
ಈ ಕಾಲಘಟ್ಟದಲ್ಲಿ ಅನೇಕ ಹೊಸ ನಾಯಕರು, ನಿರ್ದೇಶಕರ ಆಗಮನವಾಯಿತು.
‘ಚೈತ್ರದ ಪ್ರೇಮಾಂಜಲಿ’ ಚಿತ್ರದ ಮೂಲಕ ರಘುವೀರ್ ನಾಯಕರಾದರೆ, ‘ಗೆಜ್ಜೆನಾದ’ ಚಿತ್ರದ ಮೂಲಕ ರಾಮ್ ಕುಮಾರ್ ನಾಯಕರಾದರು.
‘ಶ್’ ಚಿತ್ರದ ಮೂಲಕ ಕುಮಾರ್ ಗೋವಿಂದ್ ನಾಯಕರಾದರೆ,
‘ತರ್ಲೆ ನನ್ಮಗ’ ಚಿತ್ರದ ಮೂಲಕ ಜಗ್ಗೇಶ್ ನಾಯಕರಾದರು,
‘ಭಾಮಾ ಸತ್ಯಭಾಮʼ ಚಿತ್ರದ ಮೂಲಕ ಎಸ್.ನಾರಾಯಣ್ ನಾಯಕರಾದರೆ, ʼAʼ ಚಿತ್ರದ ಮೂಲಕ ಉಪೇಂದ್ರ ನಾಯಕರಾದರು.
ʼಪೋಲೀಸ್ ಸ್ಟೋರಿʼ ಚಿತ್ರದ ಮೂಲಕ ಸಾಯಿಕುಮಾರ್ ನಾಯಕರಾದರೆ, ʼಜಾಕಿಚಾನ್ʼ ಚಿತ್ರದ ಮೂಲಕ ಥ್ರಿಲ್ಲರ್ ಮಂಜು ನಾಯಕರಾದರು.
ಎಸ್.ನಾರಾಯಣ್ (ಚೈತ್ರದ ಪ್ರೇಮಾಂಜಲಿ), ಎಸ್. ಮಹೇಂದರ್ (ಪ್ರಣಯದ ಪಕ್ಷಿಗಳು), ಉಪೇಂದ್ರ (ತರ್ಲೆ ನನ್ಮಗ), ಓಂ ಪ್ರಕಾಶ್ ರಾವ್ (ಪಾಳೇಗಾರ), ಶಿವಮಣಿ (ರಾಜಕೀಯ), ಥ್ರಿಲ್ಲರ್ ಮಂಜು (ಪೋಲೀಸ್ ಸ್ಟೋರಿ) ಚಿತ್ರಗಳ ಮೂಲಕ ಹೊಸ ನಿರ್ದೇಶಕರ ಆಗಮನ ಕನ್ನಡ ಚಿತ್ರರಂಗಕ್ಕೆ ಆಯಿತು.

1990ರಲ್ಲಿ ಶಂಕರ್ ನಾಗ್ ರವರು ಅಫಘಾತದಲ್ಲಿ ಮೃತಪಟ್ಟಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಯಿತು.
ರವಿಚಂದ್ರನ್, ರಜನೀಕಾಂತ್, ನಾಗಾರ್ಜುನ, ಜ್ಯೂಹಿ ಚಾವ್ಲ, ಖುಷ್ಬೂ ಅವರನ್ನು ಹಾಕಿಕೊಂಡು ನಾಲ್ಕು ಭಾಷೆಯಲ್ಲಿ ʼಶಾಂತಿ ಕ್ರಾಂತಿʼ ಎಂಬ ಅದ್ದೂರಿ ಚಿತ್ರ ಏಕಕಾಲದಲ್ಲಿ ಚಿತ್ರೀಕರಣಗೊಂಡು ನಿರ್ಮಾಣವಾಯಿತು, ಸುಮಾರು 10 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ ಎಲ್ಲ ಭಾಷೆಯಲ್ಲೂ ನೆಲಕಚ್ಚಿ ನಿರ್ಮಾಪಕರು ಬಹಳ ನಷ್ಟ ಅನುಭವಿಸಿದ್ದರು. ಈಗಿನಂತೆ ಓಟಿಟಿ ವ್ಯವಸ್ಥೆ, ಬಜೆಟ್ ಗೆ ತಕ್ಕಂತೆ ಟಿಕೆಟ್ ದರ ಏರಿಸುವ ವ್ಯವಸ್ಥೆ ಆ ಕಾಲದಲ್ಲಿ ಇದ್ದಿದ್ದರೆ ನಷ್ಟದ ಪ್ರಮಾಣ ಕಡಿಮೆ ಮಾಡಬಹುದಿತ್ತು.

ಡಾ. ರಾಜ್ ಕುಮಾರ್ ರವರು 4 ವರ್ಷಗಳ ವಿರಾಮದ ನಂತರ ಮರಳಿ ಬಂದು ʼಜೀವನ ಚೈತ್ರʼ, ʼಆಕಸ್ಮಿಕʼ, ʼಒಡಹುಟ್ಟಿದವರುʼ ಚಿತ್ರಗಳಲ್ಲಿ ಅಭಿನಯಿಸಿದ್ದು ಈ ಅವಧಿಯಲ್ಲೇ.
1992-93ರಲ್ಲಿ ಬಂದಂತಹ ಚಿತ್ರಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆಲಕಚ್ಚಿದ್ದವು, ಆಗ ಮರು ಬಿಡುಗಡೆಯಾಗಿ ಬಂದಂತಹ ʼಸತ್ಯ ಹರಿಶ್ಚಂದ್ರʼ ಚಿತ್ರ ಭಾರೀ ಯಶಸ್ಸು ಗಳಿಸಿತ್ತು.
ರಾಜ್ ಕುಮಾರ್ ರವರು ʼಜೀವನ ಚೈತ್ರʼ ಚಿತ್ರದ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದು ಈ ಅವಧಿಯಲ್ಲೇ.
ʼಶ್ʼ , ʼಓಂʼ, ʼAʼ ಚಿತ್ರಗಳ ಮೂಲಕ ಉಪೇಂದ್ರರವರು ಒಂದಕ್ಷರದ ಶೀರ್ಷಿಕೆ ಇಟ್ಟು ಎಲ್ಲರ ಗಮನ ಸೆಳೆದರು.
ʼಶ್ʼ, ʼಓಂʼ ಚಿತ್ರಗಳ ಮೂಲಕ ನಿರ್ದೇಶಕರಾಗಿ ಉಪೇಂದ್ರ ಭಾರಿ ಹೆಸರು ಮಾಡಿದರೆ, ʼAʼ ಮತ್ತು ʼಉಪೇಂದ್ರʼ ಚಿತ್ರದ ಮೂಲಕ ನಟರಾಗಿಯೂ ಮೆಚ್ಚುಗೆ ಪಡೆದರು, ವಿಭಿನ್ನ ರೀತಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿ ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ್ದು ಇದೇ ಉಪೇಂದ್ರ. ಈ ಅವಧಿಯನ್ನು ಉಪೇಂದ್ರ ಯುಗ ಎಂದು ಕರೆದರೂ ತಪ್ಪಾಗಲಾರದು.

ಚಿತ್ರರಂಗಕ್ಕೆ ಬಂದು ಹತ್ತು ವರ್ಷದ ನಂತರ ʼಓಂʼ ಚಿತ್ರದಲ್ಲಿನ ನಟನೆಗೆ ಪ್ರಥಮ ಬಾರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಶಿವರಾಜ್ ಕುಮಾರ್ ರವರು ಪಡೆದಿದ್ದು ಈ ಅವಧಿಯಲ್ಲೇ.
ಕೋಟಿ ನಿರ್ಮಾಪಕ ರಾಮು ರವರು ʼರಾಜಕೀಯʼ ಚಿತ್ರದ ಮೂಲಕ ನಿರ್ಮಾಪಕರಾಗಿ ಬಂದು ಕೊಟಿ ಗಟ್ಟಲೆ ಬಂಡವಾಳ ಸುರಿದು ʼಲಾಕಪ್ ಡೆತ್ʼ, ʼಸಿಂಹದ ಮರಿʼ, ʼAK 47ʼ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದು ಇದೇ ಅವಧಿಯಲ್ಲಿ, ಈ ಮೂರೂ ಚಿತ್ರಗಳ ನಿರ್ದೇಶಕರು ಓಂ ಪ್ರಕಾಶ್ ರಾವ್!

ʼಲಾಕಪ್ ಡೆತ್ʼ ಚಿತ್ರದಲ್ಲಿ ಇರುವ ಚೇಸಿಂಗ್ ದೃಶ್ಯ ಇಡೀ ಭಾರತೀಯ ಚಿತ್ರರಂಗದಲ್ಲೇ ಯಾರೂ ಪ್ರಯತ್ನಿಸದ ದೃಶ್ಯ ಅದಾಗಿತ್ತು, ಥಿಯೇಟರ್ ನಲ್ಲಿ ಜನ ಉಸಿರು ಬಿಗಿ ಹಿಡಿದು ಆ ದೃಶ್ಯ ವೀಕ್ಷಿಸಿದ್ದರು, ಈ ಚಿತ್ರದ ಯಶಸ್ಸಿಗೆ ಈ ದೃಶ್ಯ ಪ್ರಮುಖ ಪಾತ್ರ ವಹಿಸಿತ್ತು.
ಪ್ರೇಮ, ದಾಮಿನಿ, ಶ್ವೇತ, ಅನು ಪ್ರಭಾಕರ್, ವಿಜಯಲಕ್ಷ್ಮಿ, ಚಾರುಲತ, ಹೇಮಾ , ಡಾಲಿ, ಬಿಂದಿಯಾ, ಶ್ರೀಶಾಂತಿ, ಶೃತಿ, ನಿವೇದಿತ ಜೈನ್ ಇನ್ನು ಮುಂತಾದ ನಟಿಯರು ಚಿತ್ರರಂಗಕ್ಕೆ ಬಂದಿದ್ದು ಈ ಅವಧಿಯಲ್ಲಿಯೇ.
ವಿಷ್ಣುವರ್ಧನ್ ರವರ ಅನೇಕ ಚಿತ್ರಗಳು ಸೋತಿದ್ದು ಈ ಅವಧಿಯಲ್ಲೇ!
ʼನಿಷ್ಕರ್ಷʼ, ʼಹಾಲುಂಡ ತವರುʼ ಚಿತ್ರ ಬರುವುದಕ್ಕಿಂತ ಮುಂಚೆ ಮತ್ತು ಬಂದ ನಂತರ ಅವರ ಅನೇಕ ಚಿತ್ರಗಳು ನೆಲಕಚ್ಚಿದ್ದವು. ನಂತರ ಅವರಿಗೆ ಗೆಲುವು ಕೊಟ್ಟಿದ್ದು ʼವೀರಪ್ಪನಾಯಕʼ ಚಿತ್ರ. ಇವೆಲ್ಲವೂ ಬಂದದ್ದು ಈ ಕಾಲಘಟ್ಟದಲ್ಲಿ.

ಒಟ್ಟಿನಲ್ಲಿ ಎಷ್ಟೇ ಏಳು ಬೀಳು ಇದ್ದರೂ 1990-99 ರಲ್ಲಿ ಅನೇಕ ದಾಖಲೆಗಳನ್ನ ಕನ್ನಡ ಚಿತ್ರರಂಗ ತನ್ನ ಮಡಿಲಿಗೆ ಹಾಕಿಕೊಂಡಿದೆ.
– ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.
