವಿನ ಕನಸು ನಿಜವಾಗಿ ನಡೆದದ್ದಾ ಹೇಗೆ? ರಾಯಪ್ಪ, ಶಿವಪ್ಪ ಇವರ ಸ್ಥಾನ ಏನು? ಮುಂತಾದ ಪ್ರಶ್ನೆಗೆ ಚಿತ್ರ ನೋಡಿ ತಿಳಿದುಕೊಳ್ಳಬೇಕು.

ಒಟ್ಟಾರೆ ಫಲಿತಾಂಶ: ರಾಜ್ ಬಿ ಶೆಟ್ಟಿ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆಯುತ್ತಾರೆ. ಈ ಚಿತ್ರದಲ್ಲಿ ನಮಗೆ ಬಹಳ ದಿನದಿಂದ ಕಾದಿದ್ದ ಹಳೆಯ ಉಪೇಂದ್ರ ಕಾಣಿಸುತ್ತಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕ ಅಲ್ಲ ಅಧಿನಾಯಕನಾಗಿ ಮಧ್ಯಂತರದ ನಂತರ ಚಿತ್ರವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ಸಮಯದಲ್ಲಿ ವಿವಿಧ ಅವತಾರಗಳಲ್ಲಿ ಎಲ್ಲರೂ ಸೀಟಿನ ತುತ್ತ ತುದಿಯಲ್ಲಿ‌ ಕುಳಿತು ಚಿತ್ರ ನೋಡುವಂತೆ ಮಾಡಿದ್ದಾರೆ. ಚಿತ್ರದ ಅರ್ಧ ಬಜೆಟ್ ಆ ದೃಶ್ಯಕ್ಕೆ ಹೋಗಿರುವುದು ಕಂಡುಬರುತ್ತದೆ.

ಚಿತ್ರದಲ್ಲಿ ಶಿವಣ್ಣನ ಡೈಲಾಗುಗಳಿಗೆ ಒಳ್ಳೆಯ ಪ್ರಾಮುಖ್ಯತೆ ಇದೆ. ಉದಾಹರಣೆಗೆ “16 ನೆ ದಿನ ಸಾಯಕ್ಕೆ ಉಳಿದ 15 ದಿನ ಚೆನ್ನಾಗಿ ಖುಷಿಯಿಂದ ಬದುಕು”, “ನೀನು ಹೇಗೆ ಕೆಲವರ ಜೀವನದಲ್ಲಿ ಕೊನೆವರೆಗೂ ಇರಕ್ಕೆ ಆಗಲ್ವೊ, ಹಾಗೆ ನಿನ್ನ ಜೀವನದಲ್ಲಿ ಕೆಲವರು ಕೊನೆವರೆಗೂ ಇರಕ್ಕೆ ಆಗಲ್ಲ” ಎಂದೆಲ್ಲಾ.

ಅರ್ಜುನ್ ಜನ್ಯ ಈ ಚಿತ್ರ ಮಾಡಲು ಬಹಳ ಅಧ್ಯಯನ ಮಾಡಿದ್ದಾರೆ. ಇಂತಹ ಚಿತ್ರ ಮಾಡಲು, ಅದೂ ದಿಗ್ಗಜ ನಟರನ್ನು ಹಾಕಿಕೊಂಡು ಮಾಡಲು ನಿಜಕ್ಕೂ ಗಂಡೆದೆ ಬೇಕು. ಅವರು ಆಯ್ಕೆ ಮಾಡಿಕೊಂಡಿರುವ ಕಥೆ ಹೇಗಿದೆ ಅಂದರೆ ಇದುವರೆಗೂ ಯಾರೂ ಟಚ್ ಮಾಡದಂತಹ ಸಬ್ಜೆಕ್ಟ್ ಇದು. ʼಗರುಡಪುರಾಣʼವನ್ನು ಚಿತ್ರದಲ್ಲಿ ಬಳಸಿ ಎಲ್ಲರಿಗೂ ಅರ್ಥವಾಗುವಂತೆ ಮಾಡಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರ ಎನ್ನುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ, ಪಳಗಿದ ನಿರ್ದೇಶಕರಂತೆ ಚಿತ್ರವನ್ನು ನಿರ್ದೇಶಿಸಿದ್ದಾರೆ, ಪ್ರತಿಯೊಂದು ದೃಶ್ಯದಲ್ಲೂ ಅವರ ಶ್ರಮ ಎದ್ದು ಕಾಣುತ್ತದೆ. ಶಿವರಾಜ್ ಕುಮಾರ್ ಹೊಟೇಲ್ಲಿನಲ್ಲಿ ಶಿವನ ಪೋಟೋ ಪಕ್ಕದಲ್ಲೆ ಕೂರುವ ದೃಶ್ಯದಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತದೆ.

ಇದೊಂದು ಉತ್ತಮ ಪ್ರಯತ್ನ, ಈ ಪ್ರಯತ್ನಕ್ಕೆ ಜೊತೆಯಾದ ನಿರ್ಮಾಪಕ ರಮೇಶ್ ರೆಡ್ಡಿಯವರನ್ನು ಖಂಡಿತಾ ಅಭಿನಂದಿಸಬೇಕು.

ಈ ಹಿಂದೆ ತಮಿಳಿನಲ್ಲಿ ವಿಕ್ರಂ ನಾಯಕತ್ವದಲ್ಲಿ ಶಂಕರ್ ನಿರ್ದೇಶನದಲ್ಲಿ ಬಂದಿದ್ದ ಅನ್ನಿಯನ್ ಚಿತ್ರದಲ್ಲಿ ಗರುಡ ಪುರಾಣವನ್ನು ಸಂದರ್ಭಕ್ಕೆ ಎಷ್ಟು ಬೇಕೊ ಅಷ್ಟು ಬಳಸಿಕೊಂಡಿದ್ದರು, ಈ ಚಿತ್ರದಲ್ಲಿ ಅದರ ಸಂಪೂರ್ಣ ಮಾಹಿತಿ ನಮಗೆ ಲಭ್ಯವಾಗುತ್ತದೆ.

ಚಿತ್ರ ನೋಡಿದ ಮೇಲೆ ಚಿತ್ರದಿಂದ ಏನನ್ನೊ ಪಡೆದುಕೊಂಡ ಅನುಭವ ನಿಮಗೆ ಖಂಡಿತಾ ಆಗುತ್ತದೆ.

ನಾನು ನೋಡಿದ ಚಿತ್ರಮಂದಿರದಲ್ಲಿ ಚಿತ್ರ ಮುಗಿದರೂ ಜನ ಸೀಟಲ್ಲೆ‌ ಕುಳಿತುಕೊಂಡಿದ್ದರು ಅಷ್ಟರ ಮಟ್ಟಿಗೆ ಚಿತ್ರ ಎಲ್ಲರನ್ನು ಆವರಿಸಿಕೊಂಡಿತ್ತು.

ಚೇಸಿಂಗ್ ದೃಶ್ಯವೊಂದರಲ್ಲಿ ಲಾರಿ ಡಿವೈಡರ್ ದಾಟಿ ಬರುವ ದೃಶ್ಯ ಇತ್ತೀಚೆಗೆ ನಮ್ಮೂರಿನ ಬಳಿ ಆದ ಅಪಘಾತದ ದೃಶ್ಯವನ್ನು ನೆನಪಿಸಿತು.

ಹಾಗೆಯೆ ತಾಯಿಯ ಬಗ್ಗೆ ಬರುವ ದೃಶ್ಯವನ್ನು ಮನಮುಟ್ಟುವಂತೆ ಚಿತ್ರಿಸಿ ಎಲ್ಲರಿಗೂ ತಾಯಿಯ ಮಹತ್ವ ಅರಿವಾಗುವಂತೆ ಮಾಡಿದ್ದಾರೆ.

ಒಟ್ಟಿನಲ್ಲಿ ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ.

ಅದೇ ಹಾಡು, ಅದೇ ಕಥೆ, ಅದೇ ಹೊಡೆದಾಟ ಸಿದ್ದ ಸೂತ್ರದ ಚಿತ್ರಗಳಿಗೆ ಅಂಟಿಕೊಂಡಿರುವ ಪ್ರೇಕ್ಷಕನಿಗೆ ಈ ಚಿತ್ರ ಅರ್ಥವಾಗುವುದು ಕಷ್ಟ,

ಹೊಸತನವನ್ನು ಸ್ವಾಗತಿಸುವ, ಹೊಸತನ್ನು ಒಪ್ಪಿಕೊಳ್ಳುವ ಪ್ರೇಕ್ಷಕನಿಗೆ ಈ ಚಿತ್ರ ಖಂಡಿತಾವಾಗಿಯೂ ಇಷ್ಟವಾಗುತ್ತದೆ.

ಚಿತ್ರ ನೋಡಿದ ಮೇಲೆ “ಸರ್ವಂ ಶಿವ ಮಯಂ” ಎಂಬ ಮಾತನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ಶಿವರಾಜ್ ಕುಮಾರ್ , ಉಪೇಂದ್ರ, ರಾಜ್ ಬಿ ಶೆಟ್ಟಿ, ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಕೌಸ್ತುಭಮಣಿ ನಾಯಕಿಯಾಗಿ ನಟಿಸಿದ್ದಾರೆ.

ಉಳಿದಂತೆ ಮಾನಸಿ ಸುಧೀರ್, ಪ್ರಮೋದ್ ಶೆಟ್ಟಿ, ಪಾವಗಡ ಮಂಜು ಮುಂತಾದವರು ನಟಿಸಿದ್ದಾರೆ.

ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನವನ್ನು ಅರ್ಜುನ್ ಜನ್ಯ ಮಾಡಿದ್ದಾರೆ.

ಎಮ್.ರಮೇಶ್ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.

ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದರೆ , ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ.

  • ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.

Leave a Comment

Your email address will not be published. Required fields are marked *

Scroll to Top