
ಸಾಹಸಸಿಂಹ ವಿಷ್ಣುವರ್ಧನ್ ಹಾಗು ಶೃತಿ ಅಭಿನಯದ ಸಿರಿವಂತ ಚಿತ್ರವು 28/09/2006 ರಂದು ಬಿಡುಗಡೆಯಾಯಿತು.
ಅಶ್ವಥ್, ಶ್ರೀನಾಥ್, ದೊಡ್ಡಣ್ಣ ಮುಂತಾದವರು ಅಭಿನಯಿಸಿದ್ದರು.
ಈ ಚಿತ್ರವು ತೆಲುಗಿನಲ್ಲಿ ರಾಜೇಂದ್ರ ಪ್ರಸಾದ್ ಅಭಿನಯಿಸಿದ್ದ ಆ ನಲಗುರು (2004) ಚಿತ್ರದ ರಿಮೇಕ್ ಆಗಿತ್ತು.
ಈ ಚಿತ್ರವನ್ನು ಎಸ್.ನಾರಾಯಣ್ ನಿರ್ದೇಶಿಸಿದ್ದರೆ, ರಾಕ್ ಲೈನ್ ವೆಂಕಟೇಶ್ ನಿರ್ಮಿಸಿದ್ದರು.
ಚಿತ್ರದ ಕಥೆ; ಚಿತ್ರದ ನಾಯಕ ಸಮಾಜ ಸೇವಕ, ತನಗೆ ಬರುವ ಸಂಪಾದನೆಯಲ್ಲಿ ಇಂತಿಷ್ಟು ಹಣವನ್ನು ಸಮಾಜಕ್ಕೆಂದೆ ಮೀಸಲು ಇಡುವ ವ್ಯಕ್ತಿ.
ಈತನಿಗೆ ಹೆಂಡತಿ 3 ಜನ ಮಕ್ಕಳು ಒಂದು ಹೆಣ್ಣು ಎರಡು ಗಂಡು. ಹೆಂಡತಿಗೆ ಗಂಡನ ಕೆಲಸ ಸರಿ ಎನಿಸಿದರೆ ಮಕ್ಕಳು ಅದನ್ನು ವಿರೋಧಿಸುತ್ತಾರೆ.
ಈತನ ಜನಪ್ರಿಯತೆಯನ್ನು ಬಳಸಿಕೊಂಡು ಹಣ ಮಾಡುವ ಉದ್ದೇಶವನ್ನು ಅಳಿಯ ಮಕ್ಕಳು ಹೊಂದಿರುತ್ತಾರೆ. ಇದನ್ನು ಖಂಡಿಸಿದ ನಾಯಕನಿಗೆ ನಮಗೆ ವ್ಯವಹಾರ ಮಾಡಲು ಹಣ ತಂದು ಕೊಡಬೇಕೆಂದು ಡಿಮ್ಯಾಂಡ್ ಮಾಡುತ್ತಾರೆ, ಇದಕ್ಕೆ ಹೆಂಡತಿಯೂ ಮಕ್ಕಳಿಗೆ ಸಪೋರ್ಟ್ ಮಾಡುತ್ತಾಳೆ. ಇದರಿಂದ ಮನನೊಂದ ನಾಯಕ ತನಗೆ ಪರಿಚಯ ಇರುವ ಕೆಲವು ಜನರ ಬಳಿ ಸಾಲ ತೆಗೆದುಕೊಂಡು ಬಂದು ಮಕ್ಕಳಿಗೆ ಕೊಡುತ್ತಾನೆ.
ಆ ರಾತ್ರಿ ಮಲಗಿದ ನಾಯಕ ಬೆಳಗ್ಗೆ ಹೊತ್ತಿಗೆ ಮರಣಹೊಂದಿರುತ್ತಾನೆ.
ಈತ ಮರಣಹೊಂದಲು ಕಾರಣವೇನು? ಈತ ಮಾಡಿದ ಸಾಲ ಯಾರು ತೀರಿಸುತ್ತಾರೆ? ತಾನು ಅನೇಕ ಜನರಿಗೆ ಮಾಡಿದ ಸಹಾಯದ ಫಲ ಏನು? ಎಂಬ ಪ್ರಶ್ನೆಗೆ ನೀವು ಚಿತ್ರ ನೋಡಿ ತಿಳಿದುಕೊಳ್ಳಬೇಕು.
ಒಟ್ಟಾರೆ ಫಲಿತಾಂಶ: ವಿಷ್ಣು ವರ್ಧನ್ ಹಾಗು ಶೃತಿ ಅದ್ಬುತ ಅಭಿನಯ ನೀಡಿದ್ದರು.
ಕ್ಲೈಮ್ಯಾಕ್ಸ್ ನಲ್ಲಿ ದೊಡ್ಡಣ್ಣ ಅತ್ಯದ್ಬುತ ಅಭಿನಯ ನೀಡಿದ್ದರು.
ಎಸ್ ನಾರಾಯಣ್ ನಿರ್ದೇಶನ ಉತ್ತಮವಾಗಿತ್ತು.
ವಿಷ್ಣುವರ್ಧನ್ ನಾರಾಯಣ್ ಕಾಂಬಿನೇಷನ್ನಲ್ಲಿ ಬಂದಂತಹ ಹಲವು ಯಶಸ್ವಿ ಚಿತ್ರಗಳಲ್ಲಿ ಈ ಚಿತ್ರವೂ ಸಹ ಒಂದು. ಇದು ಇವರ ಕಾಂಬಿನೇಷನ್ನಿನ ಕೊನೆಯ ಚಿತ್ರ ಆಗಿತ್ತು.
ಎಸ್.ಎ. ರಾಜ್ಕುಮಾರ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡುಗಳು ಉತ್ತಮವಾಗಿದ್ದವು.
ʼಬಡಿಯಿತೇ ಸಿಡಿಲುʼ ಅರ್ಥಗರ್ಭಿತ ಹಾಡಾಗಿದ್ದರೆ , ಕೊನೆಯಲ್ಲಿ ಬರುವ ʼಯಾರೊ ಯಾರೊ ಈ ನಾಲ್ವರುʼ ಹಾಡು ಎಲ್ಲರನ್ನು ರೋಮಾಂಚನಗೊಳಿಸಿತ್ತು.
ನಾಯಕ ಅಶ್ವಥ್ ಅವರನ್ನು ಭೇಟಿ ಮಾಡಲು ಬಂದಾಗ ಅಲ್ಲಿ ಹಾಕಿದ್ದ ಒಂದು ಬರಹ ಎಲ್ಲರ ಗಮನ ಸೆಳೆಯುತ್ತದೆ. “ನಾನು ಮನುಷ್ಯರನ್ನ ನಂಬ್ತೀನಿ, ಗೌರವಿಸ್ತೀನಿ, ಪ್ರೀತಿಸ್ತೀನಿ ಯಾಕಂದ್ರೆ ನಾನು ಮನುಷ್ಯನೆ”
ಇಂತಹ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ “ಸಿರಿವಂತ” ಚಿತ್ರವನ್ನು ಪ್ರತಿಯೊಬ್ಬರು ನೋಡಲೇಬೇಕು.
- ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.