
”ಪೀಟರ್” ಚಿತ್ರವು 10/04/2026 ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಾಜೇಶ್ ದೃವ, ರವೀಕ್ಷ ಶೆಟ್ಟಿ, ಜಾನವಿ ರಾಯಲ , ಪ್ರತಿಮಾ ನಾಯಕ್, ದೀನಾ ಪೂಜಾರಿ ಮುಂತಾದವರು ನಟಿಸಿದ್ದಾರೆ. ಕಥೆ- ಚಿತ್ರಕಥೆ-ನಿರ್ದೇಶನ ಸುಕೇಶ್ ಶೆಟ್ಟಿ ಅವರದು. ರವಿ ಹಿರೇಮಟ್ ಮತ್ತು ರಾಕೇಶ್ ಹೆಗಡೆ ಚಿತ್ರವನ್ನು ನಿರ್ಮಿಸಿದ್ದಾರೆ. ಛಾಯಾಗ್ರಹಣ ಗುರುಪ್ರಸಾದ್ ನಾರ್ನಾಡ್ ಅವರದು.
ಚಿತ್ರದ ಕಥೆ: ಒಂದು ಊರು ಆ ಊರಿನಲ್ಲಿ ಒಂದು ಪುರಾತನ ಕೃಷ್ಣನ ದೇವಸ್ಥಾನ, ಬೇರೆ ಕಡೆಯಿಂದ ಬಂದ ಗುರುಗಳೊಬ್ಬರು ಅದೇ ದೇವಸ್ಥಾನದಲ್ಲಿ ಉಳಿದು ಕೊಂಡು ಚಂಡೆ ಬಾರಿಸುವುದನ್ನು ಯುವಕರಿಗೆ ಹೇಳಿ ಕೊಟ್ಟಿರುತ್ತಾರೆ. ಗುರುಗಳ ನಿಧನದ ನಂತರ ಊರ ಉತ್ಸವದಲ್ಲಿ ಕೃಷ್ಣನ ದೇವಸ್ಥಾನದ ಮುಂದೆ ಚಂಡೆ ಬಾರಿಸಲು ಪೈಪೋಟಿ ಎದುರಾಗುತ್ತದೆ. ಒಂದು ಗುಂಪಿನಲ್ಲಿ ನಾಯಕ ಪೀಟರ್ ಇದ್ದರೆ, ಇನ್ನೊಂದು ಗುಂಪಿನಲ್ಲಿ ಖಳನಾಯಕ ಬಠಾಣಿ ಇರುತ್ತಾನೆ. ಚಂಡೆ ಬಾರಿಸುವ ಪೈಪೋಟಿಯಲ್ಲಿ ನಾಯಕ ಪೀಟರ್ ನ ಗುಂಪು ಗೆಲುವಿನ ಸನಿಹದಲ್ಲಿ ಇದ್ದಾಗ ಬಠಾಣಿ ನಾಯಕನ ಗುಂಪಿನಲ್ಲಿ ಒಬ್ಬನ ಮೇಲೆ ಹಲ್ಲೆ ಮಾಡುತ್ತಾನೆ, ಈ ಸಂದರ್ಭದಲ್ಲಿ ಬಠಾಣಿಗೆ ಕಲ್ಲಿನಿಂದ ಯಾರೋ ಹೊಡೆಯುತ್ತಾರೆ. ಇದರಿಂದ ಆಸ್ಪತ್ರೆ ಸೇರಿದ ಬಠಾಣಿ ಅಲ್ಲಿ ಮೃತನಾಗುತ್ತಾನೆ. ಇದಕ್ಕೆ ನಾಯಕ ತನ್ನ ಸ್ನೇಹಿತನ ಸಲಹೆಯಂತೆ ಕೇರಳಕ್ಕೆ ವಲಸೆ ಹೋಗುತ್ತಾನೆ. ಕೆಲವು ವರ್ಷಗಳ ನಂತರ ತನ್ನ ಊರಿಗೆ ವಾಪಾಸ್ ಬಂದಾಗ ತನ್ನ ತಾಯಿ ಮಾನಸಿಕ ಅಸ್ವಸ್ಥೆಯಾಗಿರುತ್ತಾಳೆ. ತನ್ನ ಪಕ್ಕದ ಮನೆಗೆ ಬಾಡಿಗೆ ಬಂದಿರುವ ಟೀಚರ್ ಪೀಟರ್ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾಳೆ. ತನ್ನ ಊರಿನಿಂದ ಪೀಟರ್ ನನ್ನು ಬೇರೆ ಕಡೆಗೆ ಕಳುಹಿಸಿದ ಸ್ನೇಹಿತ ಶಂಭುವಿನ ಬದಲಾವಣೆ ನಾಯಕನಲ್ಲಿ ಅನುಮಾನ ಮೂಡಿಸುತ್ತದೆ. ಗರ್ಭವತಿಯಾಗಿದ್ದ ನಾಯಕಿಯ ಸಾವಿನ ರಹಸ್ಯ ಕೊನೆಯಲ್ಲಿ ಬಯಲಾಗುತ್ತದೆ.
ಒಟ್ಟಾರೆ ಫಲಿತಾಂಶ: ನಾಯಕ ರಾಜೇಶ್ ದೃವ ಅದ್ಬುತವಾಗಿ ನಟಿಸಿದ್ದಾರೆ. ನಾಯಕಿ ರವೀಕ್ಷ ಶೆಟ್ಟಿ ಮೊಗ್ಗಿನಮನಸು ಚಿತ್ರದ ರಾಧಿಕ ಪಂಡಿತ್ ರನ್ನು ನೆನಪಿಸುತ್ತಾರೆ.
ಪ್ರಾರಂಭದಲ್ಲಿ ಏನು ಪಿಕ್ಚರ್ ಇದು ಅರ್ಥಾನೆ ಆಗ್ತಿಲ್ಲ ಅಂತ ಅನಿಸಿ, ಚಿತ್ರ ಮುಂದುವರೆದಂತೆ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ರೀತಿಯಲ್ಲಿ ನಿರೂಪಿಸಿರುವ ನಿರ್ದೇಶಕ ಸುಕೇಶ್ ಶೆಟ್ಟಿಯವರ ಜಾಣ್ಮೆಯನ್ನು ಮೆಚ್ಚಲೇಬೇಕು.
ಮತ್ತೊಂದು ಪಾತ್ರದಲ್ಲಿ ನಟಿಸಿರುವ ಜಾನ್ವಿ ರಾಯಲ ಅವರು ಮೇಕಪ್ ಇಲ್ಲದೆ ಸಹಜಾಭಿನಯ ನೀಡಿದ್ದಾರೆ. ಒಂದು ಸಣ್ಣ ಕಾರಣಕ್ಕಾಗಿ ಇಷ್ಟೊಂದು ಹೈಡ್ರಾಮಕ್ಕೆ ಕಾರಣನಾದ ನಾಯಕನ ಸ್ನೇಹಿತ ಶಂಭು ಅಚ್ಚರಿ ಮೂಡಿಸುತ್ತಾರೆ. ನಾಯಕನ ತಾಯಿ ಪಾತ್ರಧಾರಿ ಪ್ರತಿಮಾನಾಯಕ್, ಹಾಗು ಅತ್ತಿಗೆ ಪಾತ್ರಧಾರಿ ದೀನಾ ಪೂಜಾರಿ ಭಯ ಹುಟ್ಟಿಸುತ್ತಾರೆ.
ಚಿತ್ರ ವೀಕ್ಷಿಸಲು ಅಮೆಜಾನ್ ಫ್ರೈಂ ನಲ್ಲಿ ಲಭ್ಯವಿದೆ.
ವಿಮರ್ಶೆ ಬರೆದವರು ![]()
ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.
