
(ತುಮಕೂರಿನಲ್ಲಿ ವಾಸವಿರುವ ಖ್ಯಾತ ಸಾಹಿತಿಗಳು ಮತ್ತು ಪ್ರಕಾಶಕರಾದ ಶ್ರೀ ಎಂ.ವಿ. ಶಂಕರಾನಂದ ಅವರು ಬರೆಯುತ್ತಿರುವ ಶ್ರೀಕೃಷ್ಣನ ಕುರಿತಾದ “ಕೃಷ್ಣ – ಭಕ್ತರ ಆಪ್ತ ಬಂಧು” ಭಕ್ತಿಪೂರ್ವಕ ಅಪರೂಪದ ಕಾದಂಬರಿಯ ಎರಡನೇಯ ಅಧ್ಯಾಯ)
ಮೊದಲನೆಯ ಅಧ್ಯಾಯದ ಓದಿಗೆ…
https://haitumakuru.com/2025/09/06/krishna_chapter1_mvshankarananda/
ಅಧ್ಯಾಯ 2 – ಬಲರಾಮನ ಜನನ
ಮೇರು ಪರ್ವತದಲ್ಲಿ ನಡೆದ ದೇವಸಭೆಯಿಂದ ಹೊರಟ ನಾರದ, ಮಥುರಾ ನಗರಕ್ಕೆ ಬಂದಿಳಿದ. ಕಂಸನ ಅರಮನೆಯ ದ್ವಾರದ ಬಳಿಗೆ ಹೋದಾಗ, ಅಲ್ಲಿಯ ಕಾವಲುಗಾರರು ಅವನನ್ನು ಮರ್ಯಾದೆಯಿಂದ ಒಳಕ್ಕೆ ಕರೆದುಕೊಂಡು ಹೋದರು. ಅಷ್ಟರಲ್ಲಿ ಕಂಸನೇ ಇದಿರಾಗಿ ಬಂದು ನಾರದನಿಗೆ ಸ್ವಾಗತವಿತ್ತು, ಕುಶಲಪ್ರಶ್ನೆ ಮಾಡಿದ.
ಆಗ ನಾರದ ಕಂಸನನ್ನು ನೋಡಿ, “ಕಂಸ! ನಾನು ತೀರ್ಥಯಾತ್ರೆ ಮಾಡುತ್ತ, ಹಾಗೆಯೇ ಮೇರುಪರ್ವತಕ್ಕೂ ಹೋದೆ. ಅಲ್ಲಿ ಬ್ರಹ್ಮ ಮೊದಲಾದ ದೇವತೆಗಳು ಸಭೆ ಸೇರಿದ್ದರು. ಏನೋ ಮುಖ್ಯ ವಿಚಾರ ನಡೆಯುತ್ತಿರಬೇಕೆಂದು ನಾನು ಸ್ವಲ್ಪ ಹೊತ್ತು ಅಲ್ಲಿ ನಿಂತೆ. ಅವರೆಲ್ಲರೂ ಕೂಡಿ ನಿನ್ನನ್ನು ಕೊಲ್ಲಲು ಏನೋ ಆಲೋಚನೆ ಮಾಡುತ್ತಿದ್ದರು. ನಿನ್ನ ಚಿಕ್ಕಪ್ಪನ ಮಗಳು ದೇವಕಿ ಇರುವಳಷ್ಟೇ. ಅವಳಿಗೆ ಹುಟ್ಟುವ ಎಂಟನೇ ಮಗುವೇ ನಿನಗೆ ಮೃತ್ಯುವನ್ನುಂಟು ಮಾಡುವುದಂತೆ. ಎಲ್ಲ ದೇವತೆಗಳಿಗೂ ರಕ್ಷಕನಾದ ವಿಷ್ಣುವೇ ಅದಕ್ಕಾಗಿಯೇ ಅವತಾರವೆತ್ತುವನಂತೆ. ಆದುದರಿಂದ ನೀನು ಬಹಳ ಎಚ್ಚರಿಕೆಯಿಂದಿರಪ್ಪ. ನಿನ್ನ ಪ್ರಾಣಕ್ಕೆ ಹಾನಿಯಾಗದ ಹಾಗೆ ತಕ್ಕ ಏರ್ಪಾಡು ಮಾಡಿಕೊ. ಧರ್ಮಮಾರ್ಗ ತಪ್ಪದೆ ಸುಖವಾಗಿ ಜೀವಿಸು. ನಾನು ನಿನ್ನ ಒಳಿತನ್ನು ಬಯಸುವವನಾದುದರಿಂದಲೇ, ಈ ಮಾತು ನಿನ್ನ ಕಿವಿಗೆ ಹಾಕಿ ಹೋಗೋಣವೆಂದು ಬಂದೆ. ಇನ್ನು ಹೋಗಿ ಬರುವೆ”ಎಂದು ಹೇಳಿ ತನ್ನ ದಾರಿ ಹಿಡಿದು ಹೋಗಿಬಿಟ್ಟ.
ಕಂಸನು ತನ್ನವರನ್ನೆಲ್ಲ ನೋಡಿ ನಗುತ್ತ, “ಈ ನಾರದನೇನೋ ಬುದ್ಧಿವಂತ ನೆಂದುಕೊಂಡು, ಏನೋ ಹೇಳಿ ಭಯಪಡಿಸುತ್ತಿದ್ದಾನೆ. ನಾನೆಂತಹ ಶಕ್ತಿಶಾಲಿಯೆಂಬುದೇ ಅವನಿಗೆ ತಿಳಿಯದು. ಬ್ರಹ್ಮನೇ ಆಗಲಿ, ಮತ್ತಾವ ದೇವತೆಗಳೇ ಆಗಲಿ, ನನಗೇನೂ ಲೆಕ್ಕವಿಲ್ಲ. ಈ ನಾರದನಿಗೆ ಕಾಲೂ ಬಾಯಿಯೂ ಸುಮ್ಮನಿರಲಾರವು. ಪ್ರತಿಯೊಂದು ಕಡೆಗೂ ಹೋಗುವನು. ಬಾಯಿಗೆ ಬಂದದ್ದೆಲ್ಲಾ ಹೇಳುವನು. ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ, ತಾನು ತಮಾಷೆ ನೋಡುವನು. ಸರಿ ಹೋಗಲಿ, ಅದು ಅವನ ಗುಣ. ಅವನು ಹೇಳಿದುದರಲ್ಲಿ ಎಷ್ಟು ಸತ್ಯವೋ ಎಷ್ಟು ಸುಳ್ಳೋ? ಹೇಗಾದರೂ ಇರಲಿ, ಒಂದಿಷ್ಟು ಸತ್ಯವಿದ್ದೀತೆಂದೇ ನಂಬೋಣ. ಯದುಕುಲದಿಂದ ಅಪಾಯವೇನೋ ಉಂಟೆಂದು ಅವನು ಹೇಳಿದುದರಿಂದ ಯಾವುದಕ್ಕೂ ಒಳ್ಳೇದು; ನಮ್ಮ ಅರಿಷ್ಟಕೇಶಿ, ಪ್ರಲಂಬ, ಧೇನುಕ, ಪೂತನಿ, ಕಾಳೀಯರೇ ಮೊದಲಾದವರೆಲ್ಲ ಬಹಳ ಜಾಗರೂಕರಾಗಿದ್ದು, ನನ್ನ ಶತ್ರುಗಳನ್ನು ನಾಶ ಮಾಡಬೇಕು. ತಾಯಿಯ ಗರ್ಭದಲ್ಲಿರುವವರನ್ನು ಸಹಾ ಬಿಡಬಾರದು. ನಾನಿರುವಾಗ ನನ್ನ ಸೇವಕರಾರೂ ಯಾವುದಕ್ಕೂ ಹೆದರಬೇಕಾಗಿಲ್ಲ. ಏನು ಬಂದರೂ ನಾನಿದ್ದೇನೆಂದು ನಂಬಿ” ಎಂದನು.
ನಂತರ ಕಂಸನು ಸಭೆಯನ್ನು ಮುಗಿಸಿ, ಭವನದೊಳಗೆ ಹೊಕ್ಕು, ತನ್ನ ಪರಮಾಪ್ತರನ್ನು ರಹಸ್ಯವಾಗಿ ಕೂಡಿಸಿಕೊಂಡು, “ಇಂದಿನಿಂದಲೇ ನಮ್ಮ ದೇವಕೀದೇವಿಗೆ ಅನೇಕ ಮಂದಿ ಪರಿಚಾರಿಕೆಯರನ್ನು ಕಾವಲಿಡಿ. ವಸುದೇವನ ಮೇಲೆ ಕೂಡಾ ಅವರದೊಂದು ಕಣ್ಣಿರಲಿ. ದೇವಕಿಗೆ ಯಾವಾಗ ಗರ್ಭಧಾರಣೆಯಾಗಿದೆ, ಎಷ್ಟನೇ ತಿಂಗಳು ನಡೆಯುತ್ತಿದೆ, ಯಾವಾಗ ಹೆರಿಗೆ ಎಂಬುದೆಲ್ಲವನ್ನೂ ನನಗೆ ತಿಳಿಸುತ್ತಾ ಬರಬೇಕು. ಹಗಲೂರಾತ್ರಿ ಎಚ್ಚರದಿಂದ ಕಾವಲು ನಡೆಯಬೇಕು. ಇದಕ್ಕೆಲ್ಲ ಕಾರಣವೇನೆಂಬುದು ಯಾರಿಗೂ ತಿಳಿಯಕೂಡದು”ಎಂದು ಅವರಿಗೆ ಎಚ್ಚರಿಕೆ ಕೊಟ್ಟನು.
ತುಂಬಿದ ಸಭೆಯಲ್ಲಿ ಭಯವಿಲ್ಲದವನಂತೆ ಮಾತಾಡಿದವನು ರಹಸ್ಯದಲ್ಲಿ ಹೀಗೆ ಹೇಳಿದುದರಿಂದ, ಅವನ ಆಪ್ತರೆಲ್ಲ ಅವನ ಎಚ್ಚರಿಕೆಯನ್ನು ಬಹಳ ಜಾಗರೂಕತೆಯಿಂದ ನಡೆಸುವೆವೆಂದು ಭರವಸೆ ಕೊಟ್ಟರು.
ಈ ಮಧ್ಯೆ ನಾರದನು ಮಥುರಾನಗರದಿಂದ ವಿಷ್ಣುವಿನ ಬಳಿಗೆ ಹೋಗಿ, ತಾನು ಕಂಸನ ಮನಸ್ಸಿನಲ್ಲಿ ವಿಷಬೀಜ ಬಿತ್ತಿದುದನ್ನೂ ಅದರ ಪರಿಣಾಮವಾಗಿ ಕಂಸನು ಮಾಡಲಿರುವ ನೀಚ ಕಾರ್ಯವನ್ನೂ ಹೇಳಿ ಅಲ್ಲಿಂದ ಹೊರಟು ಹೋದ.
ನಾರದ ಹೊರಟುಹೋದ ಮೇಲೆ ವಿಷ್ಣು ಕಂಸನ ಜಾಗರೂಕತೆಗಳನ್ನೆಲ್ಲ ತಪ್ಪಿಸಿ ಕೊಂಡು ತಾನು ಹೇಗೆ ಅವತರಿಸಬೇಕೆಂಬುದನ್ನು ಕುರಿತು ಆಲೋಚನೆ ಮಾಡಿ ಕೊಂಡ.
ವಿಷ್ಣುವಿಗೊಂದು ಹಳೆಯ ಸಂಗತಿ ನೆನಪಾಯಿತು. ಕಾಲನೇಮಿಯ ಆರು ಮಂದಿ ಮಕ್ಕಳು ಪಾತಾಳದಲ್ಲಿದ್ದರು. ಅವರು ತಮಗೆ ಸಾವೇ ಇಲ್ಲದಂತೆ ವರವನ್ನು ಪಡೆಯಲು ಬ್ರಹ್ಮನನ್ನು ಕುರಿತು ತಪಸ್ಸು ಪ್ರಾರಂಭಿಸಿದ್ದರು. ಆ ಸಮಯದಲ್ಲಿ ಮೂರು ಲೋಕಗಳಿಗೂ ತಾನೇ ಆಧಿಪತ್ಯವನ್ನು ವಹಿಸಿಕೊಂಡಿದ್ದ ಹಿರಣ್ಯಕಶಿಪು ಆ ಸಂಗತಿಯನ್ನ ಅರಿತು, “ಕುಲಶ್ರೇಷ್ಠನಾದವನು ನಾನಿರುವಾಗ ಬೇರೊಬ್ಬನಿಂದ ವರವನ್ನು ಪಡೆಯುವುದುಂಟೆ? ನನ್ನನ್ನು ಮರೆತುಬಿಟ್ಟವರಾದ ನಿಮ್ಮನ್ನು ಹೆತ್ತು ಬೆಳೆಸಿದ ತಂದೆಯ ಕೈಯಲ್ಲೇ ನೀವೆಲ್ಲ ಸಾಯಿರಿ”ಎಂದು ಅವರನ್ನು ಶಪಿಸಿದ್ದನು.
ಇದನ್ನು ಜ್ಞಾಪಿಸಿಕೊಂಡು ವಿಷ್ಣು ಯೋಗಮಾಯೆಯನ್ನು ಕರೆದು, “ನಿನ್ನಿಂದ ಒಂದು ಕೆಲಸವಾಗಬೇಕು. ಪಾತಾಳದಲ್ಲಿ ಷಡ್ಗರ್ಭರೆಂಬ ಕಾಲನೇಮಿಯ ಆರು ಮಂದಿ ಮಕ್ಕಳಿದ್ದಾರೆ. ಅವರನ್ನು ಒಬ್ಬೊಬ್ಬರನ್ನಾಗಿ ತೆಗೆದುಕೊಂಡು ಹೋಗಿ ದೇವಕಿಯ ಗರ್ಭದಲ್ಲಿ ಇರಿಸು. ಅವರು ಹುಟ್ಟಿದ ಕೂಡಲೇ ಅವರನ್ನು ಕಂಸನು ಕೊಂದುಬಿಡುತ್ತಾನೆ. ದೇವಕಿಯಲ್ಲಿ ಆಗುವ ಏಳನೇ ಗರ್ಭವನ್ನು ರೋಹಿಣಿಗೆ ಬದಲಾಯಿಸು. ಕಂಸನ ಭಯದಿಂದ ಏಳನೇ ಗರ್ಭವು ಹೋಯಿತೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆ ಮಗು ನನಗೆ ಅಣ್ಣನಾಗಿ ರೋಹಿಣಿಯ ಗರ್ಭದಲ್ಲಿ ಹುಟ್ಟುತ್ತಾನೆ. ಆ ನಂತರ ದೇವಕಿಯ ಎಂಟನೇ ಗರ್ಭದಲ್ಲಿ ನಾನು ಸೇರುತ್ತೇನೆ. ಅದೇ ಹೊತ್ತಿಗೆ ಕಂಸನ ಗೋವುಗಳ ಪಾಲಕನಾದ ನಂದನ ಪತ್ನಿ ಯಶೋದೆಯ ಗರ್ಭದೊಳಗೆ ನೀನೂ ಪ್ರವೇಶಿಸು. ನಾವಿಬ್ಬರೂ ಅರ್ಧರಾತ್ರಿಯ ಹೊತ್ತಿನಲ್ಲಿ ಜನನ ಪಡೆದು, ಸ್ಥಾನ ಬದಲಾವಣೆ ಹೊಂದೋಣ. ಆ ಬಳಿಕ ಕಂಸನು ನಿನ್ನನ್ನು ಹಿಡಿದು ಕೊಲ್ಲಲೆತ್ನಿಸುವಾಗ ನೀನು ಆಕಾಶಕ್ಕೆ ಹಾರಿ ಹೋಗು. ಅಲ್ಲಿ ಇಂದ್ರನು ನಿನ್ನ ಇದಿರಿಗೆ ಬಂದು, ಕರೆದುಕೊಂಡು ಹೋಗಿ ನಿನ್ನನ್ನು ಆದಿಶಕ್ತಿಯನ್ನಾಗಿಸಿ ಅಭಿಷೇಕಿಸುತ್ತಾನೆ. ನೀಲಮೇಘ ಛಾಯದವಳಾಗಿ, ಪೂರ್ಣಚಂದ್ರಮುಖಿಯಾಗಿ, ಎಂಟು ಕೈಗಳಲ್ಲಿ ಚಕ್ರ, ಗದೆ, ಖಡ್ಗ, ಪದ್ಮ, ಮಧುಕಲಶ, ಒನಕೆ, ಶೂಲಗಳನ್ನು ಧರಿಸಿ, ಧಿವ್ಯಾಭರಣಭೂಷಿತೆಯಾಗಿ, ನೀಲವರ್ಣದ ರೇಷ್ಮೆ ಸೀರೆಯನ್ನುಟ್ಟವಳಾಗಿ, ಸಮಸ್ತ ದೇವತೆಗಳಿಂದಲೂ ಪೂಜಿಸಲ್ಪಡುವೆ. ಭೂಮಿಯಲ್ಲಿ ನೀನು ಎಲ್ಲರಿಗೂ ಇಷ್ಟದೇವತೆಯಾಗಿ ಭಕ್ತರನ್ನು ಅನುಗ್ರಹಿಸಿಕೊಂಡಿರು. ನಿನ್ನ ಕೀರ್ತಿ ಅಜರಾಮರವಾಗಲಿ”ಎಂದನು.
ಯೋಗಮಾಯೆ ಒಪ್ಪಿಕೊಂಡಳು. ಅವಳ ಕೈವಾಡಗಳಿಂದಾಗಿ ದೇವಕೀದೇವಿ ಷಡ್ಗರ್ಭರನ್ನು, ಒಬ್ಬರ ಮೇಲೊಬ್ಬರಂತೆ ತನ್ನ ಗರ್ಭದಲ್ಲಿ ಧರಿಸುತ್ತಾ ಬಂದಳು.
ಹಾಗೆ ಪ್ರತಿಸಾರಿಯೂ ಅವಳಿಗೆ ಪ್ರಸವಕಾಲ ಬಂದಾಗಲೆಲ್ಲಾ, ಕಂಸನ ಆಳುಗಳು ಹೋಗಿ ಕಂಸನಿಗೆ ಆ ಸಂಗತಿ ಹೇಳುವರು. ಕಂಸನು ಬಂದು, ಹುಟ್ಟಿದ ಮಗುವನ್ನು ಹೋಗಿ ಬಂಡೆಯ ಮೇಲೆ ಬಡೆದು, ಕೊಂದುಬಿಡುತ್ತಿದ್ದ. ದೇವಕೀ ಏಳನೇ ಸಾರಿ ಗರ್ಭಿಣಿಯಾಗಿದ್ದಾಗ ಯೋಗಮಾಯೆಯು ಆ ಗರ್ಭವನ್ನೆತ್ತಿಕೊಂಡು ಹೋಗಿ, ಗೋಕುಲದಲ್ಲಿದ್ದ ರೋಹಿಣಿಯ ಗರ್ಭದಲ್ಲಿ ಇರಿಸಿದಳು. ಈ ಸಾರಿ ಅವಳಿಗೆ ಗರ್ಭಸ್ರಾವವಾಯಿತೆಂದೇ ಎಲ್ಲರೂ ಅಂದುಕೊಂಡರು. ಒಂಭತ್ತು ತಿಂಗಳು ತುಂಬಿದ ಮೇಲೆ ರೋಹಿಣಿ ಪೂರ್ಣಚಂದ್ರನಿಗೆ ಸಮಾನ ಕಾಂತಿಯುಳ್ಳ ಮಗನನ್ನು ಹೆತ್ತಳು. ಅವನು ಬಲರಾಮನೆಂದು ಪ್ರಸಿದ್ಧನಾದನು.
(ಮುಂದುವರೆಯಲಿದೆ…)

- ಎಂ.ವಿ. ಶಂಕರಾನಂದ, ಸಾಹಿತಿಗಳು, ತುಮಕೂರು. ಮೊಬೈಲ್: 8971302974
