
ನೋಡಲೇ ಬೇಕಾದ ಚಿತ್ರ: ವೀರಪ್ಪನಾಯ್ಕ.
ಈ ಚಿತ್ರವು 1/1/1999 ರಂದು ಬಿಡುಗಡೆಯಾಯಿತು. ಸಾಹಸಸಿಂಹ ವಿಷ್ಣುವರ್ಧನ್ ನಾಯಕರಾಗಿದ್ದರೆ, ಶೃತಿ ನಾಯಕಿಯಾಗಿದ್ದರು, ಉಳಿದಂತೆ ಶೋಭರಾಜ್, ಹೇಮ ಚೌಧರಿ, ಸುಧೀರ್, ಕೋಟೆ ಪ್ರಭಾಕರ್, ರೇಣುಕಾ ಪ್ರಸಾದ್ ಮುಂತಾದವರು ಅಭಿನಯಿಸಿದ್ದರು. ಎಸ್ ನಾರಾಯಣ್ ನಿರ್ದೇಶಿಸಿದ್ದರು.
ಚಿತ್ರದ ಕಥೆ:
ವೀರಪ್ಪನಾಯ್ಕ ಮಹಾನ್ ದೇಶ ಭಕ್ತ, ಬಾವುಟ ನೇಯುವುದು ಈತನ ಕಾಯಕ. ಈತನ ತಾಯಿಯ ತಮ್ಮನ ಮಗಳಿಗೆ (ಶೃತಿ) ಈತನನ್ನು ಕಂಡರೆ ಪಂಚಪ್ರಾಣ, ನಾಯಕನಿಗೆ ತಾಯಿಯ ಮಾತೆ ವೇದವಾಕ್ಯ.
ಒಮ್ಮೆ ಬಾವುಟ ನೇಯುವ ಜಾಗಕ್ಕೆ ನಾಯಕನ ಚಿಕ್ಕಪ್ಪನ ಮಕ್ಕಳು ಚಪ್ಪಲಿ ಹಾಕಿಕೊಂಡು ಬರುತ್ತಾರೆ. ಆಗ ಅಲ್ಲಿದ್ದ ಆಳು ಚಪ್ಪಲಿ ಬಿಟ್ಟು ಬರುವಂತೆ ಹೇಳಿದಾಗ ಅವನಿಗೆ ಹೊಡೆಯತ್ತಾರೆ. ಇದರಿಂದ ಕೋಪಗೊಂಡ ನಾಯಕ ಚಿಕ್ಕಪ್ಪನ ಮಕ್ಕಳನ್ನು ಹೊಡೆದು ಕಳಿಸುತ್ತಾನೆ.
ಸ್ವಾತಂತ್ರ್ಯ ದಿನಾಚರಣೆಯ ದಿನ ದಿನಾಚರಣೆಯನ್ನು ಖಂಡಿಸಿ ಬಾವುಟಕ್ಕೆ ಬೆಂಕಿ ಇಡಲು ಚಿಕ್ಕಪ್ಪನ ಮಗ (ಶೋಭರಾಜ್ ) ಬರುತ್ತಾನೆ. ಆಗ ನಾಯಕ ಆತನ ಕೈಯನ್ನು ಕತ್ತರಿಸಿ ಹಾಕುತ್ತಾನೆ.
ತಾಯಿಯ ಮಾತಿನಂತೆ ನಾಯಕ ನಾಯಕಿಯನ್ನು ಮದುವೆಯಾಗುತ್ತಾನೆ, ನಂತರ ಒಂದು ಗಂಡು ಮಗು ಆಗುತ್ತದೆ.
ಮಗನ ವಿಚಾರವಾಗಿ ನಾಯಕ ನಾಯಕಿಗೆ ಊರಿನ ಜನರ ಮುಂದೆ ಹೊಡೆಯುತ್ತಾನೆ, ಅದೇ ಕಾರಣಕ್ಕೆ ಇಬ್ಬರಿಗೂ ಮಾತುಕತೆ ನಿಂತು ಹೋಗುತ್ತದೆ.
ವೀರಪ್ಪನಾಯ್ಕನ ಮಗ ತಂದೆಯಂತೆಯೆ ದೇಶ ಭಕ್ತನಾಗುತ್ತಾನಾ? ಚಿಕ್ಕಪ್ಪನ ಮಕ್ಕಳು ವೀರಪ್ಪನಾಯ್ಕ ಮೇಲೆ ಯಾವ ರೀತಿ ಸೇಡು ತೀರಿಸಿಕೊಳ್ಳುತ್ತಾರೆ, ಮಾತು ಬಿಟ್ಟ ನಾಯಕಿ ನಾಯಕನನ್ನು ಮಾತನಾಡಿಸುತ್ತಾಳಾ? ಮುಂತಾದ ಪ್ರಶ್ನೆಗೆ ನೀವು ಚಿತ್ರ ನೋಡಿ ತಿಳಿದುಕೊಳ್ಳಬೇಕು.

ಒಟ್ಟಾರೆ ಫಲಿತಾಂಶ: ವಿಷ್ಣುವರ್ಧನ್ ರವರು ದೇಶಭಕ್ತನಾಗಿ ಅದ್ಬುತ ಅಭಿನಯ ನೀಡಿದ್ದರೆ, ಶೃತಿಯವರು ಮಧ್ಯಂತರದ ನಂತರ ನಾಯಕನಿಗೆ ಸರಿಸಮನಾಗಿ ನಟಿಸಿ ಸೈ ಎನಿಸಿಕೊಂಡರು.
ಗಯ್ಯಾಳಿ ಪಾತ್ರಕ್ಕೆ ಸೀಮಿತವಾಗಿದ್ದ ಹೇಮ ಚೌಧರಿ ನಾಯಕನ ತಾಯಿಯ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದು ನಿಜವಾದ ಅಚ್ಚರಿ.
ಶೋಭರಾಜ್ ಖಳನಾಗಿ ಅಬ್ಬರಿಸಿದ್ದರು, ರಾಜೇಶ್ ರಾಮನಾಥ್ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಜನಪ್ರಿಯವಾಗಿದ್ದವು, ಭಾರತಾಂಬೆ ನಿನ್ನ ಜನುಮ ದಿನ ಹಾಡು ಭಾರೀ ಜನಪ್ರಿಯತೆ ಪಡೆಯಿತು.
ಬಹಳ ದಿನಗಳ ನಂತರ ವಿಷ್ಣುವರ್ಧನ್ ರವರಿಗೆ ಗೆಲುವು ತಂದು ಕೊಟ್ಟ ಚಿತ್ರ ಇದಾಗಿತ್ತು, ಈ ಚಿತ್ರ ದಾವಣಗೆರೆಯಲ್ಲಿ ಶತದಿನೋತ್ಸವ ಆಚರಿಸಿತ್ತು.
ಆ ಸಾಲಿನ ರಾಜ್ಯ ಪ್ರಶಸ್ತಿಗೆ ವಿಷ್ಣುವರ್ಧನ್ ಆಯ್ಕೆ ಆಗಿದ್ದರು, ಅದೇ ತರಹ ಚಂದ್ರಮುಖಿ ಪ್ರಾಣಸಖಿ ಚಿತ್ರದ ಅಭಿನಯಕ್ಕೆ ರಮೇಶ್ ಅವರು ಆಯ್ಕೆ ಆಗಿದ್ದರು, ಪ್ರಶಸ್ತಿಯನ್ನು ಹಂಚಿಕೊಳ್ಳಲು ಒಪ್ಪದ ವಿಷ್ಣುವರ್ಧನ್ ರವರು ಪ್ರಶಸ್ತಿಯನ್ನು ನಿರಾಕರಿಸಿದರು.
ದೇಶ ಭಕ್ತನ ಕತೆಯನ್ನು ಎಸ್ ನಾರಾಯಣ್ ಅದ್ಬುತವಾಗಿ ನಿರ್ದೇಶಿಸಿದ್ದರು, ಸ್ವಾಂತಂತ್ರ್ಯ ದಿನಾಚರಣೆ ಬಂತೆಂದರೆ ಎಲ್ಲ ಟಿವಿಗಳಲ್ಲೂ ಈ ಚಿತ್ರದ್ದೇ ಕಾರುಬಾರು, ಹಾಗೆ ಸಮಾರಂಭದಲ್ಲೂ ಈ ಚಿತ್ರದ ಹಾಡಿಗೆ ನೃತ್ಯ ಪ್ರದರ್ಶನ ಇದ್ದೇ ಇರುತ್ತದೆ.
ನಮ್ಮ ಕನ್ನಡ ಚಿತ್ರರಂಗದ ಎಂದೂ ಮರೆಯದ ಚಿತ್ರದ ಸಾಲಿಗೆ ಈ ಚಿತ್ರ ಸೇರುತ್ತದೆ, ದೇಶ ಭಕ್ತಿ ಇರುವ ಪ್ರತಿಯೊಬ್ಬ ಕನ್ನಡಿಗನೂ ನೋಡಲೇ ಬೇಕಾದ ಚಿತ್ರ ಈ ವೀರಪ್ಪನಾಯ್ಕ.
- ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.