‘ಹುಲಿಮನೆ ನಾಗ’ನ ಪಾತ್ರಕ್ಕೆ ಜೀವ ತುಂಬಿದ ನಟ ಗೌರಿಶೌಂಕರ್

ನಟ ಗೌರಿಶಂಕರ್ ಅವರು “ಕೆರೆಬೇಟೆ” ಸಿನಿಮಾದಲ್ಲಿ ‘ಹುಲಿಮನೆ ನಾಗ’ನ ಪಾತ್ರದಲ್ಲಿ ಪಾತ್ರವೇ ತಾವಾಗಿ ಅಭಿನಯಿಸಿದ್ದಾರೆ. ಮಲೆನಾಡಿನ ಸಾಂಪ್ರದಾಯಿಕ ಆಚರಣೆಯಾದ ಮೀನು ಬೇಟೆ ಮತ್ತು ಸ್ಥಳೀಯ ದೈವದ ಆಚರಣೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ದೇಶಕ ರಾಜ್ ಗುರು ಅವರು ರಚಿಸಿರುವ ಕತೆಯ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದ್ದಾರೆ. ನಾಯಕ ನಟನಾಗಿ ಕತೆಗೆ ಚಿತ್ರಕತೆ ಮತ್ತು ಸಂಭಾಷಣೆಗೆ ಕೈಜೋಡಿಸಿರುವುದು ಇವರ ಹೆಗ್ಗಳಿಕೆ. ಸಿನಿಮಾದ ಕತೆಯಲ್ಲಿ ದುರಂತ ನಾಯಕನಾಗಿ ಇವರ ಪಾತ್ರ ನೋಡುಗರ ಕಣ್ಣುಗಳನ್ನು ತೇವಗೊಳಿಸುತ್ತದೆ. ಆರಂಭದಿಂದ ಅಂತ್ಯದವರೆಗೂ ಸಿನಿಮಾ ನೋಡಿದವರಿಗೆ ಇವರ ನಟನೆ ಸಾರ್ಥಕತೆಯ ಭಾವ ಮೂಡಿಸುವುದಂತೂ ನಿಜ.

ಕನ್ನಡ ಚಲನಚಿತ್ರರಂಗದಲ್ಲಿ ನಾನು ನಾಯಕ ನಟ ಎಂಬ ಅಹಂ ಪಕ್ಕಕ್ಕಿಟ್ಟು, ನಾನು ಸೂಪರ್ ಸ್ಟಾರ್ ಅಲ್ಲ ನಿರ್ದೇಶಕನ ಸ್ಟಾರ್ ಎಂಬ ಅಂಶ ಮನದಲ್ಲಿಟ್ಟುಕೊಂಡು ನಟಿಸುವ ನಾಯಕರ ಕೊರತೆಯಿದೆ. ಆ ಕೊರತೆಯನ್ನು ತುಂಬುವಂತೆ ಸದ್ಯಕ್ಕೆ ನಟಿಸುತ್ತಿರುವವರಲ್ಲಿ ನನಗೆ ಕಂಡುಬಂದಂತೆ ಬಹುಮುಖ್ಯವಾಗಿ ದೊಡ್ಮನೆಯ ನಟ ವಿನಯ್ ರಾಜ್ ಕುಮಾರ್ ಮಾತ್ರ. ಯಾಕೆಂದರೆ, ಅವರು ಅಷ್ಟು ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿರುವುದನ್ನು ನಾನು ಗಮನಿಸಿದ್ದೇನೆ. ಇವರನ್ನು ಬಿಟ್ಟರೆ “ಕೆರೆಬೇಟೆ” ಸಿನಿಮಾ ನೋಡಿದ ನಂತರ ನನ್ನ ಪಟ್ಟಿಗೆ ಸೇರಿಕೊಂಡ ಎರಡನೇ ಹೆಸರು ಅದು ನಟ ಗೌರಿಶಂಕರ್ ಮಾತ್ರ!

2010ರಂದಲೂ ಚಲನಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಗೌರಿಶಂಕರ್ ಅವರು ಇದುವರೆವಿಗೂ ನಟಿಸಿರುವುದು ಕೇವಲ ಮೂರು ಚಿತ್ರಗಳಲ್ಲಿ ಮಾತ್ರ. ಜೋಕಾಲಿ, ರಾಜಹಂಸ ಮತ್ತು ಕಳೆದ ವರ್ಷ ಬಿಡುಗಡೆಯಾದ ಕೆರೆಬೇಟೆ. ಯಾಕೆಂದರೇ, ಸ್ವತಃ ನಿರ್ಮಾಣ ಮಾಡುವ ಶಕ್ತಿಯಿದ್ದರೂ ಇವರು ಕತೆಗೆ ಪಾತ್ರಕ್ಕೆ ಒತ್ತುಕೊಟ್ಟು ಸಿನಿಮಾಗಳ ಆಯ್ಕೆಯಲ್ಲಿ ತಲ್ಲೀನರಾಗಿದ್ದಾರೆ ಎಂಬುದನ್ನು ಮನಗಾಣಬಹುದು. ಇಂತಹವರಿಂದ ಮಾತ್ರ ಒಂದೊಳ್ಳೆಯ ಕಂಟೆಂಟ್ ಇರುವ ಕನ್ನಡ ಸಿನಿಮಾವನ್ನು ನಿರೀಕ್ಷಿಸಬಹುದು ಎಂದು ಸಿನಿಮಾ ನೋಡುಗನಾಗಿ, ವಿಮರ್ಶಕನಾಗಿ ನಾನು ಭಾವಿಸಿದ್ದೇನೆ. ನಮ್ಮ ಚಲನಚಿತ್ರರಂಗದಲ್ಲಿ ಉತ್ತಮ ನಟನೆಯನ್ನು ಹುಡುಕಿ ಅವರಿಗೆ ಹೆಚ್ಚು ಅವಕಾಶಗಳನ್ನು ಕೊಡುವ ನಿರ್ದೇಶಕರ, ನಿರ್ಮಾಪಕರ ಕೊರತೆ ಎದ್ದು ಕಾಣುತ್ತಿದೆ. ಈ ಕೊರತೆ ಮಾಯವಾಗಿ ಮುಂದಿನ ದಿನಗಳಲ್ಲಿ ನಟ ಗೌರಿಶಂಕರ್ ಅವರಿಗೆ ಇನ್ನೂ ಉತ್ತಮ ಅವಕಾಶಗಳು ಸಿಕ್ಕು, ಅವರು ಅತ್ಯುತ್ತಮ ನಟನಾಗಿ ಹೊರಹೊಮ್ಮುವುದನ್ನು ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ.

  • ಗುಬ್ಬಚ್ಚಿ ಸತೀಶ್.

Leave a Comment

Your email address will not be published. Required fields are marked *

Scroll to Top