
ಸರಸ್ವತಿ ಸಮ್ಮಾನ್ ಭೈರಪ್ಪ ಒಬ್ಬ ತಪಸ್ವಿ. ಅವರ ‘ಭಿತ್ತಿ’ ಜೀವನ ಚರಿತ್ರೆಯನ್ನು ನೋಡಿದಾಗ ತಾಯಿ, ಅಕ್ಕ, ಅಣ್ಣ, ತಮ್ಮ ಎಲ್ಲರನ್ನೂ ಕಳೆದುಕೊಂಡು, ತಾವೂ ಸಾವಿನ ಕದ ತಟ್ಟಿಬರುವ ಭೈರಪ್ಪರ ಧೈರ್ಯ ಮೆಚ್ಚುವಂತದ್ದು. ಹಾಗೆಯೇ ಮಾವನಿಂದ ಅವರು ಪಟ್ಟ ಕಷ್ಟ ಹೇಳತೀರದು. ಪೂಜಾರಿಯಾಗಿದ್ದ ಮಾವನ ಅಸಭ್ಯ ವರ್ತನೆ ದೇವಸ್ಥಾನ ಮತ್ತು ಅರ್ಚಕರು ಇಬ್ಬರಿಗೂ ಮಸಿ ಬಳಿಯುವಂತದ್ದು.
ಎಲ್ಲರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದು ಸಾಕಾರಗೊಳ್ಳಬೇಕಾದರೆ ಗುರುತಿಸಿ ಪೋಷಿಸುವವರ ಅವಶ್ಯಕತೆಯೂ ಅವಶ್ಯಕ ಎಂಬುದನ್ನು ಭೈರಪ್ಪ ಜೀವನಚರಿತ್ರೆ ಬಹು ಸೊಗಸಾಗಿ ತೆರದಿಡುತ್ತದೆ.
ಅವರ ‘ಪರ್ವ’ ಕಾದಂಬರಿಯನ್ನು ಓದಿದ ಮೇಲೆ ಮಹಾಭಾರತಕ್ಕೆ ಈ ರೀತಿಯ ಆಯಾಮವೂ ಇದೆಯೇ ಎಂಬ ಭಾವ ಹಲವು ದಿನಗಳವರೆಗೆ ನನ್ನನ್ನು ಕಾಡದೆ ಇರಲಿಲ್ಲ.
ತಮ್ಮ ಕಾದಂಬರಿಗಳೊಳಗೆ ನಮ್ಮನ್ನು ಕೂರಿಸಿಕೊಂಡುಬಿಡುವ ನಮ್ಮ ಮೈಸೂರು ವಾಸಿ ಶ್ರೀ ಎಸ್. ಎಲ್. ಭೈರಪ್ಪ ಅವರ 2010ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಬಾಚಿ 2011ರಲ್ಲಿ ಅವರ ಮುಡಿಗೇರಿಸಿದ ‘ಮಂದ್ರ’ ಕಾದಂಬರಿ ನನ್ನನ್ನು ಇಂದಿಗೂ ಕಾಡುತ್ತಿರುವುದು ಸುಳ್ಳಲ್ಲ. ಅಷ್ಟು ಬೃಹತ್ ಕಾದಂಬರಿಯನ್ನು ಇಷ್ಟು ನವಿರಾಗಿ ಚಿತ್ರಿಸುವಷ್ಟು ತಾಳ್ಮೆ ಎಷ್ಟು ದೊಡ್ಡದು. ಅಲ್ಲಿಯ ‘ಘೋರೆ ಸಾಹೇಬರ’ ಪಾತ್ರ ನನ್ನನ್ನು ಬಹುವಾಗಿ ಕಾಡಿತು. ಅಂತಹ ಮಹಾನ್ ವ್ಯಕ್ತಿಯನ್ನು ಸೃಷ್ಟಿಸಿದ ಡಾ. ಎಸ್ ಎಲ್ ಭೈರಪ್ಪನವರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.

‘ಮಂದ್ರ’ದಷ್ಟೇ ಆಳವಾದ ವಿಸ್ತಾರವಾದ ಪಾತ್ರಗಳ ತಳಮಳ ಈ ಕಾದಂಬರಿಯ ಜೀವಾಳ.
ಮಂದ್ರ ಕಾದಂಬರಿಯಲ್ಲಿಯ ನಾಯಕ ಅಪ್ರತಿಮ ಸಂಗೀತಗಾರನಾಗಿದ್ದ ಮೋಹನ್ ಲಾಲ್ ಸಹ ಕೊನೆಗೆ ದುರಂತ ನಾಯಕನಾಗಿ, ಕೊನೆಯಲ್ಲಿ ಹೆಸರು ಕೆಡಿಸಿಕೊಳ್ಳುವುದು ಶೋಚನೀಯ.
ಅವನಲ್ಲಿ ಪ್ರತಿಭೆಯಷ್ಟೇ ಘಾಡವಾಗಿ ಕಾಮದ ಲಾಲಸೆಯು ಇತ್ತೆಂಬುದು ನಿಜವಾದರೂ, 60 ವರ್ಷದ ಮುದುಕನಿಗೆ ಮಧುಮಿತಾಳಂತ ಸುಸಂಕೃತ ಸುಂದರ ಯುವತಿ ಒಲಿದು ಬರಬೇಕೆಂದರೆ ಅದೆಂತಹ ಕಲೆ ಅವನಲ್ಲಿ ತುಂಬಿತುಳುಕುತಿತ್ತು ಎಂಬುದು ಗಮನಿಸಬೇಕಾದ ವಿಷಯವೆ.
ಇತ್ತ ಸಂಗೀತ ಕಲಿಯುವ ಬಗ್ಗೆ ತನಗಿರುವ ಉತ್ಕಟ ಬಯಕೆಯಿಂದ ಆಗರ್ಭ ಶ್ರೀಮಂತರ ಮನೆಯ ಸದ್ಗುಣೆ ಮಧುಮಿತ ಮೋಹನ್ ಲಾಲನ ಮೋಹದ ಜಾಲಕ್ಕೆ ಬೀಳುತ್ತಾಳೆ. ಅತ್ತ ನೃತ್ಯ ಕಲಿಯಬೇಕೆಂಬ ಉತ್ಕಟ ಬಯಕೆಯಿಂದ ಮನೋಹರಿ ದಾಸ್ ಮುದುಕ ಗುರುವನ್ನು ವಿವಾಹವಾಗುತ್ತಾಳೆ.
ಅಂದರೆ ಮನುಷ್ಯರಿಗೆ ಆ ಸಮಯಕ್ಕೆ ಅವರ ಒಲವುಗಳ ಮುಂದೆ ಉಳಿದೆಲ್ಲವೂ ಗೌಣವಾಗಿಬಿಡುತ್ತವೆಯೇ?
ಇನ್ನು ಮೋಹ – ಕಾಮ ಇವುಗಳು ಮೋಹನ್ ಲಾಲ್ ಮತ್ತು ಮನೋಹರಿ ದಾಸ್ ಇವರಿಬ್ಬರಿಗೂ ಸಹ ಪ್ಲ್ಯಾನ್ ಮಾಡಿ ಬಂದವಲ್ಲ, ಅವರವರ ವಯಸ್ಸಿಗೆ, ಸಂದರ್ಭಕ್ಕೆ ಸಹಜವಾಗಿಯೇ ಕಾಣಿಸಿಕೊಳ್ಳುವ ವಾಂಚೆಗಳು ಮುಂದೆ ಬರಬರುತ್ತಾ ಗೀಳಾಗಿಬಿಡುತ್ತವೆ ಅಷ್ಟೆ. ಹಾಗೆ ನೋಡಿದರೆ ಇವರಿಬ್ಬರಲ್ಲಿ ಮೋಹನಲಾಲನೆ ಪಾಪದ ಮನುಷ್ಯ. ಇಂತಹದೇ ಉದಾಹರಣೆಗಳು ನಮ್ಮ ಸುತ್ತ ಮುತ್ತಲೂ ಸಿಗಬಹುದು.
ದಿಟ್ಟ ಹುಡುಗಿ ಮಧುಮಿತ ತಪ್ಪು ಮಾಡಿದ್ದೂ ಅದಕ್ಕೆ ಪ್ರಾಯಶ್ಚಿತ ಮಾಡಿಕೊಂಡದ್ದು ಸರಿ. ಆದರೆ ಏನೂ ತಪ್ಪೇ ಮಾಡದಿರುವ ಚಿನ್ನದಂತಹ ಹುಡುಗ ಪತಿ ವಿಕ್ರಂಗೆ ತನ್ನ ಬಗ್ಗೆ ಸತ್ಯ ಹೇಳಿ ಅಷ್ಟೊಂದು ನೋವು ಕೊಡಬಾರದಿತ್ತು. ಅವನಿಗಿದ್ದ ಒಂದೇ ಒಂದು ಒಲವು ಸಂಗೀತ. ಅದರ ಮೇಲೆಯೇ ತಾತ್ಸಾರ ಬರುವಂತೆ ಮಾಡಬಾರದಿತ್ತು. ಅವನ ಯಾವ ತಪ್ಪಿಗೆ ಆ ಶಿಕ್ಷೆ? ಒಳ್ಳೆಯವರಿಗೆ ಒಳ್ಳೆಯದೇ ಆಗಬೇಕು. ಆದರೆ ಅಲ್ಲಿ ಹಾಗೆ ಆಗದೆ ಇದ್ದದ್ದು ದುರಂತ.
ಇನ್ನು ಮೋಹನ್ ಲಾಲನ ಧರ್ಮಪತ್ನಿ ರಾಮಕುಮಾರಿಯ ಯಾವ ತಪ್ಪಿಗೆ ಅವಳ ಮಕ್ಕಳೂ ಸಹ ಅವಳನ್ನು ಮನೆ ಬಿಟ್ಟು ಹೋಗುವಂತೆ ಮಾಡಿದರು. ಕಾಯಬೇಕಾದ ಗಂಡ ಎನ್ನಿಸಿಕೊಂಡವನು ಅವಳನ್ನೂ, ಮಕ್ಕಳನ್ನೂ ಬಿಟ್ಟು ಯಶಸ್ಸಿನ ಹಿಂದೆ ಓಡಿಹೋದಮೇಲೆ (ಹೌದು ಅವನ ಪರಿಸ್ಥಿತಿಯೂ ಹಾಗೆ ಇತ್ತೇನೊ. ಇಲ್ಲದಿದ್ದರೆ ಯಶಸ್ಸೆಂಬುದು ಅವನಿಗೆ ಮರಿಚೀಕೆಯಾಗಿಬಿಡುತ್ತಿತ್ತೇನೊ. ಸಂದರ್ಭಗಳು ಹೀಗೆ ಒದಗಿಬಂದಾಗಿ ಮನುಷ್ಯ ಹೇಗೆ ನಿಭಾಯಿಸಬೇಕು ಎಂಬುದು ಸಹ ಇಲ್ಲಿ ಒಂದು ಪಾಠವಾಗಿ ನಿಲ್ಲುತ್ತದೆ) ಗೋರೆ ಸಾಹೇಬರ ಮನೆ ಅಡುಗೆ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕಿ ಸಲಹುವ ರಾಮಕುಮಾರಿ ಏನೇನು ಸುಖವನ್ನೇ ಕಾಣಲಿಲ್ಲ. ಪಾಪ ಹೆತ್ತ ಮಕ್ಕಳೇ ಮೋಸ ಮಾಡಿಬಿಡುತ್ತಾರೆ. ಅಂತಹ ಮಕ್ಕಳು ಯಾರಿಗೂ ಬೇಡಾ. ರಾಮಕುಮಾರಿಯ ಕಷ್ಟವೂ ಯಾರಿಗೂ ಬೇಡ.
ರಾಮಕುಮಾರಿ ಕೊನೆಯವರೆಗೂ ಉಸಿರಾಡುತ್ತಾಳೆಂದರೆ ಅದಕ್ಕೆ ಬೆಂಬಲವಾಗಿ ನಿಲ್ಲುವ ಸಹೃದಯ ಗೋರೆ ಸಾಹೇಬ್ರು. ದೇವರು ಮನುಷ್ಯ ರೂಪದಲ್ಲಿರುತ್ತಾನೆ ಎನ್ನುತ್ತಾರಲ್ಲ ಅದೇ ಗೋರೆ ಸಾಹೇಬರು ಇರಬೇಕು. ಮೋಹನ್ ಲಾಲನ ಗೆಳೆಯ ಟೆಪ್ನಿಸ್ ಪ್ರಾಮಾಣಿಕತೆಗೆ ಮತ್ತೊಂದು ಉದಾಹರಣೆಯಾಗಿ, ಪ್ರಬುದ್ಧತೆಯ ಸಾಕಾರವಾಗಿ ಬಹಳ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾನೆ. ಮೋಹನ್ ಲಾಲನ ಗೆಳೆಯ ಟೆಪ್ನಿಸ್, ಮಧುಮಿತಾ ಪತಿ ವಿಕ್ರಂ & ಗೋರೆ ಸಾಹೇಬರುಗಳಂತಹ ಪುರುಷರು ಸ್ವಸ್ಥ ಸಮಾಜದ ಕಲಶಗಳು ಎಂದೇ ಹೇಳಬಹುದು.
ಕೊನೆಗೆ ಮಧುಮಿತಾಳಿಗೆ ಜೊತೆಯಾಗಿ ನಿಲ್ಲುವ ಅವಳ ಸಹೋದರರು ತವರುಮನೆಯ ಸೊಗಸನ್ನು ತೋರಿಸುತ್ತಾರೆ. ಅಷ್ಟೇ ದೃಢವಾಗಿ ನಿಂತು ಸಾಧಿಸುವ ಮಧುಮಿತಾ ಪತಿ ವಿರಹವಿದ್ದರೂ ಮಹಾನ್ ಸಾಧಕಿಯಾಗುವ ಗಟ್ಟಿತನ ಮೆಚ್ಚಬೇಕಾದದ್ದೆ.
ಮನಸ್ಸಿನಲ್ಲಿ ನಾಟುವ ಬಾಣಗಳು : ಮುಗ್ದೆ ರಾಮಕುಮಾರಿ ಒಬ್ಬಂಟಿಯಾದಳು, ಪ್ರಬುದ್ಧ ಜೆಂಟಲ್ ಮ್ಯಾನ್ ಮಧುಮಿತಾ ಪತಿ ವಿಕ್ರಂಗೆ ಕಹಿಸತ್ಯ ತಿಳಿಯಬಾರದಿತ್ತು. ಮನೋಹರಿ ದಾಸ್ ಚೆನ್ನಾಗೇ ಎಂಜಾಯ್ ಮಾಡಿಕೊಂಡಳು, ಮೋಹನ್ ಲಾಲ್ 2ನೇ ಹೆಂಡತಿ ಚೆಂಪಾ ಪಕ್ಕಾ… ಅವಳೆ. ಗೋರೆ ಸಾಹೇಬ್ರು & ಅವರ ಹೆಂಡತಿ ದೇವರು. ವಿದೇಶಿ ಹುಡುಗಿಯಾದ ಮಾತ್ರಕ್ಕೆ ಅವಳಿಗೇನು ಭಾವನೆಗಳೇ ಇರುವುದಿಲ್ಲವೇ? ಭೂಪಾಲಿಗೆ ಅಷ್ಟೂ ಸರಳವಾಗಿ ಮೋಹನ್ ಲಾಲನ ತಪ್ಪನ್ನು ಒಪ್ಪಿಕೊಳ್ಳಲು ಸಾಧ್ಯವಾಯಿತೆ? ಹೀಗೇ ಸಾಗುತ್ತದೆ ಪಾತ್ರಗಳ ಪ್ರಭಾವ…
ಡಾ. ಎಸ್.ಎಲ್. ಭೈರಪ್ಪನವರ “ಮಂದ್ರ” ಕಾದಂಬರಿ ಕೊಳ್ಳಲು… https://amzn.to/48nInm8
- ರಶ್ಮಿ ಕೆ. ವಿಶ್ವನಾಥ್
