ಶೋಕದಿಂದ ಶ್ಲೋಕವನ್ನು ಸೃಷ್ಟಿಸಿದ ಜಗತ್ತಿನ ಆದಿಕವಿ ವಾಲ್ಮೀಕಿ

ಈ ದಿನ ಅಂದರೆ ದಕ್ಷಿಣಾಯಣದ, ಶರದ್ ಋತುವಿನ, ಆಶ್ವಯುಜ ಮಾಸದ, ಶುಕ್ಲ ಪಕ್ಷದ, ಹುಣ್ಣಿಮೆಯ ದಿನ ಜಗತ್ತಿನ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿಗಳ ಜನ್ಮದಿನವಾಗಿದೆ. ಮರ್ಯಾದಾ ಪುರುಷೋತ್ತಮನಾದ ಅಯೋಧ್ಯೆಯ ಚಕ್ರವರ್ತಿ ಶ್ರೀರಾಮನ ಹಾಗೂ ಕನ್ನಡ ನಾಡಿನ ಭಾಗವತೋತ್ತಮನಾದ ಮಹಾವೀರ ಹನುಮಂತನ ಕಥನವನ್ನು ರಾಮಾಯಣವೆಂಬ ಆದಿ ಗ್ರಂಥವನ್ನು ರಚಿಸುವುದರ ಮೂಲಕ ಸಾವಿರಾರು ವರ್ಷಗಳಿಂದ ಜನಮಾನಸದಲ್ಲಿ ನೆಲೆ ನಿಂತಿರುವ ಮಹಾಕವಿ ವಾಲ್ಮೀಕಿ.
ವಾಲ್ಮೀಕಿ ಮಹರ್ಷಿಯ ಬಗ್ಗೆ ರಾಮಾಯಣದ ಆರಂಭಿಕ ಶ್ಲೋಕಗಳಲ್ಲಿ ಮಾಹಿತಿ ಸಿಗುತ್ತದೆ. ರಾಮಾಯಣದ ಪ್ರಕಾರ ವಾಲ್ಮೀಕಿಯ ಕಥನ ಹೀಗಿದೆ:
ಬಹಳ ಕಾಲದ ಹಿಂದೆ ತ್ರೇತಾಯುಗದಲ್ಲಿ ಕೋಸಲ ರಾಜ್ಯದಲ್ಲಿ ಒಂದು ದಟ್ಟವಾದ ಕಾಡಿತ್ತು. ಆ ಕಾಡಿನಲ್ಲಿ ‘ರತ್ನಾಕರ’ನೆಂಬ ಬೇಡನು ವಾಸಿಸುತ್ತಿದ್ದನು. ಆತನು ಬಹಳ ಕ್ರೂರಿಯೂ, ಕಠಿಣ ಮನಸ್ಸಿನವನೂ ಆಗಿದ್ದನು. ಆತನ ಬಳಿ ಅವನಂತೆಯೇ ಬುದ್ಧಿಯುಳ್ಳ ಜನರ ಗುಂಪಿತ್ತು. ಆ ಕಾಡಿನ ಮೂಲಕ ಹಾದು ಹೋಗುವ ಒಂದು ಹೆದ್ದಾರಿಯು ಕೋಸಲ ಮತ್ತು ಪಾಂಚಾಲ ರಾಜ್ಯಗಳಿಗೆ ಸಂಪರ್ಕ ನೀಡುತ್ತಿತ್ತು. ಆ ದಾರಿಯಲ್ಲಿ ಹಾದು ಹೋಗುವ ಪ್ರಯಾಣಿಕರನ್ನು ದೋಚಿ, ಎದುರು ಮಾತಾಡಿದರೆ ಅವರನ್ನು ಕೊಂದು, ಅವರ ಹಣ, ಒಡವೆಗಳನ್ನು ಕಿತ್ತುಕೊಂಡು ಹೋಗಿ ರತ್ನಾಕರನು ಜೀವನ ಸಾಗಿಸುತ್ತಿದ್ದನು. ರತ್ನಾಕರ ಮತ್ತು ಅವನ ಗುಂಪಿನ ಹಾವಳಿಯಿಂದಾಗಿ ಜನಸಾಮಾನ್ಯರು ಆ ಕಾಡಿನಲ್ಲಿ ಓಡಾಡುವುದಕ್ಕೆ ಕಷ್ಟವಾಗಿತ್ತು.

ಭೂಮಿಯಲ್ಲಿ ರತ್ನಾಕರನು ಮಾಡುತ್ತಿದ್ದ ಕ್ರೂರ ಕೆಲಸಗಳು ದೇವಋಷಿ ನಾರದರ ಗಮನಕ್ಕೆ ಬಂದವು. ನಾರದರು ಸೃಷ್ಟಿಕರ್ತ ಬ್ರಹ್ಮನ ಪುತ್ರರಾಗಿದ್ದು ಭೂಲೋಕ, ಸ್ವರ್ಗಲೋಕ ಹಾಗೂ ಪಾತಾಳ ಲೋಕಗಳಲ್ಲಿ ನಿರಾತಂಕವಾಗಿ ಸಂಚರಿಸುವ ಶಕ್ತಿಯನ್ನು ಹೊಂದಿದ್ದರು. ಅವರು ಅವನಿಗೆ ಬುದ್ಧಿ ಕಲಿಸಲು ನಿಶ್ಚಯಿಸಿ ಭೂಲೋಕದ ಆ ಕಾಡಿಗೆ ಬಂದರು. ನಾರದರು ಸಾಧಾರಣ ಮನುಷ್ಯರಂತೆ ವೇಷಧರಿಸಿ ಕಾಡಿನಲ್ಲಿ ಬರುತ್ತಿರುವಾಗ ರತ್ನಾಕರನು ಅವರನ್ನು ತಡೆದು ಒಂದು ಮರಕ್ಕೆ ಕಟ್ಟಿಹಾಕಿದನು. ಅವನು ನಾರದರ ದೇಹವನ್ನೆಲ್ಲಾ ಹುಡುಕಿದರೂ ಅವನಿಗೆ ಏನೂ ಸಿಗಲಿಲ್ಲ.
ಆಗ ನಾರದರು, “ಅಯ್ಯಾ, ಸುಮ್ಮನೆ ಏಕೆ ನೀನು ಈ ಅಪರಾಧಗಳನ್ನು ಮಾಡುತ್ತಿರುವೆ” ಎಂದು ಕೇಳಿದರು. ಅದಕ್ಕೆ ರತ್ನಾಕರನು, “ನಾನು ನನ್ನ ಹೆಂಡತಿ ಮಕ್ಕಳನ್ನು ಹಾಗೂ ನನ್ನ ಸಹಚರರನ್ನು ಸಾಕುವುದಕ್ಕಾಗಿ ಹೀಗೆ ಕೊಲೆ, ಕಳ್ಳತನಗಳನ್ನು ಮಾಡುತ್ತಿದ್ದೇನೆ” ಎಂದನು. ನಾರದರು, “ನೀನು ಮಾಡುತ್ತಿರುವ ಈ ಪಾಪಗಳಲ್ಲಿ ನಿನ್ನ ಹೆಂಡತಿ ಮಕ್ಕಳು ಹಾಗು ಸಹಚರರಿಗೆ ಪಾಲು ಇದೆಯೋ, ಇಲ್ಲ ನೀನೊಬ್ಬನೇ ಇದನ್ನು ಹೊರುತ್ತಿರುವೆಯೋ” ಎಂದು ಕೇಳಿದರು.
ನಾರದರ ಮಾತು ಕೇಳಿ ಒಂದು ನಿಮಿಷ ಮೌನವಾಗಿ ಯೋಚಿಸಿದ ರತ್ನಾಕರನು, “ಈ ಪಾಪಗಳನ್ನು ನಾನು ಮಾಡಿದ್ದು ನನಗಾಗಿ ಅಲ್ಲ ನಮ್ಮವರಿಗಾಗಿ. ಹಾಗಾಗಿ ಅವರಿಗೂ ಇದರಲ್ಲಿ ಪಾಲು ಇದೆ” ಎಂದನು.
ನಾರದರು, “ನನಗೆ ನಿನ್ನ ಮಾತಿನಲ್ಲಿ ನಂಬಿಕೆಯಿಲ್ಲ. ಬೇಕಾದರೆ ನೀನು ನಿನ್ನ ಮನೆಗೆ ಹೋಗಿ ನಿನ್ನ ಹೆಂಡತಿ, ಮಕ್ಕಳು, ಅನುಚರರನ್ನು ಕೇಳಿ, ಖಚಿತಪಡಿಸಿಕೊಂಡು ಬಾ” ಎಂದರು. ರತ್ನಾಕರನು ಹಾಗೇ ಆಗಲಿ ಎಂದು ನಾರದರನ್ನು ಅಲ್ಲಿಯೇ ಬಿಟ್ಟು ತನ್ನ ಗುಹೆಯ ಬಳಿಗೆ ನಡೆದನು. ದಾರಿಯಲ್ಲೇ ಅವನನ್ನು ಅವನ ಸಹಚರರು ಎದುರುಗೊಂಡರು. ಅವರನ್ನು ನನ್ನ ಪಾಪಗಳ ಹೊರೆಯನ್ನು ನೀವೂ ಸಹ ಹೊರುವಿರಾ? ಎಂದು ಕೇಳಿದಾಗ ಅವರು, “ಅದು ಹೇಗೆ ಪ್ರಭು. ನೀನು ನಮ್ಮ ನಾಯಕನಾದ್ದರಿಂದ ನಮ್ಮನ್ನು ಹೇಗಾದರೂ ಕಾಪಾಡುವುದು ನಿನ್ನ ಹೊಣೆ. ಅದಕ್ಕೆ ನೀನು ಮಾಡುವ ಪಾಪಕ್ಕೆ ನಾವು ಜವಾಬ್ದಾರರಲ್ಲ” ಎಂದರು.
ರತ್ನಾಕರ ಗುಹೆಯನ್ನು ತಲುಪಿದನು. ಅಲ್ಲಿ ಅವನ ಹೆಂಡತಿ, ಮಕ್ಕಳಿಗೂ ಸಹ ಅದೇ ರೀತಿ ಪ್ರಶ್ನೆ ಕೇಳಿದಾಗ ಅವರು ಅವನ ಪಾಪಗಳಲ್ಲಿ ಭಾಗಿಯಾಗಲು ನಿರಾಕರಿಸಿದರು. ತಮ್ಮನ್ನು ಸಾಕಿ ಸಲುಹುವುದು ಅವನ ಕರ್ತವ್ಯವೆಂದೂ ಅದಕ್ಕಾಗಿ ಅವನು ಯಾವ ಮಾರ್ಗ ಹಿಡಿದರೂ ಅದರ ಪಾಪ ಪುಣ್ಯಗಳು ಅವನದೇ ಎಂದೂ ಹೇಳಿದರು.
ಅವರೆಲ್ಲರ ಮಾತುಗಳನ್ನು ಕೇಳಿ ರತ್ನಾಕರನಿಗೆ ಜ್ಞಾನೋದಯವಾಯಿತು. ಆತ ಕೂಡಲೇ ಓಡಿ ನಾರದರಿದ್ದಲ್ಲಿಗೆ ಬಂದನು. ಅವರ ಕಟ್ಟುಗಳನ್ನು ಬಿಚ್ಚಿ ಅವರ ಕಾಲಿಗೆ ಬಿದ್ದು ಕ್ಷಮಿಸಿ ಎಂದನು. ತನಗೆ ಪಾಪಗಳಿಂದ ಪರಿಹಾರ ತಿಳಿಸಿ ಎಂದು ಕೇಳಿಕೊಂಡನು. ನಾರದರು ಅವನಿಗೆ “ರಾಮ ರಾಮ” ಎಂಬ ಮಂತ್ರವನ್ನು ತಿಳಿಸಿ ಇದನ್ನು ಹೇಳುತ್ತಾ ತಪಸ್ಸು ಮಾಡು ಎಂದು ಆಶೀರ್ವದಿಸಿ ಅಲ್ಲಿಂದ ಹೊರಟು ಹೋದರು. ರತ್ನಾಕರನು ಆ ಮಂತ್ರವನ್ನು ಜಪಿಸುತ್ತಾ ಅಲ್ಲಿಯೇ ದೀರ್ಘಕಾಲ ತಪಸ್ಸನ್ನು ಆಚರಿಸಿದನು. ಅವನ ದೇಹದ ಸುತ್ತಲೂ ಹುತ್ತಗಳು ಬೆಳೆದು ನಿಂತವು. ಅವನ ಕಠಿಣ ತಪಸ್ಸಿನಿಂದ ಮೆಚ್ಚಿದ ಬ್ರಹ್ಮದೇವ ಪ್ರತ್ಯಕ್ಷನಾಗಿ ಆತನಿಗೆ ಬ್ರಹ್ಮಜ್ಞಾನವನ್ನು ಉಪದೇಶಿಸಿದನು. ಹುತ್ತಗಳ ಒಳಗೆ ತಪಸ್ಸು ಮಾಡಿದ್ದರಿಂದ ರತ್ನಾಕರನಿಗೆ ವಾಲ್ಮೀಕಿ ಎಂಬ ಹೆಸರು ನೀಡಿದನು [ಸಂಸ್ಕೃತದಲ್ಲಿ ವಲ್ಮಿಕ ಎಂದರೆ ಹುತ್ತ ಎಂದರ್ಥ].
ವಾಲ್ಮೀಕಿ ಮಹರ್ಷಿ ತಮಸಾ ನದಿಯ ತೀರದಲ್ಲಿ ಒಂದು ಆಶ್ರಮವನ್ನು ಕಟ್ಟಿಕೊಂಡು ವಾಸಿಸಲು ಪ್ರಾರಂಭಿಸಿದರು. ಅವರ ಬಳಿ ವಿದ್ಯೆ ಕಲಿಯಲು ನೂರಾರು ಶಿಷ್ಯರು ಅಲ್ಲಿಗೆ ಬಂದು ಸೇರಿದರು. ಒಂದು ದಿನ ನಾರದರು ಮತ್ತೆ ವಾಲ್ಮೀಕಿ ಮಹರ್ಷಿಯ ಆಶ್ರಮಕ್ಕೆ ಬಂದರು. ಅವರನ್ನು ಆದರದಿಂದ ಸ್ವಾಗತಿಸಿದ ವಾಲ್ಮೀಕಿ ಮಹರ್ಷಿ ಚಾಪೆ ಹಾಸಿ, ಹಣ್ಣು ಹಂಪಲು, ನೀರು ಕೊಟ್ಟು ಅವರನ್ನು ಉಪಚರಿಸಿದರು. ನಾರದರು ವಿಶ್ರಮಿಸಿಕೊಂಡ ನಂತರ ವಾಲ್ಮೀಕಿ ಮಹರ್ಷಿ ಜೊತೆ ಮಾತನಾಡುತ್ತಾ ಕುಳಿತರು. ಆಗ ವಾಲ್ಮೀಕಿ ಮಹರ್ಷಿಯು, “ನಾರದರೇ ಈ ಪ್ರಪಂಚದ ಮಹಾಪುರುಷರಲ್ಲಿ ಗುಣ ಹಾಗೂ ಜ್ಞಾನದಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿ ಯಾರು?” ಎಂದು ಕೇಳಿದರು. ನಾರದರು ಅದಕ್ಕೆ ಉತ್ತರಿಸುತ್ತಾ, “ವಾಲ್ಮೀಕಿ, ಸೂರ್ಯವಂಶದ ಅಯೋಧ್ಯೆಯ ರಾಜ ಶ್ರೀರಾಮಚಂದ್ರನೇ ಶ್ರೇಷ್ಠ ಪುರುಷ” ಎಂದು ಹೇಳಿ ಅವನ ಕಥೆಯನ್ನು ವಿಸ್ತಾರವಾಗಿ ಹೇಳಿದರು.

ನಾರದ ಮಹಾಮುನಿಯು ಅಲ್ಲಿಂದ ಬೀಳ್ಕೊಂಡು ಹೊರಡುವವರೆಗೆ ಮಾಧ್ಯಾಹ್ನಿಕ ಸಮಯವಾಯಿತು. ವಾಲ್ಮೀಕಿ ಮಹರ್ಷಿಯು ಶಿಷ್ಯನಾದ ಭರದ್ವಾಜನನ್ನು ಜೊತೆಗೆ ಕರೆದುಕೊಂಡು ತಮಸಾ ನದಿಯ ತೀರಕ್ಕೆ ಹೋದರು. ಅಲ್ಲಿ ಅವರಿಗೆ ಒಂದು ಕ್ರೌಂಚ ಪಕ್ಷಿಗಳ ಜೊತೆಯು ಕಂಡು ಬಂದಿತು. ನಾರು ಬಟ್ಟೆಯನ್ನುಟ್ಟು ನೀರಿನಲ್ಲಿ ಇಳಿಯುತ್ತಾ ವಾಲ್ಮೀಕಿ ಮಹರ್ಷಿಯು ಆ ಪಕ್ಷಿಗಳ ಆನಂದೋತ್ಸಾಹಗಳನ್ನು ನೋಡುತ್ತಿದ್ದಂತೆಯೇ ಒಬ್ಬ ಬೇಟೆಗಾರನು ಬಾಣದಿಂದ ಗಂಡು ಹಕ್ಕಿಯನ್ನು ಹೊಡೆದುಬಿಟ್ಟನು. ಅದು ಕೆಳಗೆ ಬಿದ್ದು ವಿಲ-ವಿಲನೆ ಒದ್ದಾಡಿತು. ಹೆಣ್ಣು ಹಕ್ಕಿಯು ಗೋಳಿಟ್ಟಿತು. ವಾಲ್ಮೀಕಿ ಮಹರ್ಷಿಯ ಹೃದಯದಲ್ಲಿ ಆ ಪಕ್ಷಿಯ ಮೇಲೆ ಕರುಣೆಯೂ, ಕಿರಾತಕನ ಮೇಲೆ ಕೋಪವೂ ಉಕ್ಕಿ ಬಂದವು.
“ಎಲ್ಲವೋ ಕಟುಕ ಪ್ರೇಮಾನಂದದಲ್ಲಿದ್ದ ಕ್ರೌಂಚಪಕ್ಷಿಗಳ ಜೊತೆಯಲ್ಲಿ ಒಂದನ್ನು ಕೊಂದ ನೀನು ಚಿರಕಾಲ ಕಷ್ಟಪಡುವೆ” ಎಂಬ ಅರ್ಥವುಳ್ಳ ಶ್ಲೋಕವು ವಾಲ್ಮೀಕಿ ಮಹರ್ಷಿಯ ಬಾಯಿಂದ ತಾನಾಗಿಯೇ ಹೊರಬಂದಿತು.

“ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ|
ಯತ್ ಕ್ರೌಂಚ ಮಿಥುನಾದೇಕ ಮವಧೀಃ ಕಾಮ ಲೋಹಿತಮ್||’’

ತನ್ನ ಬಾಯಿಂದ ಇಂತಹ ಶ್ಲೋಕವು ಬಂದುದನ್ನು ನೋಡಿ ವಾಲ್ಮೀಕಿ ಮಹರ್ಷಿಯು ಆಶ್ಚರ್ಯ ಹೊಂದಿದರು. ಏಕೆಂದರೆ ಅಲ್ಲಿವರೆಗೆ ಕಾವ್ಯಸ್ವರೂಪದ ಯಾವುದೇ ಅಂತಹ ಉಕ್ತಿಗಳು ಪ್ರಚಲಿತದಲ್ಲಿರಲಿಲ್ಲ. ಅಷ್ಟರಲ್ಲಿ ಬ್ರಹ್ಮದೇವನು ಅವರನ್ನು ನೋಡಲು ಬಂದನು. ಬ್ರಹ್ಮನು, “ವಾಲ್ಮೀಕೀ, ನನ್ನ ಅನುಗ್ರಹದಿಂದಲೇ ನಿನಗೆ ಕವಿತ್ವವು ಸಿದ್ಧಿಸಿತು. ನಿನ್ನಲ್ಲಿ ಹುಟ್ಟಿದ ಶೋಕವು ಶ್ಲೋಕವೆಂಬ ಕಾವ್ಯದ ಆದಿ ಸ್ವರೂಪವಾಗಿ ಬದಲಾಯಿತು. ನೀನು ಶ್ರೀರಾಮನ ಕಥೆಯನ್ನು ಒಂದು ಮಹಾ ಕಾವ್ಯವಾಗಿ ರಚಿಸು. ಅದು ಈ ಭೂಮಿಯು ಇರುವವರೆಗೂ ಚಿರಸ್ಥಾಯಿಯಾಗಿರುತ್ತದೆ” ಎಂದು ಹೇಳಿದನು.
ಈ ರೀತಿಯಾಗಿ ಬ್ರಹ್ಮನ ಪ್ರೋತ್ಸಾಹದಿಂದ ವಾಲ್ಮೀಕಿ ಮಹರ್ಷಿಯು ರಾಮಾಯಣ ಕಥೆಯನ್ನು ಎಲ್ಲರಿಗೂ ಆನಂದವನ್ನುಂಟು ಮಾಡುವ ರೀತಿಯಲ್ಲಿ ರಚಿಸಿದರು. ಅದನ್ನು ತನ್ನ ಶಿಷ್ಯರ ಮೂಲಕ ಲೋಕದೆಲ್ಲೆಡೆ ಪ್ರಚಾರಗೊಳಿಸಿದರು.

  • ಎಂ.ವಿ. ಶಂಕರಾನಂದ, ಸಾಹಿತಿಗಳು, ತುಮಕೂರು. ಮೊಬೈಲ್:‌ 8971302974

Leave a Comment

Your email address will not be published. Required fields are marked *

Scroll to Top