
ಗಂಧದಗುಡಿಯ ನಟ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು “ಗುಮ್ಮಡಿ ನರಸಯ್ಯ” ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ಧಿ ಮೊನ್ನೆ ಬಲಿಪಾಡ್ಯಮಿಯಂದು ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾದ ಬಳಿಕ ವೈರಲ್ ಆಗಿದೆ. ನಟ ಶಿವಣ್ಣ ಅಭಿಮಾನಿಗಳು ತೀವ್ರ ಕುತೂಹಲದಿಂದ ಯಾರಿದು ಈ ಗುಮ್ಮಡಿ ನರಸಯ್ಯ ಎಂದು ಮಾಹಿತಿಗಾಗಿ ಹುಡುಕಾಡಿದ್ದಾರೆ.
ನಟ ಶಿವಣ್ಣ ಅವರು ಇದೇ ಮೊದಲ ಬಾರಿಗೆ ರಾಜಕಾರಣಿಯೊಬ್ಬರ ಜೀವನಗಾಥೆ ಆಧರಿಸಿದ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ವಿಶೇಷವಾಗಿದೆ. “ಗುಮ್ಮಡಿ ನರಸಯ್ಯ” ಎಂಬ ಈ ಸಿನಿಮಾದಲ್ಲಿ ಶಿವಣ್ಣನವರು ನರಸಯ್ಯನಾಗಿ ಅಭಿನಯಿಸಲಿದ್ದಾರೆ.

ಗುಮ್ಮಡಿ ನರಸಯ್ಯನವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯೂ ಡೆಮಾಕ್ರಸಿ (ಸಿಪಿಐ)ಯ ಸದಸ್ಯರಾಗಿದ್ದು ತೆಲಂಗಾಣದ ಯೆಲ್ಲಾಂಡು ವಿಧಾನಸಭೆಯ ಶಾಸಕರಾಗಿ ಐದು ಬಾರಿ 1983-1994 ಹಾಗು 1999-2009ರ ಅವಧಿಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿ ಜನಪರ ಕೆಲಸಗಳಿಂದ ಹೆಸರುವಾಸಿಯಾಗಿದ್ದಾರೆ. ಅತ್ಯಂತ ಸರಳ ಜೀವನದ ಇವರು ಈಗಲೂ ಹಳೆಯ ಮನೆಯಲ್ಲಿಯೇ ವಾಸಮಾಡುತ್ತಾ, ಸೈಕಲ್ಲಿನಲ್ಲಿಯೇ ಓಡಾಡುತ್ತಾ, ಜನರ ಕಷ್ಟಗಳಿಗೆ ಹೋರಾಡುತ್ತಾ, ರೈತರ ನೆರವಿಗೆ ಧಾವಿಸುತ್ತಾ ʼಪ್ರಜಾಲ ಮನಿಷಿ (ಜನರ ಮನುಷ್ಯ)ʼ ಎಂದೇ ಖ್ಯಾತರಾಗಿದ್ದಾರೆ.
ಇಂತಹ ಸರಳ ಹೋರಾಟಗಾರ ರಾಜಕಾರಣಿಯ ಜೀವನವನ್ನು ಆಧರಿಸಿದ ಚಿತ್ರವೇ “ಗುಮ್ಮಡಿ ನರಸಯ್ಯ” ಎಂಬ ಮೂಲ ತೆಲುಗು ಚಿತ್ರ. ಈ ಪಾತ್ರಕ್ಕೆ ಶಿವಣ್ಣನವರು ಆಯ್ಕೆಯಾಗಿದ್ದು ಅಚ್ಚರಿಯ ವಿಷಯವಾದರೂ , ಸೂಕ್ತವಾದ ಆಯ್ಕೆ ಎಂಬ ಮಾತುಗಳು ಸಿನಿಮಾರಂಗದಲ್ಲಿ ಕೇಳಿಬರುತ್ತಿವೆ. ಈ ಚಿತ್ರದ ನಿರ್ದೇಶಕರು ಪರಮೇಶ್ವರ ಹಿವ್ರಲೆ ಆಗಿದ್ದು, ಮೂಲ ತೆಲುಗಿನ ಚಿತ್ರವಾದರೂ ಕನ್ನಡ ಒಳಗೊಂಡಂತೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿದೆ.

ಮೊದಲ ಬಾರಿಗೆ ತೆಲುಗಿನ ಚಿತ್ರವೊಂದರಲ್ಲಿ ಕನ್ನಡದ ನಟ ಶಿವಣ್ಣನವರು ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
- ಗುಬ್ಬಚ್ಚಿ ಸತೀಶ್.
