ಹುಳಿ


“ರೀ ಬರೋವಾಗ ಮೊಸರು ತರ್ತೀರಾ..ಮನೇಲಿರೋ ಮೊಸರು ಮೂರು ದಿನ ಹಿಂದಿನದು..ತುಂಬಾ ಹುಳಿಯಾಗಿದೆ”

“ಹೌದಾ….ಹಾಗಾದ್ರೆ ಅದನ್ನ ಏನು ಮಾಡ್ತೀಯೆ?”

“ಏನು ಮಾಡೋದು? ತಿಪ್ಪೆಗೆ ಚೆಲ್ಲೋದು..ಅಷ್ಟೆ…”

“ಅಮ್ಮ ಹೇಳ್ತಿದ್ಲು..ಮೊಸರನ್ನ ಹೊರಗೆ ಚೆಲ್ಲಬಾರದು ಅಂತ. ಏನಾದರೂ ಮಾಡು….”

“ಏನು ಮಾಡಲಿ..ಮಜ್ಜಿಗೆ ಮಾಡಿದರೆ ಹುಳಿ ಹುಳಿ.. ಬಾಯಲ್ಲಿಡೋಕಾಗಲ್ಲಾ…”

“ಒಂದ್ಕೆಲ್ಸಾ ಮಾಡು ಮಜ್ಜಿಗೆ ಹುಳಿ ಮಾಡು.. ತಿನ್ನೋಕೂ ರುಚಿಯಾಗಿರುತ್ತೆ. ಅನ್ನಕ್ಕೂ ಜೊತೆಯಾಗುತ್ತೆ…”

“ಗುಡ್ ಐಡಿಯಾ…ಹೇಗೂ ಹೊರಗೆ ಹೋಗ್ತಿದ್ದೀರಾ..ಒಂದಷ್ಟು ಸಾಮಗ್ರಿ ಹೇಳ್ತೆನೆ, ಬರೆದುಕೊಂಡು ಬಿಡಿ”

“ಸರಿ..ಹೇಳು…”

“ಊ….ಕೊತ್ತಂಬರಿ ಸೊಪ್ಪು.. ಕರಿಬೇವು, ಶುಂಠಿ…ಹಾ..ಒಂದು ತೆಂಗಿನ ಕಾಯಿ…ಓಂಕಾಳು….”

“ಹೂ…ಬರೆದಾಯ್ತು…ಹೊರಡ್ಲಾ..”

“ಇನ್ನೂ ಇದೆ ತಡೀರಿ….ಒಂದು
ಬೂದುಗುಂಬಳಕಾಯಿ…”

“ಬೂದು ಗುಂಬಳಕಾಯಿನಾ? ಅದ್ಯಾಕೆ?”

“ಮತ್ತೆ ಮಜ್ಜಿಗೆ ಹುಳಿ ಏನು ಬೆಂಡೆಕಾಯಲ್ಲಿ ಮಾಡೋಕಾಗುತ್ತಾ? ತರ್ತಾ ದೊಡ್ದೆ ತನ್ನಿ. ಹೋಳು, ಗೀಳು ತರಬೇಡಿ…ತೆರೆದಿಟ್ಟದ್ದು ಚೆನ್ನಾಗಿರೋಲ್ಲಾ ..”

“ಆಯ್ತಾ…ಹೊರಡಲಾ?”

“ಊ..ಸ್ವಲ್ಪ ತಡೀರಿ…ರೀ ಒಂದೆ ಕುಂಬಳಕಾಯಿ ತರಬಾರದಂತೆ, ಅಜ್ಜಿ ಹೇಳ್ತಾ ಇದ್ರು. ತರೋದು ತರ್ತೀರಾ ಎರಡು ಕುಂಬಳಕಾಯಿ..ದೊಡ್ಡದು ತನ್ನಿ. ಹೇಗೂ ದೊಡ್ಡ ಕುಂಬಳಕಾಯಿ ತರ್ತೀದ್ದೀರಾ ಅಷ್ಟನ್ನೂ ಮಜ್ಜಿಗೆ ಹುಳಿಗೆ ಹಾಕೋಕೆ ಆಗುತ್ತಾ? ಒಂದು ಕೆಲಸಾ ಮಾಡಿ, ಒಂದೆರಡು ಕೆಜಿ ಸಕ್ಕರೆ, ಒಂದು ಕೆಜಿ ನಂದಿನಿ ತುಪ್ಪ, ಕಾಲು ಕಾಲು ಕೆಜಿ ದ್ರಾಕ್ಷಿ, ಗೋಡಂಬಿ, ಏಲಕ್ಕಿ….”

“ಇದೆಲ್ಲಾ ಮಜ್ಜಿಗೆ ಹುಳಿಗೆ ಹಾಕ್ತಾರೆಯೆ?”

“ಛೆ..ಹುಳಿಗೆ ಅಲ್ರೀ..ಕಾಶಿಹಲ್ವಾ ಮಾಡೋಕೆ. ಕುಂಬಳಕಾಯಿ ಒಡೆದು ಹಾಗೆ ಇಡಬಾರದು.. ಅಪಶಕುನ..”

“ಇಷ್ಟೆ ಸಾಕಾ?”

“ಸ್ವಲ್ಪ ತಡೀರಿ…ಒಂದು ನಾಲ್ಕು ಸೇರು ಭತ್ತದರಳು, ಎಂಟೋ ಹತ್ತೋ ನಿಂಬೆಹಣ್ಣು, ಒಳ್ಳೆ ಎಳೆಗಾಯಿ ಹಸಿ ಮೆಣಸು, ಎಸ್ ಎಸ್ ಪಿ ಇಂಗು ತನ್ನಿ.. ಘಮಘಮಾಂತ ಇರುತ್ತೆ…”

“ಕಾಶೀ ಹಲ್ವಾಕೆ ಇಂಗು ಹಾಕ್ತಾರೇನೆ?”

“ಥೋ..ನಿಮ್ಮ ಬುದ್ಧಿಗಿಷ್ಟು…ಹಲ್ವಾಕೆ ಯಾರಾದ್ರೂ ಇಂಗು ಹಾಕ್ತಾರೇನ್ರೀ..ಇದು ಅರಳುಸಂಡಿಗೆಗೆ. ಕುಂಬಳಕಾಯಿ ತರ್ತಿದ್ದೀರಾ ಸಂಡಿಗೆ ಮಾಡದಿದ್ರೆ ಹೇಗೆ ಹೇಳಿ?…”

“ಈಗಲಾದರೂ ಹೊರಡಲಾ?”

“ಏನೋ ನೆನಪಿಗೆ ಬರ್ತಿದೆ ತಡೀರಿ…ಹಾ…ನೆನಪಾಯ್ತು ಒಂದು ಪಡವಲಕಾಯಿಯನ್ನೂ ತನ್ನಿ. ಮಜ್ಜಿಗೆ ಹುಳಿಗೆ ಕುಂಬಳಕಾಯಿ ಜೊತೆ ಒಳ್ಳೆ ಕಾಂಬಿನೇಷನ್ನು…ಜೊತೆಗೆ ಒಂದರ್ಧ ಕೆಜಿ ಒಳ್ಳೆ ನುಣುಪಾದ ಕಡ್ಲೆಹಿಟ್ಟೂ ತನ್ನಿ… ಹೇಗೂ ಪಡವಲಕಾಯಿ ತರ್ತಿದ್ದೀರಾ ಬೊಂಡಾ ಮಾಡದಿದ್ರೆ ಹೇಗೆ ಹೇಳಿ? ಹಾ…ಅಡುಗೆ ಸೋಡಾನೂ, ರಿಫೈಂಡ್ ಎಣ್ಣೆನೂ ತನ್ನಿ, ಕಡಲೆಕಾಯಿದಲ್ಲಾ, ಸೂರ್ಯಕಾಂತಿದು…”

“ಸರಿ..ಹೊರಟೆ…”

“ಇದೇನು ಹೊರ ಬಾಗಿಲಿರೋದು ಆ ಕಡೆ…ಈ ಕಡೆಗೆಲ್ಲಿ ಹೊರಟಿರಿ…”

“ನಾನು ಹೊರಗೆ ಹೋಗ್ತಿಲ್ಲ, ಅಡುಗೆ ಮನೆಗೆ ಹೋಗ್ತಿದ್ದೀನಿ”

“ಯಾಕೆ? ಮಾರ್ಕೇಟಿಗೆ ಹೋಗಲ್ವಾ?”

“ನಿನ್ನ ಮಾರ್ಕೆಟ್ ಮನೆ ಹಾಳಾಗ. ಬಟ್ಟಲು ಹುಳಿ ಮಜ್ಜಿಗೆಗೆ ನೂರಾರು ರೂಪಾಯಿ ಖರ್ಚುಮಾಡಬೇಕಾ? ಬಂದ ಪಾಪ ಬರಲಿ.. ನಾನೆ ಆ ಮಜ್ಜಿಗೆನಾ ತಿಪ್ಪೆಗೆ ಸುರೀತೆನೆ….”

“ರೀ…ಮತ್ತೆ ನೀವೆ ಹೇಳಿದಿರಿ…..”

“ಹೇಳಿದೆ..ಬುದ್ಧಿ ಇಲ್ಲದೆ. ಹುಳಿ ನನಗೆ ಆಗೋದಿಲ್ಲ .. ಅಸಿಡಿಟಿ….”

  • ಪ್ರಭಾಕರ ಕೆ.ವಿ., ಶಿವಮೊಗ್ಗ. (ಸಂಗ್ರಹ)

Leave a Comment

Your email address will not be published. Required fields are marked *

Scroll to Top