ಸ್ಥಗಿತವಾಯಿತೇ ಸಗಟು ಖರೀದಿ!?

2010ರಲ್ಲಿ ನನ್ನ ಪುಸ್ತಕವನ್ನು ಪ್ರಕಟಿಸಲು ಶುರುವಾದ ನಮ್ಮ ಗೋಮಿನಿ ಪ್ರಕಾಶನ ತದನಂತರ ಇತರರ ಪುಸ್ತಕಗಳನ್ನು ಪ್ರಕಟಿಸಲು ಶುರುಮಾಡಿ ಇದುವರೆವಿಗೂ 95 ಪುಸ್ತಕಗಳನ್ನು ಪ್ರಕಟಿಸಿದೆ. 2008ರಲ್ಲಿ ನಾನು ಬರೆದ ಸಿನಿಮಾ ಚಿತ್ರಕತೆ “ಮುಗುಳ್ನಗೆ”ಯನ್ನು ಗುರುಗಳಾದ ನಾಗತಿಹಳ್ಳಿ ಚಂದ್ರಶೇಖರ್‌ ಮತ್ತು ಮನೆಯವರ ಹಾಗೂ ಸ್ನೇಹಿತರ ಸಲಹೆಯ ಮೇರೆಗೆ ಕಾದಂಬರಿ ರೂಪದಲ್ಲಿ ಹೊರತರಲು ತೀರ್ಮಾನಿಸಿದೆ. ಪಟ್ಟಾಗಿ ಮೂರು ತಿಂಗಳು ಕುಳಿತು ನಾ ಬರೆದ ಚಿತ್ರಕತೆಯನ್ನು ಕಾದಂಬರಿ ರೂಪದಲ್ಲಿ ಬರೆದೆ. ಬರೆದು ಮುಗಿಸಿದ ಮೇಲೆಯೇ ಪ್ರಕಾಶಕರು ಯಾರು ಎಂಬ ಪ್ರಶ್ನೆ ಬಂದದ್ದು. ಎರಡು ವರ್ಷಗಳ ಕಾಲ ಪ್ರಕಾಶಕರನ್ನು ಹುಡಕಿದ್ದೇ ಬಂತು. ಆಗ, ನಾನು ಭೇಟಿಯಾಗಿದ್ದ ಅಂಕಿತ ಪುಸ್ತಕದ ಪ್ರಕಾಶ್‌ ಕಂಬತ್ತಳ್ಳಿ ಅವರು ಹೇಗಿದ್ದರೂ ಸಾರ್ವಜನಿಕ ಗ್ರಂಥಾಲಯ ಇಲಾಖೆ 300 ಪ್ರತಿಗಳನ್ನು ಕೊಳ್ಳುತ್ತದೆ. ನೀವೇ ಪ್ರಕಟಿಸಿ ಎಂದರು. ಅವರು ಸುಮ್ಮನೆ ನನಗೊಂದಿಷ್ಟು ಪ್ರತಿಗಳನ್ನು ಕೊಟ್ಟು ಅಂದು ಪ್ರಕಟಿಸಿದ್ದರೆ ಸಾಕಿತ್ತು ಅಂತ ಇಂದಿಗೂ ಅಂದುಕೊಳ್ಳುವುದಿದೆ. ಅಲ್ಲಿಗೆ ಅವರು ಪ್ರಕಟಿಸಲ್ಲ ಎಂಬುದು ಮನವರಿಕೆಯಾಗಿ ಅಷ್ಟರಲ್ಲಿ ಆತ್ಮೀಯರಾಗಿದ್ದ ಕತೆಗಾರ ಕೆ. ಗಣೇಶ್‌ ಕೋಡೂರ್‌ ಅವರನ್ನು ಸಂಪರ್ಕಿಸಿದೆ. ಅವರು ಕೆಲವು ಅಮೂಲ್ಯ ಮಾಹಿತಿಗಳನ್ನು ನೀಡಿದರು. ಅವರಾಗ “ನಿಮ್ಮೆಲ್ಲರ ಮಾನಸ” ಮಾಸಪತ್ರಿಕೆ ಸಂಪಾದಕರು ಮತ್ತು ಪ್ರಕಾಶನ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ ಅನುಭವ ಇದ್ದವರು. ಈಮೈಲಿನಲ್ಲಿ ಕತೆಗಾರ ಮತ್ತು ಸ್ವಂತ ಪ್ರಕಾಶನ ಮಾಡಿ ಅದಾಗಲೇ ಹೆಸರು ಮಾಡುತ್ತಿದ್ದ ವಸುಧೇಂದ್ರ ಅವರು ಕೂಡ ತಮ್ಮ ಸಲಹೆಯನ್ನು ನೀಡಿದರು. ತುಮಕೂರಿನ ಇತಿಹಾಸ ಉಪನ್ಯಾಸಕರು ಹಾಗೂ ಲೇಖಕ-ಪ್ರಕಾಶಕರೂ ಆಗಿದ್ದ ಎಂ.ಎಚ್.‌ ನಾಗರಾಜು ಕೂಡ ಸಲಹೆಗಳನ್ನು ನೀಡಿದರು. ಎರಡು ವರ್ಷಗಳ ಕಾಲ ಯಾರೂ ಪ್ರಕಾಶಕರು ಸಿಗದೇ ಶುರುವಾಗಿದ್ದು ನನ್ನ ಮಗಳ ಹೆಸರಿನ “ಗೋಮಿನಿ ಪ್ರಕಾಶನ.”

2010ರ ಅಂತ್ಯದಲ್ಲಿ ನನ್ನ ಡೈರಿಯಲ್ಲಿದ್ದ ಕವನಗಳನ್ನು ಸೇರಿಸಿ “ಮಳೆಯಾಗು ನೀ” ಎಂಬ ಕವನ ಸಂಕಲನ ಹೊರತಂದೆ. ಆಗ ಜೊತೆಗೆ ನಿಂತು ಪುಸ್ತಕದ ವಿನ್ಯಾಸ ಇನ್ನಿತರ ಅಂಶಗಳೆಡೆಗೆ ನೆರವಾಗಿದ್ದು ಕಲಾವಿದ ಅಜಿತ್‌ ಕೌಂಡಿನ್ಯ ಮತ್ತು ತುಮಕೂರಿನ ತುಮಕೂರು ಪ್ರೆಸ್ಸಿನ ಶಿವಸ್ವಾಮಿಯವರು. 2011ರಲ್ಲಿ ನನ್ನ ಬಹುದಿನಗಳ ಕನಸಾಗಿದ್ದ “ಮಗುಳ್ನಗೆ” ಹೊರತಂದೆ. ಅಷ್ಟರಲ್ಲಾಗಲೇ ಪ್ರಕಾಶನದ ಕುರಿತು ಒಂದಷ್ಟು ಅರಿವು ಮೂಡಿಸಿಕೊಂಡಿದ್ದ ನಾನು ಬೆಂಗಳೂರಿನ ʼಗಹನಾ ಬುಕ್ಸ್‌ ಲಿಂಕ್ಸ್”‌ ಮೂಲಕ ನನ್ನ ಪುಸ್ತಕವನ್ನು ವಿತರಣೆ ಮಾಡಿಸಲು ಕೋರಿ ಅವರು ನೆರವಾದರು. ನವಕರ್ನಾಟಕ ಮತ್ತು ಸಪ್ನ ಮಳಿಗೆಗಳಲ್ಲಿ ಚೆನ್ನಾಗಿಯೇ “ಮುಗುಳ್ನಗೆʼ ಮಾರಾಟ ಕಂಡಿತು. ಒಮ್ಮೆ ಸಪ್ನದಲ್ಲಿ ನನ್ನ “ಮುಗುಳ್ನಗೆ” ಟಾಪ್‌ 10ರಲ್ಲಿ ಬಂದಿತ್ತು ಎಂದರೆ ಈಗಿನ ಸಾಹಿತಿಗಳು-ಓದುಗರು ನಂಬಲ್ಲ ಬಿಡಿ. 2012ರಿಂದ ಗೆಳೆಯರ ಸಲಹೆಯಂತೆ ಇತರರ ಪುಸ್ತಕಗಳನ್ನು ಪ್ರಕಟಿಸಿ ನನ್ನಲ್ಲಿದ್ದ ಓದುಗ-ಬರಹಗಾರನಿಗೆ ಪ್ರಕಾಶನದ ಮೂಲಕ ಎಡಿಟರ್‌ ಕೆಲಸ ಕೊಟ್ಟು ಒಂದಷ್ಟು ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸುವುದಲ್ಲದೇ, ಹೊಸಬರಿಗೂ ಅವಕಾಶ ಕೊಡುವುದರ ಜೊತೆಗೆ ಅವರನ್ನೂ ಬೆಳಕಿದೆ ತಂದೆ. ಈ ಬಗ್ಗೆ ಬರೆದರೆ ಬೇರೆಯದೇ ಲೇಖನ ಬರೆಯಬೇಕು. ಒಟ್ಟಿನಲ್ಲಿ ಇದುವರೆವಿಗೂ 95 ಪುಸ್ತಕಗಳಾಗಿವೆ.

ಅದಿರಲಿ, ಪ್ರಕಟಿಸಿದ ಪುಸ್ತಕಗಳ ಒಂದಷ್ಟು ಪ್ರತಿಗಳು ಮಾರಾಟವಾಗಿ ಉಳಿದವುಗಳಲ್ಲಿ 300 ಪ್ರತಿಗಳನ್ನು ಸರಿಯಾಗಿ ಮೂರು ವರ್ಷದ ನಂತರ ಕೊಳ್ಳುತ್ತಿದ್ದ ಸಗಟು ಖರೀದಿ ಯೋಜನೆಗೆ ಕೊಡುತ್ತಿದ್ದೆ. 2014ರಲ್ಲಿ ಪ್ರಕಟವಾಗಿದ್ದ ನನ್ನ “ಉಘೇ ಉಘೇ” ಪುಸ್ತಕ ಆಯ್ಕೆ ಆಗದೇ ಇದ್ದಾಗ ಪ್ರಕಾಶನಕ್ಕೆ ವಿರಾಮ ನೀಡಲು ನಿರ್ಧರಿಸಿದ್ದೆ. ಆಗ ಪ್ರಕಾಶಕ ಮಿತ್ರರಾಗಿದ್ದ ಸೃಷ್ಟಿ ನಾಗೇಶ್‌ ನನ್ನ ನಿರ್ಧಾರವನ್ನು ಬದಲಿಸಿದರು. ಅಷ್ಟರಲ್ಲಾಗಲೇ ಪ್ರಜಾವಾಣಿಯ ʼವಾಚಕರ ವಾಣಿ”ಗೆ ಒಂದಷ್ಟು ಪತ್ರಗಳನ್ನು ಬರೆದು, ಸೋಷಿಯಲ್‌ ಮೀಡಿಯಾದಲ್ಲಿ ಒಂದಷ್ಟು ಪ್ರಶ್ನೆಗಳನ್ನು ಮಾಡಿ ಒಂದಷ್ಟು ಬದಲಾವಣೆಗೆ ಕಾರಣನಾಗಿದ್ದೆ. ಆದಕಾರಣ, ಬ್ಯಾಂಕ್‌ ಉದ್ಯೋಗದೊಂದಿಗೆ ಬಿಡುವಿನ ವೇಳೆಯಲ್ಲಿ ಮಾಡುವ ಕೆಲಸ ಅಲ್ಲವ ಅಂತ ಸುಮ್ಮನಾಗಿದ್ದೆ. ಪುಸ್ತಕ ಪ್ರಕಟಣೆಯ ಜೊತೆಗೆ ಮಾರಾಟ, ಮ್ಯಾಗಜೀನ್‌, ಬೆಂಗಳೂರಿನಲ್ಲಿ ಬಿಡುಗಡೆ ಅಂತೆಲ್ಲಾ ಬಹಳ ಹಣ ವಿನಿಯೋಗಿಸಿದ್ದೆ. ಹಲವು ವೈಯಕ್ತಿಕ ಕಾರಣಗಳಿಗೆ 2017ರಲ್ಲಿ ಬ್ಯಾಂಕ್‌ ಕೆಲಸ ಆದಷ್ಟು ಬೇಗ ಬಿಡಬೇಕು ಎಂದು ತೀರ್ಮಾನಿಸಿ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲು ಶುರುಮಾಡಿದೆ. ಒಂದೈದು ವರ್ಷ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ತದನಂತರ ಕೆಲಸ ಬಿಡುವ ಯೋಚನೆ ಸುಳಿದಿತ್ತು. ಆದರೆ, 2020ಕ್ಕೆ ಕರೋನ ಬಂದು ನಾ ಆಗಲೇ ಕೆಲಸ ಬಿಟ್ಟೆ. ಅದು ಬೇರೆ ಕತೆ.

ಅಲ್ಲಿಂದ ನಿಮಗೆ ಗೊತ್ತಲ್ಲ. ತದನಂತರ ಸಗಟು ಖರೀದಿಯ ಹಣ ಪುಸ್ತಕ ಸರಬರಾಜು ಆದ ವರ್ಷವೇ ಪಾವತಿ ಆಗುವುದು ನಿಂತಿತು. ಮತ್ತೂ ನಂತರ ನಾಲ್ಕು ವರ್ಷವಾದರೂ ಆಯ್ಕೆ ಪಟ್ಟಿ ಪ್ರಕಟವಾಗುವುದು ಸಮಸ್ಯೆಯಾಗ ತೊಡಗಿತು. ಈಗ 2021ರ ಪುಸ್ತಕಗಳ ಆಯ್ಕೆ ಪಟ್ಟಿ ಪ್ರಕಟವಾಗಿದ್ದರೂ ಆ ಪುಸ್ತಕಗಳ ಸಗಟು ಖರೀದಿ ಪ್ರಕ್ರಿಯೆ ಶುರುವಾಗಿಲ್ಲ. ಆಯ್ಕೆ ಪಟ್ಟಿಯಿಂದ ರಾಜ್ಯದ ಇತರ ಗ್ರಂಥಾಲಯಗಳಿಗೆ ಪುಸ್ತಕ ಸರಬರಾಜು ಮಾಡುವ ಅವಕಾಶವಿದ್ದರೂ ಅದು ಎಲ್ಲಾ ಲೇಖಕ-ಪ್ರಕಾಶಕರಿಗೆ ಮತ್ತು ಸಣ್ಣ ಪುಟ್ಟ ಪ್ರಕಾಶಕರಿಗೆ ಕಷ್ಟ. ಇತ್ತೀಚಿಗೆ 2022ರ ಆಯ್ಕೆ ಪಟ್ಟಿ ಕೂಡ ಬಿಡುಗಡೆಯಾಗಿ, ಇನ್ನೇನು ಅಂತಿಮ ಪಟ್ಟಿ ಹೊರಬರಲಿದೆ. ಆದರೆ, ಸಗಟು ಖರೀದಿಯ ಯೋಜನೆ ಏನಾಯಿತು ಎಂಬುದು ಈಗ ಬಹು ಚರ್ಚೆಯ ವಿಷಯವಾಗಿದೆ.

ಈ ಕಾರಣದಿಂದ ಇರುವ ಎರಡು ಪ್ರಕಾಶನ ಸಂಘಗಳು ತಮ್ಮದೇ ರೀತಿಯಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ರಾಜ್ಯದ ಲೇಖಕರ-ಪ್ರಕಾಶಕರ-ಮುದ್ರಕರ ಒಕ್ಕೂಟವು ಪ್ರತಿಭಟನೆ ಮಾಡಲು ಪೂರ್ವಭಾವಿ ಸಭೆ ನಡೆಸುತ್ತಿದೆ. ಎಲ್ಲರೂ ಭಾಗವಹಿಸಿ. ವಿವರಗಳು ಕೆಳಗೆ ಇದೆ.

ಇದೇ ಸಮಯದಲ್ಲಿ ಮುಂದೇನಾಗುತ್ತಾ ಗೊತ್ತಿಲ್ಲ. ಆದರೆ, ನಾಡಿನ ಸಾಹಿತಿಗಳು, ಪ್ರಕಾಶಕರುಗಳು ತಮ್ಮ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಲು ಇದಕ್ಕಿಂತ ಸೂಕ್ತವಾದ ಸಮಯ ಮತ್ತೊಂದಿಲ್ಲ.

  • ಗುಬ್ಬಚ್ಚಿ ಸತೀಶ್.

1 thought on “ಸ್ಥಗಿತವಾಯಿತೇ ಸಗಟು ಖರೀದಿ!?”

Leave a Comment

Your email address will not be published. Required fields are marked *

Scroll to Top