
ತುಮಕೂರಿನಲ್ಲಿ ವಾಸವಿರುವ ಖ್ಯಾತ ಸಾಹಿತಿಗಳು ಮತ್ತು ಪ್ರಕಾಶಕರಾದ ಶ್ರೀ ಎಂ.ವಿ. ಶಂಕರಾನಂದ ಅವರು ಬರೆಯುತ್ತಿರುವ ಶ್ರೀಕೃಷ್ಣನ ಕುರಿತಾದ ಭಕ್ತಿಪೂರ್ವಕ ಅಪರೂಪದ ಕಾದಂಬರಿ…
ಅಧ್ಯಾಯ-1: ಕಾಲನೇಮಿ
ಈ ಬ್ರಹ್ಮಾಂಡವು ಸೃಷ್ಟಿಯಾದ ಕಾಲದಲ್ಲಿ ಕಾಲನೇಮಿ ಎಂಬ ದೊಡ್ಡ ರಾಕ್ಷಸನೊಬ್ಬನಿದ್ದನು. ಅವನಿಗೆ ನೂರು ತಲೆಗಳೂ, ನೂರು ಕೈಗಳೂ ಇದ್ದವು. ನೋಡಿದರೆ ಮಹಾ ಭಯಂಕರಾಕಾರದವನಾಗಿ ಕಾಣುತ್ತಿದ್ದನು. ನೂರು ಶಿಖರಗಳಿರುವ ಕರ‍್ರಗಿನ ಪರ್ವತದ ಹಾಗಿತ್ತು ಅವನ ಆಕಾರ. ಇಂತಹ ಅವನ ಸ್ವಾಭಾವಿಕವಾದ ಬಲಕ್ಕೆ ಎಣೆಯೇ ಇರಲಿಲ್ಲ. ಅದಕ್ಕೆ ಜೊತೆಯಾಗಿ ತಪಸ್ಸು ಬೇರೆ ಮಾಡಿ ಬ್ರಹ್ಮನನ್ನು ಮೆಚ್ಚಿಸಿ ಅನೇಕ ದೊಡ್ಡ ದೊಡ್ಡ ವರಗಳನ್ನೂ ಪಡೆದಿದ್ದನು. ಅಂದಮೇಲೆ ಅವನನ್ನು ಇದಿರಿಸುವವರು ತ್ರಿಲೋಕಗಳಲ್ಲಿ ಯಾರಿದ್ದಾರು?
ಆ ಕಾಲದಲ್ಲಿ ದೇವತೆಗಳಿಗೂ ದಾನವರಿಗೂ ಆಗಾಗ ಯುದ್ಧವು ನಡೆಯುತ್ತಿದ್ದಿತು. ಒಂದು ಸಾರಿ ದಾನವರು ಗೆಲ್ಲುತ್ತಿದ್ದರು. ಮತ್ತೊಂದು ಸಾರಿ ದೇವತೆಗಳಿಗೆ ಜಯವಾಗುತ್ತಿತ್ತು. ಒಂದು ಸಾರಿ ಹಾಗೆ ತೊಡಗಿದ ಮಹಾಯುದ್ಧದಲ್ಲಿ ದೇವತೆಗಳಿಗೆ ವಿಜಯವಾಗಿ, ಇನ್ನು ದಾನವರು ತಮ್ಮ ತಂಟೆಗೆ ಬರಬಾರದೆಂದು ಹೊಡೆದು ಹೊಡೆದು ಓಡಿಸಿದರು.
ಅದನ್ನು ನೋಡಿ ಕಾಲನೇಮಿಗೆ ಮಹಾ ಆಕ್ರೋಶವೆದ್ದಿತು. ಅವನು ದಾನವ ನಾಯಕರನ್ನೆಲ್ಲಾ ಒಂದುಗೂಡಿಸಿ, ಹೊಸ ಉತ್ಸಾಹ ಬರುವಂತೆ ಓಡುತ್ತಿರುವ ರಾಕ್ಷಸರನ್ನೆಲ್ಲಾ ಒಟ್ಟುಗೂಡಿಸಿಕೊಂಡು ಇಂದ್ರನ ಮೇಲೆ ಬಹು ದೊಡ್ಡ ದಾಳಿ ಮಾಡಿದನು. ಹೀಗಾಗುವುದೆಂದು ದೇವತೆಗಳು ಊಹಿಸಿರಲಿಲ್ಲ. ಇಂದ್ರನ ನಾಯಕತ್ವದಲ್ಲಿ ದೇವತೆಗಳಿಗೂ, ಕಾಲನೇಮಿಯ ನಾಯಕತ್ವದಲ್ಲಿ ದಾನವರಿಗೂ ಭಾರಿ ಯುದ್ಧವು ಆರಂಭವಾಯಿತು. ಆ ಯುದ್ಧದಲ್ಲಿ ಅಷ್ಟದಿಕ್ಪಾಲಕರೊಂದಿಗೆ ಇಂದ್ರನೂ ಬಹು ದೊಡ್ಡ ಸೋಲನ್ನು ಪಡೆದನು. ಆಗ ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳು ಕಾಲನೇಮಿಯ ಅಧೀನವಾದವು.
ದೇವತೆಗಳಿಗಾದ ಈ ದೊಡ್ಡ ಪರಾಭವವನ್ನು ನೋಡಿ, ವಿಷ್ಣು ಏನೂ ಮಾಡಲಾಗದೆ, ವರಬಲದಿಂದ ಅಪಾರವಾದ ಶಕ್ತಿ ತುಂಬಿದ ಕಾಲನೇಮಿಗೆ ಮರಣದ ಕಾಲ ಕೂಡಿ ಬರಲಿಲ್ಲವೆಂದುಕೊಂಡು ಸುಮ್ಮನಿರಬೇಕಾಯಿತು.
ದೇವತೆಗಳಿಗೆ ಹೀಗೇನಾದರೂ ಆದರೆ ವಿಷ್ಣು ಎದ್ದು ಬರಬೇಕಿತ್ತು. ಈಗ ಅವನು ಸುಮ್ಮನಿರುವುದು ಏನೋ ಒಂದು ತಂತ್ರವಿರಬೇಕೆಂದು ಕಾಲನೇಮಿಗೆ ತೋರಿತು.
ಈ ಸಂದರ್ಭದಲ್ಲಿ ತಾನೇ ಮುಂಗಾಲು ಕೆದರಿ ವಿಷ್ಣುವನ್ನು ಹತ ಮಾಡುವುದೇ ಒಳ್ಳೇದೆಂದುಕೊಂಡು ಕಾಲನೇಮಿ ವಿಷ್ಣು ಬಳಿಗೆ ಹೋಗಿ, “ನಮ್ಮ ಮಧುಕೈಟಭರನ್ನು ಕೊಂದ ನೀನು ಈಗ ಏಕೆ ಸುಮ್ಮನಿರುವೆ? ನಮ್ಮ ದೈತ್ಯರ ಮಕುಟಮಣಿಯಾಗಿದ್ದ ಹಿರಣ್ಯಕಶಿಪುವನ್ನು ಉಗುರಿನಿಂದ ಸೀಳಿದವನಲ್ಲವೇ ನೀನು? ನಮ್ಮ ಬಲಿಯನ್ನು ಪಾತಾಳಕ್ಕೆ ಒತ್ತಿದಿ. ಆಗ ಮೂರು ಲೋಕಗಳನ್ನೂ ಆಕ್ರಮಿಸಿಕೊಂಡೆಯಲ್ಲಾ? ನಮ್ಮ ದೈತ್ಯ ಸ್ತ್ರೀಯರ ಕಣ್ಣೀರಿನಿಂದಲೇ ದೇವತೆಗಳ ಹೊಲವನ್ನು ಹುಲುಸುಗೊಳಿಸುವವನಲ್ಲವೇ ನೀನು? ನಾನೀಗ ನಿನ್ನ ಬಳಿಗೆ ನಾನಾಗಿ ಏಕೆ ಬಂದಿದ್ದೇನೆ ಗೊತ್ತಾ? ನಿನ್ನ ಮೇಲಿನ ಹಗೆಯನ್ನು ತೀರಿಸಿಕೊಳ್ಳಲಿಕ್ಕೇ ಬಂದಿದ್ದೇನೆ”ಎಂದನು.
ಎಲೋ ಕಾಲನೇಮೀ! ಹಳೆಯದನ್ನು ಹೇಳಿಕೊಂಡು ಬೊಗಳುವುದರಿಂದ ಏನು ಪ್ರಯೋಜನ? ಶೂರನಾದವನು ಹೀಗೆ ಬಡಾಯಿ ಹೇಳಿಕೊಂಡಿರುವನೇನು? ಬ್ರಹ್ಮನು ಕೊಟ್ಟ ವರಗಳಿಂದಾಗಿ ನಿನಗಾರೂ ಸಮನಿಲ್ಲವೆಂದು ಕೊಬ್ಬಿ ಹೋಗಿರುವಿ! ಸಿಕ್ಕಿದ್ದು ಸಾಕೆಂಬ ತೃಪ್ತಿಯಿಂದ ಸುಮ್ಮನಿರುವುದನ್ನು ಬಿಟ್ಟು ನನ್ನನ್ನು ಕೆಣಕಲು ಬಂದಿಯೇನು? ನಿನ್ನ ಪೂರ್ವಿಕರಿಗೆ ಬಂದಗತಿಯೇ ನಿನಗೂ ಬರಬೇಕೆಂದಿದೆಯೇನು? ಹಾಗಾದರೆ ಒಳ್ಳೆಯದಾಯಿತು. ನಿನ್ನನ್ನು ಹುಡುಕಿಕೊಂಡು ಹೋಗುವ ಶ್ರಮ ತಗ್ಗಿತು. ಈಗಲೇ ನಿನ್ನನ್ನು ಕೊಂದು ದೇವತೆಗಳಿಗೆ ಅವರ ಸ್ಥಾನವನ್ನು ಕೊಡಿಸುತ್ತೇನೆ”ಎಂದನು ವಿಷ್ಣು.
ಆ ಮಾತು ಕೇಳಿ ಕಾಲನೇಮಿ ಕೋಪೋದ್ರೇಕದಿಂದ ತನ್ನ ಗದೆಯನ್ನೆತ್ತಿ ಗರುಡನ ತಲೆಗೆ ಗುರಿಯಿಟ್ಟು ಬೀಸಿ ದೊಡ್ಡ ದನಿಯಿಂದ ಆರ್ಭಟಿಸಿದನು. ವಜ್ರಾಯುಧವು ಬೆಟ್ಟವನ್ನು ತಾಗಿದಂತೆ ಅವನ ಗದೆ ಗರುಡನ ತಲೆಗೆ ತಾಗಿತು.
ವಿಷ್ಣು ತಟಕ್ಕನೆದ್ದು ಗರುಡನ ತಲೆಯನ್ನು ತಡವಿ ನೋವನ್ನು ನಿವಾರಿಸಿ, ತನ್ನ ಶರೀರವನ್ನು ಬೃಹತ್ತಾಗಿ ಬೆಳೆಯಿಸಿ, ಗರುಡನ ಶರೀರವನ್ನು ಪೂಸಲು, ಗರುಡನೂ ಬೃಹದಾಕಾರನಾಗಿ ಬೆಳೆದನು. ಆಗ ವಿಷ್ಣು ತನ್ನ ಕೈಯಲ್ಲಿ ತಿರುಗಿಕೊಂಡಿದ್ದ ಚಕ್ರವನ್ನು ಕಾಲನೇಮಿಯ ಮೇಲೆ ಬಿಟ್ಟನು.
ಆ ಸುದರ್ಶನ ಚಕ್ರವು ವೇಗವಾಗಿ ಕಾಲನೇಮಿಯ ತಲೆಗಳನ್ನೂ ಕೈಗಳನ್ನೂ ಚರಚರನೆ ತರಿದು ಚೆಲ್ಲಿತು. ಕಡೆಗೆ ಕಾಲನೇಮಿಯ ಶರೀರ ಮಾತ್ರ ಬೋಳು ಮರದಂತೆ ಹಾಗೆಯೇ ನಿಂತಿರುವುದನ್ನು ನೋಡಿ, ಗರುಡನು ತನ್ನ ರೆಕ್ಕೆಗಳನ್ನು ಬೀಸಿ ಗಾಳಿಯನ್ನು ಹುಟ್ಟಿಸಲು ಆ ಶರೀರವು ಕೆಳಕ್ಕೆ ಬಿದ್ದಿತು.
ಈ ಆಕಸ್ಮಿಕ ದುರಂತವನ್ನು ನೋಡಿ ಕಾಲನೇಮಿಯ ಅನುಚರರಾದ ರಾಕ್ಷಸ ವೀರರು ಕಂಗೆಟ್ಟು ಎಲ್ಲಿದ್ದವರಲ್ಲಲ್ಲೇ ಹುಗಿದ ಗೂಟಗಳಂತೆ ನಿಂತಿರಲು, ವಿಷ್ಣು ಅವರೆಲ್ಲರನ್ನೂ ಕೊಂದು ಕೆಡವಿದನು.
ಯಾರೂ ಅಂದುಕೊಳ್ಳದಂತೆ ಗರ್ವಾತಿರೇಕದ ಕಾಲನೇಮಿ ತಾನಾಗಿ ಹೋಗಿ ವಿಷ್ಣುವನ್ನು ಕೆಣಕಿ, ರಾಕ್ಷಸರ ಗುಂಪಿನೊಂದಿಗೆ ಹೀಗೆ ಸತ್ತ ಕೂಡಲೇ, ಬ್ರಹ್ಮನೂ ಇತರ ದೇವತೆಗಳೂ ವಿಷ್ಣುವನ್ನು ನೋಡಲು ಬಂದು, ವಿಧವಿಧವಾಗಿ ಹೊಗಳಿದರು, ಹೂಮಳೆಗರೆದರು.
ಇನ್ನು ಮೇಲೆ ನಿಮಗೆ ರಾಕ್ಷಸರ ಭಯಬಾರದು. ಎಂದಿನಂತೆ ನಿಮ್ಮ ನಿಮ್ಮ ಲೋಕಗಳನ್ನು ಪಾಲಿಸಿಕೊಂಡು ನಿಶ್ಚಿಂತೆಯಿಂದಿರಿ. ಇನ್ನು ಯಜ್ಞ ಯಾಗ ದಾನಧರ್ಮಗಳು ನಿರ್ವಿಘ್ನವಾಗಿ ನಡೆಯುತ್ತವೆ. ಆದರೂ ಹಗೆ ಹಿಡಿದ ಮನಸ್ಸು ಹೊಗೆಯಾಡಿಸಿಕೊಂಡೇ ಇದ್ದೀತು. ನೀವು ಸುಖ ಭೋಗಗಳಲ್ಲಿ ಮೈಮರೆಯದೆ, ರಾಕ್ಷಸರನ್ನು ಒಂದು ಕಣ್ಣಿನಿಂದ ಗಮನಿಸಿಕೊಂಡೇ ಇರಬೇಕು” ಎಂದು ವಿಷ್ಣು ಅವರಿಗೆ ಹೇಳಿದನು.
ಆಮೇಲೆ ವಿಷ್ಣು ನಿಶ್ಚಿಂತನಾಗಿ ಕ್ಷೀರಸಾಗರದ ತನ್ನ ಹಾಸಿಗೆಯ ಮೇಲೆ ಒರಗಿ ಯೋಗನಿದ್ದೆಗೆ ತೊಡಗಿದನು.
ಹಾಗೆ ವಿಷ್ಣು ಯೋಗನಿದ್ರೆಯಲ್ಲಿರುವಾಗಲೇ ಕೃತಯುಗವು ಹೊರಟು ಹೋಯಿತು. ತ್ರೇತಾಯುಗವೂ ಅಂತ್ಯಕಾಲಕ್ಕೆ ಬಂದಿತು. ಆ ಸಮಯಕ್ಕೆ ಭೂದೇವಿ ಪ್ರಜೆಗಳ ಭಾರವು ಬಹಳ ಹೆಚ್ಚಾಗಿ ಹೋಯಿತೆಂದು ಅಳಲು ಪ್ರಾರಂಭಿಸಿದಳು. ಅವಳು ಅಳುತ್ತಾ ಬ್ರಹ್ಮನ ಹತ್ತಿರ ಹೋಗಿ ತನ್ನ ಗೋಳನ್ನು ತೋಡಿಕೊಂಡಳು.
ಬ್ರಹ್ಮನು ಅವಳನ್ನು ಕರೆದುಕೊಂಡು ಹೋಗಿ, ವಿಷ್ಣುವನ್ನು ಕರೆದು ಯೋಗನಿದ್ದೆಯಿಂದ ಎಬ್ಬಿಸಿದನು.
ವಿಷ್ಣು ಮೆಲ್ಲನೆ ಕಣ್ಣು ತೆರೆದು ಬಂದವರನ್ನೆಲ್ಲಾ ನೋಡಿ, “ಏನಿದು? ಎಲ್ಲರೂ ಸೇರಿ ಹೀಗೆ ಬಂದಿರೇಕೆ? ನೀವೆಲ್ಲಾ ಚೆನ್ನಾಗಿ ಇರುವಿರಿ ತಾನೇ? ಲೋಕಗಳು ರಾಕ್ಷಸರ ಬಾಧೆಯೇನಿಲ್ಲದೆ ಸುಖವಾಗಿ ಇವೆ ತಾನೇ? ವಿಶೇಷವೇನು?” ಎಂದು ಕುಶಲ ಪ್ರಶ್ನೆ ಮಾಡಿದನು.
ಬ್ರಹ್ಮನು ಕೈಜೋಡಿಸಿ, “ದೇವದೇವಾ, ಮಹಾನುಭಾವಾ! ರಾಜರ ನಡುವೆ ಯಾವ ವಿಧವಾದ ಶತ್ರುತ್ವವೂ ಇಲ್ಲ. ಸತ್ಯವೂ ಧರ್ಮವೂ ಸ್ಥಿರವಾಗಿಯೇ ಇವೆ. ಯಜ್ಞ ಯಾಗಗಳೂ ಚೆನ್ನಾಗಿಯೇ ನಡೆಯುತ್ತಿವೆ. ದೇವಕಾರ್ಯ ಪಿತೃಕಾರ್ಯಗಳೂ ಸರಿಯಾಗಿ ಸಾಗುತ್ತಿದೆ. ಯಾರಿಗೂ ಯಾವ ರೋಗವೂ ಇಲ್ಲ. ಮಾನವರೆಲ್ಲ ಸಂಪೂರ್ಣಾಯುಸ್ಸಿನಿಂದ ಬಾಳಿಕೊಂಡಿದ್ದಾರೆ. ಯಾವ ಪಟ್ಟಣಗಳನ್ನು ನೋಡಿದರೂ, ಹಳ್ಳಿಗಳನ್ನು ನೋಡಿದರೂ ಜಿಗಿಜಿಗಿ ಜನಸಂಖ್ಯೆ ವಿಪರೀತವಾಗಿದೆ. ಈ ಜನಗಳ ಭಾರವನ್ನು ತಾಳಲಾರೆನೆಂದು ಭೂದೇವಿ ನರಳುತ್ತಿದ್ದಾಳೆ. ಧರ್ಮಕ್ಕೆ ಹಾನಿಯಾಗದಂತೆ ಹೆಚ್ಚಿಕೊಂಡಿರುವ ಈ ಭೂಭಾರವನ್ನು ತಗ್ಗಿಸುವ ಉಪಾಯವೇನೆಂದು ನಮಗಾರಿಗೂ ತಿಳಿಯುವುದಿಲ್ಲ. ಭೂದೇವಿಯ ದುಃಖವನ್ನೂ ನೋಡಲಾಗುವುದಿಲ್ಲ. ಆ ಉಪಾಯವನ್ನು ನೀನೇ ನೋಡಬೇಕಾಗಿದೆ. ನೀನು ಮೇರು ಪರ್ವತಕ್ಕೆ ದಯಮಾಡಿ, ಅಲ್ಲಿ ನಮಗೆಲ್ಲರಿಗೂ ಮಾರ್ಗದರ್ಶನ ಮಾಡಬೇಕೆಂದು ಬೇಡುತ್ತೇವೆ”ಎಂದನು.
ವಿಷ್ಣು ಎದ್ದು ಕುಳಿತು ತನ್ನ ಆಭರಣಗಳನ್ನು ಸರಿಪಡಿಸಿ, ಸಡಿಲಾದ ಬಟ್ಟೆಯನ್ನು ಬಿಗಿಗೊಳಿಸಿ ಗರುಡಾರೂಢನಾಗಿ ಮೇರುಪರ್ವತಕ್ಕೆ ಬಂದನು. ಆ ಪರ್ವತದ ಮೇಲೆ ವಿಶ್ವಕರ್ಮನು ಈ ಮೊದಲು ನಿರ್ಮಿಸಿದ ಬಹು ವಿಸ್ತಾರವಾದ ಭವ್ಯವಾದ ಸಭಾಮಂಟಪವೊಂದಿದ್ದಿತು.
ಆ ಸಭಾಮಂಟಪದ ಉನ್ನತಾಸನದ ಮೇಲೆ ವಿಷ್ಣು ಕುಳಿತುಕೊಂಡನು. ಉಳಿದವರೆಲ್ಲರೂ ಉಚಿತಾಸನಗಳಲ್ಲಿ ಕುಳಿತರು. ಆ ಸಭೆಗೆ ಅಷ್ಟದಿಕ್ಪಾಲಕರೂ, ಯಕ್ಷರೂ, ಗಂಧರ್ವರೂ, ಸಿದ್ಧರೂ, ವಿದ್ಯಾಧರರೂ, ಕಿನ್ನರರೂ, ನಾಗರೂ ಮೊದಲಾದವರೆಲ್ಲಾ ಬಂದಿದ್ದರು.
ಅಪಾರ ದುಃಖದ ಭಾರವನ್ನು ಹೊತ್ತುಕೊಂಡು ಭೂದೇವಿ ಆ ಸಭೆಗೆ ಬಂದಳು. ಅವಳನ್ನು ನೋಡಿದ ಕೂಡಲೇ ಎಲ್ಲರೂ ಒಂದೇ ಬಾರಿಗೇ ಮಾತಾಡಲುತೊಡಗಿದರು. ವಾಯುದೇವನು ಕೈಯೆತ್ತಿ ಕಲಕಲರವವನ್ನು ನಿಲ್ಲಿಸಿದನು. ಸದ್ದಡಗಿದ ಮೇಲೆ ಬ್ರಹ್ಮನು ಭೂದೇವಿ ಅಲ್ಲಿಗೆ ಏಕೆ ಬಂದಳೆಂಬುದನ್ನು ಹೇಳುವಂತೆ ಹೇಳಲು, ಭೂದೇವಿ ಹೇಳತೊಡಗಿದಳು.
ನಾನೇನು ಹೇಳಲಿ? ನಿಮಗೆ ಗೊತ್ತಿಲ್ಲದ್ದು ಏನಿದೆ? ರಾಜರು ಅಪಾರವಾಗಿ ಬೆಳೆದಿದ್ದಾರೆ. ಅದಕ್ಕಿಂತ ಹೆಚ್ಚು ಜನಸಂಖ್ಯೆಯಾಗಿದೆ. ಈ ಭಾರವು ತಗ್ಗದಿದ್ದರೆ ಬಹಳ ಕಾಲ ನಾನು ಬದುಕಲಾರೆನು. ವಿಷ್ಣುಮೂರ್ತಿ ಮನಸ್ಸು ಮಾಡಿದರೆ ಈ ಕಾರ್ಯ ಸುಲಭವಾಗಿ ಮುಗಿಯತ್ತದೆ. ಇನ್ನು ಹೆಚ್ಚು ನಾನು ಹೇಳಲಾರೆನು”ಎಂದು ದುಃಖದ ಕಂಠಸ್ವರದಿಂದ ಹೇಳಿದಳು.
ಭೂದೇವಿ ಗದ್ಗದಿತಳಾಗಿ ಹೇಳಿದ ಈ ಮಾತುಗಳನ್ನು ಕೇಳಿದ ಸಭಿಕರು ತಮ್ಮೊಳಗೆ ತಾವು ಸ್ವಲ್ಪ ಹೊತ್ತು ಮಾತಾನಾಡಿಕೊಂಡು ಬ್ರಹ್ಮದೇವನೊಂದಿಗೆ, “ಒಟ್ಟಿನ ಮೇಲೆ ಭೂದೇವಿಯ ದುಃಖವನ್ನು ಹೋಗಲಾಡಿಸಬೇಕಾದುದು ನಮ್ಮ ಕರ್ತವ್ಯ. ಸೃಷ್ಟಿಕರ್ತನೂ ಹಿರಿಯನೂ ಆದ ನೀನೇ ಇದಕ್ಕೆ ಮುಂದೆ ನಿಂತು ತಕ್ಕ ಆಜ್ಞೆ ಮಾಡಬೇಕು”ಎಂದರು.
ಆಗ ಬ್ರಹ್ಮನು ಎದ್ದು ನಿಂತು ಸಭಾಸದರನ್ನು ನೋಡಿ ಹೀಗೆಂದನು:
ಹೀಗಾಗಲು ಮೂಲಕಾರಣವಿದೆ. ಅದೇನೆಂದರೆ ಒಂದು ದಿನ ಸಾಯಂಕಾಲದಲ್ಲಿ ನಾನೂ, ಕಶ್ಯಪ ಮುನಿಯೂ ಸಮುದ್ರ ತೀರದಲ್ಲಿ ಕುಳಿತುಕೊಂಡು ತತ್ವಗಳ ವಿಚಾರ ಮಾತಾಡಿಕೊಂಡಿರುವಾಗ, ಚಂದ್ರೋದಯದ ಹೊತ್ತಿನಲ್ಲಿ ಗಂಗಾ ಸಂಗಮದಿಂದ ಉಕ್ಕಿದ ಸಮುದ್ರವು ಆಕಾಶದಷ್ಟೆತ್ತರಕ್ಕೆ ಎದ್ದು ನಾವು ಕುಳಿತ ಜಾಗವನ್ನೆಲ್ಲಾ ಆಕ್ರಮಿಸಿ ನಮ್ಮನ್ನೂ ಒದ್ದೆ ಮುದ್ದೆಮಾಡಿತು. ನಾನು ನಗುತ್ತಾ, `‘ಇದೇನು ಕೆಲಸವೋ ಸಮುದ್ರಾ, ಶಾಂತನಾಗು!” ಎಂದೆನು. ಸಮುದ್ರನು ಶಾಂತನಾಗಿ ಮಾನವ ರೂಪ ಧರಿಸಿ ನಮ್ಮ ಇದಿರಿಗೇ ನಿಂತನು. ಅವನೊಂದಿಗೆ ಗಂಗೆಯೂ ಇದ್ದಳು. ಆಗ ನಾನು ಭವಿಷ್ಯತ್ತನ್ನು ಆಲೋಚನೆ ಮಾಡಿ, “ಸಮುದ್ರನೇ, ಹೀಗೆ ನೀನು ರಾಜಗುಣ ತೋರಿಸಿದುದರಿಂದ ಭೂಮಿಯ ಮೇಲೆ ರಾಜನಾಗಿ ಹುಟ್ಟು. ನಾನು ಹೇಳಿದ ಕೂಡಲೇ ಶಾಂತನಾದುದರಿಂದ ಶಂತನು ಎಂಬ ಹೆಸರಿನಲ್ಲಿ ಈ ಗಂಗೆಯನ್ನೇ ಪತ್ನಿಯಾಗಿ ಮಾಡಿಕೊಂಡು ಜೀವಿಸು”ಎಂದೆನು. ಸಮುದ್ರನು ನನಗೆ ನಮಸ್ಕಾರ ಮಾಡಿ, `‘ಪರ್ವ ಕಾಲಗಳಲ್ಲಿಯೂ, ಗಾಳಿ ಚೆನ್ನಾಗಿ ಬೀಸಿದಾಗಲೂ, ಚಂದ್ರೋದಯದ ಕಾಲದಲ್ಲಿಯೂ ಉಕ್ಕುವುದು ನನ್ನ ಸ್ವಭಾವ. ಇದರಲ್ಲಿ ಯಾವ ದುರ್ಬುದ್ಧಿಯೂ ನನಗಿಲ್ಲ. ಇದನ್ನು ತಿಳಿದಿರುವ ತಾವು ದುಡುಕಿ ನನ್ನನ್ನು ಶಪಿಸುವುದು ಧರ್ಮವೆ?” ಎಂದು ದೀನನಾಗಿ ಕೇಳಿದನು.
ಅಪ್ಪಾ, ಲೋಕಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಾನು ಹಾಗೆ ಹೇಳಿದೆನು. ನೀನು ಪವಿತ್ರವಾದ ಭರತ ವಂಶದಲ್ಲಿ ಹುಟ್ಟುವಿ. ಈ ಗಂಗೆಯಲ್ಲಿ ವಸುಗಳನ್ನು ಹಡೆದು ಅವರಿಗೆ ವಸಿಷ್ಠನು ಕೊಟ್ಟ ಶಾಪವನ್ನು ತೊಲಗಿಸು. ಆಮೇಲೆ ಸತ್ಯವತಿ ಎಂಬವಳಿಗೆ ವಂಶೋದ್ಧಾರಕರಾದ ಇಬ್ಬರು ಕುಮಾರರನ್ನು ಪಡೆದು ಜನ್ಮ ತೀರಿಸಿಕೊಳ್ಳುವಿ”ಎಂದು ಹೇಳಿದೆನು.
“ಆ ಶಂತನು ರಾಜನ ಮಗನಾದ ವಿಚಿತ್ರವೀರ್ಯನಿಗೆ ಧೃತರಾಷ್ಟ್ರ ಮತ್ತು ಪಾಂಡು ಎಂಬ ಇಬ್ಬರು ಪುತ್ರರು ಹುಟ್ಟುತ್ತಾರೆ. ಧೃತರಾಷ್ಟ್ರನಿಗೆ ನೂರು ಮಂದಿ ಪುತ್ರರೂ, ಪಾಂಡುವಿಗೆ ಐದು ಮಂದಿ ಪುತ್ರರೂ ಹುಟ್ಟುವರು. ಆ ನೂರು ಮಂದಿ ಹಾಗೂ ಐವರ ನಡುವೆ ರಾಜ್ಯದ ಕಾರಣದಿಂದ ಮಹಾಯುದ್ಧವೊಂದು ನಡೆಯುತ್ತದೆ. ಆ ಯುದ್ಧದಲ್ಲಿ ಭೂಮಿಯ ಮೇಲಿದ್ದ ರಾಜರೆಲ್ಲರೂ ನಾಶವಾಗಿ ಹೋಗುತ್ತಾರೆ. ಅನೇಕ ಲಕ್ಷಗಳಷ್ಟು ಆನೆಗಳೂ ಕುದುರೆಗಳೂ ಸೈನಿಕರೂ ಸತ್ತು ಭೂದೇವಿಯ ಭಾರ ತಗ್ಗಿ ಹಗುರಾಗಿ ಬಿಡುತ್ತದೆ. ಕಲಹಕಾರಕನಾದ ಕಲಿಯ ಅಂಶವು ಧೃತರಾಷ್ಟ್ರನ ಹೆಂಡತಿಯ ಗರ್ಭದಲ್ಲಿಯೂ, ಯಮನ ಅಂಶವು ಪಾಂಡುವಿನ ಪತ್ನಿಯ ಗರ್ಭದಲ್ಲಿಯೂ ಸೇರಿ, ಅವರವರ ಮಕ್ಕಳಿಗೆ ಆಯಾ ಗುಣಗಳಿಂದ ಕಲಹವಾಗುತ್ತದೆ. ಇನ್ನೂ ಅನೇಕ ಮಂದಿ ದೇವತೆಗಳ ಮುಖ್ಯಾಂಶಗಳು ಮಾನವರ ಗರ್ಭದಲ್ಲಿ ಜನಿಸಿ ವಿಜೃಂಭಿಸುತ್ತವೆ.”
ಬ್ರಹ್ಮನು ಹೇಳಿದ ಈ ವಿವರಣೆಗಳನ್ನು ಕೇಳಿ, ಎಲ್ಲರೂ ಅವನನ್ನು ಅಭಿನಂದನೆ ಮಾಡಿದರು. ಅದೇ ಸಮಯದಲ್ಲಿ ಆ ಸಭೆಗೆ ನಾರಾಯಣ ನಾಮ ಗಾನದೊಂದಿಗೆ ನಾರದನು ಬಂದನು.
ಅವನು ವೀಣಾಗಾನದೊಂದಿಗೆ ವಿಷ್ಣುವನ್ನು ಸಂಕೀರ್ತಿಸುತ್ತ, “ದೇವಾ, ಭೂಮಿಯ ಮೇಲೆ ಬೆಳೆದು ಹರಡಿರುವ ರಾಜರ ಕುಲಗಳನ್ನು ನಿರ್ಮೂಲಿಸಲಿಕ್ಕಾಗಿ ಈ ದೇವತೆಗಳೆಲ್ಲರೂ ಇಲ್ಲಿ ಸೇರಿ ತಲೆ ಹಾಕಿದ ಕಾರ್ಯವು ನಿನ್ನ ಪ್ರವೇಶವಿಲ್ಲದೆ ಹೇಗೆ ಸಫಲವಾಗುತ್ತದೆ? ಭೂಮಿಯಲ್ಲಿ ನಿನ್ನ ಅಂಶವೂ ಅವತರಿಸಲೇಬೇಕು. ಉಳಿದವರ ಅಂಶಗಳಿಗೆ ಉತ್ಸಾಹವೂ ಪ್ರೇರಣೆಗಳೂ ನಿನ್ನಿಂದಲೇ ಆಗಬೇಕು. ಹಾಗಿಲ್ಲದಿದ್ದರೆ ಈ ದೇವಕಾರ್ಯವು ನೆರವೇರುವಂತಿಲ್ಲ. ಅದೂ ಅಲ್ಲದೆ, ಈ ದೇವಾಂಶಗಳಲ್ಲಿ ಹುಟ್ಟುವವರಾರಿಗೂ ಸಾಧ್ಯವಾಗದ ಕೆಲಸ ಇನ್ನೊಂದಿದೆ. ಅದನ್ನು ಕುರಿತು ಎಚ್ಚರಿಸಲಿಕ್ಕಾಗಿಯೇ ನಾನು ವೇಗವಾಗಿ ಇಲ್ಲಿಗೆ ಬಂದೆನು. ಅದೇನೆಂದರೆ, ಹಿಂದೆ ದೇವಾಸುರ ಯುದ್ಧದಲ್ಲಿ ನಿನ್ನಿಂದ ಸತ್ತ ಅಸುರರೆಲ್ಲರೂ ಭೂಮಿಯಲ್ಲಿ ಮಾನವ ಜನ್ಮ ಎತ್ತಿದ್ದಾರೆ. ರಾಮನ ಕೈಯಲ್ಲಿ ಸತ್ತ ರಾವಣನ ಸೋದರಳಿಯನಾದ ಮಧುವೆಂಬವನ ಮಗನಾದ ಲವಣನೆಂಬವನು ರಾಮನ ಆಜ್ಞೆಯಿಂದ ಶತ್ರುಘ್ನನ ಕೈಯಲ್ಲಿ ಸತ್ತನಷ್ಟೆ? ಶತ್ರುಘ್ನನು ಅಲ್ಲಿಯ ಮಧುವನವನ್ನು ನಿರ್ಮೂಲಿಸಿ ಮಥುರಾ ಎಂಬ ಹೆಸರಿನಲ್ಲಿ ಮಹಾನಗರವನ್ನು ನಿರ್ಮಿಸಿದ್ದಾನೆ. ಅಲ್ಲಿ ಅನೇಕ ತಲೆಮಾರಿನ ರಾಜರು ಪಾಲಿಸಿ ಅದನ್ನು ವೃದ್ಧಿಗೆ ತಂದಿದ್ದಾರೆ. ಈಗ ಅಲ್ಲಿ ಆಕಾಲದ ಕಾಲನೇಮಿ ರಾಕ್ಷಸನು ಕಂಸನೆಂಬ ಹೆಸರಿನಲ್ಲಿ ಉಗ್ರಸೇನನೆಂಬ ಭೋಜವಂಶದ ರಾಜನಿಗೆ ಮಗನಾಗಿ ಹುಟ್ಟಿದ್ದಾನೆ. ಅವನು ತನ್ನ ತಂದೆಯಾದ ಉಗ್ರಸೇನನನ್ನು ಸೆರೆಮನೆಯಲ್ಲಿಟ್ಟು ಸಿಂಹಾಸನದಲ್ಲಿ ಕುಳಿತು ತಾನೇ ರಾಜನೆಂದು ಸಾರಿದ್ದಾನೆ. ಕಾಲನೇಮಿಯ ಮಿತ್ರರೆಲ್ಲರೂ ಆ ಮಥುರಾಪುರದಲ್ಲಿ ಹುಟ್ಟಿ ಕಂಸನಿಗೆ ಸೇವಕರಾಗಿ ಸೇರಿಕೊಂಡಿದ್ದಾರೆ. ಕಾಳಂದೀ ತೀರದಲ್ಲಿಯೂ, ಬೃಂದಾವನದಲ್ಲಿಯೂ, ಮಥುರಾಪುರದಲ್ಲಿಯೂ ಆ ರಾಕ್ಷಸ ಜನ್ಮದವರು ತುಂಬಿಕೊಂಡಿದ್ದಾರೆ. ಕೆಲಮಂದಿ ರಾಕ್ಷಸರು ಪ್ರಾಗ್ಜೋತಿಷದಲ್ಲಿ (ಇಂದಿನ ಅಸ್ಸಾಂ) ಹುಟ್ಟಿ ನರಕಾಸುರನಿಗೆ ಸಹಾಯಕರಾಗಿದ್ದಾರೆ. ಈ ರಾಕ್ಷಸರನ್ನೆಲ್ಲಾ ಕೊಂದುಹಾಕಲು ನೀನು ಮಾನವ ಜನ್ಮದಲ್ಲಿ ಅವತರಿಸಲೇಬೇಕು” ಎಂದನು.
ನಾರದನು ಹೇಳಿದುದನ್ನು ಕೇಳಿ ವಿಷ್ಣು ಬ್ರಹ್ಮನ ಕಡೆಗೆ ತಿರುಗಿ ಮುಗುಳು ನಗುತ್ತ, “ನಾನು ಹಾಗೆಯೇ ಅವತಾರವೆತ್ತುತ್ತೇನೆ. ನಾನು ಎಲ್ಲಿ ಹುಟ್ಟಬೇಕೆಂದು ಸೃಷ್ಟಿಕರ್ತನಾದ ನೀನೇ ಆರಿಸಿ ಹೇಳಿಬಿಡು”ಎಂದನು.
ಅದಕ್ಕೆ ಬ್ರಹ್ಮನು, “ಹಿಂದೆ ವರುಣನ ಯಜ್ಞಧೇನುವನ್ನು ಕಶ್ಯಪನು ವಶಪಡಿಸಿಕೊಂಡಿದ್ದನು. ಕಶ್ಯಪನ ಹೆಂಡತಿಯರಾದ ಅದಿತಿಯೂ ಸುರಭಿಯೂ ಅದನ್ನು ವರುಣನಿಗೆ ಹಿಂದಿರುಗಿಸದೆ ತಡೆದಿದ್ದರು. ವರುಣನು ಈ ಸಂಗತಿಯನ್ನು ನನ್ನೊಂದಿಗೆ ಮೊರೆಯಿಟ್ಟುಕೊಂಡಾಗ ನಾನು ಕಶ್ಯಪನನ್ನೂ ಅವನ ಹೆಂಡತಿಯರನ್ನೂ ಮಾನವ ಜನ್ಮ ಎತ್ತುವಂತೆ ಶಪಿಸಿದ್ದೇನೆ. ಆ ಕಶ್ಯಪನು ಈಗ ವಸುದೇವನಾಗಿ ಹುಟ್ಟಿ ಕಂಸನ ಪಶುಶಾಲೆಯ ಅಧಿಪತಿಯಾಗಿದ್ದಾನೆ. ಕಶ್ಯಪನ ಹೆಂಡತಿಯರಿಬ್ಬರೂ ದೇವಕಿ ಮತ್ತು ರೋಹಿಣಿಯರಾಗಿ ಹುಟ್ಟಿ, ವಸುದೇವನಿಗೆ ಹೆಂಡತಿಯರಾಗಿದ್ದಾರೆ. ನೀನು ನಿನ್ನ ಅಂಶವನ್ನು ಎರಡು ಭಾಗಮಾಡಿ ವಸುದೇವನ ಪತ್ನಿಯರಿಬ್ಬರಲ್ಲಿಯೂ ಜನಿಸಬೇಕು” ಎಂದು ಬ್ರಹ್ಮನು ವಿಷ್ಣುವಿಗೆ ಹೇಳಿದನು.
ವಿಷ್ಣು ಬ್ರಹ್ಮನ ಮಾತಿನಿಂದ ತೃಪ್ತನಾಗಿ, ಹಾಗೆಯೇ ಮಾಡುವೆನೆಂದು ಹೇಳಿ ಸಭೆಯನ್ನು ಮುಗಿಸಿ ಎಲ್ಲರನ್ನೂ ಕಳುಹಿಸಿ ತಾನು ಗರುಡವನ್ನು ಏರಿ ಕ್ಷೀರಸಾಗರದ ಕಡೆಗೆ ಹಿಂದಿರುಗಿದನು.
(ಮುಂದುವರೆಯಲಿದೆ…)

- ಎಂ.ವಿ. ಶಂಕರಾನಂದ, ಸಾಹಿತಿಗಳು, ತುಮಕೂರು. ಮೊಬೈಲ್: 8971302974

ಕೃತಿ ಚೆನ್ನಾಗಿ ಬಂದಿದೆ. ಇದರ ಹಸ್ತ ಪ್ರತಿಯನ್ನು ಮತ್ತೊಮ್ಮೆ ಪರಿಸ್ಕರಿಸಿದರೆ ಒಳ್ಳೆಯ ಪದಗಳು ಒಳಸೇರುತ್ತವೆ. ಇದು ನನ್ನ ಅನಿಸಿಕೆ. ತಪು ತಿಳಿಯಬೇಡಿ.