
ತುಮಕೂರಿನಲ್ಲಿ ಸೆಪ್ಟೆಂಬರ್ 22ರಿಂದ 11 ದಿನಗಳ ಕಾಲ ಅದ್ದೂರಿ ದಸರಾ ಆಚರಣೆಗೆ ಸಿದ್ಧತೆಗಳು ನಡೆಯುತ್ತಿರುವುದು ಸರಿಯಷ್ಟೆ. ಹಿಂದೆಲ್ಲಾ ತುಮಕೂರಿನ ದಸರಾ ಸಮಿತಿ ಸರಳವಾಗಿ ಆಚರಿಸುತ್ತಿದ್ದ ತುಮಕೂರು ದಸರಾಗೆ ಇತ್ತೀಚಿಗೆ ರಾಜಕಳೆ ಬಂದಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಪೂಜೆ ಪುನಸ್ಕಾರಗಳೊಂದಿಗೆ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ವಿಶೇಷ. ಈ ಬಾರಿ ಹೆಲಿಕಾಪ್ಟರ್ ಟೂರಿಸಂ ಕೂಡ ಸೇರಿಕೊಂಡು ಮತ್ತಷ್ಟು ಮೆರಗು ಬರುತ್ತಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಜಿಲ್ಲಾಡಳಿತ ಸನ್ನದ್ಧವಾಗಿದ್ದು, ರಾಜ್ಯ ಸರಕಾರದ ನೆರವು ಒದಗಲಿದೆ. ಜೊತೆಗೆ, ಸಾರ್ವಜನಿಕರಿಂದ ದೇಣಿಗೆಯ ಸಂಗ್ರಹದ ಆಂದೋಲನವೂ ನಡೆಯುತ್ತಿದೆ.
ಆದರೆ, ನಿಜಕ್ಕೂ ನಾಡ ಹಬ್ಬ ದಸರಾ ಸಂಭ್ರಮವಾಗಬೇಕಿರುವುದು ಹೇಗೆ?
ಶೈಕ್ಷಣಿಕ ನಗರಿ ಎಂದೇ ಖ್ಯಾತವಾಗಿರುವ ತುಮಕೂರಿನಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಪ್ರತಿವರ್ಷ ಕುಸಿಯುತ್ತಿದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಹಾಗು ಧರ್ಮದ, ಜಾತಿಯ ಹೆಸರಿನ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಹೆಸರಿನ ಶಾಲಾ ಕಾಲೇಜುಗಳಲ್ಲಿ ಡೊನೇಷನ್ ಆವಳಿ ಹೆಚ್ಚಾಗಿದೆ. ಸರ್ಕಾರಿ ಶಾಲೆ-ಕಾಲೇಜುಗಳ ಅಭಿವೃದ್ಧಿ, ಖಾಸಗಿ ಶಾಲೆ-ಕಾಲೇಜುಗಳಿಗೆ ಕಡಿವಾಣ ಹಾಕುವ ಮೂಲಕ ಶಿಕ್ಷಣ ದಸರಾ ಆಗಬೇಕಲ್ಲವೇ?
ತುಮಕೂರಿನಲ್ಲಿ ಹೋಟೆಲ್ಲುಗಳಿಗೇನು ಕಡಿಮೆಯಿಲ್ಲ. ಆದರೆ, ಬಹುತೇಕ ಹೋಟೆಲ್ಲುಗಳಲ್ಲಿ ಶುಚಿತ್ವ ಇಲ್ಲ. ಕೆಲವು ಹೋಟೆಲ್ಲುಗಳಲ್ಲಿ ರೇಷನ್ ಅಂಗಡಿಯ ಅಕ್ಕಿ ಹಾಕಿ ಅನ್ನ ಮಾಡಿರುತ್ತಾರೆ. ಬಡವರಿಗೆ ಸಿಗಬೇಕಿದ್ದ ಅಕ್ಕಿ ಹೋಟೆಲ್ಲಿನವರಿಗೆ ಹೇಗೆ ಸಿಕ್ಕಿತು? ರುಚಿಗಾಗಿ ಹೋಟೆಲ್ಲಿಗೆ ಅಂತ ಎಲ್ಲರೂ ಹೋಗುವುದಿಲ್ಲ. ಹಸಿವು, ಅನಿವಾರ್ಯ ಅಂತ ಹೋಗುವವರೂ ಇರುತ್ತಾರೆ. ಅವರಿಗೆ ರುಚಿಯಾದ ಶುಚಿಯಾದ ತಿಂಡಿ ಊಟ ನೀರು ಸಿಗುವ ದಸರಾ ಆಗಬೇಕಲ್ಲವೇ? ಆಹಾರ ದಸರಾ ಬೇಕಲ್ಲವೇ?
ಕಷ್ಟಪಟ್ಟು ಓದಿದವರಿಗೆ ಕೆಲಸ ಸಿಗುವುದು ಬಹಳ ಕಷ್ಟವಾಗುತ್ತಿದೆ. ಸರ್ಕಾರಿ ಉದ್ಯೋಗಗಳಂತು ದಿನೇ ದಿನೇ ಕಾಣೆಯಾಗುತ್ತಿವೆ. ತುಮಕೂರಿನ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಅಧ್ಯಯನ ಮಾಡುವವರು ಹೆಚ್ಚಾಗುತ್ತಿದ್ದರೂ ಅವರಿಗೆ ಸೂಕ್ತ ಸ್ಥಳ ಮತ್ತು ಹೊಸ ಹೊಸ ಪುಸ್ತಕಗಳು ಸಿಗುತ್ತಿಲ್ಲ. ಇದ್ದುದರಲ್ಲಿಯೇ ಹೇಗೋ ಓದಿಕೊಂಡವರಿಗೆ ಉದ್ಯೋಗ!? ಆಗಬೇಕಿರುವುದು ಉದ್ಯೋಗದ ದಸರಾ ಅಲ್ಲವೇ?
ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಯೊಡನೆ ಬರುವವರು ಟೋಕನ್ ತೆಗೆದುಕೊಂಡು, ಯಾವ ಡಾಕ್ಟರ್ ಎಂದು ಹುಡುಕುವಷ್ಟರಲ್ಲಿಯೇ ತಾನೂ ರೋಗಿಯಾಗುವ ಅಪಾಯವಿದೆ. ಇನ್ನು ಭೇಟಿಯಾಗುವ ಕೆಲವು ಡಾಕ್ಟರ್ ಗಳಂತು ತನ್ನ ಯಾವುದೋ ಜನ್ಮದ ಶತ್ರು ಬಂದಿದ್ದಾನೆ ಎಂಬಂತೆ ರೋಗಿಯನ್ನು ಮಾತನಾಡಿಸುವುದನ್ನು ನಾನೇ ಸ್ವತಃ ಕಣ್ಣಾರೆ ಕಂಡಿದ್ದೇನೆ. ಹೊರರೋಗಿಗಳ ಸ್ಥಿತಿಯೇ ಹೀಗಿರುವಾಗ, ಒಳರೋಗಿಗಳ ಗತಿಯೇನು? ಅನುಭವಿಸುವವರಿಗೆ ಆ ಕಷ್ಟಗಳು ಗೊತ್ತಿರುತ್ತವೆ. ಆಗಬೇಕಿರುವುದು ಆರೋಗ್ಯ ದಸರಾ ಅಲ್ಲವೇ?
ಇನ್ನು ಟ್ರಾಫಿಕ್ ಕೇಳುವುದೇ ಬೇಡ. ನಡೆದುಕೊಂಡು ಹೋಗುವವರು ಹೆಲ್ಮೆಟ್ ಹಾಕಿಕೊಂಡು ಓಡಾಡಬೇಕಾದ ಪರಿಸ್ಥಿತಿಯಿದೆ. ರಾಂಗ್ ರೂಟಿನಲ್ಲಿ ಬಂದವರೇ ರೈಟ್ ರೂಟಿನವರು, ಸಿಗ್ನಲ್ ಜಂಪ್ ಮಾಡಿದವರೇ ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದವರು ಅಂತಾಗಿದೆ. ಸಿಗ್ನಲ್ಲುಗಳಲ್ಲಿ ಇರುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿದ್ದರೂ, ಇವುಗಳ ನಿರ್ವಹಣೆಯ ಸಾಫ್ಟವೇರ್ ಯಾರೋ ಹ್ಯಾಕ್ ಮಾಡಿದ್ದಾರೆ. ಉಲ್ಲಂಘನೆಯ ಮೆಸೇಜುಗಳು ಕೆಲವರಿಗೆ ಈಗಾಗಲೇ ಹೋಗಿ ಸತ್ಯ ಯಾವುದು, ಸುಳ್ಳು ಯಾವುದು ಎಂಬುದು ಅರ್ಧವಾಗದೆ ಗೊಂದಲವಾಗಿ ಕೆಲವರಿಗೆ ಹಣಕಾಸಿನ ವಿಚಾರದಲ್ಲಿ ಮೋಸವೂ ಆಗಿದೆ. ಆಗಾಗ ಇದ್ದಕ್ಕಿಂದ್ದಂತೆ ಉದ್ಭವಿಸುವ ಜಿರೋ ಟ್ರಾಫಿಕ್ ಕೂಡ ಪ್ರತಿದಿನ ಓಡಾಡುವವರಿಗೆ ತೊಂದರೆ ಮಾಡುತ್ತಿದೆ. ಆಗಬೇಕಿರುವುದು ಸುರಕ್ಷತೆಯ ಸುಗಮ ಸಂಚಾರದ ದಸರಾ ಅಲ್ಲವೇ?
ಇನ್ನು ಸ್ಮಾರ್ಟ್ ಸಿಟಿ ತುಮಕೂರಿನ ಬಸ್ಟಾಂಡಿನಲ್ಲಿ ಕೈಲಾಗದವರಿಗೆ ಹತ್ತಿ ಇಳಿಯಲು ಲಿಫ್ಟ್ ಇಲ್ಲ. ನಗರದಲ್ಲಿ ಅರ್ಜೆಂಟಾದರೆ ಮೂತ್ರ ವಿಸರ್ಜಿಸಲು ಶೌಚಾಲಯಗಳು ಬಹುತೇಕ ಕಡೆ ಇಲ್ಲ ಹಾಗೂ ಇನ್ನೂ ಅನೇಕ ಸಮಸ್ಯೆಗಳು ಇವೆ. ಅಂತಹದ್ದರಲ್ಲಿ ಆಗಬೇಕಿರುವುದು ಸರಳ ದಸರಾ ಮತ್ತು ಊರಿನ ಉದ್ಧಾರದ ದಸರಾ ಅಲ್ಲವೇ?
ಇನ್ನೂ ವೇದಿಕೆ ಹತ್ತಲು ಕಾಯುತ್ತಿರುವ ಹಿರಿಯರು, ಅವಕಾಶವಾದಿಗಳು ಈಗಾಗಲೇ ಈ ಅದ್ದೂರಿ ದಸರಾದಲ್ಲಿ ಮಾತನಾಡಲು ತಮ್ಮ ಭಾಷಣ ಸಿದ್ಧಪಡಿಸಿಕೊಂಡಿರಲೂ ಸಾಕು. ನಾಲ್ಕು ಸಾವಿರ ರೂಗಳಿಗೆ ಹೆಲಿಕಾಪ್ಟರಿನಲ್ಲಿ ಓಡಾಡಿಸಿದ್ದೀವಿ ನೋಡಿ… ಉಳಿದ ಎಲ್ಲಾ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂದೆಲ್ಲಾ…
ಇನ್ನು ಈ ಅದ್ದೂರಿ ದಸರಾದಲ್ಲಿ ಕವಿಗೋಷ್ಟಿ ಇದೆ ಅಂತ ಕೇಳಿದೆ. ಅದಕ್ಕೂ ಸಹಜವಾಗಿ ಪೈಪೋಟಿ ಇದೆ. ನಾಡಿನ ಸಮಾಜದ ಉದ್ದಾರಕ್ಕಾಗಿ ಕವನಗಳನ್ನು ರಚಿಸಿ ಅಥವಾ ಆಳುವವರನ್ನು ಹೊಗಳಿ ಕವನ ರಚಿಸಿ ಇಲ್ಲಿ ವಾಚಿಸಿ ಹಾರ ಶಾಲು ಮೊಮೆಂಟ ಗೌರವಧನ ಪಡೆದು ಪುನೀತರಾಗಬಹುದು. ಆದರೆ, ಎರಡು ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಖರೀದಿ ಸ್ಥಗಿತವಾಗಿ ಪ್ರಕಾಶಕರು, ಲೇಖಕ-ಪ್ರಕಾಶಕರು ಹಣಕಾಸಿನ ತೊಂದರೆಗೆ ಒಳಗಾಗಿದ್ದಾರೆ. ಇವರ ಕಷ್ಟದ ಕಥೆ ಆಲಿಸುವವರು ಯಾರು?
ಹೋಗಲಿ ಬಿಡಿ ಊರಿನ ಕಷ್ಟ ಯಾರು ಬಂದರೂ ಬಗೆಹರಿಯಲ್ಲ. ಅದ್ದೂರಿ ಹೆಲಿ ಟೂರ್ ದಸರಾ ಯಶಸ್ವಿಯಾಗಲಿ.
ತುಮಕೂರಿನ ಅದ್ದೂರಿ ದಸರಾದ ಕವಿಗೋಷ್ಟಿಗೆ ನನ್ನದೊಂದು ಕವನ…
ಶೀರ್ಷಿಕೆ: ತುಮಕೂರು ದಸರಾ… ಹೆಲಿಕಾಪ್ಟರ ಪರಮೇಶ್ವರ…
ನಮ್ಮ ಊರ ತುಮಕೂರ
ಈ ಬಾರಿ ಅದ್ದೂರಿ ದಸರಾ
ನೋಡಬನ್ನಿ ಸರಸರ
ನಮ್ಮೆಲ್ಲರ ಸಡಗರ
ಕಾಸಿದ್ದವರು ಹತ್ತಿ ಹೆಲಿಕಾಪ್ಟರ
ಕರುಣಿಸಿದ ವರ ಪರಮೇಶ್ವರ (ದೇವರು)
ನೀವು ಕಾಸಿಲ್ಲದವರ
ಮನೆಕಡೆ ನಡೀರಿ ಭರ ಭರ
- ಗುಬ್ಬಚ್ಚಿ ಸತೀಶ್.

ನಿಮ್ಮ ಬರಹ ಅರ್ಥ ಪೂರ್ಣವಾಗಿದೆ, ಈ ಲೇಖನ ದಲ್ಲಿ ಅರಿವು ಮೂಡಿಸುವ ವಿಚಾರ ಗಳಿವೆ, ಕವನ ಚೆನ್ನಾಗೆದೆ