ಇದು “ಸರಳ” ಅಲ್ಲ “ವಿರಳ” ಪ್ರೇಮಕತೆ…

ಒಂದು ಸರಳ ಪ್ರೇಮ ಕಥೆ ಚಿತ್ರವು 08-02-2024 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ನಾಯಕನಾಗಿದ್ದರೆ, ಮಲ್ಲಿಕಾ ಸಿಂಗ್ ಹಾಗು ಸ್ವಾತಿ ನಾಯಕಿಯರಾಗಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಸಾಧುಕೋಕಿಲ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದ್ದರೆ, ಮೈಸೂರ್ ರಮೇಶ್ ರವರು ನಿರ್ಮಿಸಿದ್ದಾರೆ. ವೀರ ಸಮರ್ಥ್ ರವರ ಸಂಗೀತ ಈ ಚಿತ್ರಕ್ಕಿದೆ.

ಚಿತ್ರದ ಕಥೆ: ಚಿತ್ರದ ನಾಯಕ ಅತಿಶಯ್ (ವಿನಯ್ ರಾಜ್ ಕುಮಾರ್) ಸಂಗೀತ ಸಂಯೋಜಕನಾಗಬೇಕೆಂಬುದು ಆತನ ಮಹದಾಸೆ, ಹಾಗಾಗಿ ಕೆಲವೊಮ್ಮೆ ಆತ ಕಲ್ಪನೆಯಲ್ಲೂ ಜೀವಿಸುತ್ತಿರುತ್ತಾನೆ. ತನ್ನ ಕಲ್ಪನೆಗೆ ಹೊಂದಾಣಿಕೆಯಾಗುವ ಹುಡುಗಿಯೇ ಬೇಕೆಂದು ಆಸೆ ಪಡುತ್ತಾನೆ. ಹೀಗಿರುವಾಗ ಒಂದು ದಿನ ಅಂತ್ಯಾಕ್ಷರಿ ಕಾರ್ಯಕ್ರಮವೊಂದರಲ್ಲಿ ತಾನು ಹಾಡಿದ ಹಾಡಿಗೆ ಮತ್ತೊಬ್ಬಳು ದನಿಗೂಡಿಸುತ್ತಾಳೆ. ಆ ಧ್ವನಿ ನಾಯಕನ ಕಲ್ಪನೆಗೆ ಹೊಂದುವ ಧ್ವನಿಯಾಗಿರುತ್ತದೆ. ಆ ಧ್ವನಿಯನ್ನೇ ಹಿಂಬಾಲಿಸಿದಾಗ ಮಧುರಾ (ಮಲ್ಲಿಕಾ ಸಿಂಗ್) ಎಂಬ ಗಾಯಕಿ ಅಲ್ಲಿರುತ್ತಾಳೆ. ಆಗ ನಾಯಕ ಆಕೆಯ ಹಿಂದೆ ಬಿದ್ದು ಆಕೆ‌ಗೆ ಚಿತ್ರದಲ್ಲಿ ಹಾಡಲು ಅವಕಾಶ ಕೊಡಿಸುತ್ತಾನೆ. ಆಕೆಗೆ ಹಿಂದಿ ಚಿತ್ರರಂಗದಿಂದ ಅವಕಾಶ ಬಂದು ಆಕೆ‌ ಬಾಲಿವುಡ್ ಗೆ ಹೋಗುತ್ತಾಳೆ. ಇತ್ತ ನಾಯಕನ ಮನೆಯಲ್ಲಿ ಅನುರಾಗ ಎಂಬ ಪತ್ರಕರ್ತೆ ಇರುತ್ತಾಳೆ. ಚಿಕ್ಕ ವಯಸ್ಸಿನಲ್ಲೇ ಆಕೆಯ ತಂದೆ ತೀರಿಹೋಗಿದ್ದರಿಂದ ಅವಳನ್ನು ನಾಯಕನ ತಂದೆಯೇ ಸಾಕಿರುತ್ತಾನೆ. ನಾಯಕನ ಅಜ್ಜಿ ಸೀರಿಯಸ್ ಆಗಿ ಆಸ್ಪತ್ರೆಯಲ್ಲಿದ್ದು ನನ್ನ ಕೊನೆಯ ಆಸೆಯಾಗಿ ನಾಯಕ ಮತ್ತು ಅನು ಮದುವೆಯಾಗಬೇಕೆಂದು ಹೇಳುತ್ತಾಳೆ. ನಿಶ್ಚಿತಾರ್ಥ ಎಂದು ಹೇಳಿ ಆಸ್ಪತ್ರೆಯಲ್ಲೆ ನಾಯಕನಿಗೂ ಅನುಗೂ ಮದುವೆ ಮಾಡಿಸುತ್ತಾರೆ. ಮೊದಲರಾತ್ರಿಯಲ್ಲಿ ಅನುಗೂ ಸಹ ಈ ಮದುವೆ ಇಷ್ಟವಿಲ್ಲವೆಂದು ತಿಳಿಯುತ್ತದೆ. ಆಕೆಯೂ ಸಹ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದಾಗ ಆಕೆಗೆ ಅಪಘಾತವಾದಾಗ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದವನನ್ನು ಇಷ್ಟಪಟ್ಟಿದ್ದೇನೆ ಆತನನ್ನು ನಾನು ನೋಡಿಲ್ಲ ಎಂದು ಹೇಳುತ್ತಾಳೆ. ಇಬ್ಬರೂ ಸಹ ಡೈವರ್ಸ್ ಮಾಡಲು ನಿರ್ಧರಿಸಿ, ದೆಹಲಿಗೆ ಹನಿಮೂನ್ ಗೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಹೋಗುತ್ತಾರೆ. ನಾಯಕ ಮಧುರಾಳನ್ನು ಭೇಟಿ ಮಾಡಿದಾಗ ಅಂದು ಆ ಹಾಡನ್ನು ಹೇಳಿದ್ದು ಆಕೆಯಲ್ಲ ಎಂದು ತಿಳಿಯುತ್ತದೆ. ಇತ್ತ ಅನು ತನಗೆ ಸಹಾಯ ಮಾಡಿದವನ ವಿಳಾಸ ಹುಡುಕಿ ಆತನನ್ನು ಭೇಟಿ ಮಾಡಿದಾಗ ನಿಜವಾಗಲು ಅಂದು ಸಹಾಯ ಮಾಡಿದ್ದು ಬೇರೊಬ್ಬ ಎಂದು ಆತ ಹೇಳುತ್ತಾನೆ. ಹಾಗಾದರೆ ಅಂದು ಹಾಡನ್ನು ಹಾಡಿದ್ದು ಯಾರು? ನಾಯಕಿಗೆ ಸಹಾಯ ಮಾಡಿದ್ದು ಯಾರು? ಅತಿಶಯ್ ಹಾಗು ಅನು ಗಂಡ ಹೆಂಡತಿಯಾಗಿ ಮುಂದುವರೆಯುತ್ತಾರಾ? ಮುಂತಾದ ಪ್ರಶ್ನೆಗೆ ಚಿತ್ರ ನೋಡಿ ತಿಳಿದುಕೊಳ್ಳಬೇಕು.

ಒಟ್ಟಾರೆ ಫಲಿತಾಂಶ: ವಿನಯ್ ರಾಜ್ ಕುಮಾರ್ ಅಭಿನಯದ ಎಲ್ಲ ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರದಲ್ಲಿ ಅವರ ಅಭಿನಯ ಅತ್ಯುತ್ತಮವಾಗಿದೆ. ಮಲ್ಲಿಕಾ ಸಿಂಗ್ ತನ್ನ ಸೌಂದರ್ಯದಿಂದ ಗಮನ ಸೆಳೆದರೆ, ಸ್ವಾತಿ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ರಾಜೇಶ್ ನಟರಂಗ ನಾಯಕನ ತಂದೆಯಾಗಿ ಮನೋಙ್ಞ ಅಭಿನಯ ನೀಡಿದ್ದಾರೆ. ಈ ಚಿತ್ರದಲ್ಲಿ ಮೂಕನಾಗಬೇಕು ಎಂಬ ಹಾಡು ಸಹ ಪ್ರಮುಖ ಪಾತ್ರ ವಹಿಸಿದೆ. ಚಿತ್ರ ನೋಡುವಾಗ ಈ ಫಿಲಂ ಆ ಫಿಲಂ ತರ ಇದೆ, ಈ ಫಿಲಂ ತರ ಇದೆ ಅಂತ ಅಂದುಕೊಳ್ಳುವುದರೊಳಗೆ ಚಿತ್ರದಲ್ಲಿ ಒಂದೊಂದೇ ತಿರುವುಗಳು ಬಂದು ಇದು ಬೇರೆ ತರಾನೆ ಇದೆ ಅಂತ ಅನಿಸಿ ಬಿಡುತ್ತೆ. ಚಿತ್ರಮಂದಿರದಲ್ಲಿ ಚಿತ್ರ ನೋಡಿರುವವರು ಕ್ಲೈಮ್ಯಾಕ್ಸ್ ಪೂರ್ತಿಯಾಗಿ ನೋಡಿರೋದು ಅನುಮಾನ ಯಾಕೆಂದರೆ ಎಲ್ಲ ಎದ್ದೋಗೊ ಆತುರದಲ್ಲಿ ಇರ್ತಾರೆ. ಇಲ್ಲಿ ನಿರ್ದೇಶಕರು ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರೋದು ಕ್ಲೈಮ್ಯಾಕ್ಸ್ ನಲ್ಲಿ. ಹಾಗಾಗಿ ಕ್ಲೈಮ್ಯಾಕ್ಸ್ ಬಹಳ ಇಷ್ಟವಾಗುತ್ತದೆ. ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ, ಚಿತ್ರ ಮುಗಿಯುವುದರೊಳಗೆ ನಮಗೆ ಒಂದು ಒಳ್ಳೆಯ ಚಿತ್ರ ನೋಡಿದ ಅನುಭವ ನೀಡುತ್ತದೆ. ದ್ವಂದ್ವಾರ್ಥ ಸಂಭಾಷಣೆಗೆ ಹೆಸರುವಾಸಿಯಾಗಿದ್ದ ಸಿಂಪಲ್ ಸುನಿಯವರು ಈ ಚಿತ್ರದಲ್ಲಿ ಒಂದೇ ಒಂದು ಆ ತರಹದ ಸಂಭಾಷಣೆ ಇರದೆ, ಸದಭಿರುಚಿಯ ಚಿತ್ರವನ್ನು ನಿರ್ದೇಶಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

ಒಂದು ಸರಳ ಪ್ರೇಮಕಥೆ ಚಿತ್ರ ವೀಕ್ಷಿಸಲು ZEE5 ಮತ್ತು AMAZON PRIME ನಲ್ಲಿ ಲಭ್ಯವಿದೆ.

  • ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.

Leave a Comment

Your email address will not be published. Required fields are marked *

Scroll to Top