1980-90 ರ ವರೆಗಿನ ಚಿತ್ರರಂಗ

1980-90 ರ ಕಾಲಘಟ್ಟದಲ್ಲಿ ಅನೇಕ ನಾಯಕರ ಉಗಮವಾಯಿತು…

ರೆಬೆಲ್ ಸ್ಟಾರ್ ಅಂಬರೀಷ್ ‘ಅಂತ’ ಚಿತ್ರದ ಮೂಲಕ ನಾಯಕರಾದರೆ, ಟೈಗರ್ ಪ್ರಭಾಕರ್ ರವರು ‘ಜಿದ್ದು’ ಚಿತ್ರದ ಮೂಲಕ ನಾಯಕರಾಗಿ ಅಭಿನಯಿಸುವುದರ ಮೂಲಕ ಖಳನಾಯಕನಿಂದ ನಾಯಕನಾಗಿ ಬಡ್ತಿ ಪಡೆದರು.

ಕ್ರೇಜಿಸ್ಟಾರ್ ರವಿಚಂದ್ರನ್ ರವರು ‘ಪ್ರೇಮಿಗಳ ಸವಾಲ್’ ಚಿತ್ರದ ಮೂಲಕ ನಾಯಕರಾದರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ಅವರು ʼಆನಂದ್ʼ ಚಿತ್ರದ ಮೂಲಕ ನಾಯಕರಾದರು.

ರಾಘವೇಂದ್ರ ರಾಜ್ಕುಮಾರ್ ಅವರು ʼಚಿರಂಜೀವಿ ಸುಧಾಕರʼ ಚಿತ್ರದ ಮೂಲಕ ನಾಯಕರಾದರೆ, ಕುಮಾರ್ ಬಂಗಾರಪ್ಪ ರವರು ʼವಿಜಯೋತ್ಸವʼ ಚಿತ್ರದ ಮೂಲಕ ನಾಯಕರಾದರು.

ಹಾಗೆಯೇ ಎಂ.ಎಸ್. ರಾಜಶೇಖರ್ (ಧ್ರುವತಾರೆ), ಸುನಿಲ್ ಕುಮಾರ್ ದೇಸಾಯಿ (ತರ್ಕ), ಉಮೇಶ್ (ಅವಳೇ ನನ್ನ ಹೆಂಡ್ತಿ), ನಂಜುಂಡಪ್ಪ (ಸಾಂಗ್ಲಿಯಾನ) ಇವರಂತಹ ಉತ್ತಮ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ದೊರಕ್ಕಿದ್ದು  1980-90 ರ ಕಾಲಘಟ್ಟದಲ್ಲಿ.

ಕೆಲವೊಂದು ಅಚ್ಚರಿ ಬೆಳವಣಿಗೆಗಳು ಈ ಕಾಲಘಟ್ಟದಲ್ಲಿ ನಡೆದವು.

ಲಕ್ಷಗಳಲ್ಲಿ ತಯಾರಾದ ಶಿವರಾಜ್ ಕುಮಾರ್ ಚಿತ್ರಗಳು ಕೋಟಿಗಳ ವ್ಯವಹಾರ ಮಾಡಿದ್ದು ದಾಖಲೆಯಾಯಿತು.

ಕನ್ನಡ ಚಿತ್ರಗಳಿಗೆ ಕೋಟಿಗಟ್ಟಲೆ ಬಂಡವಾಳ ಹಾಕಿ ರವಿಚಂದ್ರನ್ ರವರು ಅದ್ದೂರಿಚಿತ್ರಗಳನ್ನು ನಿರ್ಮಿಸಿದರು.

ಅದ್ದೂರಿ ಬಜೆಟ್ ನ ʼರಣಧೀರʼ ಚಿತ್ರಕ್ಕೆ ಕಡಿಮೆ ಬಜೆಟ್ ನ ಕಾಶೀನಾಥ್ ಚಿತ್ರ ʼಅವಳೇ ನನ್ನ ಹೆಂಡ್ತಿʼ ಭಾರೀ ಪೈಪೋಟಿ ನೀಡಿದ್ದು ಮತ್ತೊಂದು ದಾಖಲೆ.

ರಾಜ್ ಕುಮಾರ್ ರವರು ʼಪರಶುರಾಮʼ ಚಿತ್ರದ ನಂತರ ವಿರಾಮ ಪಡೆದಿದ್ದು ಈ ಅವಧಿಯಲ್ಲೇ.

ಅನುರಾಧ, ಸಿಲ್ಕ್ ಸ್ಮಿತಾ, ಡಿಸ್ಕೋ ಶಾಂತಿ ಮುಂತಾದ ಡ್ಯಾನ್ಸರ್ ಗಳ ಆಗಮನವಾಗಿದ್ದು ಈ ಕಾಲಘಟ್ಟದಲ್ಲೆ.

ಚಲನಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳು ಬಂದದ್ದು ಇದೇ ಅವಧಿಯಲ್ಲಿ.

ಈ ಅವಧಿಯಲ್ಲಿ ಬಂದಂತಹ ಅನೇಕ ಚಿತ್ರಗಳಲ್ಲಿ ಇದ್ದಂತಹ ಸಾಮಾನ್ಯ ದೃಶ್ಯಗಳು:

ಚಿಕ್ಕವಯಸ್ಸಿನಲ್ಲಿ ಮಗ ಕಾಣೆಯಾಗಿರುತ್ತಾನೆ, ಅವನು ದೊಡ್ಡವನಾಗಿ ಸಿಕ್ಕಿದಾಗ ಮಚ್ಚೆ ನೋಡಿ ಕಂಡುಹಿಡಿಯುವುದು.

ತಲೆಗೆ ಪೆಟ್ಟು ಬಿದ್ದು ಬುದ್ದಿ ಭ್ರಮಣೆಯಾದವನಿಗೆ, ಮತ್ತೊಮ್ಮೆ ಅದೇ ಜಾಗಕ್ಕೆ ಪೆಟ್ಟು ಬಿದ್ದಾಗ ಜ್ಞಾಪಕ ಶಕ್ತಿ ಬರುವುದು.

ಪ್ರೇಯಸಿಯು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದೆ ಇದ್ದಾಗ, ಪ್ರಾಣ ಕಳೆದುಕೊಳ್ಳುವ ಬೆದರಿಕೆ ಹಾಕಿ ಆಕೆಯನ್ನು ಒಲಿಸಿಕೊಳ್ಳುವುದು.

ಮಾಧವಿ, ಸರಿತಾ, ಅಂಬಿಕಾ, ಗೀತಾ, ಜ್ಯೂಹಿ ಚಾವ್ಲ, ಖುಷ್ಬೂ, ಮಹಾಲಕ್ಷ್ಮಿ, ಮಾಲಾಶ್ರೀ ಮುಂತಾದ ನಾಯಕಿಯರು ಬಂದದ್ದು ಇದೇ ಅವಧಿಯಲ್ಲಿ.

ಉಮಾಶ್ರೀ, ಎನ್.ಎಸ್.‌ ರಾವ್, ಮೈಸೂರ್ ಲೋಕೇಶ್, ಬ್ಯಾಂಕ್ ಜನಾರ್ಧನ್, ಟೆನ್ನಿಸ್ ಕೃಷ್ಣ ಮುಂತಾದ ಹಾಸ್ಯ ನಟರ ಆಗಮನವಾಗಿದ್ದು ಈ ಅವಧಿಯಲ್ಲೆ.

ಸಿದ್ದಸೂತ್ರಗಳಿಗೆ ಅಂಟಿಕೊಂಡ ಅನೇಕ ಚಿತ್ರಗಳು ಬಂದಿದ್ದು ಇದೇ ಕಾಲಘಟ್ಟದಲ್ಲಿ. ಹಾಗಿದ್ದೂ ಸಹ  ಚಕ್ರವ್ಯೂಹ, ಬಂಧನ, ಅನುರಾಗ ಅರಳಿತು, ಗುರು ಶಿಷ್ಯರು ಅಂತಹ ಸದಭಿರುಚಿಯ ಚಿತ್ರಗಳು ಬಂದಿದ್ದು ಈ ಅವಧಿಯಲ್ಲಿ.

ಒಟ್ಟಿನಲ್ಲಿ 1980-90ರ ಕಾಲಘಟ್ಟದಲ್ಲಿ ಚಿತ್ರರಂಗ ಈ ದಾಖಲೆಗಳನ್ನು ತನ್ನ ಒಡಲಲ್ಲಿ ಹಾಕಿಕೊಂಡಿದೆ.

– ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.

1 thought on “1980-90 ರ ವರೆಗಿನ ಚಿತ್ರರಂಗ”

  1. ajaybharadwaj83@gmail.com AJAY

    ಕನ್ನಡ ಚಿತ್ರರಂಗದ ಇತಿಹಾಸದ ಕನ್ನಡಿಯನ್ನು, ಪುನಹ ಒಳೆಯುವಂತೆ ನಮಗೆ ನಮಗೆ ತೋರಿಸುವುದರ ಮೂಲಕ ಈ ಹೊಸ ಪುಟಕ್ಕೆ ಸ್ವಾಗತ ಹಾಗೂ ಹೀಗೆ ಮುಂದುವರೆಯಲಿ ಶುಭವಾಗಲಿ.

Leave a Comment

Your email address will not be published. Required fields are marked *

Scroll to Top