
ಒಂದು ದೊಡ್ಡ ಸಭೆ ನಡೆಯುತ್ತಿದೆ. ಒಬ್ಬ ಉಪನ್ಯಾಸಕ ಮತ್ತೆ ಮತ್ತೆ “ಅಹಿಂಸಾ ಪರಮೋ ಧರ್ಮಃ” ಎಂದು ವಿಜೃಂಭಿಸುತ್ತಿದ್ದಾನೆ. ಇದನ್ನು ಆಲಿಸುತ್ತಿದ್ದ ಒಬ್ಬನಿಗೆ ತಲೆ ಕೆಡುತ್ತೆ. ಅವನು ಎದ್ದು ನಿಲ್ಲುತ್ತಾನೆ.
ಪಕ್ಕದಲ್ಲಿದ್ದವರು, “ಸಮಾವೇಶ ಮುಗಿದ ನಂತರ ಊಟ ಇದೆ, ಕೂತ್ಕೊಳ್ಳಿ,” ಅಂತಾರೆ.
“ನಾನು ಬಡಿಸಲೆಂದೇ ಹೋಗುತ್ತಿದ್ದೇನೆ,” ಎನ್ನುತ್ತಾ ಅವನು ವೇದಿಕೆ ಹತ್ತಿದ.
ವೇದಿಕೆಯ ಮೇಲಿರುವವರು, “ಏನು?” ಎನ್ನುವ ರೀತಿ ಇವನನ್ನು ನೋಡಿದರು. ಆ ದೊಡ್ಡ ಮನುಷ್ಯ ಅಷ್ಟು ಹೊತ್ತಿನಿಂದ “ಅಹಿಂಸಾ ಪರಮೋ ಧರ್ಮಃ” ಎಂದು ಬೋಧಿಸುತ್ತಿದ್ದ ಉಪನ್ಯಾಸಕನ ಕೆನ್ನೆಗೊಂದು ಬಾರಿಸಿದ. ಉಪನ್ಯಾಸಕ ಗಲಿಬಿಲಿಗೊಂಡ. ವೇದಿಕೆಯ ಮೇಲಿದ್ದವರೆಲ್ಲಾ ಬೆಚ್ಚಿಬಿದ್ದು, ಆ ವ್ಯಕ್ತಿಯನ್ನು ಹಿಡಿದುಕೊಂಡರು.
ಆಗ ಆ ವ್ಯಕ್ತಿ ಹೀಗೆಂದ, “ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಬೇಕು ಎಂದು ತಾನೇ ನೀವು ಹೇಳುತ್ತಿರುವುದು? ಮತ್ತೆ ನಿಮ್ಮ ಇನ್ನೊಂದು ಕೆನ್ನೆ ತೋರಿಸ್ತಿಲ್ಲಾ ಯಾಕೆ?” ಎಂದು ಕೇಳಿದ.
ಪೂರಿಯ ಹಾಗೆ ಊದಿಹೋಗಿದ್ದ ತನ್ನ ಕೆನ್ನೆಯನ್ನು ಸವರಿಕೊಳ್ಳುತ್ತಾ, ಆ ಉಪನ್ಯಾಸಕ, ಗೊಂದಲದಿಂದ, “ಭಾಷಣ ಮಾಡಿ ಅಂತ ಕರೆದಿದ್ದಕ್ಕೆ ಬಂದೆ,” ಎಂದ.
“ಮತ್ತೆ ಆ ಶ್ಲೋಕದ ಮುಂದಿನ ಭಾಗವನ್ನು ಏಕೆ ಹೇಳುತ್ತಿಲ್ಲ, ನೀವು?” ಎಂದು ಕೇಳಿದ ಆ ವ್ಯಕ್ತಿ.
“ಅದೂ, ಅದೂ..”
“ನಾನು ಹೇಳಲೇ?”
“ಬೇಡ, ಬೇಡ, ನಾನೇ ಹೇಳ್ತೀನಿ,” ಎಂದು ಉಪನ್ಯಾಸಕ, “ಧರ್ಮ ಹಿಂಸಾ ತದೈವಚ,” ಎಂದು ನುಡಿದ.
“ಈ ತುಣುಕನ್ನ ನಾನು ಹೊಡೆಯೋ ಮೊದಲೇ ಹೇಳಬೇಕಾಗಿತ್ತು,” ಎನ್ನುತ್ತಾ, ಎಲ್ಲರಿಂದಲೂ ಬಿಡಿಸಿಕೊಂಡು, ವೇದಿಕೆಯಿಂದ ಕೆಳಗೆ ಇಳಿದ ಆ ವ್ಯಕ್ತಿ.
ಆದ್ದರಿಂದ, ಹೇಳುವ ಒಳ್ಳೆಯ ಮಾತುಗಳನ್ನು ತುಣುಕು ತುಣುಕಾಗಿ ಹೇಳದೇ, ಪೂರ್ತಿಯಾಗಿ ಹೇಳಬೇಕು.
ಅಹಿಂಸೆ ಎಷ್ಟು ಮುಖ್ಯವೋ, ಧರ್ಮಕ್ಕೆ ಅಪಚಾರ ನಡೆಯುತ್ತಿರುವಾಗ, ಹಿಂಸೆಯೂ ಅಷ್ಟೇ ಮುಖ್ಯ. ದೇಶ ನಿರ್ವೀರ್ಯವಾಗುವಂಥ ಮಾತುಗಳನ್ನು ಮಾತ್ರವೇ ಆಡಬೇಡಿ. ದೇಶವನ್ನು ಎಬ್ಬಿಸಬಹುದಾದಂತಹ ಉಪನ್ಯಾಸಗಳಿಂದ ಪ್ರಜೆಗಳನ್ನು ಚೈತನ್ಯ ವಂತರನ್ನಾಗಿಸಿ.”
ಮಹಾಭಾರತದಲ್ಲಿನ ಈ ಶ್ಲೋಕವನ್ನು ಹಿಂದೂಗಳಿಗೆ ಕೇವಲ ಅರ್ಧ ಮಾತ್ರ ಅಭ್ಯಾಸ ಮಾಡಿಸಿದ್ದಾರೆ.
“ಅಹಿಂಸಾ ಪರಮೋ ಧರ್ಮಃ” ಪೂರ್ತಿ ಶ್ಲೋಕ ಹೀಗಿದೆ.
ಅಹಿಂಸಾ ಪರಮೋ ಧರ್ಮಃ
ಧರ್ಮ ಹಿಂಸಾ ತದೈವಚ ||
ಅರ್ಥ : ಅಹಿಂಸೆಯು ಮಾನವ ಜಾತಿಯ ಪರಮ ಧರ್ಮ ಮತ್ತು ಧರ್ಮ ರಕ್ಷಣೆಗಾಗಿ ಮಾಡುವ ಹಿಂಸೆ ಅದಕ್ಕಿಂತ ಶ್ರೇಷ್ಠವಾದುದು!”
(ಒಂದು ಆಶ್ಚರ್ಯಕರ ವಿಷಯ ಅಂದರೆ ಬಹಳ ಮಂದಿಗೆ ಈ ಎರಡನೆಯ ವಾಕ್ಯ ತಿಳಿಯದೇ ಇರುವುದು !)
- ಸಂಗ್ರಹ.
