
ಒಂದು ದಿನ ಬೆಳಿಗ್ಗೆ ಅಂಗಡಿ ತೆರೆಯುತ್ತಿದ್ದ ಒಬ್ಬ ವ್ಯಾಪಾರಿಯ ಬಳಿ ಒಬ್ಬ ಸ್ತ್ರೀ ಬಂದು ಹೇಳಿದರು :
“ಸಾರ್, ಇಲ್ಲಿದೆ ನಿಮ್ಮ ಹತ್ತು ರೂಪಾಯಿ.”
ವ್ಯಾಪಾರಿ ಆಶ್ಚರ್ಯದಿಂದ ಕೇಳಿದರು :
“ಹತ್ತು ರೂಪಾಯಿ? ನಾನು ನಿಮಗೆ ಯಾವಾಗ ಕೊಟ್ಟೆ?”
ಆಕೆ ಹೇಳಿದರು : “ನಿನ್ನೆ ಸಂಜೆ ನಾನು ₹100 ಕೊಟ್ಟು ವಸ್ತುಗಳನ್ನು ಖರೀದಿಸಿದೆ. ಅದರ ಮೌಲ್ಯ ₹70 ಆಗಿತ್ತು. ನೀವು ವಾಪಸ್ ₹30 ಕೊಡಬೇಕಾಗಿತ್ತು, ಆದರೆ ತಪ್ಪಾಗಿ ₹40 ಕೊಟ್ಟಿದ್ದೀರಿ. ಅದಕ್ಕೇ ಈ ಹತ್ತು ರೂಪಾಯಿ ಹಿಂತಿರುಗಿಸಲು ಬಂದಿದ್ದೇನೆ.”
ವ್ಯಾಪಾರಿ ಆ ಹತ್ತು ರೂಪಾಯಿಯನ್ನು ಗೌರವದಿಂದ ಕಣ್ಣಿಗೆ ಒತ್ತಿಕೊಂಡು ನಗದುಪೆಟ್ಟಿಗೆಯಲ್ಲಿ ಇಟ್ಟರು.
ನಂತರ ಕೇಳಿದರು : “ತಂಗಿ, ವಸ್ತು ಖರೀದಿಸುವಾಗ ₹5ಕ್ಕೂ ಬೆಲೆ ಕಡಿತಕ್ಕೆ ಕೇಳಿದ್ದೀರಿ, ಈಗ ಈ ₹10 ಹಿಂತಿರುಗಿಸಲು ಇಷ್ಟು ದೂರ ಬಂದಿದ್ದೀರಿ, ಏಕೆ?”
ಆಕೆ ಶಾಂತವಾಗಿ ಹೇಳಿದರು : “ಬೆಲೆ ಕಡಿತಕ್ಕೆ ಕೇಳುವುದು ನನ್ನ ಹಕ್ಕು. ಆದರೆ ಒಮ್ಮೆ ಬೆಲೆ ನಿಗದಿಯಾದ ಮೇಲೆ ಕಡಿಮೆ ಪಾವತಿಸುವುದು ಪಾಪ.”
ವ್ಯಾಪಾರಿ ಹೇಳಿದರು : “ಆದರೆ ನೀವು ಕಡಿಮೆ ಪಾವತಿಸಿಲ್ಲ. ನನ್ನ ತಪ್ಪಿನಿಂದಲೇ ಹತ್ತು ರೂಪಾಯಿ ಹೆಚ್ಚು ಸಿಕ್ಕಿವೆ. ನೀವು ಇಟ್ಟುಕೊಂಡಿದ್ದರೂ ನನಗೆ ಅಷ್ಟೇನು ವ್ಯತ್ಯಾಸವಾಗುತ್ತಿರಲಿಲ್ಲ.”

ಅದಕ್ಕೆ ಆಕೆ, “ನಿಮಗೆ ವ್ಯತ್ಯಾಸವಾಗದಿರಬಹುದು, ಆದರೆ ಅದು ನನ್ನ ಮನಸ್ಸಿಗೆ ತೂಕವಾಗುತ್ತದೆ. ಯಾರದೋ ಹಣವನ್ನು ತಿಳಿದುಕೊಂಡೇ ಇಟ್ಟುಕೊಳ್ಳುವುದು ಪಾಪ. ನಿನ್ನೆ ರಾತ್ರಿಯೇ ಬಂದಿದ್ದೆ. ಆದರೆ ನಿಮ್ಮ ಅಂಗಡಿ ಮುಚ್ಚಿತ್ತು.”
ವ್ಯಾಪಾರಿ ಕುತೂಹಲದಿಂದ ಕೇಳಿದರು : “ನೀವು ಎಲ್ಲಿರುತ್ತೀರಿ ?”
“ಸೆಕ್ಟರ್ 8,” ಅಂದರು ಆಕೆ.
ವ್ಯಾಪಾರಿ ಬೆಚ್ಚಿಬಿದ್ದು, “ಏನು? ಹತ್ತು ರೂಪಾಯಿ ಹಿಂತಿರುಗಿಸಲು ಏಳು ಕಿಲೋಮೀಟರ್ ದೂರ ಬಂದಿದ್ದೀರಾ? ಅದು ಕೂಡ ಎರಡನೇ ಬಾರಿ?”
ಆಕೆ ನಗುತ್ತಾ, “ಹೌದು, ಎರಡನೇ ಸಾರಿ. ಮನಸ್ಸಿಗೆ ಶಾಂತಿ ಬೇಕಾದರೆ ಇಂತಹದ್ದೇ ಕೆಲಸ ಮಾಡಬೇಕು. ನನ್ನ ಗಂಡ ಈಗಿಲ್ಲ, ಆದರೆ ಅವರು ನನಗೆ ಒಂದು ಮಾತು ಕಲಿಸಿದ್ದರು”. ಅದೆಂದರೆ, “ಯಾರದ್ದೋ ಒಂದು ಪೈಸೆಯನ್ನೂ ಅಕ್ರಮವಾಗಿ ತೆಗೆದುಕೊಳ್ಳಬೇಡ. ಯಾಕೆಂದರೆ ಮನುಷ್ಯ ಮೌನವಾಗಬಹುದು. ಆದರೆ ಮೇಲಿನವನು ಯಾವಾಗಲಾದರೂ ಲೆಕ್ಕ ಕೇಳಬಹುದು. ಆ ಶಿಕ್ಷೆ ನನ್ನ ಮಕ್ಕಳಿಗೆ ಬೀಳಬಾರದು.”
ಆಕೆ ಹೀಗೆ ಹೇಳಿ ಹೊರಟು ಹೋದಳು.
ವ್ಯಾಪಾರಿಯ ಮನಸ್ಸು ನಡುಗಿತು. ತಕ್ಷಣ ನಗದುಪೆಟ್ಟಿಗೆಯಿಂದ ₹300 ತೆಗೆದು, ಸ್ಕೂಟರ್‌ನಲ್ಲಿ ಹೊರಟು, ಸಹಾಯಕನಿಗೆ ಹೇಳಿದರು : “ಅಂಗಡಿಯನ್ನು ನೋಡಿಕೋ, ನಾನು ಈಗ ಬಂದು ಬಿಡುತ್ತೇನೆ.”

ಅವರು ಇನ್ನೊಂದು ಅಂಗಡಿಗೆ ಹೋಗಿ ಪ್ರಕಾಶ್ ಎಂಬ ವ್ಯಾಪಾರಿಗೆ ₹300 ಕೊಟ್ಟು ಹೇಳಿದರು : “ಇದು ನಿನ್ನದು. ನಿನ್ನೆ ಸರಕು ಕೊಡುವಾಗ ತಪ್ಪಾಗಿ ₹300 ಹೆಚ್ಚಾಗಿ ತೆಗೆದುಕೊಂಡೆ.”
ಪ್ರಕಾಶ್ ನಗುತ್ತಾ ಹೇಳಿದರು : “ಅಯ್ಯೋ! ಅದನ್ನು ನಾಳೆ ನೀಡಿದ್ದರೆ ಸಾಕಿತ್ತು. ಈಗಲೇ ಬರುವ ಅವಶ್ಯಕತೆ ಏನು?”
ವ್ಯಾಪಾರಿ ಹೇಳಿದರು : “ನಾಳೆ ನಾನು ಇರದಿದ್ದರೆ? ನಿನ್ನದಾದ ಹಣವನ್ನು ನಾನು ಉಳಿಸಿಕೊಂಡಿರುವೆನಲ್ಲಾ! ಮೇಲಿನವನು ಯಾವಾಗ ಲೆಕ್ಕ ಕೇಳುತ್ತಾನೋ ಯಾರಿಗೂ ಗೊತ್ತಿಲ್ಲ. ಅದರ ಶಿಕ್ಷೆ ನನ್ನ ಮಕ್ಕಳಿಗೆ ಬೀಳಬಾರದು.”
ಈ ಮಾತುಗಳು ಪ್ರಕಾಶ್‌ರ ಮನಸ್ಸು ಕದಡಿದವು.
ಹತ್ತು ವರ್ಷಗಳ ಹಿಂದೆ ಅವರು ತಮ್ಮ ಸ್ನೇಹಿತನಿಂದ ₹3 ಲಕ್ಷ ಸಾಲ ಪಡೆದಿದ್ದರು. ಆದರೆ ಅದೇ ದಿನದೊಳಗೆ ಆ ಸ್ನೇಹಿತ ವಿಧಿವಶನಾದ. ಆ ಕುಟುಂಬಕ್ಕೆ ವಿಷಯವೇ ಗೊತ್ತಿರಲಿಲ್ಲ. ಆದ್ದರಿಂದ ಯಾರೂ ಹಣ ಕೇಳಲಿಲ್ಲ. ಪ್ರಕಾಶ್ ದುರಾಶೆಯಿಂದ ಅದನ್ನು ಮರೆಮಾಡಿದ್ದರು.
ಆ ಸ್ನೇಹಿತನ ಪತ್ನಿ ಇಂದಿಗೂ ಬಡತನದಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದಳು. ಆದರೆ ವ್ಯಾಪಾರಿಯ ಆ ಮಾತು, “ಮೇಲಿನವನು ಯಾವಾಗಲಾದರೂ ಲೆಕ್ಕ ಕೇಳಬಹುದು; ಶಿಕ್ಷೆ ಮಕ್ಕಳಿಗೆ ಬೀಳಬಹುದು” ಪ್ರಕಾಶ್‌ನ ಮನಸ್ಸಿನಲ್ಲಿ ಧ್ವನಿಸುತ್ತಲೇ ಇತ್ತು.
ಮೂರು ದಿನಗಳ ಅಶಾಂತಿಯ ನಂತರ, ಆತ್ಮಜಾಗೃತಿ ಎಚ್ಚರಗೊಂಡಿತು. ಅವರು ಬ್ಯಾಂಕಿನಿಂದ ₹3 ಲಕ್ಷ ತೆಗೆದುಕೊಂಡು, ಸ್ನೇಹಿತನ ವಿಧವೆಯ ಮನೆಗೆ ಹೋದರು. ಅವರು ಪಾದಸ್ಪರ್ಶ ಮಾಡುತ್ತಾ ₹ 3 ಲಕ್ಷ ನೀಡಿ ಹೇಳಿದರು : “ಅಕ್ಕ, ಇದು ನಿಮ್ಮ ಗಂಡನ ಹಣ. ನನಗೆ ಮನಶಾಂತಿ ಬೇಕಿತ್ತು.”

ಆ ವಿಧವೆ ಕಣ್ಣೀರು ಹಾಕುತ್ತಾ ಆಶೀರ್ವದಿಸಿದರು. ಆ ಸ್ತ್ರೀ ಯಾರೆಂದು ಗೊತ್ತಾ?
ಆಕೆಯೇ ಹತ್ತು ರೂಪಾಯಿ ಹಿಂತಿರುಗಿಸಲು ಎರಡು ಬಾರಿ ಬಂದ ಮಹಿಳೆ!
ಯಾರು ಯಾರಿಗೂ ಮೋಸಮಾಡಬೇಡಿ. ಧರ್ಮ ಬಿಟ್ಟರೂ ಕರ್ಮ ಬಿಡುವುದಿಲ್ಲ. ನಮ್ಮ ಲೆಕ್ಕ ಭಗವಂತನ ಬಳಿ ಇರುತ್ತದೆ.

(ಸಂಗ್ರಹ)
