
ಮಾರಿಗಲ್ಲು ವೆಬ್ ಸೀರೀಸ್ ಒಟ್ಟು ಏಳು ಕಂತುಗಳನ್ನು ಒಳಗೊಂಡಿದೆ. ಇದನ್ನು ಪಿ.ಆರ್.ಕೆ ಪ್ರೊಡಕ್ಷನ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಿಸಿದ್ದಾರೆ. ಈ ವೆಬ್ ಸೀರೀಸಿನ 7 ಕಂತುಗಳನ್ನು ನೀವು Zee5 (ಜೀ5, Z5) ನಲ್ಲಿ ವೀಕ್ಷಿಸಬಹುದು.
ರಂಗಾಯಣ ರಘು ಜೊತೆಗೆ, ಕಾಂತಾರ ಚಿತ್ರದಲ್ಲಿ ನಟಿಸಿದ್ದ ಕೆಲವು ನಟರು ಹಾಗು ಧಾರವಾಹಿಗಳಲ್ಲಿ ನಟಿಸಿದ ಕೆಲವು ನಟರು ಒಟ್ಟಾಗಿ ನಟಿಸಿದ್ದಾರೆ.
ಕಥೆ: ಕದಂಬರ ಕಾಲದ ಶಾಸನಗಳ ಪತ್ತೆಗೆ ಪುರಾತತ್ವ ಇಲಾಖೆಯವರು ಮಾರಿ ಗುಡ್ಡಕ್ಕೆ ಬರುತ್ತಾರೆ. ಇದರ ಮುಂದಾಳತ್ವವನ್ನು ರಂಗಾಯಣ ರಘು ವಹಿಸಿರುತ್ತಾರೆ. ಇವರ ಕಾರ್ಯಕ್ಕೆ ರಾಜ ಮನೆತನದ ವಂಶಸ್ಥ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಅಡ್ಡಿಪಡಿಸುತ್ತಾನೆ. ಸರ್ಕಾರಿ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿ ಪಡಿಸಿದರೆ ಜೈಲು ಶಿಕ್ಷೆಯಾಗುತ್ತದೆ ಎಂದು ಮನವರಿಕೆ ಆದ ನಂತರ ಆತ ಸುಮ್ಮನಾಗುತ್ತಾನೆ. ಆ ವಂಶಸ್ಥ ಕೆಲವು ಕಲ್ಲಿನ ಶಾಸನಗಳನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ತನ್ನ ವಂಶಸ್ಥರು ಇಟ್ಟಿರುವ ನಿಧಿಯ ಕುರುಹನ್ನು ಹುಡುಕುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ಈತನ ಮನೆಗೆ ಬರುವ ಮನೆಯ ಕೆಲಸದವನು, ತನ್ನ ತಂಗಿಯ ಮದುವೆಗೆ ಸಹಾಯ ಕೇಳುತ್ತಾನೆ. ಇದಕ್ಕೆ ಆತ ಏನನ್ನು ಕೊಡದೆ ಇದ್ದಾಗ, ಆ ಕೆಲಸದವನು ಇವರ ಮನೆಯಲ್ಲಿದ್ದ ಶಾಸನವನ್ನು ಕದ್ದು ಪುರಾತತ್ವ ಇಲಾಖೆಯ ರಂಗಾಯಣ ರಘು ಹತ್ತಿರ ತೆಗೆದುಕೊಂಡು ಬರುತ್ತಾನೆ. ಇದರಿಂದ ಇವರಿಗೆ ನಿಧಿ ಇರುವ ಜಾಗ ಗೊತ್ತಾಗುತ್ತದೆ, ತನ್ನ ಮೂರು ಜನ ಸ್ನೇಹಿತರನ್ನು ಸಹಾಯಕ್ಕೆ ಕರೆದುಕೊಂಡು ಆ ಜಾಗಕ್ಕೆ ಹೋಗಿ ನಿಧಿ ತೆಗೆಯತ್ತಾರೆ. ಅಷ್ಟೊತ್ತಿಗೆ ಅಲ್ಲಿಗೆ ಆ ವಂಶಸ್ಥನು ಬಂದು ಗಲಾಟೆ ಮಾಡುತ್ತಾನೆ. ಆಗ ಎಲ್ಲರಿಗೂ ಸಮ ಪಾಲು ಎಂದಾಗ ಸುಮ್ಮನಾಗುತ್ತಾನೆ. ನಿಧಿಯನ್ನು ತೆಗೆದುಕೊಂಡು ಹೋಗುವಾಗ ಅಲ್ಲಿನ ದೈವ ಅವರನ್ನು ಹಿಂಬಾಲಿಸುವುದು ಗೊತ್ತಾಗುತ್ತದೆ. ಅದಕ್ಕೆ ನಿಧಿಯನ್ನು ಅಲ್ಲೆ ಹೂತಾಕಿ, ನಾಳೆ ಅದಕ್ಕೆ ಪೂಜೆ ಮಾಡಿ, ಕುರಿ ಬಲಿ ಕೊಟ್ಟು ತೆಗೆದುಕೊಂಡು ಹೋಗೊಣ ಎಂದು ಎಲ್ಲರೂ ಆ ವಂಶಸ್ಥನ ತೋಟದ ಮನೆಗೆ ಹೋಗಿ ಮಲಗುತ್ತಾರೆ ಆದರೆ ಯಾರೂ ನಿದ್ದೆ ಮಾಡದೆ ಎಚ್ಚರವಾಗಿರುತ್ತಾರೆ. ಬೆಳಗ್ಗೆ ನಿಧಿ ಹೂತಿದ್ದ ಜಾಗಕ್ಕೆ ಬಂದು ತೆಗೆದರೆ ಅಲ್ಲಿ ನಿಧಿ ಇರುವುದಿಲ್ಲ.
ಹೂತಿದ್ದ ನಿಧಿ ಏನಾಯಿತು, ಯಾರ ಪಾಲಾಯಿತು? ನಿಧಿ ರಕ್ಷಣೆಯಲ್ಲಿ ದೈವದ ಪಾತ್ರ ಏನು? ಮುಂತಾದ ಪ್ರಶ್ನೆಗೆ ನೀವು ಈ ವೆಬ್ ಸೀರೀಸ್ 7 ಕಂತುಗಳನ್ನು ನೋಡಿ ತಿಳಿದುಕೊಳ್ಳಬೇಕು.
ಒಟ್ಟಾರೆ ಫಲಿತಾಂಶ: ಈ ವೆಬ್ ಸೀರೀಸಿನಲ್ಲಿ ದೈವದ ಸನ್ನಿವೇಶದಲ್ಲಿ ಕಾಂತಾರ ಚಿತ್ರದ ಛಾಯೆ ಕಾಣಿಸುತ್ತದೆ.
ರಂಗಾಯಣ ರಘು ಸೇರಿದಂತೆ ಇತರೆ ನಟರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಈ ಸೀರೀಸಿನ 7 ಕಂತುಗಳು ಅದ್ಭುತವಾಗಿ ಮೂಡಿಬಂದಿವೆ. ಎಲ್ಲಿಯೂ ಬೋರ್ ಹೊಡೆಸದೆ ಕುತೂಹಲದಿಂದ ನೋಡುವಂತೆ ಮಾಡುತ್ತದೆ. ದಟ್ಟ ಅರಣ್ಯ ಕಣ್ಮನ ಸೆಳೆಯುತ್ತದೆ, ಅತ್ಯುತ್ತಮ ಛಾಯಾಗ್ರಹಣ ಮಾಡಿದ್ದಾರೆ.
ಹೊಸಬರ ಪ್ರಯತ್ನಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಬೆನ್ನೆಲುಬಾಗಿರುವುದು ತುಂಬಾ ಸಂತೋಷದ ವಿಚಾರ.
ಟ್ರೈಲರ್ ನಲ್ಲಿ ಕಾಣುವ ಅಪ್ಪು, ವೆಬ್ ಸೀರೀಸ್ ನಲ್ಲಿ ಇಲ್ಲದೆ ಇರುವುದೇ ಬೇಸರದ ಸಂಗತಿ.
- ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.
