
(ತುಮಕೂರಿನಲ್ಲಿ ವಾಸವಿರುವ ಖ್ಯಾತ ಸಾಹಿತಿಗಳು ಮತ್ತು ಪ್ರಕಾಶಕರಾದ ಶ್ರೀ ಎಂ.ವಿ. ಶಂಕರಾನಂದ ಅವರು ಬರೆಯುತ್ತಿರುವ ಶ್ರೀಕೃಷ್ಣನ ಕುರಿತಾದ “ಕೃಷ್ಣ – ಭಕ್ತರ ಆಪ್ತ ಬಂಧು” ಭಕ್ತಿಪೂರ್ವಕ ಅಪರೂಪದ ಕಾದಂಬರಿಯ ಐದನೇಯ ಅಧ್ಯಾಯ)
ಮತ್ತಿಷ್ಟು ದಿನ ಕಳೆಯುತ್ತಿರಲು ಕೃಷ್ಣನು ಬೆಳೆಯುತ್ತಿದ್ದನು. ಕವುಚಿಬಿದ್ದು ಮುಂದೆ ಶರೀರವನ್ನೆಳೆಯುತ್ತ, ಮಂಚದ ಅಂಚಿಗೆ ಬಂದು ಬೀಳುವನೇನೋ ಅನಿಸುವನು. ಯಶೋದೆ ಓಡಿ ಬಂದು ಎತ್ತಿ ನಡು ಮಂಚದಲ್ಲಿ ಮಲಗಿಸುವಳು. ಕಿಚಿಕಿಚಿ ಮಾಡಿದರೆ ಕಿಟಿಕಿಟಿ ನಕ್ಕು ಕೈಗಳನ್ನು ಕುಣಿಸುವನು. ನಿಲ್ಲಿಸಿ ಬೆರಳುಗಳನ್ನು ಹಿಡಿಯಲು ಬಿಟ್ಟರೆ ಹಾಗೂ ಹೀಗೂ ತಪ್ಪಡಿಯಿಡುವನು. ಚಪ್ಪಾಳೆ ತಟ್ಟಿ ಬಾಬಾ ಎಂದು ಕರೆದರೆ ಹತ್ತಿರ ಬಂದು ದೂರಬಿದ್ದು ಎತ್ತಿಕೋ ಎಂಬಂತೆ ಎದೆ ಎತ್ತುವನು. ನೋಡಿದವರು ಅವನನ್ನು ಒಮ್ಮೆ ಎತ್ತಿ ಮುದ್ದಾಡದೆ ಬಿಡುತ್ತಿದ್ದಿಲ್ಲ. ಕಾಲಂದುಗೆ ಗಲಗಲವಾಡಿಸುತ್ತ, ಕಳ್ಳ ನೋಟದಿಂದ ನೋಡುತ್ತ ಎತ್ತೆತ್ತೋ ಓಡಲು ಶುರು ಮಾಡುವನು. ಗೋಪಿಯರಿಗೆ ಅದನ್ನು ನೋಡುವುದೇ ಒಂದು ಪರಮಾನಂದವಾಯಿತು.
ತಾಯಿ ಯಶೋದೆ ಬಾಲಕೃಷ್ಣನಿಗೆ ದಿನಾ ಒಂದಿಷ್ಟು ಬೆಣ್ಣೆ ತಿನ್ನಿಸುವಳು. ಕೃಷ್ಣನ ಕೈ ಮೈ ಮುಖಗಳಿಗೆಲ್ಲಾ ಬೆಣ್ಣೆಯ ಪಸೆ ಹತ್ತಿಕೊಳ್ಳುತ್ತಿತ್ತು. ಬೆಳಗ್ಗೆ ತಾಯಿ ಕೃಷ್ಣನಿಗೆ ಹೊಟ್ಟೆ ತುಂಬಾ ಬೆಣ್ಣೆ ತಿನ್ನಿಸಿ, ಮನೆ ಕೆಲಸ ನೋಡಿಕೊಳ್ಳಲು ಹೋದರೆ ಕೃಷ್ಣನು ತಪ್ಪಡಿ ಇಡುತ್ತಾ ಇನ್ನೂ ಬೆಣ್ಣೆ ಎನ್ನುತ್ತಾ ಅವಳ ಹಿಂದೆಯೇ ಹೋಗುವನು. ಬೇರೆ ಹೆಂಗುಸರ ಹಿಂದೆಯೂ ಹೋಗಿ ಬೆಣ್ಣೆ ಕೇಳುವನು. ಪೀಡಿಸಿ ಪೀಡಿಸಿ ಕೇಳುವನು. ಸೀರೆಯ ಸೆರಗು ಹಿಡಿದು ಎಳೆಯುವನು. ಮೊಸರು ಕಡೆಯುವವರ ಹತ್ತಿರ ಹೋಗಿ, ಕಡಗೋಲಿನ ಹಗ್ಗ ಹಿಡಿದುಕೊಂಡು ಕಡಗೋಲಾಡದಂತೆ ಮಾಡುವನು. ಅವರ ತಲೆಕೂದಲಿನ ಗಂಟು ಬಿಚ್ಚಿ ಉಪಟಳ ಕೊಡುವನು.
“ನೀನು ಸ್ವಲ್ಪ ಆಟ ತೋರಿಸು. ಆಮೇಲೆ ಬೆಣ್ಣೆ ಕೊಡುತ್ತೇನೆ” ಎಂದು ಗೋಪಿಯರು ಹೇಳಿದರೆ, ಸೊಂಟದ ಹುಲಿಯುಗುರು ಉಡಿದಾರದ ಮಣಿಗಳು ಗಿಜಿಗಿಜಿಸಲು, ಅಂದುಗೆ ಧ್ವನಿಸಲು ನಲಿಯುವನು. ಆಗ ಗೋಪಿಕೆಯರು ಮಾಡುವ ಕೆಲಸ ಮರೆತು ಕೃಷ್ಣನ ನಲಿದಾಟ ನೋಡುವರು.
ಹೀಗೆ ಕೃಷ್ಣನು ಯಾವಾಗಲೂ ಗೋಕುಲದಲ್ಲಿರುವ ಎಲ್ಲಾ ಮನೆಗಳಿಗೂ ಹೋಗುವನು. ಎಲ್ಲರಿಗೂ ಅವನು ಬೇಕು. ಅವನನ್ನು ನೋಡದಿದ್ದರೆ ಏನೋ ಕಳೆದುಕೊಂಡಂತೆ ಎಲ್ಲರಿಗೂ ಕೃಷ್ಣನು ಮಾಡುವ ತಂಟೆಗಳನ್ನು ನೋಡಿ ಅವನನ್ನು ಬೈದು ಓಡಿಸುವುದೂ ಒಂದು ಸಂತೋಷವೇ.
ಹಾಗೆ ಗೋಪಿಕೆಯರು ನಾಲ್ಕು ಕಡೆಗಳಿಂದಲೂ “ಹಿಡೀರಿ, ಬೆಣ್ಣೆ ಕಳ್ಳ ಕೃಷ್ಣನ್ನ ಹಿಡೀರಿ” ಎಂದು ಕೂಗಿಕೊಳ್ಳುತ್ತ ಅವನನ್ನು ಹಿಡಿದು ಯಶೋದೆಯ ಹತ್ತಿರ ಕರೆದೊಯ್ದು ಒಪ್ಪಿಸುವರು. ದೂರುವರು. ಯಶೋದೆ ಗದರಿಸಿದರೆ ಕೃಷ್ಣನು ಸಾಕು ಬೆಕ್ಕಿನ ಹಾಗೆ ತಗ್ಗುವನು. ಹೊಡೆಯಲು ನೋಡಿದರೆ ದೂರು ತಂದವರೇ ಯಶೋದೆಯನ್ನು ತಡೆಯುವರು.

ದಿನಗಳು ಹೋದಂತೆ ಕೃಷ್ಣನ ಆಟಗಳು ಬದಲಾವಣೆಯಾದುವು. ಗೋಪಬಾಲಕರೆಲ್ಲರೂ ಬಲರಾಮ ಕೃಷ್ಣರ ಸುತ್ತಲೂ ಸೇರಿಕೊಂಡಿರತೊಡಗಿದರು. ಅವರದೇ ಒಂದು ದಂಡಿನ ಹಾಗಾಗಿ, ಗೋಕುಲವಿಡೀ ತಿರುಗಾಡುವರು. ಕೃಷ್ಣನು ಗಡಿಗೆಯಲ್ಲಿಯೂ, ನೆಲುವಿನಲ್ಲಿಯೂ ಇರುವ ಹಾಲನ್ನೂ, ಬೆಣ್ಣೆಯನ್ನೂ ಹೊಟ್ಟೆಗಿಳಿಸಿ ಇತರ ಗೆಳೆಯರಿಗೂ ಕೊಡುವನು. ಹಾಲನ್ನು ಕುಡಿಯುವಷ್ಟು ಕುಡಿದು ಉಳಿದುದನ್ನು ನೆಲಕ್ಕೆ ಚೆಲ್ಲುವನು.
ಈ ಬಗೆಯ ಅವನ ಪೋಕರಿತನದ ಚೇಷ್ಟೆಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಹಾಲಿನ ಸಮುದ್ರವನ್ನು ಕಡೆಯುವಾಗ ಬಂದ ಅಮೃತವನ್ನು ಮೋಹಿನಿ ದೇವತೆಗಳಿಗೆ ಹಂಚಿಕೊಟ್ಟ ಹಾಗೆ ಕೃಷ್ಣನು ಗೋಪಿಕೆಯರ ಮನೆಗಳಲ್ಲಿದ್ದ ಹಾಲಕೆನೆಗಳನ್ನು ತಾನು ತಿನ್ನುವುದಲ್ಲದೆ ತನ್ನೊಂದಿಗಿದ್ದ ಹುಡುಗರಿಗೆಲ್ಲ ಹಂಚಿಕೊಡುತ್ತಿದ್ದನು. ಹಾಲು ಮೊಸರು ಒಯ್ಯುವವರ ಗಡಿಗೆಯ ಉಗ್ಗೆಗಳನ್ನು ಕಡಿಯುವನು. ಗಡಿಗೆಯಲ್ಲಿದ್ದ ಹಾಲನ್ನು ಅರ್ಧದಷ್ಟು ಕುಡಿದು, ಉಳಿದುದಕ್ಕೆ ನೀರು ಹಾಕಿಡುವನು. ತುಪ್ಪವನ್ನು ಒಯ್ದು ಬೆಂಕಿಗೆ ಹಾಕಿ ಭಗ್ಗನೆ ಬೆಂಕಿ ಉರಿಯುವುದನ್ನು ನೋಡಿ ನಲಿಯುವನು. ಮೊಸರಿಗೆ ಹಾಲು ಹಾಕುವನು. ಹಾಲಿಗೆ ಮಜ್ಜಿಗೆ ಬೆರೆಸುವನು. ಕರುಗಳನ್ನು ಬಿಚ್ಚಿ ಹಸುಗಳ ಹಾಲನ್ನು ಕುಡಿಯಲು ಬಿಡುವನು. ಕೆಲವು ಕರುಗಳನ್ನು ಪೂರ್ತಿ ಬಿಚ್ಚಿ ಓಡಿಸಿ ಆಟ ನೋಡುವನು. ಕಾವಡಿಗಳ ಹಗ್ಗ ಕಡಿಯುವನು. ಎಲ್ಲಾ ಹುಡುಗರನ್ನೂ ಸೇರಿಸಿ ತುಂಟಾಟವಾಡಿಸುತ್ತ ಅವರಿಗೆಲ್ಲಾ ನಾಯಕನಾದನು ಕೃಷ್ಣ. ಆಟದಲ್ಲಿ ಪಂದ್ಯ ಕಟ್ಟಿ ಎಲ್ಲರನ್ನೂ ಸೋಲಿಸಿ, ಸೋತವರ ಬೆನ್ನು ಬಾತು ಹೋಗುವಂತೆ ಹೊಡೆದು ಅವರು ಅಳುತ್ತಿದ್ದರೆ ಚಂದ ನೋಡುವನು. ದೂರುಹೇಳುವೆವೆಂದು ಹೇಳಿದರೆ ಇನ್ನಿಷ್ಟು ಹೊಡೆಯುವನು. ಹೀಗಾಗಿ ಎಲ್ಲರೂ ಕೃಷ್ಣನು ಹೇಳುವಂತೆ ಕೇಳುವರು. ಆಟಗಳಲ್ಲಿ ಎಷ್ಟೇ ಗಟ್ಟಿಗರಾದವರನ್ನೂ ಸೋಲಿಸಿ ಅಳಿಸುವುದರಲ್ಲಿ ಕೃಷ್ಣನು ಬಹಳ ಗಟ್ಟಿಗ.
ಹೀಗೆಲ್ಲಾ ಕೃಷ್ಣನು ಗೋಕುಲವನ್ನೆಲ್ಲಾ ನಡುಗಿಸಿಕೊಂಡಿರುವಾಗ ಏನು ಮಾಡುವುದೆಂದು ಯಾರಿಗೂ ಏನೂ ತೋರುತ್ತಿರಲಿಲ್ಲ.
ಬೆಳೆಯುತ್ತಾ ಬರುವ ಕೃಷ್ಣನ ಲೀಲೆಗಳ ಚೇಷ್ಟೆಗಳು ಮಿತಿಮೀರಿ ಹೋಗುತ್ತಿದ್ದುವು. ಗೋಪಕರಿಗೆಲ್ಲಾ ಕೃಷ್ಣನ ಕಾಟಗಳು ಬೀಭತ್ಸವಾಗತೊಡಗಿತು. ಅವರೆಲ್ಲಾ ಏನೂ ತೋರದೆ ಸ್ತಂಭಿಸಿ ನೋಡುತ್ತಾ ಇರಬೇಕಾಯಿತು. ಗೋಪಿಕಾ ಸ್ತ್ರೀಯರಿಂದ ಹಾಗೆ ಸುಮ್ಮನಿರಲಾಗಲಿಲ್ಲ. ಅವರೆಲ್ಲಾ ತಮ್ಮೊಳಗೆ ಮಾತಾಡಿಕೊಂಡು ಗುಂಪಾಗಿ ಯಶೋದೆಯ ಹತ್ತಿರ ಹೋಗಿ ಅವಳ ಮೇಲೆ ಉರಿದುರಿದು ಬೀಳತೊಡಗಿದರು.
“ಓ! ಯಶೋದಮ್ಮಾ! ಒಳ್ಳೇ ಮಗನನ್ನು ಹಡೆದುಬಿಟ್ಟೆ! ಯಾರೂ ಹಡೆಯದಂಥಾ ಮಗನಮ್ಮಾ ನಿನ್ನ ಕೃಷ್ಣ! ನಿನ್ನ ಕೊಂಡಾಟಕ್ಕೆ ಬೆಂಕೀಹಾಕ! ಆ ಕೃಷ್ಣನಿಂದ ನಾವೆಲ್ಲಾ ಎಷ್ಟು ಸಂಕಟ ಅನುಭವಿಸುವೆವೆಂದು ಸ್ವಲ್ಪ ನೋಡ ಬಾರದೇನಮ್ಮಾ! ಹೋಗಲಿ, ಸಣ್ಣವನೆಂದುಕೊಂಡು ನಾವೆಲ್ಲಾ ಸುಮ್ಮನಿದ್ದರೆ ಹೀಗೋ ಮಾಡುವುದು? ನೀನು ದೊಡ್ಡವಳಾದರೆ ನಾವೆಲ್ಲಾ ಎಷ್ಟಂತ ತಾಳಿಕೊಂಡೇವು! ಅಸಲು ತಪ್ಪೆಲ್ಲಾ ನಿನ್ನದೇ. ಅವನನ್ನು ಹೀಗೆ ಸಲಿಗೆ ಕೊಟ್ಟು ಬೆಳೆಸಿ ನಮ್ಮ ನಡುವಿಗೆ ಬಿಟ್ಟಿದ್ದೀಯಾ? ನಿನ್ನ ಎದೆಯಲ್ಲಿ ದಯೆಯೆಂಬುದು ಸ್ವಲ್ಪ ಕೂಡಾ ಇಲ್ಲವೇ ಇಲ್ಲ. ನಿನ್ನ ಆ ಮುದ್ದು ಮಗನು ಏನು ಮಾಡಿದ ಎಂಥಾ ಕಾಟ ಕೊಟ್ಟಾ ಅಂತ ಕಿವಿ ತುಂಬಾ ಕೇಳು” ಎಂದು ಒಬ್ಬಳು ಹೇಳುತ್ತಿದ್ದರೆ, ಮತ್ತೊಬ್ಬಳು ಮುಂದೆ ಬಂದು, “ಏನು ಮಾಡಿದ ಗೊತ್ತೆ? ನಮ್ಮ ಮನೆಯೊಳಗೆ ಹೊಕ್ಕು ಹತ್ತು ಮಡಿಕೆಗಳ ಹಾಲು, ಮೊಸರು, ತುಪ್ಪಗಳನ್ನು ಕುಡಿದುಬಿಟ್ಟಿದ್ದಾನೆ. ಕೋಲೆತ್ತಿಕೊಂಡು ಹೋದರೆ ಕೋ ಅಂತ ಕೂಗಿ ಎಲ್ಲವನ್ನೂ ಉರುಳಿಸಿಹಾಕಿ ಓಡಿದ. ನಮ್ಮಂಥಾ ಬಡವರಿಗೆ ಇದಕ್ಕಿಂತ ದೊಡ್ಡ ಪೆಟ್ಟು ಬೇರೆ ಇದೆಯೆ? ನಿನಗೊಬ್ಬಳಿಗೆ ಮಗನೆ? ನಮಗೂ ಮಕ್ಕಳಿಲ್ಲವೆ? ನಾವು ಹೇಗಮ್ಮಾ ಬದುಕೋದು?” ಎಂದಳು.
ಅಷ್ಟರಲ್ಲಿ ಮತ್ತೊಬ್ಬಳು ಗೋಪಿಕೆ ಮುಂದೆ ಬಂದು, “ಓ ಮಹಾ ತಾಯೀ! ನಿನ್ನ ಮಗ ರಾಕ್ಷಸ! ನಾನು ಗಡಿಗೆಯಲ್ಲಿಯೂ, ನೆಲುವಿನಲ್ಲಿಯೂ ಬೆಣ್ಣೆ ತುಂಬಿಸಿಟ್ಟರೆ, ಗಡಿಗೆಗಳನ್ನು ಕೆಳಗೆ ದೂಡಿ, ಅವುಗಳ ಮೇಲೆ ಹತ್ತಿ ನೆಲುವನ್ನು ಕಡಿದು ಇದ್ದ ಬೆಣ್ಣೆ ಪೂರಾ ನುಂಗಿದ. ಪುಂಡರಿಗಷ್ಟು ತಿನ್ನಿಸಿದ. ಇಂಥವನ ನಡುವೆ ನಾವು ಹೇಗೆ ಬಾಳೇವು! ಎಲ್ಲಿಗೆ ಹೋದೇವು!” ಎಂದಳು.
ಬೇರೊಬ್ಬಳು ಮಹಾ ಕೋಪದಿಂದ ಕೈಗಳನ್ನು ಕುಣಿಸುತ್ತ, ನಾಟ್ಯವಾಡುವವಳ ಹಾಗೆ ಯಶೋದೆಯ ಹತ್ತಿರ ಬಂದು, “ಹಿಂದಿನ ಕೋಣೆಯಲ್ಲಿ ಅನೇಕ ತುಪ್ಪದ ಗಡಿಗೆಳನ್ನಿಟ್ಟಿದ್ದೆ. ಬೆಣ್ಣೆಯ ಮಡಕೆಗಳನ್ನು ಪೇರಿಸಿಟ್ಟಿದ್ದೆ. ಆ ಮಾಯದ ಮಾರಿ ನಿನ್ನ ಮಗ ಬಂದು, ಬಾಗಿಲನ್ನು ಒದೆದು ತಾಳದೊಂದಿಗೇ ಒಡೆದು ಒಳಗೆ ಹೊಕ್ಕಿದ್ದಾನೆ. ನಾನು ಹೆದರಿ ದಿಕ್ಕು ತೋರದೆ ದೂರ ಓಡಿದೆ. ಅಲ್ಲಿದ್ದ ತುಪ್ಪ ಬೆಣ್ಣೆಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡನೋ ಏನು ಮಾಡಿದನೋ ಕಾಣೆ! ಹೋಗಿ ನೋಡಿದರೆ ಎಲ್ಲಾ ನೆಕ್ಕಿ ಹಾಕಿದ ಹಾಗೆ ಖಾಲಿ! ಅವನನ್ನು ತಡೆಯುವವರೇ ಇಲ್ಲವೇನು? ಛೀ ಛೀ! ಈ ಕಷ್ಟ ಅನುಭವಿಸುವುದಕ್ಕಿಂತ ಊರಿಗೇ ಬೆಂಕಿ ಹಚ್ಚಿ, ದನಕರುಗಳನ್ನೆಲ್ಲಾ ಕಟ್ಟಿಕೊಂಡು ಇನ್ನೆಲ್ಲಿಗಾದರೂ ಹೋಗಿ ಸುಖವಾಗಿ ಉಸಿರು ಬಿಟ್ಟು ಬದುಕಬಹುದು” ಎಂದಳು.
ಆಗ ಇನ್ನೊಬ್ಬಳು ಆವೇಶದಿಂದ ಅಲ್ಲಿದ್ದವರನ್ನು ದೂಡಾಡಿಕೊಂಡು ಯಶೋದೆಯ ಹತ್ತಿರ ಬಂದು, “ಅದನ್ನೆಲ್ಲಾ ಏನು ಕೇಳುತ್ತೀಯಮ್ಮಾ? ಅಲ್ಪ ಚಿಲ್ಲರೆ ಸಂಗತಿ! ನನ್ನ ಮನೇಲಿ ನಡೆದ ಘೋರವನ್ನಿಷ್ಟು ಕೇಳು. ನಿನ್ನ ಆ ತುಂಟ ಮಗ ನಮ್ಮ ಮನೆಯೊಳಗೆ ನುಗ್ಗಿ ಹತ್ತತ್ತು ಕೊಡ ತುಪ್ಪ, ಮೊಸರುಗಳನ್ನು ಮನೆಯೊಳಗೆಲ್ಲಾ ಇಷ್ಟಾಳಕ್ಕೆ ಚೆಲ್ಲಿಹಾಕಿ, ಖಾಲಿಯಾದ ಕೊಡಗಳನ್ನು ಚೆಂಡಾಡುವ ಹಾಗೆ ಒದೆದಾಡಿ ಪುಡಿಮಾಡಿದ. ಅಡಿಗೆ ಮನೆಯಲ್ಲಿ ಮಾಡಿಟ್ಟಿದ್ದ ಅಡಿಗೆ ಪದಾರ್ಥ ಪಾಯಸಗಳನ್ನೆಲ್ಲಾ ತುಂಟ ಹುಡುಗರಿಗೆಲ್ಲಾ ತಿನ್ನಿಸಿದ. ಕರುಗಳನ್ನು ಬಿಚ್ಚಿ ದನಗಳ ಕಡೆಗೆ ಬಿಟ್ಟ. ಮನೆಯಲ್ಲಿ ಅಳುವ ಮಗುವಿಗೆ ಒಂದು ತೊಟ್ಟು ಹಾಲು ಇಲ್ಲದ ಹಾಗಾಯಿತು. ನಮ್ಮ ಊಟಕ್ಕೂ ಮಣ್ಣು ಬಿತ್ತು! ಎಲ್ಲಾ ಶುದ್ಧ ಮಾಡಿ ಮತ್ತೊಮ್ಮೆ ಗಂಜಿ ಬೇಯಿಸಬೇಕಾದರೂ ಇಡೀ ದಿನ ಮನೆಯವರು ಉಪವಾಸ ತಾನೇ!” ಎಂದು ಗೋಗರೆದುಕೊಂಡಳು.
ಮೇಲೂ ಒಬ್ಬಳು ಅಳುವ ಕಂಠದಿಂದ, “ನಮ್ಮಲ್ಲಿ ಗಂಡನೂ ಮಕ್ಕಳೂ ನಾನೂ ಸಹ ಒಟ್ಟಿಗೆ ತಿನ್ನೋಣವೆಂದು, ಹೆಸರುಬೇಳೆ ಪಾಯಸಕ್ಕೆಂದು ಹಾಲು, ಸಕ್ಕರೆ, ಕಲ್ಲುಸಕ್ಕರೆ ಎಲ್ಲಾ ಸಾಮಾನು ನೆಲುವಿನಲ್ಲಿ ಒಂದರ ಮೇಲೊಂದು ಇಟ್ಟಿದ್ದೆನು. ನಿನ್ನ ಮಗ ಯಾವ ಸಮಯದಲ್ಲಿ ಹೇಗೆ ಬಂದನೋ? ಅವುಗಳನ್ನೆಲ್ಲಾ ನೆಲುವಿನಿಂದ ಕೆಳಗಿಳಿಸಿ ಎಲ್ಲಾ ತಿಂದು ತೀರಿಸಿಬಿಟ್ಟನಮ್ಮಾ. ಅವನ ಹೊಟ್ಟೆಯೊಳಗೆ ಯಾವ ಭೂತ ಹೊಕ್ಕಿದೆಯೋ! ಈ ಸಂಗತಿ ಹೇಳಿಬಿಟ್ಟರೆ ಗಂಡ ನಂಬೋದಿಲ್ಲ. ನನ್ನನ್ನೇ ಬಡೀತಾರಮ್ಮಾ! ಈಗ ಏನು ಮಾಡಲೀ ಹೇಳಮ್ಮಾ!” ಎಂದಳು.
ಹೀಗೆ ಒಬ್ಬರನ್ನು ಮೀರಿ ಒಬ್ಬರು ಯಶೋದೆಯ ಹತ್ತಿರ ಬಂದು ಕೃಷ್ಣನ ಮೇಲೆ ದೂರು ಹೇಳಿದರು. ಒಬ್ಬರ ಮನೆಯಲ್ಲಿ ಮಾಡಿಟ್ಟ ತಿಂಡಿ ತಿನಿಸುಗಳನ್ನು ಕೃಷ್ಣನು ತಿಂದು ಖಾಲೀ ಮಾಡೀ ಓಡಿದನಂತೆ. ಮತ್ತೊಬ್ಬರಲ್ಲಿ ಹಸಿದು ಊಟದ ಹೊತ್ತಿಗೆ ಒಳಗೆ ಹೋದರೆ ಮಾಡಿಟ್ಟ ಅಡಿಗೆ ಪೂರಾ ಖಾಲಿಯಂತೆ. ಇವೆಲ್ಲಾ ಸಣ್ಣ ಮಕ್ಕಳು ಮಾಡುವ ಕೆಲಸವೇ? ಯಾರ್ಯಾರ ದನಗಳನ್ನೂ ಕರುಗಳನ್ನೂ ಅವನ ಪಾಡಿಗೆ ಬಿಚ್ಚಿ ಓಡಿಸಿ ಬಿಡುವನಂತೆ. ಹೀಗೆಲ್ಲಾ ಮಾಡುವುದನ್ನು ಯಾವಾಗಲೂ ನೋಡಿಕೊಂಡಿರಲು ಸಾಧ್ಯವೆ? ಮನೆಯವರ ಲಕ್ಷ್ಯವಿಲ್ಲದ ಸಮಯ ಹೊಂಚು ಹಾಕಿ ಕೃಷ್ಣನು ಗುಂಪಿನೊಂದಿಗೆ ಮುಗಿ ಬೀಳುವುದಂತೆ! ಇದೆಲ್ಲಾ ಸಹಿಸಲು ಸಾಧ್ಯವೆ? ದಿನ ಕಳೆಯುವುದಾದರೂ ಹೇಗೆ?
ಕೃಷ್ಣನದೆಲ್ಲವೂ ಅಮಾನುಷ ಕಾರ್ಯಗಳೇ. ಎಲ್ಲರೂ ಎಲ್ಲವನ್ನೂ ಹೇಳಿ ಕೊನೆಯ ಮಾತಾಗಿ, “ನಾವೆಲ್ಲಾ ಎತ್ತಾದರೂ ಹೋಗಿಬಿಡುತ್ತೇವೆ. ನೀನೂ ನಿನ್ನ ಮಗನೂ ಖಾಲೀ ಊರಿನಲ್ಲಿ ಆಕಾಶ ನೋಡುತ್ತಾ ಮೆರವಣಿಗೆ ಮಾಡಿಕೊಳ್ಳಿ!” ಎಂದು ಹೇಳಿಬಿಟ್ಟರು.

ಎಲ್ಲರ ಮಾತುಗಳನ್ನೂ ಕೇಳಿ ಯಶೋದೆ ಪ್ರತಿಯೊಬ್ಬರಿಗೂ ಸಮಾಧಾನ ಹೇಳುತ್ತ, “ನಿಮಗೆ ಬಂದ ನಷ್ಟವನ್ನೆಲ್ಲಾ ನಾನು ತುಂಬಿಕೊಡುತ್ತೇನೆ. ಚಿಂತಿಸಬೇಡಿ ಅಮ್ಮಗಳಿರಾ. ನೀವೆಲ್ಲಾ ಇಲ್ಲದೆ ನಮಗೆ ಹೇಗೆ ದಿನ ಹೋದೀತು? ಆ ಸಣ್ಣ ಮಗು ಹೀಗೆಲ್ಲಾ ರಾಕ್ಷಸ ಕಾರ್ಯ ಮಾಡಿದನೋ ಇಲ್ಲವೋ ವಿಚಾರಿಸುತ್ತೇನೆ. ನೀವು ಸುಮ್ಮನೆ ಸುಳ್ಳು ಹೇಳುವವರಲ್ಲವೆಂದು ನನಗೆ ಗೊತ್ತಿದೆ. ಇನ್ನು ಮೇಲೆ ನೋಡಿರಿ. ಹುಡುಗನನ್ನು ಹೇಗೆ ಅಂಕೆಯಲ್ಲಿಡುತ್ತೇನೆಂದು. ಸ್ವಲ್ಪವೂ ಹೆದರದೆ, ಸಂದೇಹಪಡದೆ ನಿಮ್ಮ ನಿಮ್ಮ ಮನೆಗಳಿಗೆ ಹೋಗಿರಿ. ನಿಮಗೆಲ್ಲಾ ಕೈ ಮುಗಿದು ಕಾಲು ಹಿಡಿದು ಬೇಡಿಕೊಳ್ಳುತ್ತೇನೆ. ಊರು ಬಿಟ್ಟು ಮಾತ್ರ ಹೋಗಬೇಡಿ”ಎಂದು ಹೇಳಿ ಗೋಪಿಕೆಯರನ್ನು ಕಳುಹಿಸಿದಳು.
ಆಮೇಲೆ ಯಶೋದೆ ಕೃಷ್ಣನನ್ನು ಕರೆದು ತನ್ನ ಹತ್ತಿರ ಕುಳ್ಳಿರಿಸಿಕೊಂಡು, “ಏನಿದು ಕಂದಾ! ನೀನು ಅವರ ಮನೆಗೆ ಇವರ ಮನೆಗೆ ಹೀಗೆ ಕಂಡ ಕಂಡ ಮನೆಗಳಿಗೆಲ್ಲಾ ನುಗ್ಗುವುದೇಕಪ್ಪಾ? ನಿನಗೆ ಬೆಣ್ಣೆ, ಹಾಲು, ತುಪ್ಪ ಕಡಿಮೆಯಾಯಿತೇನೋ? ಬೇಕಾದಷ್ಟು ನಾನು ಕೊಡುತ್ತೇನಪ್ಪಾ. ಹಾಲು ಕುಡಿ. ಒಂದು ಗುಟುಕು ತಾಯಿ ಹಾಲಿಗೆ ಇತರರ ಹಾಲು ಸಮಾನವಲ್ಲವೆನ್ನುತ್ತಾರೆ. ಊರವರ ಬಾಯಿಯಿಂದ ಹೀಗೆ ದೂರುಗಳು ಬರುವ ಹಾಗೆ ಏಕೆ ಮಾಡುವಿಯಪ್ಪಾ?” ಎಂದು ಅವನನ್ನು ಮಡಿಲಲ್ಲಿಟ್ಟುಕೊಂಡು ತನ್ನ ಹಾಲು ಕುಡಿಸಿ, ಅಪ್ಪಿ, ಮುದ್ದಿಸಿದಳು.
ನಂತರ ಯಶೋದೇ “ಬೆಳಿಗ್ಗೆ ಎದ್ದಾಗಿನಿಂದ ನಿನ್ನ ಪುಂಡಾಟದ ದೂರು ಕೇಳುವುದರಲ್ಲೇ ಸರಿಹೋಯಿತು. ಹೀಗೆ ಯಾರಿಗೂ ಉಪಯೋಗವಿಲ್ಲದ ನಿನ್ನನ್ನು ಏನಂದುಕೊಳ್ಳಲೀ? ಬಿಟ್ಟೆನೆಂದರೆ ಮತ್ತೆ ಹೋಗಿ ತುಂಟಾಟ ತೋರಿಸುತ್ತೀ. ನಿನ್ನಂಥ ದುಷ್ಟನ ಮೇಲೆ ದಯೆ ತೋರಿಸಬಾರದು” ಎಂದು ಕೃಷ್ಣನ ಕೈಗಳನ್ನು ಹಿಡಿದು ಬಂಡಿಯ ಸಮೀಪಕ್ಕೆ ಎತ್ತಿ ಒಯ್ದು, ದೊಡ್ಡದೊಂದು ಒರಳಿನ ನಡುವಿಗೂ ಕೃಷ್ಣನ ಸೊಂಟಕ್ಕೂ ಹಗ್ಗದಿಂದ ಕಟ್ಟಿ ಒಂದು ಬೆತ್ತ ತೆಗೆದುಕೊಂಡು, “ನಿನಗೆ ಬುದ್ಧಿ ಬರಬೇಕಾದರೆ ಹೀಗೆಯೇ ಮಾಡಬೇಕು. ಕದಲಿದೆಯೆಂದರೆ ಚರ್ಮ ಸುಲಿಯುತ್ತೇನೆ. ಹೇಗೆ ಕದಲುವಿಯೋ ನಾನೂ ನೋಡುತ್ತೇನೆ”ಎಂದು ಹೆದರಿಸಿ ಮನೆಯೊಳಗೆ ಹೋಗಿ ತನ್ನ ಕೆಲಸದಲ್ಲಿ ಮಗ್ನಳಾದಳು.
ಸ್ವಲ್ಪ ಹೊತ್ತು ಕಳೆದ ಮೇಲೆ ಕೃಷ್ಣನು ಹಗ್ಗವನ್ನು ಹಿಡಿದು ಒರಳನ್ನು ತನ್ನ ಹತ್ತಿರಕ್ಕೆ ಎಳೆದುಕೊಂಡನು. ಪಶುಗಳ ಆವರಣದ ದ್ವಾರದ ಸಮೀಪದಲ್ಲಿ ಎರಡು ಅವಳಿ ಜವಳಿಯಂತಹ ಜೋಡಿ ಮತ್ತೀ ಮರಗಳು ಹತ್ತಿರ ಹತ್ತಿರವಾಗಿ ಬೆಳೆದಿದ್ದುವು. ಕೃಷ್ಣನು ಒರಳನ್ನು ಎಳೆದುಕೊಂಡು ಆ ಜೋಡಿ ಮರಗಳ ಬದಿಗೆ ಸೇರಿಸಿ, ತಾನು ಮರಗಳ ಮಧ್ಯವಾಗಿ ಒರಳನ್ನು ಎಳೆದನು.
ಆ ಎರಡು ಹೆಮ್ಮರಗಳೂ ಒಮ್ಮೆಗೇ ಲಟಲಟನೆ ಸಿಡಿಲಿನ ಶಬ್ದದಿಂದ ಮುರಿದು ಬಿದ್ದುಹೋದುವು. ಆ ಶಬ್ದ ಕೇಳಿ ಅನೇಕ ಮಂದಿ ಗೋಪಿಕೆಯರೂ ಗೋಪರೂ ಎತ್ತೆತ್ತೋ ಓಡತೊಡಗಿದರು.
ಕೆಲವು ಗೋಪಿಕೆಯರು ಯಶೋದೆಯ ಬಳಿಗೆ ಓಡಿ, “ಎಂಥಾ ರಾಕ್ಷಸನಪ್ಪಾ ನಿನ್ನ ಮಗ! ಅವನನ್ನು ಹೋಗಿ ಹೋಗಿ ಒರಳಿಗೆ ಕಟ್ಟುವುದೆ? ಅವನು ಆ ಒರಳನ್ನು ಎಳೆದುಕೊಂಡು ಹೋಗಿ ಇಷ್ಟು ದೊಡ್ಡ ಮರಗಳನ್ನು, ಒಂದಲ್ಲ ಎರಡು ಮರಗಳನ್ನು ಒಂದೇ ಸಾರಿ ತನ್ನ ಮೇಲೆ ಉರುಳಿಸಿಕೊಂಡ! ಭಾರಿ ಬುದ್ಧಿವಂತಿಕೆಯ ಕೆಲಸ ಮಾಡಿದೆನೆಂದುಕೊಳ್ಳುವಿಯಾ? ಬೇಗ ಹೋಗಿ ಮಗುವಿಗೇನೂ ಆಗದಂತೆ ನೋಡಿಕೋ”ಎಂದು ಹೇಳಿದರು.
ಆ ಮಾತು ಕೇಳಿದ ಕೂಡಲೇ ಯಶೋದೆಯ ಗುಂಡಿಗೆ ಝಲ್ಲೆಂದಿತು. “ಅಮ್ಮಯ್ಯಾ!” ಎಂದು ಕೂಗಿ, ಸೆರಗುಜಾರಿ ಹೋಗುವುದನ್ನೂ, ತಲೆಮುಡಿ ಬಿಚ್ಚಿ ಹೋಗುವುದನ್ನೂ ತಿಳಿಯದೆ ಆಕಡೆಗೆ ಓಡಿದಳು. ಗೋಪಿಕೆಯರೂ, “ಅಯ್ಯೋ! ಕೃಷ್ಣಾ”ಎಂದು ಕೂಗುತ್ತಾ ಅವಳ ಹಿಂದೆ ಓಡಿದರು.
ಇಷ್ಟರೊಳಗೆ ನಂದನೂ, ಇತರ ಗೋಪಕರೂ ಅಲ್ಲಿಗೆ ಬಂದು ಬಿದ್ದುಹೋದ ಮರಗಳ ನಡುವಿನಲ್ಲಿ ಕೃಷ್ಣನು, ಕುಳಿತು ನಗುಮುಖದಲ್ಲಿರುವುದನ್ನು ನೋಡಿದರು. ನಂದನು ಮುಂದಕ್ಕೆ ಓಡಿಬಂದು ಕೃಷ್ಣನ ನಡುವಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಮಗನನ್ನು ಎತ್ತಿಕೊಂಡು, “ಇವನ ನಡುವಿಗೆ ಇಷ್ಟು ದಪ್ಪದ ಹಗ್ಗವೆಂದರೇನು? ಅದಕ್ಕೆ ಒರಳು ಕಟ್ಟುವುದೆಂದರೇನು? ಅದನ್ನು ಎಳೆಯುತ್ತಾ ಇವನು ಇಷ್ಟು ದೂರಕ್ಕೆ ಹೇಗೆ ಬಂದ? ಇಷ್ಟು ದೊಡ್ಡ ಮರಗಳು ಹೇಗೆ ಮುರಿದು ಬಿದ್ದುವು? ಏನು ಈ ಆಶ್ಚರ್ಯ!” ಎಂದು ಆಚೀಚೆ ನೋಡಿದನು.
ಆಗ ಯಶೋದೆ ಬಂದು, ತಾನೇ ಮಗನನ್ನು ಹಗ್ಗದಿಂದ ಸೊಂಟಕ್ಕೂ ಒರಳಿಗೂ ಕಟ್ಟಿದೆನೆಂದು ಹೇಳಿದಳು. ನಂದನು ತನ್ನ ಮಗನ ಬಲಶಕ್ತಿಗಳಿಗೆ ಒಳಗೊಳಗೆ ಆಶ್ಚರ್ಯಪಡುತ್ತ, ಪರಮಾನಂದದಿಂದ ಮಗನನ್ನು ಬಿಗಿದಪ್ಪಿಕೊಂಡನು. ವೃದ್ಧ ಗೋಪಿಕೆಯರಿಗೆ ಇದೇನೆಂದು ಅರ್ಥವಾಗಲಿಲ್ಲ. “ಒಂದು ಗಾಳಿಯಿಲ್ಲ, ಮಳೆಯಿಲ್ಲ, ಗುಡುಗಿಲ್ಲ, ಸಿಡಿಲಿಲ್ಲ. ಯಾವ ಆನೆಯೂ ಈ ಕಡೆಗೆ ಬರಲಿಲ್ಲ, ಸೇನೆಗೀನೆಗಳೂ ಬರಲಿಲ್ಲ. ಹಾಗೆ ನಿಜವಾದ ಕಾರಣಗಳೇನೂ ಇಲ್ಲದೆ ಕಂಕುಳ ಮಗು ಇಂತಹ ಮರಗಳನ್ನು ಒಮ್ಮೆಗೇ ಮುರಿದು ಬೀಳಿಸಿತೆಂದರೆ, ಇದಕ್ಕಿಂತ ದೊಡ್ಡ ಅಚ್ಚರಿ ಇದೆಯೇ? ಇದೇನೂ ಮೊದಲನೇ ಸಾರಿಯಲ್ಲಪ್ಪಾ! ಆ ರಾಕ್ಷಸಿ ಪೂತನಿ ಒಂದೇಸಾರಿ ಸತ್ತು ಬಿದ್ದಳು. ಅಷ್ಟೊಂದು ದೊಡ್ಡ ಬಂಡಿ ಪುಡಿಪುಡಿಯಾಗಿ ಹೋಗಿದೆ. ಅಬ್ಬಬ್ಬಾ! ಇಲ್ಲಿರುವುದೇ ಗಂಡಾಂತರವಾಗಿದೆ. ಆದರೆ ಹುಟ್ಟಿಬೆಳೆದ ಊರನ್ನು ಬಿಟ್ಟು ಎಲ್ಲಿಗೆ ತಾನೇ ಹೋದೇವು!” ಎಂದು ತಮ್ಮೊಳಗೆ ತಾವು ಅಂದುಕೊಳ್ಳುತ್ತ ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದರು.
(ಮುಂದುವರೆಯಲಿದೆ…)

- ಎಂ.ವಿ. ಶಂಕರಾನಂದ, ಸಾಹಿತಿಗಳು, ತುಮಕೂರು. ಮೊಬೈಲ್: 8971302974
ಅಧ್ಯಾಯ 1:
https://haitumakuru.com/2025/09/06/krishna_chapter1_mvshankarananda/
ಅಧ್ಯಾಯ 2:
https://haitumakuru.com/2025/09/12/krishnashankaranadachapter2/
ಅಧ್ಯಾಯ 3:
https://haitumakuru.com/2025/09/17/krishnamvshankaranandachapter3/
ಅಧ್ಯಾಯ 4:
https://haitumakuru.com/2025/10/10/krishnashankaranandachapter4/
