(ತುಮಕೂರಿನಲ್ಲಿ ವಾಸವಿರುವ ಖ್ಯಾತ ಸಾಹಿತಿಗಳು ಮತ್ತು ಪ್ರಕಾಶಕರಾದ ಶ್ರೀ ಎಂ.ವಿ. ಶಂಕರಾನಂದ ಅವರು ಬರೆಯುತ್ತಿರುವ ಶ್ರೀಕೃಷ್ಣನ ಕುರಿತಾದ “ಕೃಷ್ಣ – ಭಕ್ತರ ಆಪ್ತ ಬಂಧು” ಭಕ್ತಿಪೂರ್ವಕ ಅಪರೂಪದ ಕಾದಂಬರಿಯ ನಾಲ್ಕನೇಯ ಅಧ್ಯಾಯ)
ಕಾಳಿಂದೀ ನದಿಯ ತೀರದಲ್ಲಿ ದೊಡ್ಡದಾದ ಗೋಕುಲವೆಂಬ ಗೊಲ್ಲರಹಳ್ಳಿ ಇತ್ತು. ಹಸು-ಕರುಗಳಿಂದ, ಎತ್ತು-ಹೋರಿಗಳಿಂದ, ಬಗೆಬಗೆಯಾದ ಪಶುಕಾರ್ಯ, ಗೃಹಕಾರ್ಯಗಳಲ್ಲಿ ಮಗ್ನರಾಗಿರುವ ಗೋಪಗೋಪಿಯರಿಂದ, ಉತ್ಸಾಹದಿಂದ ಓಡಾಡಿ ಕೊಂಡಿರುವ ಬಾಲಬಾಲಿಕೆಯರಿಂದ ಆ ಹಳ್ಳಿ ಜೀವಕಳೆಯಿಂದ ಕಳಕಳಿಸಿಕೊಂಡಿದ್ದಿತು.
ನಂದನು ಆ ಗೋಕುಲದಲ್ಲಿನ ನಾಯಕನಾಗಿದ್ದನು. ಎಲ್ಲರಿಗೂ ಅವನ ಮೇಲೆ ತುಂಬ ಗೌರವ. ಅವನು ಹೆತ್ತಮಗುವಿನೊಂದಿಗೆ ಬಂದ ಕೂಡಲೇ ವೃದ್ಧರಲ್ಲಿ ಮುಖ್ಯರಾದವರು ಅವನಿಗೆ ಇದಿರಾಗಿ ಹೋಗಿ ಅಭಿನಂದನೆ ಮಾಡಿದರು.
ನಂದನು ಕೂಡಾ ಅವರೊಂದಿಗೆ ಕುಶಲಪ್ರಶ್ನೆಗಳನ್ನು ಮಾಡಿ, ಎಲ್ಲರನ್ನೂ ಮಾತಾಡಿಸಿ, ಅವರೆಲ್ಲರೊಂದಿಗೆ ಗೋಕುಲವನ್ನು ಸೇರಿದನು.
ವೃದ್ಧ ಗೋಪಿಕೆಯರು ನಂದನ ಮನೆಗೆ ಬಂದು ಯಶೋದೆಗೂ ಅವಳು ಹಡೆದ ಮಗನಿಗೂ ದೃಷ್ಟಿ ಸುತ್ತಿ ನಿವಾಳಿಸಿ, ಕಾಣಿಕೆಗಳನ್ನು ಕೊಟ್ಟು ವಿನೋದದ ಹಾಡುಗಳನ್ನೂ, ಮಂಗಳಗೀತಗಳನ್ನೂ ಹಾಡಿ ಉತ್ಸವ ನಡೆಸಿದರು. ರೋಹಿಣಿಯೂ ಬಂದಳು. ನಂದನು ಅವಳಿಗೂ ಗೌರವ ಮರ್ಯಾದೆಗಳನ್ನು ಮಾಡಿದನು.
ಗೋಕುಲದ ಗೋಪಿಕೆಯರಿಗೆ ಕೃಷ್ಣನನ್ನು ನೋಡುವುದೆಂದರೆ ಬಹಳ ಮುದ್ದು. ಬಹಳ ಸಂತೋಷ. ಅವರ ನಡುವೆ ಕೃಷ್ಣನು ಬೆಳೆಯುತ್ತ ಬರುತ್ತಿದ್ದನು.
ಅತ್ತ ಕಂಸನು ಸುಮ್ಮನಿರಲಿಲ್ಲ. ತನ್ನ ಮರಣಕ್ಕೆ ಏನೋ ತಂತ್ರ ನಡೆದಿದೆ ಎಂಬ ಭಯದಿಂದ, ಅನುಮಾನದಿಂದ ಶಿಶುಗಳನ್ನು ಕೊಲ್ಲಿಸಲು ಅನೇಕ ಮಂದಿ ರಾಕ್ಷಸರನ್ನು ನಿಯೋಜಿಸಿದ್ದನು. ಪೂತನಿ ಎಂಬವಳು ಅವರೊಳಗೆಲ್ಲಾ ಹೆಚ್ಚಿನ ಹಂತಕಿಯಾಗಿದ್ದಳು.
ಮಹಾ ಮಾಯಾವಿನಿಯಾದ ಆ ಪೂತನಿ, ತನ್ನ ಭಯಂಕರಾಕಾರವನ್ನು ತೋರಿಸದೆ, ಸಾಧಾರಣ ಸ್ತ್ರೀಯಂತೆ ರಾತ್ರಿಯ ಹೊತ್ತಿನಲ್ಲಿ ಹಸುಮಕ್ಕಳನ್ನು ಹುಡುಕುತ್ತಾ ಬಂದು, ನಂದಗೋಪನ ಮನೆಯ ಮುಂದೆ ಬಂಡಿಯ ಅಡ್ಡದಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಕೃಷ್ಣನನ್ನು ನೋಡಿ ಫಕ್ಕನೆ ನಿಂತಳು. ಅದು ಸಾಧಾರಣ ಮಗುವಿನಂತೆ ಕಾಣಲಿಲ್ಲ. ಏನೋ ಒಂದು ಹೊಸ ಆಕರ್ಷಣೆಯಿಂದ ಕೂಡಿತ್ತು.
ಆ ಮಗು ದಿವ್ಯತೇಜಸ್ಸಿನಿಂದ ಅದ್ಭುತವೆಂಬಂತೆ ಕಾಣುತ್ತಿದ್ದಿತು. ಎಲ್ಲಾ ಮಗುಗಳಂತೆ ಆ ಮಗು ಇಲ್ಲವೆಂದು ಪೂತನಿ ತಿಳಿದಳು. ಒಂದು ವೇಳೆ ಕಂಸನನ್ನು ಕೊಲ್ಲಲು ಹುಟ್ಟಿದವನು ಇವನೇ ಆಗಿದ್ದರೆ! ಹೌದು! ಬೆಳೆದರೆ ಇವನು ಕಂಸನನ್ನು ಮೀರಿಸುವವನೇ!
ಹೀಗೆ ಅಂದುಕೊಳ್ಳುತ್ತಿರುವಾಗಲೇ ಪೂತನಿಗೆ ಕೋಪವೂ ಅದರ ಜೊತೆಗೆ ಆವೇಶವೂ ಬಂದುಬಿಟ್ಟಿತು. ಆ ರಾಕ್ಷಸಿ ಕಟಕಟನೆ ಹಲ್ಲು ಕಡಿದುಕೊಂಡಳು. ಅವಳ ಉರಿಗಣ್ಣುಗಳಿಂದ ಕಿಡಿಗಳು ಹಾರಿದವು. ಹುಬ್ಬುಗಳನ್ನು ಗಂಟುಹಾಕಿಕೊಂಡಳು. ರೆಪ್ಪೆಗಳು ಸುರುಟಿದವು. ಜೋರು ಜೋರಾಗಿ ಶ್ವಾಸವೆದ್ದಿತು.
ಅವಳು ಆ ಕಂದನನ್ನು ತಾಯಿಯ ಪಕ್ಕದಿಂದ ಎತ್ತಿಕೊಂಡು ಮರೆಗೆ ಬಂದು ವಿಷ ಹಚ್ಚಿದ್ದ ತನ್ನ ಮೊಲೆಯನ್ನು ಅವನ ಬಾಯಿಯೊಳಗೆ ಇಕ್ಕಿದಳು.

ಕೃಷ್ಣನು ಪೂತನಿಯ ಮೊಲೆಯನ್ನು ಬಿಡದೆ ಗಟ್ಟಿಯಾಗಿ ಕಚ್ಚಿಕೊಂಡು ಮಹಾಬಲದಿಂದ ಹಾಲಿನೊಂದಿಗೆ ಅವಳ ಶರೀರದಲ್ಲಿನ ಪ್ರಾಣವನ್ನೂ ಹೀರಿಬಿಟ್ಟನು.
ನಿಜಕ್ಕೂ ಕೃಷ್ಣನು ಪೂತನಿಯನ್ನು ಮೀರಿಸುವವನು! ಆದುದರಿಂದ ಪೂತನಿ ಅತಿವಿಕಾರವಾಗಿ ಆರ್ತನಾದ ಮಾಡಿ ಅಲ್ಲಿಯೇ ನಡುಗಿ ನಿಜರೂಪದಿಂದ ಬಿದ್ದುಬಿಟ್ಟಳು.
ಅವಳ ಭಯಂಕರವಾದ ಆರ್ತನಾದದ ಕೆಟ್ಟ ಆರ್ಭಟವನ್ನು ಕೇಳಿ ಗುಂಪಲ್ಲಿದ್ದ ಗೋಪಕರೆಲ್ಲ ತಟಕ್ಕನೆ ಹಾರಿ ಎದ್ದು ಗಡಿಬಿಡಿಯಿಂದ ಆಚೀಚೆ ಓಡಿದರು.
ಕೂಡಲೇ ಯಶೋದೆಗೆ ಎಚ್ಚರಾಗಿತ್ತು. ಎದ್ದ ಕೂಡಲೇ ಪಕ್ಕದಲ್ಲಿ ಮಗನು ಕಾಣದೆ ಹೋಗಲು ಹೆದರಿ ನಂದನನ್ನು ಕೂಗಿ ಕರೆದಳು.
ನಂದನು ಗಾಬರಿಯಿಂದೆದ್ದು ಓಡಿ ಬರುವಷ್ಟರಲ್ಲಿ ಉಳಿದ ಗೋಪಕರೂ ಅಲ್ಲಿಗೆ ಬಂದುಬಿಟ್ಟರು. ಹಾಗೆ ಬಂದವರಿಗೆ ಭಯಂಕರವಾಗಿ ಬಿದ್ದಿದ್ದ ಪೂತನಿಯ ಕಳೇಬರವು ಕಂಡಿತು. ಅದರ ಎದೆಯ ಮೇಲೆ ಹಕ್ಕಿಯಂತೆ ಎರಗಿದ್ದ ಬಾಲಕೃಷ್ಣನು ಮೊಲೆ ಕಚ್ಚಿಕೊಂಡಿರುವುದೂ ಕಂಡಿತು.
ಯಶೋದಾನಂದರು ತಮ್ಮ ಮಗನನ್ನು ನೋಡಿದ ಕೂಡಲೇ, “ಅಯ್ಯೋ ನಮ್ಮಪ್ಪಾ!” ಎಂದು ಕೂಗಿ ಮಗನನ್ನು ಬಾಚಿ ಎತ್ತಿ ಎದೆಗೊತ್ತಿಕೊಂಡರು.
“ಇದೇನಿದು? ಕ್ರೂರಳಾದ ಈ ರಾಕ್ಷಸಿ ಇಲ್ಲಿಗೆ ಹೇಗೆ ಬಂದಳು? ಇವಳು ಹಸುಕಂದನನ್ನು ಹೀಗೆ ಮಾಡುತ್ತಿದ್ದರೆ ನೀನು ಹೇಗೆ ನೋಡುತ್ತಾ ಸುಮ್ಮನಿದ್ದೀ?” ಎಂದು ನಂದನು ಕೋಪದಿಂದ ಹೆಂಡತಿಯನ್ನು ಕೇಳಿದನು.
“ಮಗುವಿಗೆ ಹೊಟ್ಟೆ ತುಂಬ ಹಾಲು ಕುಡಿಸಿ ನಿದ್ದೆ ಮಾಡಿಸಿದೆನು. ದೀವಿಟಿ ಬೆಳಕಿನಲ್ಲಿ ಬಹಳ ಹೊತ್ತಿನವರೆಗೆ ಎಚ್ಚರದಲ್ಲೇ ಇದ್ದು ಸ್ವಲ್ಪ ಕಣ್ಣು ಮುಚ್ಚಿಕೊಂಡು ಹೋಯಿತು. ಅಷ್ಟೇ. ಕಣ್ಣು ಮುಚ್ಚಿ ಹೆಚ್ಚು ಹೊತ್ತೇನೂ ಆಗಲಿಲ್ಲ. ಈ ಹಾಳು ರಾಕ್ಷಸಿ ಹೇಗೆ ಬಂದಳೋ? ಮಗುವನ್ನು ಏನು ಮಾಡಬೇಕೆಂದಿದ್ದಳೋ, ಮತ್ತೆ ಹೇಗೆ ಹೀಗೆ ಬಿದ್ದಳೋ ಏನು ಮಾಯೆಯೋ ಒಂದೂ ತಿಳಿಯದು. ಅಬ್ಬಬ್ಬಾ! ಇಂಥಾ ಕೆಟ್ಟ ರಾಕ್ಷಸಿಯ ಕೈಗೆ ಸಿಕ್ಕಿ ಕೂಡಾ ನಮ್ಮ ಮಗುವಿಗೆ ಏನೂ ಆಗದಿರುವುದು ಯಾವ ಜನ್ಮದ ಪುಣ್ಯವೋ! ನಮ್ಮ ಕಂದನಿಗೆ ಸಾವಿರ ವರ್ಷ ಆಯುಸ್ಸು!” ಎಂದು ಗದ್ಗದಿತಳಾಗಿ ಹೇಳಿದಳು ಯಶೋದೆ.
ಕೃಷ್ಣನಿಗೆ ದೊಡ್ಡ ಗಂಡವು ತಪ್ಪಿತೆಂದು ಗೋಪಕರೆಲ್ಲಾ ಸಂತೋಷಪಟ್ಟು, ಪೂತನಿಯ ಕಳೇಬರವನ್ನು ದೂರ ಎಳೆದುಕೊಂಡು ಹೋದರು.
ನಂದನು ತನ್ನ ಮಗನನ್ನು ಎತ್ತಿಕೊಂಡು ದೃಷ್ಟಿ ತೆಗೆಯಿಸಿದನು. ಹಿರಿಯರು ಏನೇನೋ ಮಂತ್ರಗಳನ್ನು ಹೇಳಿ ಆಶೀರ್ವಾದ ಮಾಡಿದರು.
ದಿನಗಳು ಕಳೆದಂತೆ ಕೃಷ್ಣನು ಕ್ರಮವಾಗಿ ಬೆಳೆಯುತ್ತಿದ್ದನು. ಅವನ ಕಳೆಯೂ ತೇಜಸ್ಸೂ ಬೆಳೆಯುತ್ತಿದ್ದಿತು.
ಒಂದು ದಿನ ವಸುದೇವನು ತನ್ನ ಪುರೋಹಿತನಾದ ಗರ್ಗನೆಂಬ ಬ್ರಾಹ್ಮಣನನ್ನು ಅತಿ ರಹಸ್ಯವಾಗಿ ಗೋಕುಲಕ್ಕೆ ಕಳುಹಿಸಿದನು. ಅವನು ಒಂದು ಶುಭ ಮುಹೂರ್ತದಲ್ಲಿ ಬಂದು ರೋಹಿಣಿಯ ಮಗನಿಗೂ, ಯಶೋಧೆಯ ಮಗನಿಗೂ ವಿಧಿವತ್ತಾಗಿ ಜಾತ ಕರ್ಮಗಳನ್ನು ಮಾಡಿ, ರೋಹಿಣಿಯ ಮಗನಿಗೆ ಬಲರಾಮನೆಂದೂ, ಯಶೋಧೆಯ ಮಗನಿಗೆ ಕೃಷ್ಣನೆಂದೂ ಹೆಸರಿಟ್ಟು, ಅಲ್ಲಿಗೆ ಎಷ್ಟು ರಹಸ್ಯವಾಗಿ ಬಂದನೋ ಅಷ್ಟೇ ರಹಸ್ಯವಾಗಿ ಹಿಂದಿರುಗಿ ಹೋಗಿಬಿಟ್ಟನು.
ನಂದನ ಆನಂದಕ್ಕೆ ಮೇರೆ ಇರಲಿಲ್ಲ. ಅವನು ಬ್ರಾಹ್ಮಣರನ್ನು ಕರೆಯಿಸಿ, ಅವರಿಗೆ ರಸಭರಿತವಾದ ಭೋಜನ ಮಾಡಿಸಿ ಗೋವುಗಳನ್ನು, ವಸ್ತ್ರಗಳನ್ನೂ ದಾನಮಾಡಿದನು. ದೊಡ್ಡ ಉತ್ಸವ ನಡೆಸಿದನು. ಗೋಕುಲದಲ್ಲಿರುವ ಬಂಧುಗಳಿಗೆಲ್ಲಾ ನಂದನು ಹೊಸ ವಸ್ತ್ರಗಳನ್ನು ಹಂಚಿದನು. ಗೋಪೂಜೆ ಮಾಡಿದನು. ಗೋದಳಿಗಳನ್ನು ಅಲಂಕಾರ ಮಾಡಿಸಿದನು.
ಗೋಪಿಕಾ ಸ್ತ್ರೀಯರೆಲ್ಲಾ ಯಶೋದೆಯ ಹತ್ತಿರ ಬಂದು ಎಲ್ಲ ಬಗೆಯಲ್ಲಿಯೂ ಅತ್ಯುತ್ತಮನಾದ ಪುತ್ರನನ್ನು ಹಡೆದುದಕ್ಕೆ ಅಭಿನಂದನೆ ಮಾಡಿದರು. ಗೋಪಕರು ಕೂಡಾ ನಂದನನ್ನು ಅಭಿನಂದಿಸಿ ಕೊಂಡಾಡಿದರು.
ಅತ್ತ ಮಥುರಾ ನಗರದಲ್ಲಿ, ಕಂಸನಿಗೆ ಪೂತನಿಗೆ ಬಂದ ಗತಿ ತಿಳಿಯಿತು. ಅವನ ಸೇವಕರಾದ ರಾಕ್ಷಸರು ನಡೆದುದನ್ನೆಲ್ಲಾ ಅವನೊಂದಿಗೆ ಹೇಳಿದರು. ಅದನ್ನೆಲ್ಲಾ ಕೇಳಿದ ಮೇಲೆ ನಂದಗೋಪನ ಮಗನ ಮೇಲೆಯೇ ಕಂಸನ ಅನುಮಾನವು ಕೇಂದ್ರೀಕೃತವಾಯಿತು. ಪೂತನಿಯಂಥವಳನ್ನು ಕೊಂದ ಹಸುಕಂದನನ್ನು ನೆನೆದು ಅವನ ಶರೀರವು ಜುಮುಗುಟ್ಟಿ ಕಂಪಿಸಿತು. ಆದುದರಿಂದ ಅವನು ತನ್ನ ಸೇವಕರಾದ ಅನೇಕ ಮಾಯಾವಿಗಳಾದ ರಾಕ್ಷಸರನ್ನು ನೋಡಿ ಅವರಿಗೆಲ್ಲಾ ಎಚ್ಚರಿಕೆ ಹೇಳಿದನು.
ಆ ರಾಕ್ಷಸರಲ್ಲಿ ಶಕಟನೆಂಬ ಮಾಯಾವಿ ಹೋಗಿ ನಂದನ ಸ್ವಂತ ಬಂಡಿಯಲ್ಲಿ ಅದೃಶ್ಯ ರೂಪದಲ್ಲಿ ಬಂಡಿಯ ಆಕಾರಕ್ಕೆ ತನ್ನನ್ನು ಹೊಂದಿಸಿ ಪ್ರವೇಶಿಸಿ, ತಕ್ಕ ಅವಕಾಶಕ್ಕಾಗಿ ಜಾಗರೂಕತೆಯಿಂದ ಕಾಯ್ದುಕೊಂಡಿದ್ದನು.
ಯಶೋದೆ ಕೃಷ್ಣನನ್ನು ಆ ಬಂಡಿಯ ಕೆಳಗೇ ಹಾಸಿಗೆ ಹಾಸಿ ಮಲಗಿಸಿ ತಟ್ಟಿ ನಿದ್ದೆ ಮಾಡಿಸಿದಳು. ಆಮೇಲೆ ಯಶೋದೆ ಉಳಿದ ಗೋಪಸ್ತ್ರೀಯರೊಂದಿಗೆ ನದಿಯಲ್ಲಿ ಸ್ನಾನಮಾಡಿ ಬರಲು ಹೊರಟು ಹೋದಳು.
ಅವಳು ಹೋದ ಸ್ವಲ್ಪಹೊತ್ತಿಗೆ ಕೃಷ್ಣನಿಗೆ ಎಚ್ಚರವಾಯಿತು. ಹತ್ತಿರ ಯಾರೂ ಇಲ್ಲದೆ ಹೋಗಲು, ಎರಡು ಕೈಗಳನ್ನೂ ಬಾಯಿಯೊಳಗೆ ತೂರಿಸಿ, ಸ್ವಲ್ಪಹೊತ್ತು ಅತ್ತನು. ಕಾಲುಗಳನ್ನು ಎತ್ತೆತ್ತಿ ಹಾಕಿ ಸ್ವಲ್ಪಹೊತ್ತು ಆಚೀಚೆ ತುಳಿದಾಡಿದನು. ಹಾರಿ ಹಾರಿ ಬಿದ್ದನು. ಹಾಗೆ ಹಾರಿ ಹಾರಿ ಕಾಲಿನಿಂದ ತಳ್ಳುತ್ತಾ ಬಂಡಿಯ ಚಕ್ರವನ್ನು ಒಂದು ಕಾಲಿನಿಂದ ದೂಡಿದನು. ಅದರಿಂದ ಬಂಡಿ ಬದಿಗೆ ಮಾಲಿಬಿದ್ದು ಛಿನ್ನಾಭಿನ್ನವಾಯಿತು.

ಅಷ್ಟರಲ್ಲಿ ಯಶೋದೆ ಸ್ನಾನಮಾಡಿ ಬಂದು, ಮಗುವನ್ನು ಕುರಿತು ಅವಸರವಸರವಾಗಿ ಬಂಡಿಯ ಹತ್ತಿರ ಬಂದಳು. ಬಿದ್ದು ಪುಡಿಪುಡಿಯಾಗಿ ರಕ್ತದಲ್ಲಿ ಅದ್ದಿದಂತಿರುವ ಬಂಡಿಯ ತುಂಡುಗಳನ್ನು ನೋಡಿ ಕಿಟ್ಟನೆ ಕಿರಿಚಿ ಮಗುವನ್ನು ಎತ್ತಿ ಎದೆಗಪ್ಪಿಕೊಂಡು, “ಅಮ್ಮಮ್ಮಾ! ಮಗು ನಿದ್ದೆ ಮಾಡುತ್ತಾನೆಂದುಕೊಂಡು ಸ್ನಾನಕ್ಕೆ ಹೋದರೆ ಏನಾಗಿ ಹೋಯಿತು! ಇದನ್ನು ಇವನ ಅಪ್ಪ ನೋಡಿದರೆ ಎಷ್ಟು ಬೈಗಳು ಕೇಳಬೇಕೋ ಏನೋ! ಈ ಬಲವಾದ ಬಂಡಿ ಹೀಗೇಕೆ ರಕ್ತಮಯವಾಗಿ ಬಿದ್ದಿತೆಂದು ಯಾರು ಹೇಳುತ್ತಾರೆ? ಗಂಡ ಕೇಳಿದರೆ ಏನು ಹೇಳಬೇಕು?” ಎಂದುಕೊಳ್ಳುತ್ತಾ ಅವಳು ಕೃಷ್ಣನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಲಾಲಿಸತೊಡಗಿದಳು.
ಅಷ್ಟರಲ್ಲಿ ನಂದಗೋಪನು ಮೈಪೂರಾ ಧೂಳು ಮಾಡಿಕೊಂಡು, ಚೆದರಿದ ಬಟ್ಟೆ, ಕೆದರಿದ ತಲೆಗೂದಲುಗಳಿಂದ ಕೈಯಲ್ಲಿ ಕೊಕ್ಕೆಗಳ ಕೋಲು ಹಿಡಿದುಕೊಂಡು, ಏನೋ ಕೆಲಸ ಮುಗಿಸಿ ಗೋಪರೊಂದಿಗೆ ಬಗೆಬಗೆಯ ಹರಟೆ ಮಾತು ಹೇಳುತ್ತ ಅಲ್ಲಿಗೆ ಬಂದನು.
ಬಂದ ಕೂಡಲೇ ಕಳಚಿಹೋದ ಬಂಡಿಯ ಚಕ್ರವನ್ನೂ, ಮುರಿದ ಇರುಸನ್ನೂ ನೋಡಿ ಒಮ್ಮೆಗೇ ಬೆದರಿದನು. ಏಕೆಂದರೆ ತನ್ನ ಮಗನು ಯಾವಾಗಲೂ ಆ ಬಂಡಿಯ ಕೆಳಗೆ ಮಲಗುತ್ತಾನೆ. ಬಂಡಿ ಹೀಗೆ ಮುರಿದು ರಕ್ತಮಯವಾಗಿ ಹೋಗಿದೆಯೆಂದರೆ ಹಸುಕಂದ ಕೃಷ್ಣನಿಗೇನಾಯಿತೋ!
ಮರುಕ್ಷಣದಲ್ಲಿ ಅವನು ತನ್ನ ಪತ್ನಿಯನ್ನೂ, ಅವಳ ಮಡಿಲಲ್ಲಿ ಸಂತೋಷದಿಂದ ಹಾಲು ಕುಡಿಯುತ್ತಿರುವ ಕೃಷ್ಣನನ್ನೂ ನೋಡಿದನು. ನಂದನ ಪ್ರಾಣವು ಯಥಾಸ್ಥಾನದಲ್ಲಿ ನಿಂತಿತು.
ನಂದನು ಎದೆ ನೀವಿಕೊಳ್ಳುತ್ತ, “ಬಂಡಿ ಹೀಗೆ ಛಿನ್ನಾಭಿನ್ನವಾಯಿತೇಕೆ?” ಎಂದು ಹೆಂಡತಿಯನ್ನು ಕೇಳಿದನು.
ಯಾವುದಾದರೂ ಎತ್ತುಗಳು ಕುಟ್ಟಿ ಮಗುಚಿಹಾಕಿ ತುಳಿದುವೋ, ದೊಡ್ಡ ಗಾಳಿ ಬೀಸಿತೋ ಎಂದು ನಂದನ ಅನುಮಾನ. ಅದೇನಾದರೂ ಮಗು ಕ್ಷೇಮವಾಗಿರುವುದಕ್ಕೆ ನಂದನಿಗೆ ಸಮಾಧಾನವಾಯಿತು.
ಯಶೋದೆ ಗದ್ಗದ ಕಂಠದಿಂದ, “ನಿಜಕ್ಕೂ ತಪ್ಪು ನನ್ನದೇ. ಮಗನು ನಿದ್ದೆ ಮಾಡುತ್ತಾನೆಂದುಕೊಂಡು ಬಂಡಿಯ ಕೆಳಗೆ ಹಾಸಿಗೆಯಲ್ಲಿ ಮಲಗಿಸಿ, ಹತ್ತಿರದಲ್ಲಿರುವ ಸರೋವರಕ್ಕೆ ಹೋಗಿ ಸ್ನಾನಮಾಡಿ ಬರುವಷ್ಟರಲ್ಲಿ ಹೀಗೆಲ್ಲಾ ಆಗಿದೆ. ಏನೋ ಅದೃಷ್ಟ ಚೆನ್ನಾಗಿತ್ತು. ಕಂದನಿಗೆ ಬಂದ ಗಂಡ ತಪ್ಪಿತು” ಎಂದಳು.
ಅಷ್ಟರಲ್ಲಿ ಕೆಲವು ಮಂದಿ ಹುಡುಗರು ಅಲ್ಲಿಗೆ ಬಂದು, “ನಾವೆಲ್ಲಾ ಇಲ್ಲೇ ಪಕ್ಕದಲ್ಲಿ ಆಡಿಕೊಂಡಿದ್ದೆವು. ನಿಮ್ಮ ಕೃಷ್ಣ ಎಚ್ಚೆತ್ತು ಸ್ವಲ್ಪ ಅತ್ತು, ಕಾಲು ಚಾಚಿ ಹಾರಿಸಿದ ಕೂಡಲೇ ಬಂಡಿ ಅಡ್ಡಕ್ಕೆ ಬಿದ್ದು ಮುರಿದು ಹೋಯಿತು. ನಾವೆಲ್ಲಾ ನೋಡಿ ಆಶ್ಚರ್ಯ ಗೊಂಡೆವು” ಎಂದರು.
ಅದನ್ನು ಕೇಳಿ ಯಶೋದಾನಂದರು ಆಶ್ಚರ್ಯದಿಂದಲೂ, ಆನಂದದಿಂದಲೂ ತಮ್ಮ ಮಗನನ್ನು ಮುದ್ದಾಡಿ, ಮಣ್ಣು ತೆಗೆದು ಮಗುವಿಗೆ ನೀವಳಿಸಿ ಬಿಸುಟು, ತಮ್ಮ ಮಗನನ್ನು ಕಾಪಾಡುತ್ತಿರಬೇಕೆಂದು ಅಷ್ಟದಿಕ್ಪಾಲಕರನ್ನೂ ಬೇಡಿಕೊಂಡರು.
ನಂದನು ಎಂಟು ದಿಕ್ಕುಗಳಿಗೂ ನಮಸ್ಕಾರ ಮಾಡಿದನು. ಅಷ್ಟರೊಳಗೆ ಅಲ್ಲಿ ಸೇರಿದವರೆಲ್ಲಾ ಆ ಅದ್ಭುತವನ್ನು ನೋಡಿ ನಿಶ್ಚೇಷ್ಟಿತರಾಗಿ ಹೋದರು.
ಕೆಲವು ದಿನ ಕಳೆಯಿತು. ಒಂದು ದಿನ ಯಶೋದೆಯು ತನ್ನ ತೊಡೆಯ ಮೇಲೆ ಕೃಷ್ಣನನ್ನು ಮಲಗಿಸಿಕೊಂಡು ಹಾಲು ಕುಡಿಸುತ್ತಿದ್ದಳು. ಇದ್ದಕ್ಕಿದ್ದಂತೆಯೇ ಅವಳಿಗೆ ಮಗುವು ಭಾರವಾಗಿ ತನ್ನಿಂದ ಇನ್ನು ಅದನ್ನು ಎತ್ತಿಕೊಳ್ಳಲು ಸಾಧ್ಯವೇ ಇಲ್ಲವೆನಿಸಿತು. ಕ್ಷಣಕ್ಷಣಕ್ಕೂ ಅವನ ಭಾರವು ಹೆಚ್ಚಾಗುತ್ತಿರುವಂತೆ ಅನಿಸಿದಾಗ ಯಶೋದೆಯು ಕೃಷ್ಣನನ್ನು ನೆಲದ ಮೇಲೆ ಮಲಗಿಸಿ ಮೊಸರು ಕಡೆಯಲೆಂದು ಎದ್ದು ಒಳಗೆ ಹೋದಳು.

ಕಂಸನು ಕಳುಹಿಸಿದ್ದ ತೃಣಾವರ್ತ ಎಂಬ ರಾಕ್ಷಸನು ಸುಂಟರಗಾಳಿಯ ರೂಪದಲ್ಲಿ ಆಗ ನೆಲಕ್ಕಿಳಿದನು. ಗಾಳಿಯಂತೆಯೇ ಆರ್ಭಟಿಸುತ್ತಾ ಮುಂದೆ ಬಂದನು. ಇದನ್ನು ತಿಳಿದಿದ್ದ ಕೃಷ್ಣನು ಯಶೋದೆಗೆ ಅವನಿಂದ ಏನೂ ಹಾನಿಯಾಗಬಾರದೆಂದು ತನ್ನ ಭಾರವನ್ನು ಹೆಚ್ಚಿಸಿ ತೊಡೆಯಿಂದ ಕೆಳಗಿಳಿಸುವಂತೆ ಮಾಡಿದ್ದನು.
ತೃಣಾವರ್ತನ ಮಾಯೆಯ ಸುಂಟರಗಾಳಿಯು ನಂದಗೋಕುಲವನ್ನೆಲ್ಲಾ ಆವರಿಸಿತು. ಆಕಾಶದೆತ್ತರ ಧೂಳು ಮುಸುಕಿತು. ಕತ್ತಲಿನಿಂದಾಗಿ ಯಾರಿಗೂ ಕಣ್ಣು ಕಾಣಿಸಲಿಲ್ಲ. ಮಗನನ್ನು ಎತ್ತಿಕೊಳ್ಳಲು ಯಶೋದೆಯು ಬಂದಾಗ ಮಲಗಿಸಿದ ಸ್ಥಳದಲ್ಲಿ ಕೃಷ್ಣನಿರಲಿಲ್ಲ. ಅವನೆಲ್ಲೂ ಕಾಣಿಸದಾದಾಗ ಯಶೋದೆ ಭಯದಿಂದ ಅಳುತ್ತ ಎಚ್ಚರ ತಪ್ಪಿ ಬಿದ್ದಳು. ಗೋಪಸ್ತ್ರೀಯರೆಲ್ಲರೂ ಭಯದಿಂದ ಕಂಗಾಲಾದರು.
ಭಯಂಕರ ಸುಂಟರಗಾಳಿಯಾಗಿ ಬಂದ ತೃಣಾವರ್ತನು ಕೃಷ್ಣನನ್ನು ಎತ್ತಿಕೊಂಡು ಆಕಾಶದಲ್ಲಿ ಅತಿ ಎತ್ತರಕ್ಕೇರಿ ಮುಂದೆ ಒಯ್ಯಲು ಪ್ರಯತ್ನಿಸಿದನು. ಆದರೆ ಕೃಷ್ಣನ ಭಾರವು ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವುದರಿಂದ ಅವನ ಪ್ರಯತ್ನವು ವಿಫಲವಾಗಿ ಅಲ್ಲೇ ತೂಗಾಡಲಾರಂಭಿಸಿದನು. ಮಗುವಿನ ಭಾರವನ್ನು ನೋಡಿ ಇದು ಅಸಾಧಾರಣ ಮಗುವೆಂದು ತಿಳಿದು ಅಲ್ಲಿಂದಲೇ ಕೆಳಗೆ ಎಸೆಯಬೇಕೆಂದು ಯೋಚಿಸಿದನು.
ಆದರೆ ಕೃಷ್ಣನು ಅವನ ಕೊರಳನ್ನು ಗಟ್ಟಿಯಾಗಿ ಹಿಡಿದುಕೊಂಡನು. ಅವನದು ಪುಟ್ಟ ಕೈಯ ಹಿಡಿತವಾದರೂ ಅದರಿಂದ ತಪ್ಪಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಆ ರಾಕ್ಷಸನಿಗೆ ಸಾಧ್ಯವಾಗಲಿಲ್ಲ. ಉಸಿರು ಕಟ್ಟತೊಡಗಿತು. ಅವನ ಕಣ್ಣುಗುಡ್ಡೆಗಳು ಹೊರಗೆ ಬಂದವು. ಗಂಟಲಿನಿಂದ ಧ್ವನಿಯು ಹೊರಡದೆ ಮಗುವಿನೊಂದಿಗೆ ನೆಲಕ್ಕೆ ಬಿದ್ದನು. ರಾಕ್ಷಸನ ಶರೀರವು ಬಂಡೆಯೊಂದಕ್ಕೆ ತಗಲಿ ಚೂರುಚೂರಾಯಿತು.
ತೃಣಾವರ್ತನು ನೆಲಕ್ಕುರುಳಿದ ಶಬ್ದವು ಕೇಳಿಸುವುದರೊಂದಿಗೆ ಕತ್ತಲು ಕಳೆದು ಎಲ್ಲೆಲ್ಲೂ ಬೆಳಕು ಹರಿಯಿತು. ಶಬ್ದವು ಬಂದೆಡೆಗೆ ಗೋಕುಲದ ಜನರೆಲ್ಲ ಓಡಿ ಬಂದರು. ಸತ್ತುಬಿದ್ದ ರಾಕ್ಷಸನ ಬಳಿ ಆಟವಾಡುತ್ತಿರುವ ಕೃಷ್ಣನ ಕಂಡು ಯಶೋದೆಯು ಮಗುವನ್ನು ಬಿಗಿದಪ್ಪಿಕೊಂಡು ಮುತ್ತಿನ ಮಳೆಗರೆದಳು.
(ಮುಂದುವರೆಯಲಿದೆ…)

- ಎಂ.ವಿ. ಶಂಕರಾನಂದ, ಸಾಹಿತಿಗಳು, ತುಮಕೂರು. ಮೊಬೈಲ್: 8971302974
ಅಧ್ಯಾಯ ೧: https://haitumakuru.com/2025/09/06/krishna_chapter1_mvshankarananda/
ಅಧ್ಯಾಯ ೨: https://haitumakuru.com/2025/09/12/krishnashankaranadachapter2/
ಅಧ್ಯಾಯ ೩: https://haitumakuru.com/2025/09/17/krishnamvshankaranandachapter3/
