ಏಳುಮಲೆ: ಒಂದೊಳ್ಳೆಯ ಪರಿಪೂರ್ಣ ಸಿನಿಮಾ

ಸೆಪ್ಟೆಂಬರ್‌ ಐದರಂದು ಬಿಡುಗಡೆಯಾಗಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿರುವ “ಏಳುಮಲೆ” ಸಿನಿಮಾ ಒಂದೊಳ್ಳೆಯ ಪರಿಪೂರ್ಣ ಸಿನಿಮಾವಾಗಿ ಹೊರಹೊಮ್ಮಿದೆ. ನಿರ್ದೇಶಕ ಪುನೀತ್‌ ರಂಗಸ್ವಾಮಿಯವರ ಮೊದಲ ಸಿನಿಮಾ ಇದಾಗಿದ್ದು, ನಿರ್ದೇಶಕರು ಬಹಳ ಅನುಭವಿ ಹಿರಿಯ ನಿರ್ದೇಶಕರಂತೆ ಈ ಸಿನಿಮಾವನ್ನು ರಚಿಸಿ ನಿರ್ದೇಶಿಸಿದ್ದಾರೆ. ನಾಡಿನ ಉತ್ತಮ ನಿರ್ದೇಶಕರಾದ ತರುಣ್‌ ಕಿಶೋರ್‌ ಸುಧೀರ್‌ ಅವರು ಈ ಸಿನಿಮಾ ತಂಡದ ಜೊತೆಯಲ್ಲಿದ್ದು ನಿರ್ಮಾಣದಲ್ಲಿ ಕೈಜೋಡಿಸಿರುವುದು ಕೂಡ ಈ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬರಲು ಕಾರಣವಾಗಿದೆ.

ಹಾಡುಗಳು ಮತ್ತು ಟ್ರೈಲರ್ಗಳಿಂದ ಗಮನ ಸೆಳೆದ “ಏಳುಮಲೆ” ಮೈಸೂರು ಮತ್ತು ಬೆಂಗಳೂರಿನಲ್ಲಿ ಆಯೋಜಿಸಿದ್ದ ಪೇಯ್ಡ್‌ ಪ್ರೀಮಿಯರ್‌ ಶೋಗಳಲ್ಲಿ ನೋಡುಗರ ಮೆಚ್ಚುಗೆ ಪಡೆದು ಇಂದು ಉತ್ತಮ ಆರಂಭ ಪಡೆದುಕೊಂಡಿದೆ.

ಈ ಸಿನಿಮಾದ ತಾರಾಗಣದಲ್ಲಿ ರಾಣಾ, ಪ್ರಿಯಾಂಕ ಆಚಾರ್‌, ಜಗಪತಿ ಬಾಬು, ಟಿ.ಎಸ್.‌ ನಾಗಾಭರಣ, ಕಿಶೋರ್‌, ಸರ್ದಾರ್‌ ಸತ್ಯ, ಜಗ್ಗಪ್ಪ ಇನ್ನು ಮುಂತಾದವರು ಇದ್ದು ಸಿನಿಮಾದ ಪಾತ್ರವೇ ಆಗಿ ಇವರೆಲ್ಲಾ ಅಭಿನಯಿಸಿದ್ದಾರೆ. ಯಾವುದೇ ಬಿಲ್ಡಪ್‌ ಇಲ್ಲದೆ, ಡ್ಯುಯೆಟ್‌ ಗಳು ಇಲ್ಲದೆ ಇದ್ದರೂ ಅಂತ್ಯದವರೆಗೂ ಸಿನಿಮಾ ಪ್ರೇಕ್ಷಕನನ್ನು ಕುತೂಹಲದಿಂದ ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾದ ಕತೆಗೆ ಓಟಕ್ಕೆ ತಕ್ಕಂತೆ ಚಿತ್ರಕತೆ, ಸಂಭಾಷಣೆ, ಸಂಗೀತ, ಹಾಡುಗಳು, ಹಿನ್ನಲೆ ಸಂಗೀತ, ಸಿನಿಮಾಟೋಗ್ರಫಿ, ಸಾಹಸ, ಸಂಕಲನ, ನಿರ್ದೇಶನ, ನಿರ್ಮಾಣದ ಪ್ರತಿ ಹಂತದಲ್ಲೂ ಶ್ರದ್ಧೆ ಇದೆ. ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ, ಡಿ ಇಮಾನ್‌ ಅವರ ಬಿಜಿಎಂ, ಕೆ.ಎಂ. ಪ್ರಕಾಶ್‌ ಅವರ ಎಡಿಟಿಂಗ್‌ ಸಿನಿಮಾ ಆರಂಭದಿಂದ ಅಂತ್ಯದವರೆಗೂ ಎದ್ದು ಕಾಣುತ್ತದೆ. ಸಿನಿಮಾದ ಪ್ಲಸ್‌ ಪಾಯಿಂಟೇ ಈ ಟೀಮು.

ಕರ್ನಾಟಕ ತಮಿಳುನಾಡಿನ ಗಡಿಭಾಗದ ಮಲೆಮಹದೇಶ್ವರ ಬೆಟ್ಟದ ಆಸುಪಾಸಿನಲ್ಲಿ ಒಂದೇ ರಾತ್ರಿಯಲ್ಲಿ ಜರುಗುವ ಘಟನೆಗಳಿಗೆ ಸಿಲುಕುವ ಪ್ರೇಮಿಗಳಿಬ್ಬರು ಏನಾಗುತ್ತಾರೆ ಎಂಬುದೇ ಸಿನಿಮಾದ ಕಥಾವಸ್ತು. ಒಂದು ಕಾಲದಲ್ಲಿ ಇಡೀ ಜಗತ್ತಿನ ಗಮನ ಸೆಳೆದ ದೇಶದ ವಿದ್ಯಮಾನವೊಂದರ ಹಿನ್ನಲೆಯಲ್ಲಿ ಒಂದಾಗಬೇಕು ಎಂದುಕೊಂಡ ಪ್ರೇಮಿಗಳ ಹೋರಾಟದ ಕಥನ ಕಡೆಯಲ್ಲಿ ಏನಾಗಬಹುದೆಂಬ ಕುತೂಹಲದೊಂದಿಗೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಂಡು ಅಂತ್ಯದಲ್ಲಿ ಕೊಟ್ಟ ಕಾಸಿಗೆ ಮೋಸವಿಲ್ಲದೆ ಒಂದೊಳ್ಳೆಯ ಪರಿಪೂರ್ಣ ಸಿನಿಮಾ ನೋಡಿದ ಅನುಭವದೊಂದಿಗೆ ಅವನ ಮನ ಗೆಲ್ಲುತ್ತದೆ.

ಈ ಸಿನಿಮಾವನ್ನು ಒಮ್ಮೆ ಧಾರಾಳವಾಗಿ ನೋಡಬಹುದು…

  • ಗುಬ್ಬಚ್ಚಿ ಸತೀಶ್.

Leave a Comment

Your email address will not be published. Required fields are marked *

Scroll to Top