
“ನೂರಾಳ್ಗಳನ್ನು ರಣರಂಗದಿ ಗೆದ್ದವನಿಗಿಂತ ತನ್ನನ್ನು ತಾನೇ ಗೆದ್ದವನು ಜೇತರೊಳು ಉತ್ತಮನು.” ರಾಷ್ಟ್ರಕವಿ ಗೋವಿಂದ ಪೈಯವರು ಬುದ್ಧೋಪದೇಶ ಕವನದ ಸಾಲಿನಲ್ಲಿ ಹೇಳಿದ್ದಾರೆ. ಮನವೆಂಬ ಮರ್ಕಟವು ಚಂಚಲ. ಯದ್ವಾತದ್ವ ಹರಿದಾಡುತ್ತಿರುತ್ತದೆ, ಏಕಕಾಲದಲ್ಲಿ ಹತ್ತಾರು ಚಿಂತೆಗಳು, ನೂರಾರು ಸಮಸ್ಯೆಗಳ ಗುಣಾತ್ಮಕತೆಯನ್ನು ನಮ್ಮದೇ ಭ್ರಮಾಲೋಕದಿಂದ ಅದರ ಗಾತ್ರವನ್ನು ಹಿಗ್ಗಿಸುತ್ತ ವಿಪರೀತವಾಗಿ ಸ್ನೇಹಿತರೊಡನೆ, ಆಪ್ತರೊಡನೆ ಚರ್ಚಿಸುತ್ತಾ ನೆಮ್ಮದಿಯಲ್ಲಿದ್ದ ಬದುಕನ್ನು ಜಂಜಾಟದೊಳಗೆ, ಜಂಜಡದ ಸಂದಿಗ್ಧತೆಯಲ್ಲಿ ತಳ್ಳುತ್ತಾ ಮಾನಸಿಕ ಬಳಕೆಯಿಂದ ನಮಗೆ ಗೊತ್ತಿಲ್ಲದಂತೆ ಕೊರಗುತ್ತಿರುತ್ತೇವೆ.
ಪ್ರಕೃತಿಯೊಳಗೆ ಎಂಟು ತತ್ವಗಳಿವೆ: ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ. ನಾವು ಬೆಳೆದಂತೆಲ್ಲ ನಮ್ಮಲ್ಲಿ ಪ್ರಬುದ್ಧತೆ ಬೆಳೆಸಿಕೊಳ್ಳುತ್ತಾ ಹೋಗಬೇಕು. ಮನುಷ್ಯರ ಜೀವನವೇ ಪ್ರಯೋಗಾತ್ಮಕವಾದುದು ಅಂದ ಮೇಲೆ ನಮ್ಮ ಸ್ವಭಾವವನ್ನು, ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ವ್ಯಕ್ತಿತ್ವದ ಶಿಲ್ಪಿಯಾಗಿ ನಿಂತಿರುತ್ತಾನೆ. ಹಾಗಿರುವಾಗ ನಮ್ಮ ಸುತ್ತಲಿನ ಸಂಪರ್ಕದಲ್ಲಿದ್ದವರಿಂದ ಬದುಕಿನಲ್ಲಿ ಮಹತ್ವ ಕಡಿಮೆಯಾಗುತ್ತಿದೆ ಎಂದು ಅನಿಸಿದಾಗ ಬೇಸರಕ್ಕೊಳಗಾಗಿ ಭೀತಿಯೊಂದು ಮನಸ್ಸಿನ ಒಳಗಿನ ಪದರುಗಳಲ್ಲಿ ಇಳಿಸಿ ಅಲ್ಲಿ ಯೋಚನೆ, ತಿಕ್ಕಾಟದಿಂದ ಯುದ್ಧ ನಡೆಯುತ್ತಿರುತ್ತದೆ.
ಬದುಕಿನಲ್ಲಿ ಸತ್ವ ಕಳೆದುಹೋಗುವುದು, ಬದುಕು ಹಾಳಾಗುವುದು ವಿಪರೀತವಾದ ಯೋಚನೆಯಿಂದ. ಆಲೋಚನೆಗಳು ಹೆಚ್ಚಾದಂತೆ ಸಂಘರ್ಷದ ಸ್ವರೂಪ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರ ಮೇಲೂ ಅನುಮಾನ ಅಧಿಪತ್ಯ ಸಾಧಿಸಿ ಸಂಬಂಧಗಳಲ್ಲಿ ವಿನಾಕಾರಣ ಬಿರುಕು ಮನಸ್ತಾಪ, ಕಿರಿಕಿರಿ ಆ ಬಗ್ಗೆ ತಲೆಕೆಡಿಸಿಕೊಂಡು ಸಿಟ್ಟನ್ನು ಎದುರಿಗಿದ್ದವರ ಮೇಲೆ ಹೊರಹಾಕಿದಾಗ ವಿಶ್ವಾಸದ ತಂತಿ ಹರಿಯಲು ಪ್ರಾರಂಭವಾಗಿ ಏಕಾಂಗಿಯಾಗಿರಲು ಮನಸ್ಸು ಹಾತೊರೆದಾಗ ಬದುಕು ನೀರಸವೆನಿಸುತ್ತದೆ.
“ಉದ್ಧರೇತ್ ಆತ್ಮಾನ ಆತ್ಮಾನಂ” ನಮ್ಮ ನಮ್ಮ ಮಾನಸಿಕ ಪ್ರವೃತ್ತಿಗಳಿಂದ ನಮ್ಮನ್ನು ನಾವು ಶ್ರೇಷ್ಠತೆಯತ್ತ ಕೊಂಡೊಯ್ಯಬೇಕೆನ್ನುವುದು ಅಪ್ರಯೋಜಕವಾದ ಮಾತು. ಸುಖ ದುಃಖ ಮಾನ ಅಪಮಾನಗಳಿಂದ ಆಗಾಗ ಬದುಕು ಭಾರವೆನಿಸುತ್ತದೆ. ಎಂದೋ ನಡೆದ ದುಃಖದ ಸನ್ನಿವೇಶವನ್ನೇ ಒತ್ತು ಕೊಟ್ಟು ವಿಷದೀಕರಿಸುತ್ತಿರುತ್ತೇವೆ. ಗಂಧದ ಕೊರಡಿನಂತ ಈ ಜೀವಕ್ಕೆ ಅನುಭವಗಳ ಪರಿಮಳಗಳ ಪ್ರಗಾಢತೆಯಿದ್ದರೂ ಮತ್ತೆ ನಿರ್ಲಕ್ಷದಿಂದ ವರ್ತಿಸುತ್ತಿರುತ್ತೇವೆ. ನಮ್ಮ ಇಂತಹ ವರ್ತನೆ, ಸ್ವಭಾವವನ್ನು ಮನೆಯಲ್ಲಿರುವವರು ಸ್ನೇಹಿತರು ಸಹಿಸಿಕೊಳ್ಳಬೇಕೆಂದಾಗ ನಮಗಿಷ್ಟವಿಲ್ಲದ ಬೇರೆಯವರ ಸ್ವಭಾವವನ್ನು ನಾವು ಒಪ್ಪಿಕೊಳ್ಳುವಂತವರಾಗಿರಬೇಕು. ವ್ಯಕ್ತಿಯಿಂದ ವ್ಯಕ್ತಿಗಳಲ್ಲಿ ಅಭಿಪ್ರಾಯಗಳು ಹೇಗೆ ಭಿನ್ನವಾಗಿರುತ್ತೇವೆಯೋ ಸ್ವಭಾವವು ಹಾಗೆಯೇ. ಮಾನವನ ಮೂಲಭೂತ ಸ್ವಭಾವವೇ ಇತರರನ್ನು ದೂಷಿಸುವುದು ಜಾಸ್ತಿಯಾಗಿದೆ ಎಂದರೆ ತಪ್ಪಾಗಲಾರದು. ಇದು ನಮ್ಮೊಳಗೆ ಸಾಕಾರಗೊಳ್ಳುವುದು ಅತಿ ಬುದ್ಧಿವಂತಿಕೆಯ ಊಹೆಯಿಂದ ಮತ್ತು ಕೀಳರಿಯಿಂದ. ಬಸವಣ್ಣನವರು ಹೇಳಿದ್ದಾರೆ “ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಇದಿರ ಹಳಿಯಲು ಬೇಡ” ಎಂದು. ಯಾರ ಯೋಚನೆಯೂ ಒಂದೇ ರೀತಿಯಾದ್ದಾಗಿರುವುದಿಲ್ಲವೆಂದು ಮೊದಲು ಅರ್ಥಮಾಡಿಕೊಳ್ಳಬೇಕು. ನಮ್ಮ ಸಮಸ್ಯೆಗೆ ಪರಿಹಾರ ಆತ್ಮೀಯರಲ್ಲಿ ಸಿಗುತ್ತದೆಂಬ ನಂಬಿಕೆಯಿಂದ ಮನಸ್ಸು ಹಗುರಾಗುತ್ತದೆ ಎಂಬ ಭ್ರಮೆಯಲ್ಲಿ ಹೇಳಿಕೊಂಡಾಗ ಅವರಿಗೆ ಅರಿವಿಲ್ಲದಂತೆ ನಮ್ಮನ್ನು ಮತ್ತಷ್ಟು ನಕಾರಾತ್ಮಕತೆಯ ಬಲೆಯೊಳಗೆ ನೂಕುತ್ತಾರೆ. ತಲೆಯೊಳಗೆ ಸಾವಿರ ಹುಳ ಬಿಡಲು ಟೊಂಕ ಕಟ್ಟಿ ನಿಂತವರಿಗೇನು ಕೊರತೆಯಿಲ್ಲ. ಆ ಹುಳವನ್ನು ತಲೆಯ ಮೂಲೆಯಲ್ಲಿ ಪ್ರೀತಿಯಿಂದ ಇರಿಸಿಕೊಂಡು ಬೇಡದ ಅಭಿಪ್ರಾಯಗಳಲ್ಲಿ ವಿವರಿಸುತ್ತಾ ಅವರನ್ನು ನಂಬುತ್ತೇವೆ. ಊಹಿಸಿಕೊಂಡು ಹೇಳಿದ ಮಾತು ಸುಳ್ಳೇಂದು ಯಾವತ್ತೋ ಒಮ್ಮೆ ಸ್ಪೋಟಗೊಂಡಾಗ ಎಲ್ಲಾ ಸಂಬಂಧಗಳು ಒಂದೊಂದಾಗಿ ನಂಬಿಕೆ ಕಳೆದುಕೊಂಡು ದೂರವಾಗುತ್ತವೆ. ಅದಕ್ಕೆ ಕಾರಣ ನಾವೇ. ಯಾರೋ ಹೇಳಿದ್ದನ್ನು ಅವರ ಹೇಳಿಕೆಯನ್ನು ವಿವೇಚನೆ ಮಾಡದೆ ಅದೇ ದಾರಿಯಲ್ಲಿ ಕುರಿ ಮಂದೆಯಂತೆ ನಡೆಯುತ್ತೇವೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ ಕಳೆದುಕೊಳ್ಳುವ ಮುನ್ನ ಅಗತ್ಯಕ್ಕಿಂತ ಹೆಚ್ಚಾಗಿ ಮತ್ತೊಬ್ಬರ ಅಭಿಪ್ರಾಯಗಳಿಗೆ ತಲೆ ಬಗ್ಗಿಸಿದಾಗ ಎಸೆದ ಕಲ್ಲು ನೇರವಾಗಿ ಮರದಲ್ಲಿದ್ದ ಹಣ್ಣಿಗೆ ತಗುಲಿತೆಂದು ತಿಳಿಯುವ ಜಾಣನೆದುರು ಸ್ಪಂದಿಸಿದವನ ಮನಸ್ಸು ಕ್ರಮೇಣ ಒತ್ತಡಕ್ಕೆ ಒಳಪಡುತ್ತಿರುತ್ತದೆ.
ಮನುಷ್ಯನ ಅಭಿಪ್ರಾಯಗಳಿಗೆ ಭಾವನೆಗಳಿಗೆ ಆಗಾಗ ಎದಿರೇಟು ತಗುಲುತ್ತಾ ಹೋದಾಗ ಆಂತರ್ಯದಲ್ಲಿ ದುರ್ಬಲ ಮತ್ತು ಸೂಕ್ಷ್ಮ ಮನಸ್ಸಿನವರಾದರೆ ಒಂದೇ ಕ್ಷಣದಲ್ಲಿ ಪರಿವರ್ತನೆಗೊಂಡು ಸಿಟ್ಟು ಅಸಹನೆ ತಾಂಡವಡುತ್ತದೆ. ಸಮಸ್ಯೆಗಳು ಹೊಸತಾಗಿ ಹುಟ್ಟಿಕೊಂಡು ಅದು ನಮ್ಮನ್ನೇ ಬೇಟೆಯಾಡಲು ಹೊಂಚು ಹಾಕುತ್ತಿರುತ್ತವೆ. ಅಲ್ಲಿಂದ ಸಮಸ್ಯೆಗಳ ಸರಮಾಲೆ ಕುತ್ತಿಗೆಯಲ್ಲಿ ನೇತಾಡುತ್ತಿರುತ್ತದೆ. ಬದುಕು ಭಾರವೆನಿಸುತ್ತ ಹೋದಾಗ ಇದೇ ಮನಸ್ಸು ಹೃದಯ ಮೌಢ್ಯವನ್ನು ಆಶ್ರಯಿಸಿಕೊಂಡು ಈಗಿನ ಪರಿಸ್ಥಿತಿಯಿಂದ ಪಾರಾಗಲು ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಕಂಡ ಕಂಡ ಜ್ಯೋತಿಷ್ಯರ ಮೊರೆ ಹೋಗುತ್ತಾರೆ, ಯುಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಬಂದ ದೇವಸ್ಥಾನಕ್ಕೆ ಮುಗಿ ಬೀಳುತ್ತಾರೆ, ಮನ ಬಂದ ದೇವರಿಗೆ ಹರಕೆ ಕಟ್ಟಿಕೊಂಡು ಅಡ್ಡ ಬೀಳುತ್ತಾರೆ. ಇದು ಅವರವರ ಆಸರೆಗೆ ಕಂಡುಕೊಂಡ ಮಾರ್ಗ. ಇದರಿಂದ ಒಂದಿಷ್ಟು ಶಾಂತಿ, ಪ್ರಶಾಂತತೆ ನೆಮ್ಮದಿ ಕ್ಷಣಿಕದಲ್ಲಿ ಸಿಗುತ್ತದೆ. ಬದುಕಿನಲ್ಲಿ ನಂಬಿಕೆಯಿಂದ ಬದುಕಿನ ಬಾರವೂ ಕಡಿಮೆಯಾಗಿದ್ದುಂಟು ಎಲ್ಲದಕ್ಕೂ ಸಂಕಟ ಬಂದಾಗ ವೆಂಕಟರಮಣನೇ.
ಬೌದ್ಧಿಕ ವಿಕಾಸದಿಂದ ಬದುಕಿನಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಅಂತೆ ಕಂತೆಗಳ ಕಟ್ಟನ್ನು ತಲೆಯಲ್ಲಿ ಹೊತ್ತುಕೊಂಡಷ್ಟು ದಿನ ಬದುಕು ಭಾರವೆನಿಸುವುದು. ಮಾತು ಮಿತಿಯಲ್ಲಿದ್ದಾಗ ಎಲ್ಲರೂ ಒಳ್ಳೆಯವರೇ ಕಾಲಹರಣಕ್ಕೆಂದು ಆಡಿದ ಮಾತು ಚಟವಾಗಿ ಹಗರಣಗಳನ್ನು ಹರಡಿಸುವಂತಾದರೆ ಬೌದ್ಧಿಕ ಮತ್ತು ಭೌತಿಕವಾಗಿ ಆತ್ಮೀಯರಿಂದ ದೂರವಾಗುತ್ತಾ ಹೋಗುತ್ತೇವೆ. ನಾವೆಲ್ಲರೂ ನಮ್ಮೊಳಗೊಂದು ದೌರ್ಬಲ್ಯವನ್ನು ಸಾಕುತ್ತಿದ್ದೇವೆ ಎನ್ನುವುದು ನೆನಪಿನಲ್ಲಿಟ್ಟುಕೊಳ್ಳಬೇಕು. ಈಗಿರುವ ನಮ್ಮ ಅಸ್ತಿತ್ವಕ್ಕೆ ಕಣ್ಣು, ಕಿವಿ, ನಾಲಿಗೆಯಿಂದ ಬುದ್ಧಿ ಬರಡಾಗಿಸುತ್ತದೆ. ನಂಬಿಕೆಯ ಒರತೆ ಬತ್ತಿದರೆ ಮನಸ್ಸು ಶೂನ್ಯವಾಗುವುದು.
- ವೀಣಾ ರಾವ್.