ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಬದಲಾವಣೆ ತಂದ ಈ ಚಿತ್ರಗಳು, ನಮ್ಮ ಚಿತ್ರರಂಗದಲ್ಲಿ ಒಂದು ಮೈಲುಗಲ್ಲನ್ನು ಸ್ಥಾಪಿಸಿದ ಚಿತ್ರಗಳು ಆಗಿವೆ. ಈ ಚಿತ್ರಗಳ ಕಿರು ಪರಿಚಯ ಮಾಡಿಕೊಳ್ಳೋಣ ಬನ್ನಿ…
1950-60ರ ಕಾಲ ಘಟ್ಟದಲ್ಲಿ ಕನ್ನಡ ಚಿತ್ರಗಳು ನಾಟಕಗಳಂತೆ ಇರುತ್ತಿದ್ದವು, ಅಲ್ಲಿ ಬರುತ್ತಿದ್ದ ಸಂಭಾಷಣೆ, ಅಭಿನಯ ಎಲ್ಲ ನಾಟಕದಂತೆ ಇರುತ್ತಿದ್ದವು.
- ಇಂತಹ ಸಂದರ್ಭದಲ್ಲಿ ʼಬೇಡರ ಕಣ್ಣಪ್ಪʼ ಎಂಬ ಚಿತ್ರದ ಮೂಲಕ ಡಾ. ರಾಜ್ ಕುಮಾರ್ ರವರ ಪಾದಾರ್ಪಣೆ ಆಯಿತು. ಈ ಚಿತ್ರವು 07-05-1954ರಲ್ಲಿ ಬಿಡುಗಡೆಯಾಯಿತು, ಈ ಚಿತ್ರವನ್ನು ಗುಬ್ಬಿ ಕಂಪನಿಯವರು ನಿರ್ಮಿಸಿದ್ದರು.
2. ಕಪ್ಪು ಬಿಳುಪು ಚಿತ್ರಗಳನ್ನೆ ನೋಡಿಕೊಂಡು ಬಂದ ಪ್ರೇಕ್ಷಕರಿಗೆ ಮೊದಲ ಬಾರಿಗೆ ಕಲರ್ ನಲ್ಲಿ ಬಂದ ಚಿತ್ರ ನೋಡುವ ಸೌಬಾಗ್ಯ ಒದಗಿ ಬಂದದ್ದು ಕಲ್ಯಾಣ್ ಕುಮಾರ್ ಅಭಿನಯದ ‘ಅಮರ ಶಿಲ್ಪಿ ಜಕಣಾಚಾರಿ’ ಚಿತ್ರದ ಮೂಲಕ, ಈ ಚಿತ್ರವು 15-04-1964 ರಲ್ಲಿ ಬಿಡುಗಡೆಯಾಯಿತು. ಕನ್ನಡದ ಪ್ರಪ್ರಥಮ ವರ್ಣ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರಕ್ಕಿದೆ.

3. ಚಲನಚಿತ್ರ ಚಿತ್ರೀಕರಣವನ್ನು ಸ್ಟುಡಿಯೋ ಒಳಗೆ ಸೆಟ್ ಹಾಕಿ ಮಾಡಲಾಗುತ್ತಿತ್ತು, ಇದಕ್ಕೆ ಒಳಾಂಗಣ ಚಿತ್ರೀಕರಣ ಎನ್ನುತ್ತಿದ್ದರು, ಮೊದಲ ಬಾರಿಗೆ ಸ್ಟುಡಿಯೋದಿಂದ ಹೊರಬಂದು ಹೊರಾಂಗಣ ಚಿತ್ರೀಕರಣ ನೆಡೆಸಿದ ಚಲನಚಿತ್ರವೆಂದರೆ ಅದು ಪುಟ್ಟಣ್ಣಕಣಗಾಲ್ ನಿರ್ದೇಶನದ ‘ಬೆಳ್ಳಿಮೋಡ’ ಚಿತ್ರ, ಈ ಚಿತ್ರ 1967ರಲ್ಲಿ ಬಿಡುಗಡೆಯಾಗಿತ್ತು. ಕಲ್ಯಾಣ್ ಕುಮಾರ್ ಮತ್ತು ಕಲ್ಪನಾ ಅಭಿನಯಿಸಿದ್ದರು.

4. ಒಂದೇ ಬಗೆಯ ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಚಿತ್ರಗಳು ಬರುತ್ತಿದ್ದ ಕಾಲಘಟ್ಟದಲ್ಲಿ ಮಡಿವಂತಿಕೆಯನ್ನು ದೂರ ಸರಿಸಿ ಬಂದಂತಹ ಚಿತ್ರವೇ ‘ಜೇಡರಬಲೆ’ ಚಿತ್ರ, ಬಾಂಡ್ ಸರಣಿಯನ್ನು ಆಧರಿಸಿದ ಚಿತ್ರ, ಗೌರಮ್ಮನಂತಿರುತ್ತಿದ್ದ ನಾಯಕಿರನ್ನು ಮಾರ್ಡನ್ ಆಗಿ ತೋರಿಸುವ ಪರಂಪರೆಗೆ ಬುನಾದಿ ಹಾಕಿದ ಚಿತ್ರ, ಚಲನಚಿತ್ರಗಳಲ್ಲಿ ಕ್ಯಾಬರೆ ಡ್ಯಾನ್ಸ್ ಪರಂಪರೆ ಪ್ರಾರಂಭ ಮಾಡಿದ ಚಿತ್ರ. ಈ ಚಿತ್ರವು 1968 ರಲ್ಲಿ ಬಿಡುಗಡೆಯಾಯಿತು, ಈ ಚಿತ್ರದಲ್ಲಿ ರಾಜ್ ಕುಮಾರ್ ರವರು ನಾಯಕರಾಗಿದ್ದರು.

5. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ ಕುಮಾರ್
ಕುಮಾರತ್ರಯರು ಎಂದು ಕರೆಸಿಕೊಂಡು ಚಿತ್ರರಂಗವನ್ನು ಆಳುತ್ತಿದ್ದ ಸಮಯದಲ್ಲಿ ಚಿತ್ರರಂಗಕ್ಕೆ ‘ನಾಗರಹಾವು’ ಚಿತ್ರದ ಮೂಲಕ ವಿಷ್ಣುವರ್ಧನ್ ರವರ ಪಾದಾರ್ಪಣೆಯಾಯಿತು.
ನಾಯಕ ನಟನೊಬ್ಬನನ್ನು ಆಂಗ್ರಿ ಯಂಗ್ ಮ್ಯಾನ್ ತರಹ ತೋರಿಸಿದ ಮೊದಲ ಚಿತ್ರ ಇದಾಗಿತ್ತು. ಈ ಚಿತ್ರವು 1972ರಲ್ಲಿ ತೆರೆಕಂಡು ಯಶಸ್ಸು ಕಂಡಿತ್ತು.

6. 35 mm ಚಿತ್ರಗಳನ್ನು ನೋಡಿಕೊಂಡು ಬಂದಿದ್ದ ಪ್ರೇಕ್ಷಕರಿಗೆ ಮೊದಲ ಬಾರಿಗೆ ಸಿನಿಮಾ ಸ್ಕೋಪ್ ಚಲನಚಿತ್ರ ವೀಕ್ಷಿಸುವ ಅವಕಾಶ ದೊರಕಿದ್ದು ‘ಸೊಸೆ ತಂದ ಸೌಭಾಗ್ಯ’ ಚಿತ್ರದ ಮೂಲಕ, ಈ ಚಿತ್ರವು 1977 ರಲ್ಲಿ ತೆರೆಕಂಡಿತ್ತು.

7. ಒಂದೇ ತರಹದ ಸಾಮಾಜಿಕ ಚಿತ್ರಗಳು ಬರುತ್ತಿದ್ದ ಕಾಲಘಟ್ಟದಲ್ಲಿ ಬಂದಂತಹ ಸಸ್ಪೆನ್ಸ್ ಚಿತ್ರವೇ ʼಅಪರಿಚಿತʼ, ಈ ಚಿತ್ರವು 1978ರಲ್ಲಿ ತೆರೆಕಂಡಿತ್ತು. ಸುರೇಶ್ ಹೆಬ್ಳೀಕರ್ ನಾಯಕರಾಗಿದ್ದರೆ, ಕಾಶೀನಾಥ್ ನಿರ್ದೇಶಿಸಿದ್ದರು.

8. ರಾಜಕೀಯ ಕಥಾವಸ್ತುವನ್ನು ಹೊಂದಿದ್ದ ಚಿತ್ರವೇ ರಬೆಲ್ ಸ್ಟಾರ್ ಅಂಬರೀಷ್ ಅಭಿನಯದ ʼಅಂತʼ ಚಿತ್ರ, ಈ ಚಿತ್ರವು 1981ರಲ್ಲಿ ಬಿಡುಗಡೆಯಾಗಿ ಪ್ರಚಂಡ ಯಶಸ್ಸು ಗಳಿಸಿತ್ತು. ಈ ಚಿತ್ರದ ನಿರ್ದೇಶಕರು ರಾಜೇಂದ್ರ ಸಿಂಗ್ ಬಾಬು.

9. ಸೆಕ್ಸ್ ವಿಚಾರ ಎಂದರೆ ಮುಜುಗರ ಪಡುತ್ತಿದ್ದ ಚಿತ್ರರಂಗದಲ್ಲಿ ಅದನ್ನೆ ಕಥಾವಸ್ತುವನ್ನಾಗಿ ಮಾಡಿ ಯಶಸ್ಸು ಕಂಡ ಚಿತ್ರ ʼಅನುಭವ ‘, ಈ ಚಿತ್ರವು 1984 ರಲ್ಲಿ ಬಿಡುಗಡೆಯಾಯಿತು. ಕಾಶೀನಾಥ್ ನಟಿಸಿ ನಿರ್ದೇಶಿಸಿದ್ದರು..

10. ಅದ್ಬುತ ಸೆಟ್ ಹಾಕಿ, 11 ಹಾಡುಗಳನ್ನು ಇಟ್ಟು, ಬಂದಂತಹ ಪ್ರೇಮಕಥೆಯ ಚಿತ್ರವೇ ʼಪ್ರೇಮಲೋಕ.ʼ ಈ ಚಿತ್ರವು 1987ರಲ್ಲಿ ಬಿಡುಗಡೆಯಾಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗುವುದರ ಜೊತೆಗೆ ನಿರ್ದೇಶನವನ್ನು ಮಾಡಿದ್ದರು.

11. ಕನ್ನಡದ ಪ್ರಥಮ 70mm ಚಿತ್ರ ಎಂಬ ಖ್ಯಾತಿಗೆ ಕುಮಾರ್ ಬಂಗಾರಪ್ಪ ಅಭಿನಯದ ʼಶರವೇಗದ ಸರದಾರʼ ಚಿತ್ರವು ಸೇರುತ್ತದೆ. ಈ ಚಿತ್ರವು 12-05-1989ರಲ್ಲಿ ಬಿಡುಗಡೆಯಾಗಿತ್ತು.

12. ಒಂದೇ ಬಗೆಯ ಹೊಡೆದಾಟದ ದೃಶ್ಯ ನೋಡಿ ಬೇಸತ್ತಿದ್ದ ಪ್ರೇಕ್ಷಕರಿಗೆ ಹೊಸ ಬಗೆಯ ಹೊಡೆದಾಟ ತೋರಿಸಿದ ಚಿತ್ರ ʼಶ್!ʼ
ಈ ಚಿತ್ರವು 1993ರಲ್ಲಿ ಬಿಡುಗಡೆಯಾಗಿತ್ತು, ಕುಮಾರ್ ಗೋವಿಂದ್ ನಾಯಕರಾಗಿದ್ದರೆ ಉಪೇಂದ್ರ ನಿರ್ದೇಶಿಸಿದ್ದರು. ಈ ಚಿತ್ರದ ಮೂಲಕ ಒಂದೇ ಅಕ್ಷರದಲ್ಲಿ ಶೀರ್ಷಿಕೆ ಇಡುವ ಸಂಪ್ರದಾಯಕ್ಕೆ ಓಂಕಾರ ಹಾಕಲಾಯಿತು.

13. ಪ್ರಥಮಬಾರಿಗೆ ಬಂದಂತಹ ರೌಡಿಸಂ ಚಿತ್ರವೇ ʼಓಂ.ʼ ಈ ಚಿತ್ರವು 1995ರಲ್ಲಿ ಬಿಡುಗಡೆಯಾಗಿ ಪ್ರಚಂಡ ಯಶಸ್ಸು ಗಳಿಸಿತ್ತು, ಸುಮಾರು 550 ಬಾರಿ ರಿಲೀಸ್ ಆಗಿರುವ ದಾಖಲೆ ಈ ಚಿತ್ರಕ್ಕಿದೆ. ಶಿವರಾಜ್ ಕುಮಾರ್, ಪ್ರೇಮ ನಟಿಸಿದ್ದರೆ ಉಪೇಂದ್ರ ನಿರ್ದೇಶಿಸಿದ್ದರು.

14. ಕನ್ನಡ ಚಿತ್ರರಂಗದಲ್ಲಿರುವ ಸಿದ್ದ ಸೂತ್ರಗಳನ್ನು ಬದಿಗಿಟ್ಟು, ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ಎಲ್ಲರ ತಲೆಗೆ ಹುಳ ಬಿಟ್ಟು ಚಿತ್ರವನ್ನು ಅರ್ಥಮಾಡಿಕೊಳ್ಳಲು 3-4 ಬಾರಿ ಚಿತ್ರ ನೋಡುವಂತೆ ಮಾಡಿದ ಚಿತ್ರವೇ ʼA.ʼ ಈ ಚಿತ್ರವು 17-02-1998 ರಲ್ಲಿ ಬಿಡುಗಡೆಯಾಗಿ ಪ್ರಚಂಡ ಯಶಸ್ಸು ಗಳಿಸಿತು, ಉಪೇಂದ್ರರವರು ಪ್ರಥಮಬಾರಿಗೆ ನಾಯಕರಾಗಿ ಪಾದಾರ್ಪಣೆ ಮಾಡಿ ಚಿತ್ರವನ್ನು ನಿರ್ದೇಶಿಸಿದ್ದರು.

15. ಕನ್ನಡದ ಪ್ರಥಮ DTS ಚಿತ್ರ ʼA.K.47,ʼ ಈ ಚಿತ್ರವು 17-06-1999ರಲ್ಲಿ ಬಿಡುಗಡೆಯಾಗಿತ್ತು.
ಆಗಿನ ಕಾಲಕ್ಕೆ ಅದ್ದೂರಿ ವೆಚ್ಚದ ಚಿತ್ರ ಇದಾಗಿತ್ತು.
ಶಿವರಾಜ್ ಕುಮಾರ್, ನಾಯಕಾರಾದರೆ ರಾಮು ಚಿತ್ರ ನಿರ್ಮಿಸಿದ್ದರು, ಓಂಪ್ರಕಾಶ್ ಚಿತ್ರ ನಿರ್ದೇಶಿಸಿದ್ದರು.

ಈ ತರಹ ಚಿತ್ರರಂಗ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಇದಕ್ಕೆ ನಾವು ಕಾಲಾಯ ತಸ್ಮೈ ನಮಃ ಎನ್ನಲೂ ಬಹುದು ಬದಲಾವಣೆ ಜಗದ ನಿಯಮ ಎನ್ನಲೂ ಬಹುದು. ಈ ಚಿತ್ರಗಳಲ್ಲಿ ನಿಮಗೆ ಇಷ್ಟವಾದ ಚಿತ್ರ ಯಾವುದು, ಯಾಕೆ ಎಂದು ಕಾಮೆಂಟ್ ಮಾಡಿ.
- ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.
Very good beginning
Very nice article