
ಹಿಂದೂ ಪರಂಪರೆಯ ಪ್ರಕಾರ ಪಿತೃ ಅಂದರೆ ತೀರಿಕೊಂಡ ನಮ್ಮ ಪೂರ್ವಜರು ಎಂದರ್ಥ. ತೀರಿಕೊಂಡ ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಮುತ್ತಜ್ಜ, ಮುತ್ತಜ್ಜಿ ಎಲ್ಲರೂ ಪಿತೃಗಳೇ ಆಗಿರುತ್ತಾರೆ. ಅವರು ತೀರಿಕೊಂಡಾಗ ಸೂಕ್ತ ರೀತಿಯಲ್ಲಿ ಅಪರ ಕ್ರಿಯೆಗಳನ್ನು ಮಾಡಿ ಪಿಂಡದ ಮೂಲಕ ಅವರ ಆತ್ಮಗಳನ್ನು ಪಿತೃಲೋಕಕ್ಕೆ ಕಳುಹಿಸಿಕೊಟ್ಟಿರುತ್ತೇವೆ. ಪಿತೃಲೋಕ ಎಂಬುದು ಭೂಲೋಕ ಮತ್ತು ಭುವರ್ಲೋಕಗಳ ನಡುವೆ ಇರುವ ಒಂದು ಲೋಕವಾಗಿರುತ್ತದೆ. ತೀರಿ ಹೋದ ಮೂರು ತಲೆಮಾರಿನ ನಮ್ಮ ಹಿರಿಯರು ಈ ಪಿತೃಲೋಕದಲ್ಲಿರುತ್ತಾರೆ. ಅದಕ್ಕೂ ಹಿಂದಿನವರು ಅವರವರ ಕರ್ಮಫಲಗಳಿಗೆ ಅನುಸಾರವಾಗಿ ಮೋಕ್ಷವನ್ನೋ, ಸ್ವರ್ಗಲೋಕವನ್ನೋ, ನರಕವನ್ನೋ ಅಥವಾ ಪುನರ್ಜನ್ಮವನ್ನೋ ಹೊಂದಿರುತ್ತಾರೆ ಎಂಬುದು ನಮ್ಮ ನಂಬಿಕೆ.
ಪಿತೃಲೋಕದಲ್ಲಿ ವಸು, ರುದ್ರ ಮತ್ತು ಆದಿತ್ಯರು ಪ್ರಮುಖ ಪಿತೃದೇವತೆಗಳಾಗಿರುತ್ತಾರೆ. ವಸುವು ನಮ್ಮ ಒಂದನೆಯ ತಲೆಮಾರಿನ ಅಪ್ಪ-ಅಮ್ಮಂದಿರ ಅಧಿಪತಿಯಾದರೆ, ರುದ್ರನು ನಮ್ಮ ಎರಡನೇ ತಲೆಮಾರಿನ ಅಜ್ಜ-ಅಜ್ಜಿಯರ ಅಧಿಪತಿ ಮತ್ತು ಆದಿತ್ಯನು ನಮ್ಮ ಮೂರನೇ ತಲೆಮಾರಿನ ಮುತ್ತಜ್ಜ-ಮುತ್ತಜ್ಜಿಯರ ಅಧಿಪತಿಯಾಗಿರುತ್ತಾನೆ ಎಂದು ಹಿಂದೂ ಧರ್ಮಗ್ರಂಥಗಳು ಹೇಳುತ್ತವೆ.
ಹಿಂದೂ ಪರಂಪರೆಯ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಪಿತೃದೇವತೆಗಳು ಪಿತೃಲೋಕದ ದ್ವಾರವನ್ನು ತೆರೆದು ಆ ಮೂರು ತಲೆಮಾರಿನ ಪಿತೃಗಳಿಗೆ ಭೂಲೋಕಕ್ಕೆ ಮರಳಿ ಅವರವರ ಸಂತತಿಯವರನ್ನು ನೋಡಿ ಬರಲು ಅವಕಾಶ ಕಲ್ಪಿಸುತ್ತಾರೆ. ಹೀಗೆ ಮೂರು ತಲೆಮಾರಿನ ಪಿತೃಗಳು ಮರಳಿ ಅವರವರ ಮನೆಗಳಿಗೆ ಬರುವ ಪಕ್ಷವನ್ನು “ಪಿತೃಪಕ್ಷ” ಎನ್ನುತ್ತಾರೆ. ಇದೇ ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಈ ಹಿಂದೆ ಒಮ್ಮೆ ದೇವತೆಗಳು ಮತ್ತು ರಾಕ್ಷಸರ ನಡುವೆ ನಡೆದಂಥ ಒಂದು ಯುದ್ಧದಲ್ಲಿ ರಾಕ್ಷಸರು ಹಲವು ದೇವತೆಗಳನ್ನು ಹಾಗೂ ಋಷಿಗಳನ್ನು ಕೊಂದು ಮಹಾವಿನಾಶವನ್ನೇ ಉಂಟುಮಾಡಿದ್ದರಂತೆ. ಹೀಗೆ ಮಹಾವಿನಾಶ ಉಂಟಾದ ಪಕ್ಷವಾದ್ದರಿಂದ ಇದನ್ನು “ಮಹಾಲಯ ಪಕ್ಷ” ಎಂತಲೂ ಕರೆಯುತ್ತಾರೆ. ಈ ಪಕ್ಷದ ಕಾಲಾವಧಿಯ ಕೊನೆಯ ದಿನ ಬರುವ ಅಮಾವಾಸ್ಯೆಯನ್ನು “ಮಹಾಲಯ ಅಮಾವಾಸ್ಯೆ” ಎಂದು ಕರೆಯಲಾಗುತ್ತದೆ. ಪಿತೃಪಕ್ಷದಲ್ಲಿ ಭೂಮಿಗೆ ಮರಳಿ ತಮ್ಮ ವಂಶಜರು ಮಾಡುವ ಶ್ರಾದ್ಧ ಕರ್ಮಗಳ ಪಿಂಡಗಳನ್ನು ಸ್ವೀಕರಿಸಿ ತೃಪ್ತರಾದ ಪಿತೃಗಳು ಅವರನ್ನು ಹೀಗೆ ಹರಸುತ್ತಾರೆ ಎಂದು ಈ ಕೆಳಗಿನ ಶ್ಲೋಕವು ವಿವರಿಸುತ್ತದೆ.
“ಪಿತಾ ದದಾತಿ ಸತ್ಪುತ್ರಾನ್ ಗೋಧನಾನಿ ಪಿತಾಮಹ: |
ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: ||
ದದ್ಯಾದ್ವಿಪುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |
ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತ ||’’
ಅಂದರೆ “ತಂದೆಯು ಉತ್ತಮ ಸಂತಾನವನ್ನೂ, ಅಜ್ಜನು ಗೋಸಂಪತ್ತನ್ನೂ, ಮುತ್ತಜ್ಜನು ಆಹಾರ ಧಾನ್ಯ ಮತ್ತು ಇತರ ಸಂಪತ್ತುಗಳನ್ನು ನೀಡಿ, ಪುತ್ರನ ಇಷ್ಟಾರ್ಥಗಳನ್ನು ನೆರವೇರಿಸಿ ಹರಸುತ್ತಾರೆ” ಎಂಬುದು ಈ ಶ್ಲೋಕದ ಅರ್ಥವಾಗಿದೆ.
ಆದ್ದರಿಂದ ಹಿಂದೂ ಪರಂಪರೆಯ ಪ್ರಕಾರ ತಂದೆಯನ್ನು ಕಳೆದುಕೊಂಡವರೆಲ್ಲ ವರ್ಷಂಪ್ರತಿ ಶ್ರಾದ್ಧಗಳನ್ನು ಮಾಡಿದ್ದರೂ ಕೂಡಾ ಪಿತೃಪಕ್ಷದಲ್ಲಿ ಪುನಃ ಪ್ರತಿ ದಿನವೂ ಗತಿಸಿಹೋದ ತಮ್ಮ ಪಿತೃಗಳಿಗೆ ಶ್ರಾದ್ಧದ ಮೂಲಕ ಪಿಂಡಪ್ರದಾನ ಮಾಡಬೇಕು. ಅದು ಸಾಧ್ಯವಾಗದೇ ಹೋದರೆ ಕನಿಷ್ಠ ಒಂದು ದಿನವಾದರೂ ಪಿಂಡ ಪ್ರದಾನ ಮಾಡಬೇಕು ಎಂದು ಗ್ರಂಥಗಳಲ್ಲಿ ತಿಳಿಸಿದೆ. ನಮ್ಮ ಭೂಮಿಯಲ್ಲಿ ೨೪ ಗಂಟೆಗಳ ಒಂದು ದಿನವಾದರೆ, ಪಿತೃಲೋಕದಲ್ಲಿ ೧೫ ದಿನ ಹಗಲು ಮತ್ತು ೧೫ ದಿನ ರಾತ್ರಿ ಇರುವ ಒಂದು ದಿನವಂತೆ. ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಅಲ್ಲಿ ಹಗಲಾಗಿದ್ದು, ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ಣಪಕ್ಷದ ಅಷ್ಟಮಿಯವರೆಗೆ ಅಲ್ಲಿ ರಾತ್ರಿಯಂತೆ. ಅದರ ಪ್ರಕಾರ ನಮ್ಮ ಅಮಾವಾಸ್ಯೆಯ ದಿನವು ಅಲ್ಲಿ ನಡು ಮಧ್ಯಾಹ್ನದ ಊಟದ ಸಮಯವಾಗಿರುತ್ತದಂತೆ. ಹೀಗಾಗಿ ಮಹಾಲಯ ಅಮಾವಾಸ್ಯೆಯ ದಿನದಂದೇ ಪಿತೃಗಳಿಗೆ ಶ್ರಾದ್ಧ ಮಾಡುವುದು ಸೂಕ್ತವಂತೆ.
ಪಿತೃಪಕ್ಷದಲ್ಲಿ ಪಿತೃಗಳ ಆತ್ಮವು ತಮ್ಮ ಮನೆಗಳಿಗೆ ಯಾವುದೇ ರೂಪದಲ್ಲಿಯೂ ಬರಬಹುದು. ಹೀಗಾಗಿ ಪಿತೃಪಕ್ಷದಲ್ಲಿ ಮನೆಗೆ ಬರುವ ಎಲ್ಲಾ ಮನುಷ್ಯರು ಮತ್ತು ಪಶು-ಪಕ್ಷಿಗಳನ್ನು ಕೂಡಾ ಗೌರವಿಸಿ, ಆಹಾರವನ್ನು ನೀಡಿ ಕಳಿಸಬೇಕು ಎಂದು ಹಿಂದೂ ಗ್ರಂಥಗಳಲ್ಲಿ ತಿಳಿಸಿದೆ.
ಹಿಂದೊಮ್ಮೆ ರಾವಣನ ಕಾಲದಲ್ಲಿ ಮರುತ್ತ ರಾಜನು ಒಂದು ಯಜ್ಞವನ್ನು ನಡೆಸುತ್ತಾನೆ. ಆಗ ರಾವಣನಿಗೆ ಹೆದರಿದ ದೇವತೆಗಳೆಲ್ಲ ಒಬ್ಬೊಬ್ಬರು ಒಂದೊಂದು ಪ್ರಾಣಿ-ಪಕ್ಷಿಯ ರೂಪ ತಳೆದು ಆ ಯಜ್ಞಕ್ಕೆ ಬರುತ್ತಾರೆ. ಆಗ ಯಮನು ಕಾಗೆಯ ರೂಪ ತಳೆದು ಬರುತ್ತಾನೆ. ಹೀಗೆ ಪ್ರಾಣಿ-ಪಕ್ಷಿಗಳ ರೂಪದಿಂದ ಬಂದ ದೇವತೆಗಳು ತದನಂತರ ಆ ಪ್ರಾಣಿ-ಪಕ್ಷಿ ಪ್ರಾಣಿಗಳಿಗೆ ಒಂದೊಂದು ವರ ನೀಡುತ್ತಾರೆ. ಅದರಂತೆ ಯಮನು ಭೂಲೋಕದಲ್ಲಿ ಮನುಷ್ಯರು ಮಾಡುವ ಶ್ರಾದ್ಧದ ಪಿಂಡಗಳನ್ನು ಕಾಗೆಗಳು ಸ್ವೀಕರಿಸಿದಾಗ ಮಾತ್ರ ನನ್ನ ಲೋಕದಲ್ಲಿರುವ ಪಿತೃಗಳಿಗೆ ಅದರಿಂದ ತೃಪ್ತಿ ಉಂಟಾಗಲಿ ಎಂಬ ವರವನ್ನು ನೀಡುತ್ತಾನಂತೆ. ಆ ಕಾರಣದಿಂದಾಗಿ ಈಗಲೂ ಕೂಡಾ ಶ್ರಾದ್ಧ ಮಾಡಿದಾಗ ಕಾಗೆಗಳಿಗೆ ಮೊದಲು ಅನ್ನವನ್ನು ಅರ್ಪಿಸುತ್ತಾರೆ.

ಪಿತೃ ಪಕ್ಷದ ಕುರಿತು ಹಲವಾರು ಪೌರಾಣಿಕ ಕಥೆಗಳಿವೆ. ಪರಶುರಾಮನ ತಂದೆಯಾದ ಜಮದಗ್ನಿ ಋಷಿ ಒಮ್ಮೆ ಒಂದು ಯಜ್ಞವನ್ನು ಮಾಡಿದಾಗ, ಪೂರ್ವಜರಿಗೆ ಅರ್ಪಿಸಬೇಕಾದ ಅನ್ನವು ಇಲಿಯಿಂದ ಹಾಳಾಗುತ್ತದೆ. ಇದರಿಂದ ಕೋಪಗೊಂಡ ಋಷಿಯು ಯಜ್ಞವನ್ನು ಅರ್ಧಕ್ಕೆ ನಿಲ್ಲಿಸುತ್ತಾನೆ. ಆಗ ಪೂರ್ವಜರು ಕಾಣಿಸಿಕೊಂಡು ಋಷಿಗೆ ಪಿತೃ ಪಕ್ಷದಲ್ಲಿ ಅನ್ನ ಮತ್ತು ಜಲ ಅರ್ಪಿಸುವುದರ ಮಹತ್ವವನ್ನು ತಿಳಿಸುತ್ತಾರೆ. ಈ ಘಟನೆಯು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತು ಎಂದು ಹೇಳಲಾಗುತ್ತದೆ.
ರಾಮಾಯಣ ಮಹಾಕಾವ್ಯದಲ್ಲಿ ರಾಜ ಸಾಗರನಿಗೆ ಅರವತ್ತು ಸಾವಿರ ಮಕ್ಕಳಿರುತ್ತಾರೆ. ಒಮ್ಮೆ ಇವರು ಅಶ್ವಮೇಧ ಯಾಗದ ಕುದುರೆಯನ್ನು ಹುಡುಕುತ್ತಾ ಹೋಗಿ, ಅದು ಕಪಿಲ ಮುನಿಯ ಆಶ್ರಮದಲ್ಲಿ ಸಿಗುತ್ತದೆ. ಕಪಿಲ ಮುನಿಯೇ ಕುದುರೆಯನ್ನು ಕದ್ದಿದ್ದಾರೆ ಎಂದು ತಪ್ಪಾಗಿ ಭಾವಿಸಿದ ರಾಜಕುಮಾರರು ಮುನಿಯನ್ನು ಅಪಮಾನಿಸುತ್ತಾರೆ. ಇದರಿಂದ ಕೋಪಗೊಂಡ ಮುನಿಗಳು, ತಮ್ಮ ಯೋಗ ಶಕ್ತಿಯಿಂದ ಎಲ್ಲ ರಾಜಕುಮಾರರನ್ನು ಸುಟ್ಟು ಭಸ್ಮ ಮಾಡುತ್ತಾರೆ. ಈ ವಿಷಯ ತಿಳಿದ ರಾಜ ಸಾಗರ ಮತ್ತು ನಂತರದ ರಾಜರುಗಳು ತಮ್ಮ ಪೂರ್ವಜರಾದ ಈ ರಾಜಕುಮಾರರ ಆತ್ಮಗಳಿಗೆ ಮುಕ್ತಿ ನೀಡಲು ಪ್ರಯತ್ನಿಸುತ್ತಾರೆ. ಆದರೆ, ಇದು ಅವರಿಗೆ ಸಾಧ್ಯವಾಗುವುದಿಲ್ಲ. ಕಡೆಗೆ, ಸಾಗರನ ವಂಶದಲ್ಲಿ ಜನಿಸಿದ ರಾಜ ಭಗೀರಥನು ತನ್ನ ಪೂರ್ವಜರ ಆತ್ಮಗಳಿಗೆ ಮುಕ್ತಿ ನೀಡಲು ಘೋರ ತಪಸ್ಸು ಮಾಡುತ್ತಾನೆ. ಬ್ರಹ್ಮನ ಸಲಹೆಯಂತೆ, ಆತ ಗಂಗಾ ನದಿಯನ್ನು ಭೂಮಿಗೆ ಕರೆತರುವ ತಪಸ್ಸು ಮಾಡುತ್ತಾನೆ. ಏಕೆಂದರೆ, ಗಂಗಾ ಜಲದ ಪವಿತ್ರಸ್ಪರ್ಶದಿಂದ ಮಾತ್ರ ತನ್ನ ಪೂರ್ವಜರ ಆತ್ಮಗಳಿಗೆ ಮುಕ್ತಿ ಸಿಗುತ್ತದೆ ಎಂದು ತಿಳಿಯುತ್ತಾನೆ. ಅಂತಿಮವಾಗಿ, ಭಗೀರಥನ ಕಠಿಣ ತಪಸ್ಸಿನಿಂದ ಸಂತುಷ್ಟನಾದ ಶಿವನು ಗಂಗೆಯನ್ನು ಭೂಮಿಗೆ ಬರಲು ಅನುಮತಿಸುತ್ತಾನೆ. ಗಂಗೆಯು ಭೂಮಿಗೆ ಇಳಿದು ಭಗೀರಥನ ಪೂರ್ವಜರ ಭಸ್ಮವನ್ನು ಸ್ಪರ್ಶಿಸಿದಾಗ, ಅವರ ಆತ್ಮಗಳು ಮುಕ್ತಿ ಹೊಂದಿ ಸ್ವರ್ಗಕ್ಕೆ ಸೇರುತ್ತವೆ. ಈ ಕಥೆಯು ಪಿತೃಗಳ ಋಣವನ್ನು ತೀರಿಸಲು ಮತ್ತು ಅವರ ಆತ್ಮಗಳಿಗೆ ಶಾಂತಿ ನೀಡಲು ಮಾಡುವ ತ್ಯಾಗ ಮತ್ತು ಪ್ರಯತ್ನವನ್ನು ಸೂಚಿಸುತ್ತದೆ. ಪಿತೃ ಪಕ್ಷದಲ್ಲಿ ನಾವು ಮಾಡುವ ತರ್ಪಣ ಮತ್ತು ಶ್ರಾದ್ಧಗಳು ಗಂಗಾ ಜಲದಷ್ಟೇ ಪವಿತ್ರವೆಂದು ನಂಬಲಾಗಿದೆ.
ಮಹಾಭಾರತ ಕಥನದಲ್ಲಿ ಕರ್ಣನು ದಾನಶೂರನಾಗಿ ಹೆಸರುವಾಸಿಯಾಗಿದ್ದನು. ಆತ ಬಡವರಿಗೆ, ದೀನದಲಿತರಿಗೆ ಚಿನ್ನ, ಆಭರಣ ಮತ್ತು ಸಂಪತ್ತನ್ನು ಉದಾರವಾಗಿ ದಾನ ಮಾಡುತ್ತಿದ್ದನು. ಮಹಾಭಾರತ ಯುದ್ಧದಲ್ಲಿ ಮರಣಾನಂತರ, ಕರ್ಣನು ತನ್ನ ಪುಣ್ಯದ ಫಲವಾಗಿ ಸ್ವರ್ಗವನ್ನು ಸೇರುತ್ತಾನೆ. ಆದರೆ ಸ್ವರ್ಗದಲ್ಲಿ ಅವನಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಊಟಕ್ಕೆ ಕುಳಿತಾಗ ಅವನಿಗೆ ಆಹಾರದ ಬದಲು ಚಿನ್ನ ಮತ್ತು ಬೆಲೆಬಾಳುವ ಆಭರಣಗಳು ಸಿಗುತ್ತವೆಯಂತೆ. ಆಗ ಕರ್ಣನು ಸ್ವರ್ಗದ ಅಧಿಪತಿಯಾದ ಇಂದ್ರನ ಬಳಿ ಹೋಗಿ, “ನಾನು ಜೀವನದುದ್ದಕ್ಕೂ ದಾನ ಮಾಡಿದ್ದರೂ, ಇಲ್ಲಿ ನನಗೆ ಆಹಾರ ಸಿಗುತ್ತಿಲ್ಲ, ಯಾಕೆ?” ಎಂದು ಕೇಳುತ್ತಾನೆ. ಇಂದ್ರನು, “ನೀನು ನಿನ್ನ ಜೀವನದಲ್ಲಿ ಚಿನ್ನ, ಬೆಳ್ಳಿ, ಮತ್ತು ಸಂಪತ್ತನ್ನು ಮಾತ್ರ ದಾನ ಮಾಡಿದ್ದೀಯ. ಆದರೆ, ನಿನ್ನ ಪೂರ್ವಜರಿಗೆ ನೀರು ಮತ್ತು ಅನ್ನವನ್ನು ಅರ್ಪಿಸಿಲ್ಲ. ಅನ್ನ ಮತ್ತು ಜಲವು ಆಹಾರದ ಮೂಲಭೂತ ಅವಶ್ಯಕತೆಗಳು” ಎಂದು ವಿವರಿಸುತ್ತಾನಂತೆ. ಇದನ್ನು ಕೇಳಿದ ಕರ್ಣನು ತಾನು ಯಾರಿಗೆ ತರ್ಪಣ ಮತ್ತು ಶ್ರಾದ್ಧ ಮಾಡಬೇಕು ಎಂದು ತಿಳಿದಿಲ್ಲದ ಕಾರಣ ಹೀಗಾಯಿತು ಎಂದು ಕ್ಷಮೆ ಯಾಚಿಸುತ್ತಾನೆ. ಇಂದ್ರನು ಕರ್ಣನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅವನಿಗೆ ೧೫ ದಿನಗಳ ಕಾಲ ಭೂಮಿಗೆ ಮರಳಿ ಹೋಗಿ ತನ್ನ ಪೂರ್ವಜರಿಗೆ ಅನ್ನ ಮತ್ತು ಜಲವನ್ನು ಅರ್ಪಿಸುವ ಅವಕಾಶ ನೀಡುತ್ತಾನಂತೆ. ಕರ್ಣನು ಭೂಮಿಗೆ ಮರಳಿ ಬಂದು ೧೫ ದಿನಗಳ ಕಾಲ ತನ್ನ ಪೂರ್ವಜರಿಗೆ ಶ್ರಾದ್ಧ, ತರ್ಪಣ, ಮತ್ತು ಪಿಂಡ ದಾನಗಳನ್ನು ಮಾಡುತ್ತಾನೆ. ಈ ೧೫ ದಿನಗಳಲ್ಲಿ ಪೂರ್ವಜರ ಆತ್ಮಗಳು ಶಾಂತಿ ಪಡೆದು, ಕರ್ಣನಿಗೆ ಆಶೀರ್ವಾದ ನೀಡುತ್ತವೆ. ಈ ೧೫ ದಿನಗಳ ಅವಧಿಯನ್ನೇ ನಾವು “ಪಿತೃ ಪಕ್ಷ” ಎಂದು ಆಚರಿಸುತ್ತೇವೆ. ಈ ಅವಧಿಯ ನಂತರ ಕರ್ಣನು ಮತ್ತೆ ಸ್ವರ್ಗಕ್ಕೆ ಹಿಂದಿರುಗಿದಾಗ, ಅವನಿಗೆ ವಿಪುಲವಾಗಿ ಆಹಾರ ದೊರೆಯುತ್ತದೆ. ಈ ಕಥೆಯು ಪಿತೃಗಳಿಗೆ ಅನ್ನ, ನೀರು, ಮತ್ತು ಗೌರವವನ್ನು ನೀಡುವುದರ ಮಹತ್ವವನ್ನು ತಿಳಿಸುತ್ತದೆ.
ಮಹಾಭಾರತದ ಇನ್ನೊಬ್ಬ ಪ್ರಮುಖ ವ್ಯಕ್ತಿಯಾದ ಭೀಷ್ಮನು ಬಾಣಗಳ ಮೇಲೆ ಮಲಗಿ ಸಾವಿಗಾಗಿ ಕಾಯುತ್ತಿದ್ದಾಗ, ಮಹರ್ಷಿ ವ್ಯಾಸರು ಆತನ ಬಳಿ ಬರುತ್ತಾರಂತೆ. ಭೀಷ್ಮನು ತನ್ನ ಪಿತೃಗಳಿಗೆ ತರ್ಪಣವನ್ನು ಅರ್ಪಿಸದೆ ಸಾಯುತ್ತಿದ್ದೇನೆ ಎಂದು ದುಃಖಿಸುತ್ತಾನಂತೆ. ಆಗ ವ್ಯಾಸರು, ಭೀಷ್ಮನು ಸಾಯುತ್ತಿರುವಾಗಲೇ ಶ್ರಾದ್ಧ ಮತ್ತು ತರ್ಪಣವನ್ನು ಮಾಡುವ ವಿಶೇಷ ನಿಯಮಗಳನ್ನು ಹೇಳಿಕೊಡುತ್ತಾರೆ. ಭೀಷ್ಮನು ತನ್ನ ಪೂರ್ವಜರಿಗೆ ತರ್ಪಣವನ್ನು ನೀಡುವ ಈ ವಿಶೇಷ ಆಚರಣೆಯು ಪಿತೃ ಪಕ್ಷದ ಮಹತ್ವವನ್ನು ಹೆಚ್ಚಿಸಿತು ಎಂದು ಹೇಳಲಾಗುತ್ತದೆ.

- ಎಂ.ವಿ. ಶಂಕರಾನಂದ, ಸಾಹಿತಿಗಳು, ತುಮಕೂರು. ಮೊಬೈಲ್: 8971302974
Post
