ಕೃಷ್ಣನ ಜನನ

(ತುಮಕೂರಿನಲ್ಲಿ ವಾಸವಿರುವ ಖ್ಯಾತ ಸಾಹಿತಿಗಳು ಮತ್ತು ಪ್ರಕಾಶಕರಾದ ಶ್ರೀ ಎಂ.ವಿ. ಶಂಕರಾನಂದ ಅವರು ಬರೆಯುತ್ತಿರುವ ಶ್ರೀಕೃಷ್ಣನ ಕುರಿತಾದ “ಕೃಷ್ಣ – ಭಕ್ತರ ಆಪ್ತ ಬಂಧು” ಭಕ್ತಿಪೂರ್ವಕ ಅಪರೂಪದ ಕಾದಂಬರಿಯ ಮೂರನೇಯ ಅಧ್ಯಾಯ)

ಮೊದಲನೆಯ ಅಧ್ಯಾಯದ ಓದಿಗೆ… https://haitumakuru.com/2025/09/06/krishna_chapter1_mvshankarananda/

ಎರಡನೆಯ ಅಧ್ಯಾಯದ ಓದಿಗೆ… https://haitumakuru.com/2025/09/12/krishnashankaranadachapter2/

ಅಧ್ಯಾಯ 3: ಕೃಷ್ಣನ ಜನನ

ಬಲರಾಮನು ಹುಟ್ಟಿದ ಮೇಲೆ ದೇವಕೀದೇವಿ ಎಂಟನೇ ಸಾರಿ ಗರ್ಭಿಣಿಯಾದಳು. ಅದರಲ್ಲಿ ವಿಷ್ಣುವಿನ ಅಂಶವು ಪ್ರವೇಶ ಮಾಡಿತು. ಒಂಭತ್ತು ತಿಂಗಳು ತುಂಬಿ ಬಂದ ಮೇಲೆ ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿ ದಿನ ಅರ್ಧರಾತ್ರಿಯಲ್ಲಿ, ಐದು ಗ್ರಹಗಳು ಉಚ್ಛದಲ್ಲಿದ್ದಾಗ, ವಿಷ್ಣುವಿನ ಅಂಶದಿಂದ ಕೃಷ್ಣನು ದೇವಕಿಯ ಗರ್ಭದಲ್ಲಿ ಜನಿಸಿದನು.

ಆ ಕ್ಷಣದಲ್ಲಿ ದೇವಕೀ ವಸುದೇವರ ಹೊರತು ಬೇರೆ ಯಾರೂ ಎಚ್ಚರವಾಗಿರಲಿಲ್ಲ. ಕಾವಲುಗಾರರೂ ಇತರ ಸೇವಕ-ಸೇವಕಿಯರೂ ಗಾಢವಾದ ನಿದ್ರೆಯಲ್ಲಿ ಮುಳುಗಿ ಹೋಗಿದ್ದರು. ಹೊರಗೆ ಜೋರಾಗಿ ಮಳೆ ಬರುತ್ತಿತ್ತು.

ಒಳಗೆ ತನ್ನ ಕೋಣೆಯಲ್ಲಿ ಎಚ್ಚರದಲ್ಲೇ ಕುಳಿತಿದ್ದ ವಸುದೇವನ ಮನಸ್ಸಿಗೆ ತನಗೊಬ್ಬ ಮಗನು ಹುಟ್ಟಿರುವನೆಂಬ ಭಾವನೆ ಹೇಗೋ ಬಂದು, ಅವನು ಅರ್ಧರಾತ್ರಿಯ ವೇಳೆಯಲ್ಲಿ ಬೇಗಬೇಗನೇ ದೇವಕಿಯ ಬಳಿಗೆ ಬಂದನು. ಅಲ್ಲಿ ಮನೆಯೊಳಗೆ ಚಂದ್ರೋದಯವಾಗಿರುವ ಹಾಗೆ ಕಾಣಿಸಿತು. ಆಗ ತಾನೇ ಹುಟ್ಟಿದ ಮಗು, ದಟ್ಟವಾದ ಕೂದಲುಗಳಿಂದ, ಮೇಘವರ್ಣದ ಮೈಯಿಂದ, ದೇಹದಲ್ಲಿ ಒಂದು ಚೂರು ಕಲೆಯೋ ಮಾಲಿನ್ಯವೋ ಇಲ್ಲದೆ, ಕಣ್ಣು ಬಿಡಿಸಿ ನೋಡುತ್ತ, ಅತ್ಯದ್ಭುತವಾಗಿ ಕಾಣಿಸಿತು.

`ದುಷ್ಟನಾದ ಕಂಸನು ಈ ಶಿಶುವಿಗೆ ಹಾನಿ ಮಾಡುವುದನ್ನು ಹೇಗೆ ಸಹಿಸಲಿ? ಈಗಲೇ ಈ ಕಂದನನ್ನು ಎತ್ತಿಕೊಂಡು ಹೋಗಿ ಎಲ್ಲಿಯಾದರೂ ಅಡಗಿಸಿಡುವೆನು, ಹೇಗಾದರೂ ಈ ಮಗುವನ್ನು ಕಾಪಾಡಲೇಬೇಕು’ಎಂದುಕೊಂಡ ವಸುದೇವ.

ದೇವಕಿ ಆ ಮಗುವನ್ನು ಹೆರಿಗೆ ನೋವಿಲ್ಲದೆಯೇ ಹೆತ್ತಿದ್ದಳು. ಆದರೆ ಮುಂದೇನು ಮಾಡಬೇಕೆಂಬುದು ಅವಳಿಗೆ ತಿಳಿಯಲಿಲ್ಲ. ವಸುದೇವನು ತನಗೆ ಬಂದ ಆಲೋಚನೆಯನ್ನು ದೇವಕಿಗೆ ಹೇಳಿ, ಅವಳ ತೊಡೆಯ ಮೇಲಿದ್ದ ಮಗುವನ್ನು, ತನ್ನ ಕೈಗಳಲ್ಲೆತ್ತಿಕೊಂಡು, ತಟಕ್ಕನೆ ಅಂತಃಪುರದಿಂದ ಹೊರಬಿದ್ದು, ನೆಟ್ಟಗೆ ನಂದನ ಬಿಡದಿಗೆ ಹೋದನು.

ಅಲ್ಲಿ ಯಶೋದೆ ಕೂಡಾ ಆಗಲೇ ಯಾವ ವೇದನೆಯೂ ಇಲ್ಲದೆ ಹೆಣ್ಣು ಮಗುವನ್ನು ಹೆತ್ತು ಮೈಮರೆತು ನಿದ್ರೆಯಲ್ಲಿದ್ದಳು. ಇದೂ ತನಗೆ ಅನುಕೂಲವೇ ಆಯಿತೆಂದುಕೊಂಡು, ವಸುದೇವನು ಅವಳ ಬಳಿಯಲ್ಲಿ ತನ್ನ ಮಗನನ್ನು ಮಲಗಿಸಿ, ಅವಳು ಹಡೆದಿದ್ದ ಹೆಣ್ಣು ಮಗುವನ್ನು ಎತ್ತಿಕೊಂಡು ತನ್ನ ಮನೆಗೆ ಹಿಂತಿರುಗಿ ಬಂದು, ಆ ಮಗುವನ್ನು ದೇವಕಿಯ ಪಕ್ಕದಲ್ಲಿ ಮಲಗಿಸಿದ. ಅನಂತರ ಧೈರ್ಯದಿಂದ, ಕಂಸನ ಬಳಿಗೆ ಹೋಗಿ, ಅವನನ್ನು ಎಬ್ಬಿಸಿ, ದೇವಕಿ ಈಗ ತಾನೇ ಮಗುವನ್ನು ಹೆತ್ತಳೆಂದು ಹೇಳಿದ.

ಕಂಸನು ಗಡಿಬಿಡಿಯಿಂದ ಎದ್ದು, ಉಟ್ಟ ಬಟ್ಟೆಯಲ್ಲಿ ಓಡಿ ಬಂದು, ಪ್ರಸೂತಿಗೃಹದ ಬಾಗಿಲಲ್ಲಿ ನಿಂತು, “ತಂಗೀ, ದೇವಕೀ! ಬೇಗ ಮಗುವನ್ನಿತ್ತ ಕೊಡು!” ಎಂದು ಕೂಗಿದ.

ದೇವಕಿ ಆ ಮಗುವನ್ನು ತನ್ನೆದೆಗೆ ಒತ್ತಿಕೊಂಡು ದೈನ್ಯದಿಂದ, “ಅಣ್ಣಾ! ಈ ಸಾರಿ ಹುಟ್ಟಿದ್ದು ಹೆಣ್ಣು ಮಗು. ನಿನ್ನಂಥ ಲೋಕೈಕವೀರನನ್ನು ಈ ಹೆಣ್ಣು ಕೂಸು ಏನು ತಾನೇ ಮಾಡೀತು? ಇದನ್ನು ಕಾಪಾಡು. ಮೊದಲು ಹುಟ್ಟಿದುದೆಲ್ಲ ಗಂಡು ಮಗುವಾದುದರಿಂದ, ಅವರಿಂದ ನಿನಗೇನು ಕೆಡುಕು ಬರುತ್ತೋ ಅಂದುಕೊಂಡು, ನಾನು ನಿರಾಕರಿಸಲಿಲ್ಲ. ಈ ಸಾರಿ ನನ್ನ ಮೇಲೆ ದಯಮಾಡು! ಈ ಒಂದು ಮಗುವನ್ನು ಉಳಿಸು”ಎಂದು ಬೇಡಿಕೊಂಡಳು.

ಕಂಸನು ಅದೊಂದೂ ಕಿವಿಗೆ ಹಾಕಿಕೊಳ್ಳದೆ, ಒಳಗೆ ನುಗ್ಗಿಯೇ ಬಿಟ್ಟನು. ಅದನ್ನು ನೋಡಿ ಕಾವಲಿದ್ದ ಸ್ತ್ರೀಯರೆಲ್ಲ ಹಾಹಾಕಾರ ಮಾಡಿದರು. ಅವನು ಬಲಾತ್ಕಾರದಿಂದ ದೇವಕಿಯ ಕೈಯಿಂದ ಮಗುವನ್ನು ಎಳೆದುಕೊಂಡು ಹೊರಗೆ ಹೋಗಿ, ಎಂದಿನಂತೆ ಬಂಡೆಗೆ ಬಡೆದು ಕೊಲ್ಲಲಿಕ್ಕೆ ಮಗುವನ್ನು ಮೇಲೆತ್ತಿದನು.

ಹಾಗೆ ಎತ್ತಲ್ಪಟ್ಟ ಮಗು ಕಂಸನ ಕೈಯಿಂದ ಜಾರಿ ಮೇಲೆ ಹಾರಿ, ಆದಿಶಕ್ತಿಯ ರೂಪವನ್ನು ಧರಿಸಿ, ಆಕಾಶದಲ್ಲಿ ನಿಂತು ಅಟ್ಟಹಾಸ ಮಾಡಿ ನಗುತ್ತ, ಕಂಸನನ್ನು ನೋಡಿ, “ಎಲವೋ ದುಷ್ಟ ಕಂಸಾ! ನನ್ನನ್ನು ಬಂಡೆಗೆ ಹೊಡೆದು ಕೊಲ್ಲಲು ಪ್ರಯತ್ನಿಸಿದೆಯಾ? ನೀನೇನು ನನ್ನನ್ನು ಕೊಲ್ಲುವೆ ಮೂರ್ಖಾ! ತಡೆ, ನಿನ್ನನ್ನು ನಿನ್ನ ಘೋರ ಶತ್ರು ಕೊಲ್ಲುವಾಗ, ನಾನು ಮೃತ್ಯುದೇವತೆಯ ರೂಪದಲ್ಲಿ ಬಂದು ನಿನ್ನ ಪ್ರಾಣವನ್ನೂ, ನೆತ್ತರನ್ನೂ ತೆಗೆದುಕೊಳ್ಳುತ್ತೇನೆ. ಇನ್ನೇಕೆ ಹೆಣಗಾಡುತ್ತೀ? ನಿನ್ನನ್ನು ಕೊಲ್ಲುವವನು ಹುಟ್ಟಿದ್ದಾನೆ”ಎಂದು ಹೇಳಿ ಅದೃಶ್ಯಳಾದಳು.

ಕೂಡಲೇ ಕಂಸನು ದೇವಕಿಯ ಬಳಿಗೆ ಬಂದು ಕೈಮುಗಿದು, “ಅಮ್ಮಾ, ತಂಗೀ! ಪ್ರಾಣಭೀತಿಯಿಂದ ನಾನು ಮಹಾಪಾಪ ಮಾಡಿಬಿಟ್ಟೆ. ನಿನ್ನ ಮಕ್ಕಳನ್ನೆಲ್ಲ ಕೊಂದು ನಿನಗೆ ಅಪಾರವಾದ ಶೋಕವನ್ನು ಕೊಟ್ಟೆ. ಇಷ್ಟಾಗಿಯೂ ನನ್ನ ಯತ್ನ ಈಡೇರಲಿಲ್ಲ. ಮಾನವ ಪ್ರಯತ್ನದಿಂದ ವಿಧಿಲಿಖಿತವನ್ನು ಬದಲಾಯಿಸಲಾಗುವುದೆ? ನಾವು ನಿಮಿತ್ತ ಮಾತ್ರರೇ ಹೊರತು ನಿಜಕ್ಕೂ ಕೊಲ್ಲುವವನು ಕಾಲಪುರುಷನೇ. ಆದುದರಿಂದ ನಿನ್ನ ದುಃಖವನ್ನು ಬಿಡು”ಎಂದ.

ದೇವಕೀ ಅಳುತ್ತಾ, “ನನ್ನ ಹಣೆಯಲ್ಲಿ ಈ ಬಗೆಯ ಶೋಕವನ್ನೇ ಬರೆದಿರುವಾಗ ಯಾರೇನು ಮಾಡಬಲ್ಲರು, ಅಣ್ಣಾ, ಇನ್ನು ದುಃಖಿಸಬೇಡ, ಧೈರ್ಯವಾಗಿರು”ಎಂದು ಅವನಿಗೆ ಸಮಾಧಾನ ಹೇಳಿ ಕಳುಹಿಸಿದಳು.

ಬೆಳಗಾಗುವ ಮೊದಲೇ ವಸುದೇವನು ನಂದಗೋಪನ ಮನೆಗೆ ಹೋದಾಗ, ನಂದನು ತನಗೆ ಮಗ ಹುಟ್ಟಿದನೆಂಬ ಸಂಭ್ರಮದಲ್ಲಿದ್ದ. ವಸುದೇವನು ಅವನನ್ನು ಕುರಿತು, “ಆಹಾ! ಎಷ್ಟು ಸುಂದರ ಶಿಶುವನ್ನು ಪಡೆದೆಯಪ್ಪಾ! ಅದೃಷ್ಟವಂತ. ಆದರೆ ಇನ್ನು ಈ ಸ್ಥಳದಲ್ಲಿರಬೇಡ. ಮಗನನ್ನೆತ್ತಿಕೊಂಡು ಬೇಗನೇ ಗೋಕುಲಕ್ಕೆ ಹೋಗಿಬಿಡು. ಅಲ್ಲಿ ನನ್ನ ಹೆಂಡತಿ ರೋಹಿಣಿಯ ಮಗನಿದ್ದಾನೆ. ಅವನನ್ನು ನಿನ್ನ ಹಿರಿಯ ಮಗನಾಗಿ, ಇವನನ್ನು ಎರಡನೆಯವನಾಗಿಯೂ, ನೋಡಿಕೊಂಡು ಬೆಳೆಸು. ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಪ್ಪ. ಪಾಪಿ ಕಂಸ ದೇವಕಿಗೆ ಹುಟ್ಟಿದ ಮಕ್ಕಳನ್ನೆಲ್ಲ ಕೊಂದುಬಿಟ್ಟ. ನಮಗೆ ರೋಹಿಣಿ ಹೆತ್ತ ಕುಡಿಯೊಂದೇ ದಕ್ಕಿತು. ಕಂಸನು ಮಕ್ಕಳನ್ನು ಕೊಲ್ಲುವುದಕ್ಕೆ ನಿಯೋಜಿಸಿದ ಪೂತನಿಗೆ ಹಸುಕಂದಗಳನ್ನು ಹುಡುಕುವುದೇ ಕೆಲಸ. ಬೆಳಗಾಗುವ ಮೊದಲೇ ಹೊರಟುಬಿಡು. ಇನ್ನು ತಡ ಮಾಡಬೇಡ”ಎಂದ.

ವಸುದೇವನ ಮಾತನ್ನು ಕೇಳಿದ ಕೂಡಲೇ ನಂದನಿಗೂ ಅವನ ಮಾತುಗಳು ನಿಜವೆನಿಸಿ ಭಯವೂ ಆಯಿತು. ಅವನು ಮಗುವನ್ನು ತೊಟ್ಟಿಲಿನಲ್ಲಿಟ್ಟು ಹೊರಿಸಿಕೊಂಡು, ತನ್ನ ಹೆಂಡತಿಯೊಂದಿಗೆ, ಗಿಡ್ಡೆತ್ತುಗಳನ್ನು ಕಟ್ಟಿದ ಗಾಡಿಯಲ್ಲಿ ಏರಿಕೊಂಡು ವೇಗವಾಗಿ ಅಲ್ಲಿಂದ ಹೊರಟ.

(ಮುಂದುವರೆಯಲಿದೆ…)

  • ಎಂ.ವಿ. ಶಂಕರಾನಂದ, ಸಾಹಿತಿಗಳು, ತುಮಕೂರು. ಮೊಬೈಲ್:‌ 8971302974

Leave a Comment

Your email address will not be published. Required fields are marked *

Scroll to Top