
(ತುಮಕೂರಿನಲ್ಲಿ ವಾಸವಿರುವ ಖ್ಯಾತ ಸಾಹಿತಿಗಳು ಮತ್ತು ಪ್ರಕಾಶಕರಾದ ಶ್ರೀ ಎಂ.ವಿ. ಶಂಕರಾನಂದ ಅವರು ಬರೆಯುತ್ತಿರುವ ಶ್ರೀಕೃಷ್ಣನ ಕುರಿತಾದ “ಕೃಷ್ಣ – ಭಕ್ತರ ಆಪ್ತ ಬಂಧು” ಭಕ್ತಿಪೂರ್ವಕ ಅಪರೂಪದ ಕಾದಂಬರಿಯ ಆರನೇಯ ಅಧ್ಯಾಯ)
ದಿನಗಳು ಕಳೆದುವು. ಬಲರಾಮನಿಗೆ ಎಂಟು ವರ್ಷಗಳೂ ಕೃಷ್ಣನಿಗೆ ಏಳು ವರ್ಷಗಳೂ ತುಂಬಿದುವು. ಅವರು ತಮ್ಮ ಈಡಿನ ಗೋಪಾಲಕರೊಂದಿಗೆ ಕೂಡಿ ಆಡುತ್ತ, ಕರುಗಳೊಂದಿಗೆ ತಾವೂ ಓಡುತ್ತ ಉತ್ಸಾಹದಿಂದ ಕಾಲಕಳೆಯುತ್ತಿದ್ದರು. ಕೈಯಲ್ಲಿ ಚಿಣಿಕೋಲು, ಬುಗರಿದಾರ ಹಿಡಿದುಕೊಳ್ಳುತ್ತಿದ್ದರು, ಕಾಲಿಗೆ ಹಳೆಯ ಚೆಪ್ಪಲಿ ಧರಿಸುತ್ತಿದ್ದರು. ಗಿಡ್ಡು ಕೂದಲನ್ನು ಹಾರಿಸಿಕೊಳ್ಳುತ್ತ ಹೊರಡುತ್ತಿದ್ದರು, ಸುತ್ತುಮುತ್ತಲಿನ ದಾರಿಗಳಲ್ಲಿ ಗಟ್ಟಿಯಾಗಿ ಕೇಕೇ ಹಾಕುತ್ತ ತೋಳಗಳನ್ನೂ, ನರಿಗಳನ್ನೂ, ಓಡಿಸುತ್ತಿದ್ದರು. ರಾಗರಾಗವಾಗಿ ಹಾಡುವರು. ಕೂಗುವರು, ಮರಗಳನ್ನೇರುವರು. ಜೇನುಹುಟ್ಟು ಕಂಡರೆ ಹಿಂಡಿ ಜೇನು ಕುಡಿಯುವರು. ತಂದುಕೊಂಡ ಬುತ್ತಿ ತಿನ್ನುವರು, ಉಣ್ಣುವರು. ಒಟ್ಟಿನ ಮೇಲೆ ಆ ಯಾದವ ಬಾಲಕರಿಗೆ ಜೀವನವು ಯಾವ ಕಷ್ಟಗಳೂ ಇಲ್ಲದ ಮಧುರವಾದ ಆಟದ ಮೈದಾನವಾಗಿಯೇ ಸಾಗುತ್ತಿತ್ತು.
ಹೀಗೆ ಕಾಲವು ಕಳೆಯುತ್ತಿರಲು, ಒಂದು ದಿನ ಕೃಷ್ಣನು ಬಲರಾಮನೊಂದಿಗೆ, “ಅಣ್ಣಾ, ನಾವು ಈ ವನದಲ್ಲಿಯೇ ಹುಟ್ಟಿದ್ದೇವೆ. ಇಷ್ಟುಕಾಲ ಇಲ್ಲಿಯೇ ಬೆಳೆದಿದ್ದೇವೆ. ಪಶುಮಂದೆಗಳೂ, ಗೋಪಕರೂ ಇಷ್ಟುಕಾಲ ಒಂದೇ ಕಡೆಯಲ್ಲಿರುವುದು ಒಳ್ಳೆಯದೇನು? ಮೇವಿನ ಜಾಗ ಪೂರಾ ಪಶುಗಳಿಂದ ಖಾಲಿಯಾಗಿವೆ. ಮರಗಳೆಲ್ಲಾ ಕಡಿಯಲ್ಪಟ್ಟು ಧ್ವಂಸವಾಗಿವೆ. ಕೆರೆಗಳೂ, ಮಡುಗಳೂ ಕೆಸರುಗುಂಡಿಗಳಾಗಿವೆ. ತರಕಾರಿಗಳೂ, ಪಲ್ಲೆ ಸೊಪ್ಪುಗಳೂ ಬೇಕಾದರೆ ಬಹಳ ದೂರ ಹೋಗಬೇಕಾಗಿದೆ. ಆದ್ದರಿಂದ ನಾವು ಈ ಪ್ರದೇಶವನ್ನು ಬಿಟ್ಟು ಬೃಂದಾವನಕ್ಕೆ ಹೋಗಿಬಿಡೋಣ. ಅದು ತುಂಬಾ ಅಂದವಾದ ಸೊಗಸಾದ ವನವೆಂದು ಹೇಳುತ್ತಾರೆ. ಅಲ್ಲಿ ಗೋವರ್ಧನಗಿರಿ ಇದೆಯಂತೆ. ಆದರ ಮೇಲೆ ಭಾಂಡೀರವೆಂಬ ಹೆಸರಿನ ಮಹಾ ವಟವೃಕ್ಷವಿದೆಯಂತೆ. ಬೃಂದಾವನದ ನಡುವೆ ಕಾಳಿಂದೀ ನದಿ ಪ್ರವಹಿಸುತ್ತಿದೆಯಂತೆ. ಅಲ್ಲಿಗೆ ಹೋದರೆ ಸುಖವಾಗಿ ಕಾಲ ಕಳೆಯಬಹುದು. ಮುದುಕರು ಮಾತ್ರ ಈ ಸ್ಥಳ ಬಿಡಲಾರೆವೆನ್ನಬಹುದು. ಅವರ ಮನಸ್ಸನ್ನು ಬದಲಿಸಲಿಕ್ಕೆ ಒಂದು ಉಪಾಯ ಹೇಳುತ್ತೇನೆ, ನೋಡು.”
ಹೀಗೆ ಹೇಳುತ್ತಿರುವಾಗಲೇ ಕೃಷ್ಣನ ಶರೀರದಿಂದ ನೂರಾರು, ಸಾವಿರಾರು ಸಂಖ್ಯೆಗಳಿಂದ ತೋಳಗಳು ಹೊರಬಿದ್ದು, ಗುಂಪುಗುಂಪಾಗಿ ಹೊರಟು ಸುತ್ತುಮುತ್ತಲಿನ ಪ್ರದೇಶದಲ್ಲೆಲ್ಲಾ ಓಡತೊಡಗಿದವು.
ಗೋಪಾಲಕರಿಗೆಲ್ಲಾ ದೊಡ್ಡ ಗಾಬರಿ ಹುಟ್ಟಿತು. ಆ ತೋಳಗಳ ದುಷ್ಟ ಹಾವಳಿ ಅಸಾಧಾರಣವಾಗಿ ಕಂಡಿತು. ಅವುಗಳನ್ನು ಬೇಟೆಯಾಡಲು ಗೋಪಾಲಕ ವೀರರಿಂದ ಸಾಧ್ಯವೇ ಆಗಲಿಲ್ಲ. ಹುಲಿಗಳನ್ನು ಕೂಡಾ ಸೀಳಿಹಾಕುವಂತಹ ಗೂಳಿಗಳನ್ನು ಆ ತೋಳಗಳು ಕೊಲ್ಲುತ್ತಿದ್ದುವು. ಕಾವಲುಗಾರರು ತಲೆ ತಿರುಗಿಸಿ ನೋಡುವುದರೊಳಗೆ, ಎತ್ತಲಿಂದಲೋ ಬಂದ ತೋಳಗಳು ಕರುಗಳನ್ನು ಎಳೆದುಕೊಂಡು ಹೋಗುತ್ತಿದ್ದುವು.
ಈ ಕಾಟಕ್ಕೆ ಜತೆಯಾಗಿ ರಾತ್ರಿಯಲ್ಲಿ ಹುಲಿಗಳ ಗರ್ಜನೆಗಳೂ, ಸಿಂಹಗಳ ಗರ್ಜನೆಗಳೂ ಕೇಳಿಬರತೊಡಗಿದುವು. ದೊಡ್ಡ ದೊಡ್ಡ ಹಂದಿಗಳು ಬಂದು ಎಲ್ಲೆಂದರಲ್ಲಿ ಹೊಂಡ ತೋಡುತ್ತಿದ್ದುವು. ನಡೆದಾಡುವವರು ಅಲ್ಲಲ್ಲಿ ಬಿದ್ದು ಕೈಕಾಲು ನೋಯಿಸಿಕೊಳ್ಳಬೇಕಾಯಿತು.
ಇದನ್ನೆಲ್ಲಾ ನೋಡಿ, ಗೋಪಕ ಹಿರಿಯರೆಲ್ಲಾ ಸೇರಿ ಚರ್ಚೆಮಾಡಲು ತೊಡಗಿದರು. ಇದುವರೆಗೆ ನಡೆದ ಕೆಡುಕುಗಳಿಗೆ ಹೆದರಿ ಕೂಡಾ ಅವರು ಇದ್ದ ಜಾಗವನ್ನು ಬಿಟ್ಟು ಹೋಗಲು ಮನಸ್ಸಿಲ್ಲದೆ, ಸಹಿಸಿ ಸುಮ್ಮನಿದ್ದರೆ, ಅವುಗಳೆಲ್ಲವನ್ನೂ ಮೀರಿಸುವ ಕೆಡುಕು ಬಂದು ಬಿದ್ದಿತು. ಏನು ಮಾಡುವುದು?
ಬೃಂದಾವನವು ಬಹಳ ಚೆನ್ನಾಗಿರುವುದೆಂದು ಎಲ್ಲರೂ ಒಂದೇ ಸಮನೆ ಹೇಳುತ್ತಿದ್ದರು. ಆದರೆ ಅಲ್ಲಿ ಕೂಡಾ ದುರ್ಗಮವಾದ ಪ್ರಾಂತಗಳೂ ಇವೆಯಂತೆ. ಅಂಥಲ್ಲಿ ರಾಕ್ಷಸರಿದ್ದಾರಂತೆ. ಹೇಗಪ್ಪಾ ಎಂದು ಕೆಲವರು ಹೆದರಿದರು.
ಏನಾದರೂ ಅಡವಿಯಂತೆ ಕ್ರೂರಮೃಗಗಳಿಂದ ತುಂಬಿದ ಗೋಕುಲಕ್ಕಿಂತಲೂ ಒಳ್ಳೆಯದಾದ ಬೇರೆ ಕಡೆಗಂತೂ ಹೋಗಲೇಬೇಕು. ಇಲ್ಲಿ ಇನ್ನು ಕ್ಷಣಕಾಲವಿರಲಿಕ್ಕೂ ಸಾಧ್ಯವಿಲ್ಲ. ಕ್ಷಣಕ್ಷಣಕ್ಕೂ ಯಾವುದೋ ನಷ್ಟ ಬರುತ್ತಲೇ ಇದೆಯಷ್ಟೆ? ಗೋಪವೃದ್ಧರು ಗೋಕುಲವನ್ನು ಬಿಟ್ಟು ಹೋಗುವುದೇ ಒಳ್ಳೆಯದೆಂದು ನಿರ್ಧರಿಸಿದರು.
ಅವರೆಲ್ಲಾ ಹಾಗೆ ಆಲೋಚಿಸಿಕೊಂಡಿರುವಾಗ, ನಾರದನು ಅಲ್ಲಿಗೆ ಬಂದು ನಂದಗೋಪನನ್ನು ಕರೆದು, ಸ್ವಲ್ಪದೂರ ಕರೆದುಕೊಂಡು ಹೋಗಿ, “ನೀವೆಲ್ಲರೂ ಕೂಡಿ ಬೃಂದಾವನಕ್ಕೆ ಹೋಗಬೇಕೆಂದುಕೊಂಡಿದ್ದೀರಿ ತಾನೆ? ಅಲ್ಲಿ ರಾಕ್ಷಸರಿದ್ದಾರೆಂದೂ, ನಿಮ್ಮ ಕೃಷ್ಣ ಬಲರಾಮರಿಗೆ ಅಪಾಯ ಬರಬಹುದೆಂದೂ ನೀನು ಹೆದರುತ್ತಿರುವುದೂ ನನಗೆ ಗೊತ್ತು. ನಿನ್ನ ಪುತ್ರರನ್ನು, ಅದರಲ್ಲಿಯೂ ಕೃಷ್ಣನನ್ನು ಸಾಮಾನ್ಯನೆಂದು ತಿಳಿಯಬೇಡ. ಅವನು ದುಷ್ಟ ರಾಕ್ಷಸರನ್ನು ಕೊಲ್ಲಲಿಕ್ಕಾಗಿಯೇ ಅವತಾರವೆತ್ತಿದ ಶ್ರೀಮನ್ನಾರಾಯಣನೇ. ಕೃಷ್ಣ ಬಲರಾಮರು ನಾರಾಯಣಾಂಶದಿಂದ ಹುಟ್ಟಿದ್ದಾರೆ. ಕೃಷ್ಣನನ್ನು ಕೊಲ್ಲಲು ಪೂತನಿ ರಾಕ್ಷಸಿ ಬಂದು, ಮತ್ತೊಬ್ಬ ರಾಕ್ಷಸನು ಬಂಡಿಯಲ್ಲಿ ಸೇರಿ, ಅವನನ್ನು ಕೊಲ್ಲಲು ಸಾಧ್ಯವಾಗದೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೆಲ್ಲ ನೀನು ಪ್ರತ್ಯಕ್ಷವಾಗಿ ನೋಡಿರುವಿಯಷ್ಟೆ? ಆದ್ದರಿಂದ ಒಂದಿಷ್ಟೂ ಅನುಮಾನ ಪಡದೆ, ಭಯಪಡದೆ ನಿಮ್ಮೆಲ್ಲರ ನಿವಾಸಸ್ಥಾನವನ್ನು ಬೃಂದಾವನಕ್ಕೆ ಮಾರ್ಪಡಿಸು. ಅದರಿಂದ ನಿಮಗೂ ಲೋಕಕ್ಕೂ ಒಳ್ಳೆಯದೇ ಆಗುತ್ತದೆ” ಎಂದು ಹೇಳಿದನು.
ಆಮೇಲೆ ನಾರದನು ಕೃಷ್ಣನನ್ನು ಕೂಡಾ ನೋಡಿ, ಹಿರಿಯರಿಗೆ ತಾನು ಹೇಳಿದುದನ್ನು ಅವನೊಂದಿಗೆ ತಿಳಿಸಿ, ನಮಸ್ಕಾರ ಮಾಡಿ ಹೊರಟು ಹೋದನು.
ಅನಂತರ ನಂದಗೋಪನು ಉಳಿದ ಗೋಪಕರೊಂದಿಗೆ, “ನಾವೆಲ್ಲಾ ಮಾಡಿದ ನಿಶ್ಚಯವನ್ನು ಬದಲಾಯಿಸದೆ ಬೃಂದಾವನಕ್ಕೆ ಹೋಗೋಣ. ಎಲ್ಲರೂ ಧೈರ್ಯದಿಂದ ಹೊರಡಬೇಕು. ಯಾವ ಭಯಕ್ಕೂ ಎಡೆಕೊಡದೆ, ಪ್ರಯಾಣದ ಸಿದ್ಧತೆಯನ್ನು ಪ್ರಾರಂಭಿಸಿರಿ” ಎಂದು ಹೇಳಿ ಹುರುಪುಗೊಳಿಸಿದನು.
ಒಮ್ಮೆಗೇ ಇಡೀ ಗೋಕುಲವೇ ಕದಲಿತು. ಪ್ರತಿಯೊಬ್ಬರೂ ತಮ್ಮ ಊರನ್ನು ಬಿಡುವ ಸನ್ನಾಹದ ಗಡಿಬಿಡಿಯಲ್ಲಿ ಎಡೆಬಿಡದೆ ಮುಳುಗಿ ತೇಲತೊಡಗಿದರು. ಭಾರವಾದ ಹೊರೆಗಳನ್ನೆಲ್ಲಾ ಗಾಡಿಗಳಿಗೆ ಏರಿಸಿದರು. ತುಪ್ಪ ಹಾಲುಗಳ ಗಡಿಗೆಗಳನ್ನೂ, ಮಡಿಕೆಗಳನ್ನೂ ಭದ್ರವಾಗಿರುವಂತೆ ನೋಡಿಕೊಂಡರು. ಅಕ್ಕಿ, ಬೇಳೆ ಮೊದಲಾದ ಧಾನ್ಯಗಳನ್ನು ಬೇರೆ ಬೇರೆ ಚೀಲಗಳಲ್ಲಿ ತುಂಬಿಸಿ ಕಟ್ಟಿದರು. ಬಗೆ ಬಗೆಯ ಹಗ್ಗಗಳು, ಹಲಗೆಗಳು, ಕಡೆಗೋಲುಗಳು, ಗಂಟೆಗಳು, ಕತ್ತಿಗಳು, ಕೊಡಲಿಗಳು, ಹಾರೆಗಳು, ಗುದ್ದಲಿಗಳು, ಪಶುಗಳ ಬಾಯಿ ತೆರೆಸಲು ಉಪಯೋಗಿಸುವ ಸಾಧನಗಳು, ಕರುಗಳಿಗೆ ಕುಡಿಸುವ ಅಂಡೆಗಳು ಮೊದಲಾದ ಕೆಲಸಕ್ಕೆ ಬೇಕಾದ ಸಾಮಗ್ರಿಗಳನ್ನೆಲ್ಲಾ ನೆನಪಿನಿಂದ ಸಂಗ್ರಹಿಸಿಕೊಂಡರು. ಅವನ್ನು ಮರೆತೆಯಾ? ಇದನ್ನು ಕಟ್ಟಿಕೊಂಡೆಯಾ? ಎಂದು ಒಬ್ಬರಿಗೊಬ್ಬರು ಎಚ್ಚರಿಸಿಕೊಂಡರು. ಹೀಗೆ ಪ್ರಯಾಣ ಸಿದ್ಧತೆಯು ಪೂರ್ತಿಯಾಯಿತು.
ಬಲಶಾಲಿಗಳು ಪಶುಗಳನ್ನು ಮಂದೆ ತಪ್ಪದಂತೆ ಹೊರಡಿಸಿಕೊಂಡು ಮುಂದೆ ಹೊರಟರು. ಮಂದೆಗಳ ಹಿಂದಿನಿಂದ ಗಾಡಿಗಳು ಸಾಗಿದವು. ಅವುಗಳ ಹಿಂದೆ ಸ್ತ್ರೀ ಪುರುಷರೂ ನಡೆದರು.
ಹರೆಯದ ಹೆಂಗುಸರೆಲ್ಲಾ ಒಂದು ಗುಂಪಾಗಿ ನಡೆಯುತ್ತ ಅವರಿವರ ಸಂಗತಿಗಳನ್ನು ಹೇಳಿಕೊಳ್ಳುತ್ತ, ನಗುತ್ತ, ಕಲೆಯುತ್ತ ನಡೆದರು.
ಕುಂಟ, ಕುರುಡ, ಮುದುಕರಂಥವರು ನಡೆಯಲಾಗದೆ ಹಿಂದೆ ಬಿದ್ದರೆ ಯುವಕರು ಅವರಿಗೆ ಸಹಾಯಕರಾದರು. ನಡೆಯುವ ಕಷ್ಟ ಗೊತ್ತಾಗದಂತೆ ಕೆಲವರು ಹಾಡುತ್ತಾ ತಾಳ ಹಾಕುತ್ತಾ ಕುಣಿಯುತ್ತಾ ಹೋದರು. ಕೆಲವರು ಭಜನೆ ಮಾಡುತ್ತಾ ಸಾಗಿದರು.
ಹೀಗೆ ಗೋಕುಲವಿಡೀ ಬೃಂದಾವನವನ್ನು ಸೇರಿತು. ಗೋಪಾಲಕರಲ್ಲಿ ಹಿರಿಯರಾದವರು ಮನೆ ಕಟ್ಟಿಕೊಳ್ಳಲು ಸ್ಥಳವನ್ನು ಆರಿಸಿ ನಿರ್ಧರಿಸಿಕೊಟ್ಟರು. ಗಾಡಿಗಳನ್ನೆಲ್ಲಾ ಒಂದು ಸಾಲಿನಲ್ಲಿ ಅರ್ಧಚಂದ್ರಾಕಾರವಾಗಿ ನಿಲ್ಲಿಸಿದರು. ಕೆಲವರಿಗೆ ಗುಡಿಸಲು ಮನೆಗಳಾದುವು. ಕೆಲವರು ಲತಾಗೃಹಗಳನ್ನೇ ತಾತ್ಕಾಲಿಕ ಮನೆಗಳಾಗಿ ಉಪಯೋಗಿಸಿಕೊಂಡರು. ಕೆಲವರು ಕಂಬಗಳನ್ನು ನೆಟ್ಟು, ಕೊಟ್ಟಿಗೆಗಳನ್ನು ಕಟ್ಟಿದರು. ಕೆಲವರು ತಮಗೆ ಬೇಕಾದ ಸ್ಥಳಗಳನ್ನು ತಾವೇ ಆರಿಸಿಕೊಂಡರು.
ಅಂತೂ ಒಂದು ದಿನ ಮುಗಿಯುವಷ್ಟರಲ್ಲಿ ಗೋಪಕರಿಗೆ ಬೃಂದಾವನವು ಸ್ವಸ್ಥಳವಾಗಿಬಿಟ್ಟಿತು. ಉತ್ಸಾಹದಿಂದ ಕೆಲವು ತರುಣರು ಸುತ್ತುಮುತ್ತ ತಿರುಗಾಡಿ ಬಂದರು.
ದಿನಗಳು ಕಳೆದ ಹಾಗೆ ಚೆನ್ನಾಗಿ ಅಲಂಕರಿಸಿಕೊಂಡು ತಿರುಗುವ ಗೋಪಿಕೆಯರಿಂದ, ಏನೋ ಅವಸರ ಕೆಲಸದಲ್ಲಿ ಗಡಿಬಿಡಿಯಾಗಿ ಅಲೆಯುವ ಗೋಪಾಲಕರಿಂದ ಅಧಿಕಾರ ಮಾಡುವ ಕುಟುಂಬದ ಯಜಮಾನರುಗಳಿಂದ, ಕುತೂಹಲದಿಂದ ಮಾತಾಡುವ ಹೆಂಗುಸರಿಂದ ಗೋವುಗಳ ಮಂದೆಗಳಿಂದ ಆ ಪ್ರದೇಶಕ್ಕೆ ಎಲ್ಲಿಲ್ಲದಷ್ಟು ಜೀವಕಳೆ ಬಂತು. ದಿನದಿನಕ್ಕೂ ಗೋಪಕುಲದವರ ಸಂಪತ್ತು ಹೆಚ್ಚುತ್ತಾ ಇದ್ದಿತು. ಪಶುಮಂದೆಗಳು ದೊಡ್ಡದಾಗುತ್ತಿದ್ದುವು. ಎಲ್ಲರ ಜೀವನವೂ ಹಾಯಾಗಿ ನಡೆಯುತ್ತಿದ್ದಿತು.
ಬಲರಾಮಕೃಷ್ಣರು ಎಲ್ಲರ ಕಣ್ಣಿಗೂ ಮನಸ್ಸಿಗೂ ಹಬ್ಬದ ಉತ್ಸಾಹ ಬರಿಸುತ್ತ ತಿರುಗುತ್ತಿದ್ದರು. ಆಗ ಕೃಷ್ಣನಿಗೆ ಹದಿಮೂರು ವರ್ಷ ವಯಸ್ಸಾಗಿತ್ತು. ಬಲರಾಮನಿಗೆ ಹದಿನಾಲ್ಕು.
ಒಂದು ದಿನ ಬೆಳಿಗ್ಗೆ ಕೃಷ್ಣನು ತನ್ನ ಮಿತ್ರರಾದ ಗೊಪಾಲಕರನ್ನು ಕರೆಯುತ್ತಾ “ಈ ದಿನ ನಾವೆಲ್ಲರೂ ವನಸಂಚಾರವನ್ನು ಮಾಡೋಣ. ಎಲ್ಲರೂ ನಿಮ್ಮ ಮನೆಗಳಿಂದ ತಿಂಡಿಗಳನ್ನು ತೆಗೆದುಕೊಂಡು ಬನ್ನಿರಿ” ಎಂದನು.
ಗೋಪಾಲಕರು ತಿಂಡಿ ತಿನಿಸುಗಳ ಬುತ್ತಿ ಕಟ್ಟಿಕೊಂಡರು. ಆಟಕ್ಕೆ ಬೇಕಾದ ಸಾಮಾಗ್ರಿಗಳನ್ನು, ಕೋಲುಗಳನ್ನೂ ಬಗಲಲ್ಲಿರಿಸಿಕೊಂಡರು. ಕೊಳಲು ಮುಂತಾದ ವಾದ್ಯಗಳನ್ನು ನುಡಿಸುತ್ತಾ ದನಕರುಗಳನ್ನು ಅಟ್ಟಿಕೊಂಡು ಕಾಡಿನ ಹಾದಿ ಹಿಡಿದರು.
ಕಾಡಿನಲ್ಲಿ ಮರಕೋತಿಯಾಟ, ಕಪ್ಪೆಯಂತೆ ಜಿಗಿಯುವುದು ಹೀಗೆ ನಾನಾ ವಿಧದ ಆಟಗಳನ್ನು ಎಲ್ಲರೂ ಆಡತೊಡಗಿದರು. ಬಲರಾಮ ಕೃಷ್ಣರೂ ಅವರೊಂದಿಗೆ ಉತ್ಸಾಹ, ಸಂತೋಷಗಳಿಂದ ಕೇಕೆ ಹಾಕುತ್ತಾ ಆಟಗಳಲ್ಲಿ ತೊಡಗಿದರು.
ಆಗ ಅಲ್ಲಿ ಒಂದು ಹೆಬ್ಬಾವು ಕಾಣಿಸಿಕೊಂಡಿತು. ಕಂಸನ ಅನುಚರನಾದ ಅಘಾಸುರ ಎಂಬ ರಾಕ್ಷಸನು ಕೃಷ್ಣನನ್ನು ಕೊಂದು ಹಾಕುವುದಕ್ಕಾಗಿ ಈ ರೂಪದಿಂದ ಬಂದಿದ್ದನು. ಅವನು ಕೃಷ್ಣನು ಕೊಂದಿದ್ದ ರಾಕ್ಷಸ ಬಕನ ತಮ್ಮನಾಗಿದ್ದ. ಅವನು ದೂರದಲ್ಲಿ ನಿಂತು ಆಡವಾಡುತ್ತಿರುವ ಬಾಲಕರನ್ನು ನೋಡಿದನು. ಬಲರಾಮ ಕೃಷ್ಣರನ್ನು ನೋಡುತ್ತಲೇ ಅವನಿಗೆ ಕೋಪವುಂಟಾಯಿತು. ನನ್ನಣ್ಣ ಬಕನನ್ನು ಕೊಂದ ಆ ಬಲರಾಮನನ್ನೂ ಕೃಷ್ಣನನ್ನೂ ಹಿಡಿದು ನುಂಗಿ ಬಿಡುತ್ತೇನೆ ಎಂದು ಯೋಚಿಸಿ ಅಘಾಸುರನು ಹೆಬ್ಬಾವಿನಂತೆ ತನ್ನ ಆಕೃತಿಯನ್ನು ಬೆಳೆಸಿಕೊಂಡನು.
ಗುಹೆಯಂತಹ ಬಾಯಿಯನ್ನು ತೆರೆದು ನಿಶ್ಚಲವಾಗಿ ಮಲಗಿಕೊಂಡ ಹಾವನ್ನು ಕಂಡು ಗೋಪಾಲಕರು ಇದಾವುದೋ ಹೆಬ್ಬಂಡೆಯಿರಬೇಕು ಎಂದು ಭಾವಿಸಿ ಅದರ ಮೇಲೇರಿ ಓಡಾಡತೊಡಗಿದರು.
ಆಗ ಆ ಹೆಬ್ಬಾವು ಒಮ್ಮೆ ಉಸಿರನ್ನು ಒಳಗೆಳೆದುಕೊಂಡಿತು. ಅದರ ಉಸಿರಿನೊಂದಿಗೆ ಕೆಲವು ಮಂದಿ ಗೋಪಾಲಕರು ಕೆಲವಾರು ದನಕರುಗಳೊಂದಿಗೆ ಸರ‍್ರನೆ ಅದರ ಹೊಟ್ಟೆಯೊಳಗೆ ಸೇರಿಕೊಂಡರು. ಉಳಿದವರು ಹೌಹಾರಿದರು. ಭಯಭೀತ ಧ್ವನಿಯಿಂದ, “ಕೃಷ್ಣಾ, ಕಾಪಾಡು” ಎಂದು ಕೂಗಿಕೊಂಡರು.
ಆ ಕೂಗು ಕೇಳುತ್ತಲೇ ಕೃಷ್ಣನು ಅಲ್ಲಿಗೆ ಬಂದನು. ನಡೆದುದನ್ನು ತಿಳಿದು, ಕೂಡಲೇ ಅವನು ಆ ಹೆಬ್ಬಾವಿನ ತೆರೆದ ಬಾಯಿಯೊಳಗೆ ಪ್ರವೇಶಿಸಿಬಿಟ್ಟನು. ಕೃಷ್ಣನು ಹೆಬ್ಬಾವಿನ ಕಂಠದಲ್ಲಿ ನಿಂತು ತನ್ನ ದೇಹ ಗಾತ್ರವನ್ನು ಹಿಗ್ಗಿಸಿಕೊಳ್ಳಲಾರಂಭಿಸಿದನು. ಅಘಾಸುರನಿಗೆ ಉಸಿರು ಕಟ್ಟಲಾರಂಭಿಸಿತು. ಕಣ್ಣುಗುಡ್ಡೆಗಳು ಸಿಕ್ಕಿಹಾಕಿಕೊಂಡವು. ವಿಲಿವಿಲಿ ಒದ್ದಾಡಲಾರಂಭಿಸಿದನು.
ಕೃಷ್ಣನು ಅವನ ಶರೀರವನ್ನು ಸೀಳಿ ಬಿಟ್ಟಾಗ ಹೊಟ್ಟೆಯೊಳಗೆ ಸೇರಿದ ಗೋಪಾಲಕರು ದನಗಳೊಂದಿಗೆ ಜೀವಂತವಾಗಿಯೇ ಹೊರಗೆ ಬಂದರು. ಬಾಲಕರಿಗೆ ಕೃಷ್ಣನ ಸಾಹಸ ಕಂಡು ಸಂತೋಷವಾಗಿ ಅವನನ್ನು ತಮ್ಮ ಹೆಗಲಲ್ಲಿ ಹೊತ್ತು ಕುಣಿದಾಡಿದರು.
ಬೇಸಗೆಯ ಕಾಲ ಬಂತು. ಚೆನ್ನಾಗಿದ್ದ ಪಶುಗಳಿಗೆ ಎಂತೆಂಥದೋ ರೋಗಗಳು ತೋರಿದುವು. ಪಶುಗಳು ಬರಬರುತ್ತ ನಿಲ್ಲಲು ಶಕ್ತಿಯಿಲ್ಲದೆ ನಡುಗತೊಡಗಿದುವು. ಅವುಗಳ ಬಾಯಿಗಳಿಂದ ನೊರೆ ಕಾರುತ್ತಿದ್ದಿತು. ಕುತ್ತಿಗೆಗಳು ಜೋಲಾಡತೊಡಗಿದುವು. ಗೊರಸುಗಳು ಕೊಳೆತು ಒಡೆದು ಹುಳುಗಳು ಬೀಳುತ್ತಿದ್ದುವು. ಕೊಂಬುಗಳು ಕದಲುತ್ತಿದ್ದುವು. ಹಠಾತ್ತಾಗಿ ಹೀಗೇಕಾಯಿತು?
ಈ ರೋಗಗಳಿಗೆ ಗೋಪಾಲಕರು, ಮಂತ್ರಗಳು, ಮದ್ದುಗಳು, ಮೂಲಿಕೆಗಳು ಹೀಗೆ ತೋರಿದ್ದನ್ನೆಲ್ಲಾ ಉಪಯೋಗಿಸಿ ನೋಡಿದರು. ಆದರೆ ಯಾವ ಪ್ರಯೋಜನವೂ ಕಾಣಲಿಲ್ಲ. ಇನ್ನೇನು ಮಾಡುವುದೆಂದು ಯಾರಿಗೂ ತೋರಲಿಲ್ಲ. ಈ ಬಗೆಯ ರೋಗಗಳು ಯಮುನಾ ನದಿಯ ತೀರದ ಅರಣ್ಯದಲ್ಲಿರುವ ಸಮಸ್ತ ಮೃಗಗಳಿಗೂ, ಪಕ್ಷಿಗಳಿಗೂ ವ್ಯಾಪಿಸಿದ ಸಂಗತಿ ಗೊತ್ತಾಯಿತು. ಅಷ್ಟೇ ಅಲ್ಲದೆ, ಅವುಗಳಿಂದಾಗಿ ಗೋಪಕರಿಗೂ ಆ ರೋಗಗಳು ತಗಲಿದುವು. ಕೆಲವರ ಕಾಲುಗಳಲ್ಲಿ ಹುಣ್ಣುಗಳೇಳತೊಡಗಿದುವು. ಕೆಲವರಿಗೆ ಯಾವುದಕ್ಕೂ ತ್ರಾಣವಿಲ್ಲದಂತೆ ನಿರುತ್ಸಾಹ, ಮೈನೋವು.
ನಂದನೂ, ಯಶೋದೆಯೂ, ರೋಹಿಣಿಯೂ ಆ ರೋಗಗಳಿಂದ ಹಾಸಿಗೆ ಹಿಡಿದರು. ಇನ್ನು ಆ ಸ್ಥಳವನ್ನು ಬಿಟ್ಟು ಹೋದರೆ ಹೊರತು ವಿಮೋಚನೆ ಇಲ್ಲವೆಂದು ಕೃಷ್ಣನಿಗೆ ತೋರಿತು. ಅವನು ಬಲರಾಮನೊಂದಿಗೆ ಮಾತಾಡಿ, ಕೆಲವು ಪಶುಮಂದೆಗಳನ್ನು ಹೊಡೆದುಕೊಂಡು ಒಂದು ಹತ್ತು ಮೈಲಿಯಷ್ಟು ದೂರ ಹೋಗಿ ಅಲ್ಲಿ ನಿಂತನು.
ಅವನ ಹಾಗೆಯೇ ಮತ್ತೆ ಕೆಲವರು ಗೋಪಕರೂ ಹೊರಟವರು ಕೃಷ್ಣನ ಹಾಗೆಯೇ ಅಲ್ಲಿ ನಿಂತರು. ಹಾಗೆ ಅಲ್ಲಿ ಕೆಲವು ದಿನ ತಂಗಿದವರಿಗೆ ಆ ವ್ಯಾಧಿ ಸೋಕಲಿಲ್ಲ. ಯಾವ ಕಡೆಯಿಂದಲೋ ಬೀಸುವ ಗಾಳಿ ಹೆಚ್ಚಾಗಿರುವಲ್ಲಿ ರೋಗ ಬರುವುದೆಂದೂ, ಆ ಗಾಳಿ ಇಲ್ಲದಲ್ಲಿ ರೋಗದ ಹಾವಳಿ ಇಲ್ಲವೆಂದೂ ತಿಳಿಯಿತು.
ಆದರೆ ನಂದನು ಮಾತ್ರ ತಾನಿದ್ದ ಜಾಗದಿಂದ ಕದಲಲು ಇಷ್ಟಪಡಲಿಲ್ಲ. “ಇಲ್ಲಿ ಏನು ಬಂದರೂ ತಾಳಿಕೊಳ್ಳಬೇಕಲ್ಲದೆ, ಹೊಸತಾಗಿ ಕಟ್ಟಿಕೊಂಡ ಮನೆ ಮಠ ಮಂದಿರಗಳನ್ನು ಬಿಟ್ಟು ನಮ್ಮವರನ್ನೆಲ್ಲಾ ಕಟ್ಟಿಕೊಂಡು ಪುನಃ ಎಲ್ಲಿಗೆ ಹೋಗಲು ಸಾಧ್ಯ?” ಎಂದನು ನಂದ.
ಯಶೋದಾ ನಂದರೂ ರೋಹಿಣಿಯೂ ಹೀಗೆ ರೋಗದಿಂದ ನರಳುತ್ತ ಮೂರ್ಖತನ ತೋರಿಸುವುದನ್ನು ನೋಡಿ, ಅವರನ್ನು ಹೇಗೆ ಕದಲಿಸುವುದೆಂದು ಕೃಷ್ಣನಿಗೆ ಚಿಂತೆ ಹಿಡಿಯಿತು.
ಈ ಗೋಕುಲಕ್ಕೆ ವಿದೇಹ ದೇಶದಿಂದ ಬಂದ ವೃದ್ಧ ಗೋಪಕನೊಬ್ಬನಿದ್ದನು. ಅವನು ಗೋಪಪ್ರಮುಖರೊಂದಿಗೆ, “ನೋಡಿರಿ ಅಪ್ಪಗಳಿರಾ! ನಾವೆಲ್ಲಾ ಪಶುಗಳನ್ನು ಆಶ್ರಯಿಸಿ ಬದುಕಿಕೊಂಡಿರುವವರು. ಪಶುಪತಿಯಾದ ಶಿವನನ್ನು ಅರ್ಚನೆ ಮಾಡಿದರೆ ನಮ್ಮ ಕಷ್ಟಗಳು ತೀರುತ್ತವೆ. ಈಗ ಚಿಂತಿಸುತ್ತಾ ಸುಮ್ಮನೆ ಕೂಡುವುದರಿಂದ ಲಾಭವೇನಿಲ್ಲ. ಶಾಸ್ತ್ರೀಯ ಪದ್ಧತಿಯನ್ನು ತಿಳಿದ ಬ್ರಾಹ್ಮಣರನ್ನು ಕರೆಯಿಸಿ ಬೇಗನೇ ಶಿವಾರ್ಚನೆ ಪ್ರಾರಂಭಿಸಿರಪ್ಪಾ” ಎಂದನು.
ಆ ಹಿರಿಯನು ಹೇಳಿದ ಮಾತಿನ ಮೇಲೆ ವಿಶ್ವಾಸವಿಟ್ಟು, ಗೋಪಕರು ಸಮರ್ಥರಾದ ಬ್ರಾಹ್ಮಣರನ್ನು ಕರೆಯಿಸಿ, ಶಿವಪೂಜೆಗೆ ಅಗತ್ಯವಾದ ಏರ್ಪಾಡುಗಳನ್ನೆಲ್ಲಾ ಮಾಡಿದರು. ಈಶ್ವರನಿಗೆ ಪ್ರತಿದಿನವೂ ಹಗಲೂ ರಾತ್ರಿಯೂ, ಅಭಿಷೇಕಗಳೂ, ಅರ್ಚನೆಗಳೂ, ನೈವೇದ್ಯಗಳೂ ನಡೆದುವು.
ಹಾಗೆ ಏಳು ದಿನಗಳವರೆಗೆ ಬಿಡದೆ ಶಿವಾರ್ಚನೆ ನಡೆಯಲು, ಏಳನೇ ದಿನ ಮಧ್ಯಾಹ್ನದಲ್ಲಿ ಒಬ್ಬ ಸದ್ಬ್ರಾಣನು ಫಕ್ಕನೆ ದೈವಾವೇಶಿತನಾದನು.
ಹೀಗೆ ದೈವಾವಾಹನೆಗೊಳಗಾದ ಆ ಬ್ರಾಹ್ಮಣನ ಬಾಯಿಯಿಂದ ಏನು ಮಾತು ಬರುವುದೆಂದು ಕೇಳಲು ಎಲ್ಲರೂ ನಿಶ್ಯಬ್ದರಾಗಿ ಕಿವಿಯಾನಿಸಿ ಕೈ ಮುಗಿದು ನಿಂತರು. ಬ್ರಾಹ್ಮಣನು ಹುಚ್ಚು ಹುಚ್ಚಾಗಿ ನಗುತ್ತ, ಭಯಂಕರವಾಗಿ ನಾಟ್ಯವಾಡುತ್ತ ಹೀಗೆ ಹೇಳಿದನು:
“ಪರಮಶಿವನು ನನ್ನನ್ನು ಕೈಲಾಸದಿಂದ ಕಳುಹಿಸಿದ್ದಾನೆ. ಶಂಖಕರ್ಣನೆಂದು ನನ್ನ ಹೆಸರು. ಶಿವನು ನನ್ನೊಂದಿಗೆ, ಎಲೋ ಶಂಖಕರ್ಣ! ಕಾಳಿಂದೀ ತೀರದಲ್ಲಿ ರೋಗಗಳನ್ನು ಹೊಂದಿರುವ ಪ್ರಾಣಿಗಳಿಗೆಲ್ಲಾ ಮೇಲಾಗುವಂತೆ ಮಾಡು. ಹೋಗು ಎಂದು ಆಜ್ಞೆ ಮಾಡಿದನು. ನೀವು ಮಾಡಿದ ಅರ್ಚನೆಯಿಂದ ಶಿವನಿಗೆ ಸಂತೋಷವಾಗಿದೆ. ನಿಮಗೂ ಪಶುಪಕ್ಷಿಗಳಿಗೂ ಈ ರೋಗವು ಬರಲು ಕಾರಣವೇನೆಂದು ನಿಮಗೆ ಗೊತ್ತಾಗಲಿಲ್ಲವೆ? ದ್ವಾಪರ ಯುಗಾಂತದಲ್ಲಿ ರಾಕ್ಷಸರೆಲ್ಲಾ ಭೂಲೋಕವನ್ನು ಪೀಡಿಸಲಿಕ್ಕಾಗಿ ಬಗೆಬಗೆಯ ಜನ್ಮಗಳೆತ್ತುವಾಗ, ವಿರೋಚನನ ಮಗನಾದ ಕಾಲಕಲಿ ಎಂಬ ರಾಕ್ಷಸನು ಯಮುನಾ ನದಿಯ ದಕ್ಷಿಣ ತೀರದಲ್ಲಿ ಒಂದು ವಿಷವೃಕ್ಷವಾಗಿ ಹುಟ್ಟಿ ಬೆಳೆದಿದ್ದಾನೆ. ಆ ಬೇಲದ ಮರದ ಸುತ್ತಲೂ ಆ ರಾಕ್ಷಸನ ಬಂಟರು. ವಿಷವೃಕ್ಷಗಳಾಗಿಯೂ, ಮುಳ್ಳು ಮರಗಳಾಗಿಯೂ ಪೊದರುಗಳಾಗಿಯೂ ಹುಟ್ಟಿದ್ದಾರೆ. ಆ ವಿಷವೃಕ್ಷಗಳ ಗಾಳಿ ತಾಗಿ ನಿಮಗೂ ನಿಮ್ಮ ಪಶುಗಳಿಗೂ ರೋಗಗಳು ಬಂದಿವೆ. ಅವುಗಳಿಂದಾಗಿ ಆ ಸ್ಥಳದ ನೀರು ಕೂಡಾ ಕೆಟ್ಟುಹೋಯಿತು. ಆ ವಿಷವೃಕ್ಷವನ್ನು ನಿರ್ಮೂಲಿಸುವ ಶಕ್ತಿ ನಂದಗೋಪನ ಮಗನಾದ ಕೃಷ್ಣನಿಗೂ, ರೋಹಿಣೀ ಪುತ್ರ ಬಲರಾಮನಿಗೂ ಮಾತ್ರವೇ ಇದೆ. ಅವರು ಅದಕ್ಕೆ ಒಪ್ಪಿದರೆ ನೀವೆಲ್ಲಾ ಬದುಕುವಿರಿ. ಈ ಮಾತನ್ನು ನಿಮಗೆ ಹೇಳಿ ಬರುವಂತೆ ಪರಮಶಿವನು ನನ್ನನ್ನು ಕಳುಹಿಸಿದ್ದಾನೆ. ನನ್ನ ಕೆಲಸ ಮುಗಿಯಿತು. ಜೈ ಶಿವಶಿವ ಶಂಭೋ ಮಹಾದೇವಾ! ಇನ್ನು ನಾನು ಕೈಲಾಸಕ್ಕೆ ಹಿಂದಿರುಗುತ್ತೇನೆ. ಅಪ್ಪಣೆ.”
ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೇ ಬ್ರಾಹ್ಮಣನ ಆವೇಶವು ಇಳಿದುಹೋಯಿತು. ಅವನು ನೆಲದಲ್ಲಿ ಬಿದ್ದನು. ಅವನ ಮೇಲೆ ನೀರಿನ ಅಭಿಷೇಕ ಮಾಡಿದ ಮೇಲೆ ಎದ್ದನು. ಬ್ರಾಹ್ಮಣರು ಸಂತೋಷಪಟ್ಟು ಶಿವಾರ್ಚನೆಯನ್ನು ಪರಿಸಮಾಪ್ತಿಗೊಳಿಸಿದರು.
ಕೂಡಲೇ ಗೋಪಕರು ಬಲರಾಮಕೃಷ್ಣರನ್ನು ಕರೆಯಿಸಿ, ನಡೆದ ಸಂಗತಿಯನ್ನೆಲ್ಲಾ ಅವರೊಂದಿಗೆ ಹೇಳಿದರು.
ಅದನ್ನೆಲ್ಲಾ ಕೇಳಿ ಅವರಿಬ್ಬರೂ ಅತ್ಯುತ್ಸಾಹದಿಂದ, “ಈಶ್ವರಾಜ್ಞೆ ನಮಗೆ ಪೂಜನೀಯ. ತಂದೆ ತಾಯಿಗಳನ್ನೂ ಇತರರನ್ನೂ, ಸಕಲ ಪ್ರಾಣಿಗಳನ್ನೂ ಬದುಕಿಸುವ ಕೆಲಸಕ್ಕಿಂತ ಹೆಚ್ಚಿನದೇನಿದೆ? ಆ ವಿಷವೃಕ್ಷ ಸಮೂಹವನ್ನು ನಾಶಪಡಿಸುತ್ತೇವೆ. ಶಿವನ ಆಜ್ಞೆಯಾದ ಮೇಲೆ ನಮಗೆ ದೈವ ಸಹಾಯವಿದೆಯೆಂದಾಯಿತು. ಇನ್ನು ಯಾರೂ ಹೆದರಬೇಕಾಗಿಲ್ಲ” ಎಂದರು.
ಕೃಷ್ಣನು ಬ್ರಾಹ್ಮಣರಿಗೆ ನಮಸ್ಕಾರ ಮಾಡಿ, ಶಂಕರನ ಮುಂದೆ ಸಾಷ್ಟಾಂಗ ಬಿದ್ದು ಭಕ್ತಿಯಿಂದ ಶಿವಾಲಯಕ್ಕೆ ಪ್ರದಕ್ಷಿಣೆ ಮಾಡಿದನು. ಬಲರಾಮನು ಕೂಡಾ ಹಾಗೆಯೇ ಮಾಡಿದನು. ತರುವಾಯ ಅವರಿಬ್ಬರೂ ಕತ್ತಿ ಕೊಡಲಿ ತೆಗೆದುಕೊಂಡು ಕಾಡಿನೊಳಗೆ ವಿಷವೃಕ್ಷಗಳಿರುವ ಪ್ರಾಂತಕ್ಕೆ ಹೊರಟರು.
ಶಿವಾರ್ಚನೆಯಿಂದ ಅನೇಕ ಮಂದಿ ಗೋಪಕರಿಗೆ ರೋಗವು ಕಡಿಮೆಯಾಗುತ್ತ ಬಂದಿತು. ಅದರಿಂದ ಎಲ್ಲರಿಗೂ ನಂಬುಗೆ ಹೆಚ್ಚಾಯಿತು. ಅವರು ಕೂಡಾ ಸಿಂಹನಾದ ಮಾಡುತ್ತ ಬಲರಾಮಕೃಷ್ಣರೊಂದಿಗೆ ಹೊರಟರು.
ವಿಷವೃಕ್ಷವು ಎಲ್ಲಿರುವುದೆಂದು ಹುಡುಕುವ ಅಗತ್ಯವಿಲ್ಲದೆ ಹೋಯಿತು. ಅವರು ದಟ್ಟವಾದ ಅರಣ್ಯದೊಳಗೆ ನಡೆಯುತ್ತಿದ್ದಂತೆ ಮರಗಳಿಂದ ಬರುವ ದುರ್ಗಂಧವು ತಾಳಲಸಾಧ್ಯವಾಯಿತು. ಬೇಗದಲ್ಲೇ ಅವರಿಗೆ ಭಯಂಕರಾಕಾರದ ಆ ವಿಷವೃಕ್ಷವು ನೋಡಲು ಸಿಕ್ಕಿತು.
ಅದು ಆಕಾಶದಷ್ಟೆತ್ತರಕ್ಕೆ ಬೆಳೆದು ಒಂದು ಪೆಡಂಭೂತದಂತೆ ಕಾಣುತ್ತಿತ್ತು. ಅದರ ಸುತ್ತಲೂ ಬಹಳ ದೂರದವರೆಗೆ ದಾರುಣವಾದ ಮುಳ್ಳು ಮರಗಳು ವ್ಯಾಪಿಸಿಕೊಂಡಿದ್ದುವು. ಬಲರಾಮಕೃಷ್ಣರು ಕತ್ತಿಗಳಿಂದ ಮುಳ್ಳುಗಳನ್ನು ಕಡಿದು ದಾರಿ ಮಾಡಿಕೊಂಡು ಹೋಗಿ ಅವೆಲ್ಲಕ್ಕೂ ರಾಜನಂತಿರುವ ವಿಷವೃಕ್ಷವನ್ನು ಸಮೀಪಿಸಿದರು.
ಆ ಬೇಲದ ಮರವು ಮೂವತ್ತು ಮಾರು ಸುತ್ತಳತೆಯದಾಗಿತ್ತು. ಅದರ ಕಾಯಿಗಳು ಆನೆಗಳ ತಲೆಗಳ ಹಾಗಿದ್ದುವು. ಅದರ ಕೊಂಬೆಗಳೂ ಎಲ್ಲಾ ದಿಕ್ಕುಗಳಿಗೂ ಅಂತ್ಯವಿಲ್ಲದಂತೆ ವ್ಯಾಪಿಸಿದ್ದುವು. ಆ ಕಾಯಿಗಳಿಂದಲೇ ದುರ್ಗಂಧವು ಹೊರಡುತ್ತಿದ್ದಿತು. ಅದುದರಿಂದ ಕೃಷ್ಣನಿಗೆ ಮೊದಲು ಅವುಗಳನ್ನೆಲ್ಲಾ ಹರಿದು ಬೋಳಿಸಬೇಕೆಂದು ತೋರಿತು. ಆಗ ದುರ್ವಾಸನೆ ತಡೆದು ಕೊಳ್ಳುವಂತಾಗಿ, ನಾಶ ಕಾರ್ಯಕ್ಕೆ ಸುಲಭವಾಗುತ್ತದೆ.
ಬಲರಾಮಕೃಷ್ಣರಿಬ್ಬರೂ ಕೂಡಿ ಕೈಗೆ ಸಿಕ್ಕಿದ ಮಿಡಿಗಳನ್ನೂ, ಬೆಳೆದ ಕಾಯಿಗಳನ್ನೂ, ಹಣ್ಣುಗಳನ್ನೂ ಕಡಿಕಡಿದು ಹಾಕತೊಡಗಿದರು. ಎಟಕದವುಗಳನ್ನು ಕಲ್ಲಿನಿಂದಲೂ ಕೋಲುಗಳಿಂದಲೂ ಹೊಡೆದು ಉರುಳಿಸಿದರು. ಎಟಕುವ ಕೊಂಬೆಗಳನ್ನು ಹಾರಿ ಹಾರಿ ಹಿಡಿದು ಎಳೆದು ಬಗ್ಗಿಸಿ ತುಂಡು ಮಾಡಿದರು. ದಪ್ಪದ ಕೊಂಬೆಗಳನ್ನು ಕೊಡಲಿಯಿಂದ ಕಡಿದರು.
ಗೋಪಾಲಕರೆಲ್ಲರೂ ಕೇಕೇ ಹಾಕುತ್ತ ಈ ಕೆಲಸದಲ್ಲಿ ಕೃಷ್ಣಬಲರಾಮರಿಗೆ ಸಹಾಯ ಮಾಡಿದರು. ಸ್ವಲ್ಪ ಹೊತ್ತಿಗೆ ಮರವಿಡೀ ಬೋಳಾಯಿತು.
ಬಲರಾಮಕೃಷ್ಣರು ಹೀಗೆ ವಿಷವೃಕ್ಷಗಳನ್ನು ಧ್ವಂಸ ಮಾಡುತ್ತಿರುವಾಗ, ಮತ್ತೊಂದು ಆಶ್ಚರ್ಯ. ಸಂಗತಿ ಕಾಣಬಂದಿತು. ಆ ಪ್ರಾಂತದಲ್ಲಿ ತಿರುಗುವ ಕೆಲವು ದನಗಳೂ ಕರುಗಳೂ ಗೋಪಕರ ಮೇಲೆ ದೌರ್ಜನ್ಯದಿಂದ ಹರಿಹಾಯಲು ತೊಡಗಿದುವು.
ಅದುವರೆಗೂ ಕಾಣದಿದ್ದ ಆ ಪಶುಗಳು ನಿಜವಾದ ದನಕರುಗಳಾಗಿರಲಿಲ್ಲ. ಅಲ್ಲಿ ಮರಗಿಡ ಪೊದರುಗಳಾಗಿ ಹುಟ್ಟಿದ ರಾಕ್ಷಸರ ಹೆಂಡಂದಿರೂ, ಮಕ್ಕಳೂ ಪಶುಗಳ ರೂಪದಲ್ಲಿ ಅಲ್ಲಿ ಈಗ ಹಾಗೆ ರಭಸಗೊಂಡು ಎದ್ದಿದ್ದುವು.
ಕೃಷ್ಣನು ಆ ದುಷ್ಟ ಪಶುಗಳನ್ನು ನಿರ್ಮೂಲ ಮಾಡಲುತೊಡಗಿದನು. ರಾಕ್ಷಸರು ತಮ್ಮ ತಮ್ಮ ನಿಜರೂಪಗಳಿಂದ ಅಲ್ಲಿಯೇ ಬಿದ್ದು ಬಿದ್ದು ನೆತ್ತರು ಕಾರುತ್ತ ಸಾಯಲುತೊಡಗಿದರು. ಗೋಮಾತೆಯ ರೂಪದ ರಾಕ್ಷಸ ಸ್ತ್ರೀಯರು ಮಹಾರೋಷದಿಂದ ಕೃಷ್ಣನನ್ನು ತಮ್ಮ ಕೊಂಬುಗಳಿಂದ ತಿವಿದು ಕೊಲ್ಲಲು ನೋಡಿ, ಕೃಷ್ಣನ ಕೈಯಲ್ಲಿ ಪೆಟ್ಟು ತಿಂದು ಓಡಿದರು.
ಮತ್ತೆ ಸ್ವಲ್ಪ ಹೊತ್ತಿಗೆ ವಿಷವೃಕ್ಷವು ಬೇರುಸಹಿತ ಬಿದ್ದು, ಕೃಷ್ಣ ಬಲರಾಮರಿಂದ ಚೂರು ಚೂರಾಯಿತು. ಮಹಾರಾಕ್ಷಸನ ವಿಷವೃಕ್ಷ ವಾತಾವರಣವು ಮಣ್ಣುಪಾಲಾಯಿತು.
ಅಷ್ಟಾದ ಮೇಲೆ ಗೋಪಕುಮಾರರು ಆ ವೃಕ್ಷಗಳ ತುಂಡು ಚೂರುಗಳನನ್ನು, ರಾಕ್ಷಸರ ಕಳೇಬರಗಳನ್ನೂ ಒಟ್ಟಿಗೆ ಸೇರಿಸಿ ರಾಶಿ ಮಾಡಿ ಬೆಂಕಿ ಹೊತ್ತಿಸಿದರು. ಬೆಂಕಿಯ ಉರಿ ಆಕಾಶದಷ್ಟೆತ್ತರಕ್ಕೆ ಹಾರಿತು. ಅಗ್ನಿಯು ಅದನ್ನೆಲ್ಲಾ ದಹನ ಮಾಡಿ, ಬೂದಿ ಮಾತ್ರ ಉಳಿಸಿದನು. ಕ್ರಮೇಣ ಆ ಬೂದಿ ನೆಲಕ್ಕೆ ಒಳ್ಳೆಯ ಗೊಬ್ಬರದಂತಾಯಿತು.
ಗೋಪಾಲಕರೆಲ್ಲರ ಶರೀರಗಳೂ ಬೆವರಿನಿಂದ ನೆನೆದು ಕೊಳೆ ಅಂಟಿಕೊಂಡಿದ್ದುವು. ಎಲ್ಲರೂ ತುಂಬಾ ದಣಿದು ತೇಕುತ್ತಿದ್ದರು. ಆದುದರಿಂದ ಎಲ್ಲರೂ ಸೇರಿ ಯಮುನಾ ನದಿಯ ತೀರದ ಮರಳಿನಲ್ಲಿ ಸ್ವಲ್ಪ ಹೊತ್ತು ನಡೆದಾಡಿದರು. ಆಮೇಲೆ ಬಹಳ ಹೊತ್ತಿನವರೆಗೆ ನದಿಯಲ್ಲಿ ಈಜಾಡಿದರು. ಒಬ್ಬರ ಮೇಲೊಬ್ಬರು ನೀರನ್ನು ಚೆಲ್ಲುತ್ತ, ಏನೇನೋ ಜಲಕ್ರೀಡೆ ಮಾಡಿ ಹೊಸ ಉತ್ಸಾಹ ತುಂಬಿಕೊಂಡರು. ಕೆಲವರು ಹಾಡಿದರು.
ಹೀಗೆ ಹೊತ್ತುಬೀಳುವವರೆಗೂ ಜಲಕ್ರೀಡೆಯಾಡಿ ನದಿಯಿಂದ ಮೇಲೆ ಬಂದು, ತಾಯಂದಿರು ತಂದ ತಿಂಡಿ ತಿನಿಸುಗಳಿಂದ ಹೊಟ್ಟೆ ತುಂಬಿಸಿಕೊಂಡು, ಸ್ವಲ್ಪ ಹೊತ್ತು ಮರಳಿನಲ್ಲಿ ಕುಳಿತು, ಆಮೇಲೆ ಸಾವಕಾಶವಾಗಿ ಮನೆಗೆ ಹಿಂದಿರುಗಿದರು.
(ಮುಂದುವರೆಯಲಿದೆ…)

- ಎಂ.ವಿ. ಶಂಕರಾನಂದ, ಸಾಹಿತಿಗಳು, ತುಮಕೂರು. ಮೊಬೈಲ್: 8971302974
ಅಧ್ಯಾಯ 1:
ಅಧ್ಯಾಯ 2:
ಅಧ್ಯಾಯ 3:
ಅಧ್ಯಾಯ 4:
ಅಧ್ಯಾಯ 5:
