ಪ್ರಕಾಶಕರ ಮನವಿಗೆ ಸ್ಪಂದಿಸಿದ ಆಯುಕ್ತರು…

ರಾಜ್ಯದ ವಿವಿಧ ಪ್ರಕಾಶಕರ-ಲೇಖಕ ಸಂಘಟನೆಯನ್ನು ಒಳಗೊಂಡಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರಾದ ಶ್ರೀ ಬಸವರಾಜೇಂದ್ರ ಅವರು ಇಂದು ತುರ್ತಾಗಿ ಸಭೆಯೊಂದನ್ನು ಕರೆದು ಆ ಸಭೆಯಲ್ಲಿ ಪ್ರಕಾಶಕರ/ಲೇಖಕರ ಮತ್ತು ಪುಸ್ತಕೋದ್ಯಮದ ಸಮಸ್ಯೆಗಳನ್ನು ತಾಳ್ಮೆ ಮತ್ತು ಸಂಯಮದಿಂದ ಆಲಿಸಿದರು. ನಂತರ ಈ ಎಲ್ಲ ಸಮಸ್ಯೆಗಳಿಗೂ ಡಿಸೆಂಬರ್ ೨೦ರ ಒಳಗಾಗಿ ಪರಿಹಾರ ಒದಗಿಸಿ ಪುಸ್ತಕೋದ್ಯಮದ ಸಮಗ್ರ ಆಭಿವೃದ್ದಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈಗ ಅತಿ ಜರೂರಾಗಿ ೨೦೨೨ರ ಪಟ್ಟಿ ಮತ್ತು ೨೦೨೦ರ ಸಗಟು ಖರೀದಿಯ ಬಾಕಿ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು. ಕನ್ನಡ ಪುಸ್ತಕಗಳ ಪುಟವಾರು ಬೆಲೆ ಏರಿಕೆ ಮತ್ತು ಖರೀದಿ ಕುರಿತಂತೆ ಕುರಿತ ನಮ್ಮ ಪ್ರಶ್ನೆಗೆ ಈಗಾಗಲೇ ಸಚಿವರು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವುದಾಗಿ ಅವರ ಅಧ್ಯಕ್ಷತೆಯಲ್ಲಿ ಪ್ರಕಾಶಕರ ಮುದ್ರಣ ಮತ್ತು ಹಣಕಾಸು ಅಧಿಕಾರಿಗಳ ಸಭೆ ಕರೆದು ಶೀಘ್ರವಾಗಿ ತೀರ್ಮಾನಿಸುವುದಾಗಿ ತಿಳಿಸಿದರು. ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ನಗರ ಕೇಂದ್ರ ಗ್ರಂಥಾಲಯಗಳು ನೀಡುತ್ತಿರುವ ಅಭಿವೃದ್ಧಿ ಶುಲ್ಕವನ್ನು ೫ರಿಂದ ೧೦ಕೆ ಏರಿಸಿ ಅ ಹಣದಿಂದಲೇ ಏಕಗವಾಕ್ಷಿ ಸಗಟು ಪುಸ್ತಕ ಖರೀದಿ ಪ್ರಕ್ರಿಯೆ ನಡೆಸಬಹುದೆಂಬ ನಮ್ಮ ಮನವಿಗೆ ಈಗಾಗಲೇ ಸರ್ಕಾರಕ್ಕೆ ಬರೆದು ಅನುಮತಿ ಕೇಳಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಪುಸ್ತಕೋದ್ಯಮಕ್ಕೆ ಯಾವ ತೊಂದರೆಯೂ ಆಗದಂತೆ ಸುಗಮವಾಗಿ ಖರೀದಿ ವ್ಯವಸ್ಥೆ ನಡೆದುಕೊಂಡು ಹೋಗಲು ಇಲಾಖೆಯ ವತಿಯಿಂದ ಎಲ್ಲಾ ಬಗೆಯ ಆಡಳಿತದ ಸಹಕಾರವನ್ನು ನೀಡುವುದಾಗಿ ಹೇಳಿದರು. ಈ ಮಹತ್ತರ ಸಭೆಯಲ್ಲಿ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ, ಕರ್ನಾಟಕ ಪ್ರಕಾಶಕರ ಸಂಘದ ಕಾರ್ಯದರ್ಶಿ ಅಭಿನವ ರವಿಕುಮಾರ್, ಒಕ್ಕೂಟದ ಸೃಷ್ಟಿ ನಾಗೇಶ್, ಚಂದ್ರಕೀರ್ತಿ, ಸಪ್ನಾದ ಆರ್. ದೊಡ್ಡೇಗೌಡ, ಧಾತ್ರಿ ಉಮೇಶ್, ರಾಜೇಶ್ ಬಿ. ಹೊನ್ನೇನಹಳ್ಳಿ, ಭೂಮಿ ಬುಕ್ಸ್‌ನ ವಿಶಾಲಾಕ್ಷಿ, ಅವಿರತ ಹರೀಶ್, ವಸಂತದ ಮುರುಳಿ, ಮಂಜೇಗೌಡ, ಸೇರಿದಂತೆ ರಾಜ್ಯದ ಹಲವು ಲೇಖಕ/ಪ್ರಕಾಶಕರು ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಚರ್ಚೆಗೊಂಡ ವಿಷಯಗಳು ೨೦ದಿನಗಳ ಒಳಗೆ ಕಾರ್ಯಗತವಾಗದಿದ್ದರೆ ಮುಂದಿನ ದಿನಗಳಲ್ಲಿ ಸಮೂಹಿಕವಾಗಿ ಹೋರಾಟ ಮಾಡುವುದಾಗಿಯೂ ತಿಳಿಸಲಾಯಿತು.

ಆಯುಕ್ತರ ಭರವಸೆಯ ಹಿನ್ನೆಲೆಯಲ್ಲಿ ದಿನಾಂಕ ೨೮-೧೧-೨೦೨೫ ರಂದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನು ಮತ್ತು ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.

ವಿಶೇಷವಾಗಿ ಪುಸ್ತಕ ಪ್ರಕಾಶಕ ಲೇಖಕರ ಸಮಸ್ಯೆಗಳ ಬಗ್ಗೆ ಸರಣಿ ಸುದ್ದಿಗಳನ್ನು ಪ್ರಕಟಮಾಡಿ ಪುಸ್ತಕೋದ್ಯಮದ ಪರವಾಗಿ ನಿಂತ ರಾಜ್ಯದ ಸುದ್ಧಿ ಮಾಧ್ಯಮದ ಎಲ್ಲ ಸಂಪಾದಕರು ಮತ್ತು ವರದಿಗಾರರಿಗೂ ಕರ್ನಾಟಕ ರಾಜ್ಯ ಲೇಖಕ- ಪ್ರಕಾಶಕ-ಮುದ್ರಕರ ಒಕ್ಕೂಟ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

– ಸೃಷ್ಟಿ ನಾಗೇಶ್, ಕರ್ನಾಟಕ ರಾಜ್ಯ ಲೇಖಕ- ಪ್ರಕಾಶಕ-ಮುದ್ರಕರ ಒಕ್ಕೂಟ ಬೆಂಗಳೂರು.

Leave a Comment

Your email address will not be published. Required fields are marked *

Scroll to Top