
ಇಳಿಸಂಜೆ ಹೊತ್ತಿನಲಿ, ಜೊತೆಗಾತಿ ನನ್ನೊಡನೆ
ಕುಳಿತಿಹೆವು ಎದುರು, ಬದುರು.
ನಡುವೆ ಬುತ್ತಿಯ ಗಂಟು, ಹಂಚಿ ತಿನ್ನಲಿಕುಂಟು,
ಬಿಡದೆ ತೋರುತಲಿಹುದು ತನ್ನ ಖದರು.
ಸೂಜಿಬಿದ್ದರು ಶಬ್ಧ, ಮಾತು ಕಲಸಿದ ಮೌನ,
ಚಿಮ್ಮಿ ಪ್ರೀತಿಯ ಚಿಲುಮೆ ಇಬ್ಬರಲ್ಲಿ.
ತಬ್ಬಿ ಹಬ್ಬಿದೆ ಮಬ್ಬು, ಹತ್ತರಿದ್ದೂ ದೂರ,
ನಗೆಯ ಕಾಣದ ಹಗಲು ಮುಗಿದುದಲ್ಲಿ.
ಕಳೆದ ಸವಿಗಳಿಗೆಗಳ, ಸವೆದ ದಾರಿಯ ಮೆಲುಕು,
ಲೆಕ್ಕ ಚುಕ್ತಾಮಾಡಿ, ಎಲ್ಲ ಸಾಲ.
ಕಾಯದೊಳಗಿನ ಕ್ಷಾಮ, ಪ್ರೇಮವಿಲ್ಲದ ಕಾಮ
ದಾಟಿ ಬಂದಾಯ್ತೆಲ್ಲ ಅಗ್ನಿಗೋಳ.
ಮಧ್ಯೆ ಸಾಗರದಲ್ಲಿ, ಗುದ್ದಾಡಿ ಅಲೆಯೊಡನೆ,
ದಡವ ಸೇರಿದೆ ಇಂದು ನಮ್ಮ ಹಡಗು.
ದೇಹವಾಂಛೆಯ ಕಳೆದು, ಭಾವಬಂಧವು ಮೊಳೆದು
ಜೊತೆಗಾತಿ ನಿನ್ನಿರವು ಬದುಕ ಬೆಡಗು.
- ಅಬ್ಳಿ, ಹೆಗಡೆ.
