2025ನೇ ಸಾಲಿನಲ್ಲಿ ನಿಮ್ಮ ಪುಸ್ತಕ ಪ್ರಕಟವಾಗಬೇಕೆ?

ಪ್ರಿಯ ಸಾಹಿತಿ ಮಿತ್ರರೇ,

ನೀವು ಈ ವರ್ಷ ನಿಮ್ಮ ಒಂದು ಅಥವಾ ಎರಡು ಪುಸ್ತಕಗಳನ್ನು ಪ್ರಕಟಿಸಲು ಪ್ರಕಾಶಕರನ್ನು ಹುಡುಕುತ್ತಿದ್ದರೆ, ಈ ಮಾಹಿತಿ ನಿಮಗೆ ಉಪಯೋಗವಾಗಬಹುದು. ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಖರೀದಿ ಕಳೆದ ವರ್ಷದಿಂದ ಸ್ಥಗಿತವಾಗಿದ್ದು, ಇಂತಹ ಸಮಯದಲ್ಲಿ ಪುಸ್ತಕ ಪ್ರಕಟಿಸುವುದು ಕಷ್ಟಕರವಾದ ಕೆಲಸವಾಗಿರುತ್ತದೆ. ಪ್ರಕಾಶಿಸಲು ಕೂಡ ಪ್ರಕಾಶನ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ. ಆದರೂ, ಕೆಲವು ಪ್ರಕಾಶನ ಸಂಸ್ಥೆಗಳು ಪುಸ್ತಕಗಳನ್ನು ಪ್ರಕಟಿಸಿ, ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ 2010ರಲ್ಲಿ ಶುರುವಾದ ನಮ್ಮ ನಿಮ್ಮ ಗೋಮಿನಿ ಪ್ರಕಾಶನವೂ ಕೂಡ ಕೆಲವು ಪುಸ್ತಕಗಳನ್ನು ಪ್ರಕಟಿಸುವ ಕೆಲಸ ಮಾಡುತ್ತಿದೆ. ಆಸಕ್ತರು, ನಮ್ಮ ಪ್ರಕಾಶನದಲ್ಲಿ ಪುಸ್ತಕಗಳನ್ನು ಪ್ರಕಟಿಸಲು ಇಚ್ಛಿಸಿದಲ್ಲಿ ಕೆಳಕಂಡ ನಿಬಂಧನೆಗಳನ್ನು ಓದಿ, ಅರ್ಥಮಾಡಿಕೊಂಡು ನನ್ನನ್ನು ಸಂಪರ್ಕಿಸಬಹುದು. ಈಗ ಶುರುವಾಗಿರುವ ನಮ್ಮ ಪ್ರಕಾಶನದ “ಹಾಯ್‌ ತುಮಕೂರು – ತನು ಕನ್ನಡ, ಮನ ಕನ್ನಡ” (haitumakuru.com) ವೆಬ್‌ ಪತ್ರಿಕೆಗೂ ಕೂಡ ನೀವು ಬರೆಯಬಹುದು…

ಗೋಮಿನಿ ಪ್ರಕಾಶನದಲ್ಲಿ ಪುಸ್ತಕ ಪ್ರಕಟವಾಗಲು ಪ್ರಮುಖ ನಿಬಂಧನೆಗಳು

1.         ಪ್ರಕಾಶನವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಮೊದಲಿಗೆ ನೂರು ಪ್ರತಿಗಳನ್ನು ಮಾತ್ರ ಮುದ್ರಿಸಲಾಗುತ್ತದೆ. ಸಾಹಿತಿಗಳಿಗೆ 25 ಗೌರವಪ್ರತಿಗಳನ್ನು ನೀಡಲಾಗುತ್ತದೆ. ಯಾವುದೇ ರೀತಿಯ ಗೌರವಸಂಭಾವನೆ ಇರುವುದಿಲ್ಲ.

2.         ನೂರಕ್ಕೂ ಹೆಚ್ಚು ಪ್ರತಿಗಳನ್ನು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಮುದ್ರಿಸಲಾಗುತ್ತದೆ. ಪುಸ್ತಕಗಳನ್ನು ಪ್ರಮುಖವಾಗಿ ಪ್ರಕಾಶನದ ನೆಟ್ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ.

3.         ಪುಸ್ತಕದ ಬೌದ್ಧಿಕ ಹಕ್ಕು ಸಾಹಿತಿಗಳದ್ದಾಗಿದ್ದು, ಪುಸ್ತಕದ ಭೌತಿಕ ಹಕ್ಕು ಪ್ರಕಾಶಕರದ್ದಾಗಿರುತ್ತದೆ. ಸರ್ಕಾರಿ ಮತ್ತು ಖಾಸಗಿ ಮಾರಾಟವನ್ನು ಪ್ರಕಾಶಕರು ಮಾತ್ರ ಮಾರಾಟಮಾಡಲು ಅರ್ಹರಾಗಿರುತ್ತಾರೆ. ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಈ ಸಾಹಿತಿಯ ಈ ಪುಸ್ತಕದ ಮಾರಾಟದ ಹಕ್ಕು ತಮ್ಮದೇ ಎಂದು ನೋಂದಾಯಿಸಲು ಅರ್ಹರಾಗಿರುತ್ತಾರೆ. ಕೃತಿಯು ಕೃತಿಚೌರ್ಯವೆಂಬುದು ತಿಳಿದುಬಂದರೆ ಅದಕ್ಕೆ ಸಂಪೂರ್ಣ ಜವಾಬ್ದಾರಿ ಸಾಹಿತಿಗಳದ್ದೇ ಆಗಿರುತ್ತದೆ.

4.         ಪ್ರಕಾಶನದ ತಂಡವೇ ಪುಸ್ತಕದ ಮುಖಪುಟ ಮತ್ತು ಒಳಪುಟಗಳ ವಿನ್ಯಾಸವನ್ನು ಮಾಡುತ್ತದೆ. ಬೇರೆ ಕಲಾವಿದರು ಈ ಕೆಲಸ ನಿರ್ವಹಿಸಲಿ ಎಂದು ಸಾಹಿತಿಗಳು ಕೋರಿಕೆ ಸಲ್ಲಿಸಿದರೆ ಆಯಾ ಕಲಾವಿದರ ಸಂಭಾವನೆಯನ್ನು ಪ್ರಕಾಶಕರು ಭರಿಸುವುದಿಲ್ಲ. ಮತ್ತು ಆ ಕಲಾವಿದರು ಪ್ರಕಾಶನದ ಬ್ರಾಂಡಿಗೆ ಅನುಗುಣವಾಗಿ ವಿನ್ಯಾಸವನ್ನು ಅಂತಿಮ ಮಾಡಲು ಸಿದ್ಧರಿರಬೇಕು. 

5.         ಪ್ರಕಾಶನವು ಯಾವುದೇ ಪತ್ರಿಕೆಗಳಿಗೆ, ವ್ಯಕ್ತಿಗಳಿಗೆ, ನಿಯತಕಾಲಿಕೆಗಳಿಗೆ ವಿಮರ್ಶೆಗೆ ಎಂದು ಪ್ರತಿಗಳನ್ನು ಕಳುಹಿಸುವುದಿಲ್ಲ. ಜೊತೆಗೆ, ಯಾವುದೇ ಪ್ರಶಸ್ತಿಗಳಿಗೆ ಪ್ರತಿಗಳನ್ನು ಸಲ್ಲಿಸುವುದಿಲ್ಲ. ಮತ್ತು ಪುಸ್ತಕ ಬಿಡುಗಡೆ ಅಥವಾ ಲೋಕಾರ್ಪಣೆ ಸಮಾರಂಭ ಏರ್ಪಡಿಸುವುದಿಲ್ಲ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಆರ್ಥಿಕ ಮತ್ತು ಇನ್ನಿತರ ಸಹಾಯವನ್ನು ಮಾಡುವುದಿಲ್ಲ.

6.         ಸಾಹಿತಿಗಳು ತಮಗೆ ಅಗತ್ಯವಿದ್ದರೆ ಪುಸ್ತಕದ ಎಷ್ಟು ಪ್ರತಿಗಳನ್ನು ಬೇಕಾದರೂ ಕೊಳ್ಳಬಹುದು. ಈ ರೀತಿ ಖರೀದಿಸುವ ಪುಸ್ತಕಗಳಿಗೆ ಶೇ. 33ರಷ್ಟು ರಿಯಾಯಿತಿಯನ್ನು ಪ್ರಕಾಶನ ನೀಡುತ್ತದೆ. ಈ ಪ್ರತಿಗಳ ಸಾಗಾಣಿಕೆ ವೆಚ್ಚ ಸಾಹಿತಿಗಳದೇ ಆಗಿರುತ್ತದೆ. ಎಷ್ಟು ಪ್ರತಿಗಳು ಬೇಕು ಎಂಬುದನ್ನು ಪ್ರಕಟಣೆಯ ಸಂದರ್ಭದಲ್ಲಿಯೇ ತಿಳಿಸಬೇಕು.

7.         ಪುಸ್ತಕವನ್ನು ಅಂತಿಮವಾಗಿ ಸಲ್ಲಿಸುವಾಗ ಎಂಎಸ್‍ವರ್ಡಿನ ಒಂದೇ ಫೈಲಿನಲ್ಲಿ ಯಾವುದೇ ತಪ್ಪುಗಳಿಲ್ಲದೆ ಟೈಪಿಸಿ ಕಳಿಸಬೇಕು. ತಪ್ಪುಗಳಿರುವ ಫೈಲನ್ನು ಪರಿಗಣಿಸಲಾಗುವುದಿಲ್ಲ. ಅಂತಿಮ ಪ್ರೂಫ್‍ರೀಡ್ ಸಾಹಿತಿಗಳದ್ದೇ ಆಗಿರುತ್ತದೆ. ಪುಸ್ತಕಗಳಿಗೆ ಅಗತ್ಯವಿರುವ ಮುನ್ನುಡಿ-ಬೆನ್ನುಡಿಯನ್ನು ಸಾಹಿತಿಗಳೇ ಬರೆಸಿಕೊಡಬೇಕು. ಇಬ್ಬರಿಗಿಂತ ಹೆಚ್ಚು ಜನ ಪುಸ್ತಕ ಕುರಿತು ಬರೆಯಲು ಅವಕಾಶವಿರುವುದಿಲ್ಲ. ಮತ್ತು ಪುಸ್ತಕದ ಪೇಪರ್‍ಬ್ಯಾಕ್ ಆವೃತ್ತಿ ಮಾತ್ರ ಹೊರತರಲಾಗುತ್ತದೆ.

8.         ಯಾವುದೇ ರೀತಿಯ ಮನಸ್ತಾಪಗಳಿಗೆ ಪ್ರಕಾಶನ ಹೊಣೆಯಲ್ಲ. ಈ ಸಂಬಂಧ ಯಾವುದೇ ತಂಟೆ-ತಕರಾರುಗಳು ಎದ್ದರೆ ತುಮಕೂರು ಜಿಲ್ಲೆಯ ನ್ಯಾಯಾಲಯ ವ್ಯಾಪ್ತಿಗೆ ಪ್ರಕಾಶನ ಬರುತ್ತದೆ. 

9.         ಸಾಹಿತಿಗಳು ಪ್ರಕಾಶನದ ಜೊತೆ ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಅಂತಿಮವಾಗಿ ತೀರ್ಮಾನಿಸಿದ ನಂತರ ಪ್ರಕಾಶನದ ಕರಾರಿಗೆ ಸಹಿ ಮಾಡಬೇಕಿರುತ್ತದೆ. ಮತ್ತು ಪ್ರಕಾಶನದ ಜೊತೆ ನಂಬಿಕೆಯಿಂದ, ವಿಶ್ವಾಸದಿಂದ ವ್ಯವಹರಿಸುವ ಮೂಲಕ ತಮ್ಮ ಬೆಳವಣಿಗೆಯ ಜೊತೆ ಪ್ರಕಾಶನದ ಬೆಳವಣಿಗೆಗೂ ಸಹಕರಿಸಬೇಕು. ಪ್ರಕಾಶನದ ಘನತೆ ಮತ್ತು ಗೌಪ್ಯತೆಯನ್ನು ಕಾಪಾಡಲು ಬದ್ಧರಾಗಿರಬೇಕು. ಸಾಹಿತಿಗಳು ಒಪ್ಪಿ ಅಂತಿಮ ಫೈಲ್ ನೀಡಿದ ಮೂರು ತಿಂಗಳ ಒಳಗೆ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.

10.       ಕನ್ನಡ ಸಾಹಿತ್ಯ ಮತ್ತು ಪುಸ್ತಕ ಪ್ರಕಾಶನದ ಬೆಳವಣಿಗೆಗೆ ಪ್ರಕಾಶನ ಬದ್ಧವಾಗಿರುತ್ತದೆ.

ವಿಶೇಷ ಸೂಚನೆ: ಈ ಅವಕಾಶ ಕೆಲವೇ ಪುಸ್ತಕಗಳಿಗೆ ಮಾತ್ರ ಲಭ್ಯವಿದ್ದು, ಆಗಸ್ಟ್‌ 2025ರ ಒಳಗೆ ಕಾಯ್ದಿರಿಸುವ ಪುಸ್ತಕಗಳನ್ನು ನವೆಂಬರ್‌ 2025ರ ಒಳಗೆ ಪ್ರಕಾಶಿಸಲಾಗುತ್ತದೆ.

ಹೆಚ್ಚಿನ ವಿವರಗಳಿಗೆ,

– ಗುಬ್ಬಚ್ಚಿ ಸತೀಶ್‌, ಸಂಪಾದಕರು, 

ಗೋಮಿನಿ ಪ್ರಕಾಶನ, ತುಮಕೂರು. 

(ವಾಟ್ಸಪ್‌ ಮಾತ್ರ @ 9986692342)

haitumakuru.com

Leave a Comment

Your email address will not be published. Required fields are marked *

Scroll to Top